ಋತುವಿಲಾಸಿನಿ: ನಾಲ್ಕು ದಿನಗಳಾದರೂ ನಮ್ಮ ನಡುವೆ ಮಾತಿಲ್ಲದೆ ನನ್ನ ಕೋಪ ಮೀರಿದ್ದ ಆ ದಿನ
Dream : ಆ ದಿನ ನನ್ನ ಊರಿನಲ್ಲಿ ಮಹಾಗಾಳಿ. ಬಹುತೇಕ ಈ ಭಾಗದಲ್ಲೆಲ್ಲ ಅದೇ ಗಾಳಿ. ಬೇಸಿಗೆಯ ಶಾಖ ಮೀರಿ ಮಣ್ಣಿನ ಕಾವು ಹೆಚ್ಚಿ ಬಿಸಿಗಾಳಿ ಮೇಲೆ ಮೇಲೆ ಚಲಿಸುವಾಗ ಒತ್ತಡವೇರ್ಪಟ್ಟು ಬೀಸುವ ಗಾಳಿ ಅದು, ‘ಒಡಲು ತುಂಬುವ ಗಾಳಿ’!
ಋತುವಿಲಾಸಿನಿ | Rutuvilaasini : ಋತುವಿನ ಮೊದಲ ಮಳೆ ಸುರಿಯಿತು ಹನೀ. ಕಳೆದ ವರ್ಷ ಈ ಹೊತ್ತಿಗಾಗಲೇ ಮೊದಲ ಮಳೆ ಬಂದು ತಿಂಗಳು ತುಂಬಿದ ನೆನಪು. ಕಳೆದ ವರ್ಷದ ಮೊದಲ ಮಳೆಯ ದಿನವನ್ನೂ ನಿಮಗೆ ಹೇಳಿರ್ತೇನೆ. ಖಂಡಿತವಾಗಿ ಹೇಳಿರ್ತೇನೆ. ನಮ್ಮ ಭೆಟ್ಟಿಯಾದ ಕಾಲದಿಂದಲೂ ಇಲ್ಲಿನ ಮೊದಲ ಮಳೆ ಮೊಳೆತ ಬೀಜ, ಅಂಗಳಕ್ಕೆ ಬಂದ ಹೊಸ ಹಕ್ಕಿ, ಇವತ್ತು ತಂದ ದಾಸವಾಳ, ಮೈತುಂಬಿ ಘಮಘಮಿಸ್ತಿರೋ ಮಲ್ಲಿಗೆ ಬಳ್ಳಿ… ಎಲ್ಲವೂ ನಿಮ್ಮ ತಲುಪುತ್ತಿದೆ. ನಿಮಗೇ ಕೇಳೀ ಕೇಳಿ ಕಿವಿನೋವು ಬಂದರೂ ಬಿಟ್ಟವಳಲ್ಲ ನಾನು. ಮೊದಲ ಮಳೆ ಬಂದ ವಾರದಲ್ಲಿ ಕಾಫಿ ಸಂಬಂಧಿ ವಾಟ್ಸಪ್ ಗ್ರೂಪುಗಳು ಅವರವರ ತೋಟಕ್ಕೆ ಸುರಿದ ಮಳೆಯ ಪ್ರಮಾಣ ಹೇಳುವುದರಿಂದಾಗಿಯೇ ತುಂಬಿಹೋಗ್ತವೆ. ನಮಗೆ ಒಂದೂವರೆ ಇಂಚು, ನಮಗೆ ಎಂಬತ್ತು ಸೆಂಟ್ಸ್, ನಮಗೆ ಎಪ್ಪತ್ತು ಅಂತ ಸಂಭ್ರಮಿಸುವವರು ಕೆಲವರಾದರೆ ನಮಗೆ ಬರೀ ನಲ್ವತ್ತು ಸೆಂಟ್ಸ್ ಅಂತ ಸಪ್ಪೆ ಮುಖ ಮಾಡಿ ಹೇಳುವವರೂ ಇರ್ತಾರೆ. ನಂದಿನಿ ಹೆದ್ದುರ್ಗ, ಕವಿ, ಲೇಖಕಿ (Nandini Heddurga)
(ಋತು 4)
ನಿಂಗೊತ್ತಲ್ವಾ ಹನೀ…
ಕಾಫಿ ತೋಟಗಳಿಗೆ ಫೆಬ್ರವರಿ ಮಾರ್ಚ್ ತಿಂಗಳಿನಲ್ಲಿ ಬರುವ ಹದವಾದ ಮೊದಲ ಮಳೆಯನ್ನು ಹೂಮಳೆ ಅಂತಾರೆ. ಹೆಸರೆಷ್ಟು ಸೊಗಸಾಗಿದೆ ಅಲ್ವಾ? ಕಾಫಿಯ ಪರಿಚಯ ಇಲ್ಲದವರು ಈ ಪದದ ಅರ್ಥ ಹುಡುಕುವುದಂತೂ ಸತ್ಯ. ಬ್ಲಾಸಮ್ ಶಾವರ್ ಅಂತಾರೆ ಇದಕ್ಕೆ.
ನಿಮಗೆ ನೆನಪಿದೆಯಾ? ಕಳೆದ ತಿಂಗಳು ನಾಲ್ಕು ದಿನವಾದರೂ ನಮ್ಮ ನಡುವೆ ಮಾತಾಗದೆ ನನ್ನ ಕೋಪ ಮೀರಿದ್ದ ಒಂದು ದಿನ, ಎಂದಿನಂತೆ ನೀವು ನನ್ನ ಕೋಪ ಸಂಭಾಳಿಸುತ್ತಾ ಅನುನಯಿಸ್ತಿದ್ದಿರಿ. ಜಗಮೊಂಡಿ ನಾನು. ಕೋಪ ಅತಿರೇಕ. ನೀವು ತೋರಿದ ಕಾರಣವೆಲ್ಲವೂ ವಾಸ್ತವ ಅಂತ ಗೊತ್ತಿದ್ದರೂ ಒಪ್ಪದೇ ಯುದ್ದ ಮುಂದುವರಿಸುವ ಹಠ ತೊಟ್ಟಿದ್ದೆ.
ಅದ್ಯಾವುದೋ ಮಾಯಕದಲ್ಲಿ ಪುಟ್ಟ ಜಾದೂಗಾರನಂತೆ ಮಾತಿನ ನಡುವೆ ಏನೋ ಹೇಳಿದ್ರಿ. ಮೋಡಿಗೊಳಗಾಗಿ ಇಷ್ಟು ತನಕದ ಯುದ್ದೋತ್ಸಾಹವೇ ಸುಳ್ಳೆಂಬಂತೆ ಕದನವಿರಾಮ ಘೋಷಿಸಿಬಿಟ್ಟಿದ್ದೆ. ಜಾಣ ನೀವು. ಅದರ ಅರಿವಾದರೂ ಗೊತ್ತೇ ಇಲ್ಲದವರಂತೆ ಮಾತು ಮುಂದುವರಿಸಿದ್ರಿ. ಲೋಕ ಒದಗಿಸುವ ಎಳಸು ತಾಜಾ ಪ್ರೇಮ ಹನೀ ಅದು. ಸುಖವಾದ ದಣಿವು. ಪ್ರೇಮಿಗಳೆಲ್ಲರ ಬದುಕಿನಲ್ಲೂ ಸಂಭವಿಸುವಂಥದ್ದು.
ಆ ದಿನ ನನ್ನ ಊರಿನಲ್ಲಿ ಮಹಾಗಾಳಿ. ಬಹುತೇಕ ಈ ಭಾಗದಲ್ಲೆಲ್ಲ ಅದೇ ಗಾಳಿ. ಬೇಸಿಗೆಯ ಶಾಖ ಮೀರಿ ಮಣ್ಣಿನ ಕಾವು ಹೆಚ್ಚಿ ಬಿಸಿಗಾಳಿ ಮೇಲೆ ಮೇಲೆ ಚಲಿಸುವಾಗ ಒತ್ತಡವೇರ್ಪಟ್ಟು ಬೀಸುವ ಗಾಳಿ ಅದು. ಸುಯ್ಯ್ಯ್ಯಯ್ ಯ್ ಎನ್ನುವ ಸಿಳ್ಳೆ ಹೊಡಿಯುವಂತ ಸದ್ದು. ಮೂರು ದಿನದಿಂದ ವಾರದವರೆಗೂ ಮುಂದುವರೆಯುವ ಈ ಗಾಳಿಗೆ ‘ಒಡಲು ತುಂಬುವ ಗಾಳಿ’ ಅಂತಾರೆ ಅಂತ ಹೇಳಿದ್ದೆ ನಾನು.
ಆ ಪದವನ್ನು ಮೊದಲ ಸರ್ತಿ ಕೇಳಿದ ಖುಷಿ ನಿಮಗೆ. ಬೆವರು ಭೂಮಿ ಭಾನು ಬೀಜ ಮತ್ತು ಒಂದು ಆದಿಮ ಪ್ರೇಮ. ಎಷ್ಟೊಂದು ಸೊಗಸಿದೆ ನೋಡಿ ಈ ಬಂಧದಲ್ಲಿ. ಈ ಗಾಳಿ ಬೀಸಲಾರಂಭಿಸಿದಾಗ ಭೂಮಿಯ ತೇವಾಂಶ ಪೂರ್ಣ ಇಂಗಿಹೋಗ್ತದೆ ಹನೀ. ನೆಲ ಕಾದು ಗರಗರಾಗ್ತದೆ. ಎಷ್ಟೆಷ್ಟೋ ಗಿಡಮರಗಳ ಎಲೆಗಳು ಸೂರ್ಯನ ಉರಿಗೆ ಕರಕಲಾಗುತ್ತವೆ. ಹರೆ ಬಳಲಿ ಮುರಿಯುತ್ತವೆ. ಗಾಳಿಯ ಹೊಡೆತಕ್ಕೆ ಸಿಕ್ಕ ಜೀವಜಾಲವೆಲ್ಲಕ್ಕೂ ಇದು ತಮ್ಮ ಕೊನೆಯ ಋತು ಅಂತ ಅನಿಸ್ತದಂತೆ.
ಆಶ್ಚರ್ಯ ಅಂದರೆ ಹಾಗೆ ಕೊನೆ ಎಂದುಕೊಂಡು ಅವು ಸುಮ್ಮನಾಗುವುದಿಲ್ಲ. ತಮ್ಮ ವಂಶದ ಕುರುಹು ಮುಂದುವರೆಸಲು, ಬೆಳೆಸಲು ಪಣ ತೊಡುತ್ತವೆ. ಇನ್ನೇನು ಸಾಯುವ ಹಂತ ತಲುಪಿರುವ ಈ ಜೀವಜಾಲ ತಮ್ಮ ಅಳಿದುಳಿದ ಶಕ್ತಿ ಸಾಮರ್ಥ್ಯವನ್ನೆಲ್ಲವನ್ನೂ ಸಂಪೂರ್ಣ ಬಳಸಿಕೊಂಡು ತಮ್ಮ ಹರೆಹರೆಯ ಗೆಣ್ಣುಗಳಲ್ಲಿ ಎಷ್ಟು ಸಾಧ್ಯವೋ ಅಷ್ಟೂ ಮೊಗ್ಗು ಸಾಂಧ್ರೀಕರಿಸುತ್ತವೆ. ಅದೃಷ್ಟ ಚೆನ್ನಾಗಿದ್ದರೆ ಮಳೆ ಸುರಿದು ಮೊಗ್ಗು ಹೂವಾಗಿ ಮತ್ತೆ ತಮ್ಮ ಸಂತಾನ ಮುಂದುವರೆಯುವ ನಿರೀಕ್ಷೆ ಅವಕ್ಕೆ.
ಇದನ್ನೂ ಓದಿ : ಋತುವಿಲಾಸಿನಿ: ‘ಈ ಪುಟಾಣಿ ಹಕ್ಕಿಕಣ್ಣಿನ ಹಸಿವೆಯಷ್ಟು ಪ್ರೀತಿಸ್ತೀನಿ ನಿನ್ನ’ ಅಂತಿದ್ದನವ
ನೋಡಿ ಹನೀ.
ಲೋಕದ ಸಮಸ್ತವೂ ಪ್ರಯತ್ನದ ಜೊತೆಜೊತೆಗೆ ತಮ್ಮ ಅದೃಷ್ಟವನ್ನೂ ನೆಚ್ಚಿಕೊಂಡಿವೆ. ಸೃಷ್ಟಿಯ ಕಲಾವಂತಿಕೆಯಲ್ಲಿ ಪ್ರತಿಕ್ಷಣವೂ ಪ್ರತಿದಿನವೂ ಪ್ರಯೋಗವೇ. ಹೀಗೆ ಮೊಗ್ಗು ಉಚಾಯಿಸಿದ ಹೊತ್ತಿನಲ್ಲಿ ಅಚಾನಕ್ಕು ಒಂದು ದಿನ ಇಲ್ಲಿ ಬೀಸಿದ ಬಿಸಿಗಾಳಿಯಿಂದ ಕಡಲಿನಲ್ಲಿ ತಡೆಯಲಾಗದ ಒತ್ತಡ ಏರ್ಪಡುತ್ತದೆ. ಮೇಲೇ ಮೇಲೆ ಹಾದ ಆವಿ ಮುಗಿಲುಗಟ್ಟಿ ಮಳೆ ಸುರಿಯುತ್ತದೆ. ನಿರೀಕ್ಷೆ ಹುಸಿಯುವುದಿಲ್ಲ. ಅದೃಷ್ಟವೂ ಕೈಕೊಡುವುದಿಲ್ಲ. ಜೀವ ತಣಿಯುತ್ತದೆ ಮತ್ತೆ ಈ ಭೂಮಿಯ ಮೇಲೆ ಮೊಗ್ಗು ಹೂವು ಹಣ್ಣು ಬೀಜ ಸಸಿ.
ಪುನರಪಿ ಜನನಂ!
ಪ್ರಕೃತಿಯ ಈ ಆಳ ಅಗಲಗಳ ಸೊಗಸು ಪ್ರತಿ ಋತುವಿಗೂ ಹೊಸತೆ. ‘ವರುಷಕೊಂದು ಹೊಸತು ಜನ್ಮ ಅಖಿಲ ಜೀವಜಾತಕೆ’ ನಿಮಗೊತ್ತಾ? ಈ ಗಾಳಿ ಬೀಸುವ ಸಮಯಕ್ಕೆ ಮನುಷ್ಯರನ್ನು ಒಳಗೊಂಡು ಸಕಲ ಪ್ರಾಣಿ ಪಕ್ಷಿ ಸಂಕುಲಗಳೂ ಬಳಲಿರುತ್ತವೆ ಮತ್ತು ಮನುಷ್ಯರನ್ನು ಹೊರತುಪಡಿಸಿ ಉಳಿದ ಪ್ರಾಣಿಗಳು ಬಹುತೇಕ ಇದೇ ಕಾಲದಲ್ಲಿ ಬೆದೆಗೆ ಬರುತ್ತವೆ. ಗಮನಿಸಿರಬಹುದು ನೀವು… ದಂಪತಿಗಳು ಬಹಳ ದಪ್ಪವಿದ್ದರೆ ತೂಕ ಇಳಿಸಿಕೊಳ್ಳದೆ ಗರ್ಭ ನಿಲ್ಲುವುದು ಕಷ್ಟ ಅಂತ ಹೇಳ್ತಾರೆ ಡಾಕ್ಟರು. ಬಳಲಬೇಕು ಹನೀ. ಬಳಲಿದರೆ ಮಾತ್ರ ಒಳಗೊಳ್ಳಬಹುದು. ಬೆಳಗಬಹುದು.
ನಿಮ್ಮನ್ನು ನೋಡದೆ ಮಾತಾಡದೆ ಬಳಲುವ ಈ ಹೊತ್ತು ಎಷ್ಟು ಸೊಗಸು ನೋಡಿ. ಎದೆಯೊಳಗೆ ಹರಳುಗಟ್ಟುತ್ತವೆ ನೆನಪು. ಕನಸೋ ಬದುಕೋ ತಿಳಿಯದ ಕಾಲದಲ್ಲಿ ನನ್ನ ನೋಟಕ್ಕೆ ಸಿಕ್ಕುವ ಎಲ್ಲವನ್ನೂ ನಿಮ್ಮ ಮನಸ್ಸಿಗೆ ಅನುವಾದಿಸುತ್ತೇನೆ. ನಿಮಗೊಂದು ಸಂಗತಿ ಹೇಳಿಲ್ಲ ಅಲ್ಲಾ ನಾನು. ಈಚೆಗೆ ಬಿದ್ದ ಬೆಳಗಿನ ಜಾವದ ಕನಸು ಅದು. ಹಚ್ಚಗೆ ಹಸಿರು ಹೊದ್ದ ಜೀಗುಜ್ಜೆ ಮರ. ಮೈತುಂಬಾ ಎಳೆಗಾಯಿ ಹೂವು ಮೊಗ್ಗು ಮತ್ತು ನಾವೆಂದೂ ನೋಡಿರದ ಮಾಣಿಕ್ಯಮುಕುಟ ಹಕ್ಕಿಗಳು. ಅದೂ ಲೆಕ್ಕವಿಲ್ಲದಷ್ಟು.
ಮುದ್ದು ಮಾಡಿಕೊಳ್ಳುವುದು, ಕಡ್ಡಿ ಹುಡುಕುವುದು, ಗೂಡು ಕಟ್ಟವುದರ ಹೊರತಾಗಿ ಮತ್ತೇನೂ ಕೆಲಸವಿಲ್ಲ ಅವಕ್ಕೆ. ಆ ಮರದಡಿಯ ತಂಪಿನಲ್ಲಿ ಕುಳಿತು ನಾವಿಬ್ಬರೂ ಕುಲಾವಿಯ ಬಣ್ಣದ ಕುರಿತು ಮೆಲ್ಲಗೆ ಮಾತಾಡಿಕೊಳ್ಳುತ್ತಿದ್ದೆವು. ಎಷ್ಟು ಮೆಲ್ಲಗೆ ಎಂದರೆ ಮರದ ಮೇಲಿಂದ ಆ ಹಕ್ಕಿಗಳು ಹಾರಿ ಕೆಳಗಿಳಿದು ನಾವಿಬ್ಬರೂ ಅಲ್ಲಿ ಕುಳಿತ ಅರಿವು ಕುರುಹೇ ಇರದವುಗಳಂತೆ ಸರಬರ ಕಡ್ಡಿ ಹುಡುಕುತ್ತಿದ್ದವು.
ಕಂಡ ಕನಸೆಲ್ಲವೂ ಬೆಳಗಾಗುವ ಹೊತ್ತಿಗೆ ಮರೆತುಹೋಗಿ ನೆನಪಿಸಿಕೊಳ್ಳಲು ಪರದಾಡುವವಳು ನಾನು. ಈ ಕನಸು ಮಾತ್ರ ಸತ್ಯವೋ ಕನಸೋ ಎಂಬ ಗುಂಗು ಹುಟ್ಟುವಂತೆ ಚಿತ್ತದಲ್ಲಿ ಉಳಿದೇಹೋಗಿದೆ. ಮೊನ್ನೆ ಥಟ್ಟನೆ ಎಚ್ಚರಾದವಳಿಗೆ ನಿಮ್ಮ ಪುಟ್ಟಬಾಯಿ ದಟ್ಟಹುಬ್ಬು ಬಟ್ಟಲುಗಣ್ಣು ನೆನಪಾಗಿ ನಖಶಿಖಾಂತದ ದಣಿವು.
ಅನನ್ಯ ಪ್ರೇಮವಿದ್ದೆಡೆಯಲ್ಲಿ ಕೂಡುವುದು ಹಡೆಯುವುದು ಹಡೆದ ಒಲುಮೆಯನ್ನು ಎದೆಬಿರಿಯುವಷ್ಟು ಮಮತೆಯಲ್ಲಿ ಬೆಳೆಸುವುದರ ಕುರಿತು ಯೋಚಿಸುತ್ತೇನೆ ಹನೀ ನಾನು.
ಆಹಾ..
ಇದೆಲ್ಲವೂ ಎಷ್ಟು ಪವಿತ್ರ ಕ್ರಿಯೆ ಅನಿಸುತ್ತಿದೆ.
ಪ್ರತಿಕ್ರಿಯೆಗಾಗಿ : tv9kannadadigital@gmail.com
ಕಳೆದ ಋತು : ಋತುವಿಲಾಸಿನಿ: ಈ ಪುಲ್ಲಿಂಗಗಳಿಗೆ ‘ತೊರೆಯುವುದು’ ಎಂದರೆ ಅದೆಷ್ಟು ಸಲೀಸು?
(ಮುಂದಿನ ಋತು : 12.4.2022)
Published On - 10:11 am, Tue, 29 March 22