Body Shaming; ಸುಮ್ಮನಿರುವುದು ಹೇಗೆ?: ಒದ್ ದಾಟಿ ಬಂದು ನುಗ್ಗಾಗಿದ್ ಬದಕ್ನಾ ರಿಪೇರಿ ಮಾಡ್ಕೊಳೋ ಸಕ್ತಿ ಆಕೆಗೈತೆ!

‘ಬೋ ಸಕ್ತಿಸಾಲಿಯಾದ ಆಂಜನೇಯಪ್ಪಂಗೆ ತನ್ ಸಕ್ತಿ ಬಗ್ಗೆ ತನಗೇ ಗೊತ್ತಿಲ್ವಂತೆ. ಯಾರಾದ್ರೂ ನಮ್​ನಿಮ್ಮಂತೋರ್ ಹೊಗ್ಳಿದ್ರೆ ಮಾತ್ರ ತನ್ ಸಕ್ತಿ ನೆಪ್ಪಿಗ್​ ಬತ್ತೈತಂತೆ ಅಂತ ಪುರಾಣದಲ್ ಯೋಳವ್ರೇ. ಅಂಗೇಯಾ ನಮ್ ಹೆಣ್ಮಕ್ಳಿಗೂ ಬೋ ಸಕ್ತಿ ಐತೆ, ಆದ್ರೆ ಅದು ಅವ್ರವರ್ಗೇ ಗೊತ್ತಿಲ್ಲ. ತನ್ ಸಕ್ತಿ ತಾನೇ ಮರ್ತು ಗಂಡಸನ್ ತನ್ ಕಡೆ ಮಾಡ್ಕಳಕೆ ಸಿಂಗಾರಾ ಪಿಂಗಾರಾ ಅಂತ ದ್ಯಾನಿಸ್ಕಂಡಿರದ್ನೇ ದೊಡ್ ಸಾದ್ನೆ ಅಂತನ್ನೋ ಬ್ರಮೇನಾ ಬಿಟ್ರೆ ಮಾತ್ರಾ ಗಂಡೈಕ್ಳುಗಳು ಹೆಣ್ಣಿನ ಮೈಕೈ ಬಗ್ಗೆ ಮಾತಾಡೋದನ್ನ ಬಿಟ್ಟಾರು. ಆದರೆ ಆಕೆಗೆ ತನ್​ ಒಳಗಿನ್ ಸಕ್ತಿ ಬಗ್ಗೆ ಆಗಾಗ ತಿಳಿಯೋಳವ್ರು ಯಾರು, ಮತ್ತೆಂಗೆ?‘ ರೇಣುಕಾ ಚಿತ್ರದುರ್ಗ

  • TV9 Web Team
  • Published On - 14:16 PM, 7 Apr 2021
Body Shaming; ಸುಮ್ಮನಿರುವುದು ಹೇಗೆ?: ಒದ್ ದಾಟಿ ಬಂದು ನುಗ್ಗಾಗಿದ್ ಬದಕ್ನಾ ರಿಪೇರಿ ಮಾಡ್ಕೊಳೋ ಸಕ್ತಿ ಆಕೆಗೈತೆ!
ಲೇಖಕಿ ರೇಣುಕಾ ಚಿತ್ರದುರ್ಗ

ಜನಪ್ರತಿನಿಧಿಗಳೇ,
ಪ್ರತಿಸ್ಫರ್ಧಿಯನ್ನು ಎದುರಿಸಲು, ಜನಾನುರಾಗಿಯಾಗಿರಲು, ಅಧಿಕಾರದಲ್ಲಿರಲು ಬಹುಮುಖ್ಯವಾಗಿ ಬೇಕಿರುವುದು ಅಂತಃಸತ್ವ. ಸದ್ಯದ ಬದುಕಿಗೆ ಮತ್ತು ವೇಗಕ್ಕೆ ತಕ್ಕಂತೆ ಆಲೋಚನಾ ವಿಧಾನಗಳಲ್ಲಿ ಏನು ಬದಲಾವಣೆ ತಂದುಕೊಳ್ಳಬೇಕು, ಯಾವುದನ್ನು ಅಲ್ಲಲ್ಲೇ ಬಿಡಬೇಕು, ಯಾವುದನ್ನು ಹೊಸದಾಗಿ ಅಳವಡಿಸಿಕೊಳ್ಳಬೇಕು ಎನ್ನುವ  ಪ್ರಯತ್ನ ಪ್ರಯೋಗಗಳಿಗೆ ಆದ್ಯತೆ ಬೇಕಿರುವುದು. ಆದರೆ ನೀವು ನಿಮ್ಮ ಮನಸಿನ ವಿಕಾರಗಳನ್ನೇ ಮತ್ತೆ ಮತ್ತೆ ಹೊರಗೆಡಹುತ್ತಿದ್ದೀರಿ. ನಿಮ್ಮ ಮಿತಿಗಳಿಂದ, ಆಳ್ವಿಕೆಯ ಲಾಲಸೆಯಿಂದ ಹೆಣ್ಣು ಎನ್ನುವ ವಿಶಿಷ್ಟ ಸಾಧ್ಯತೆಗಳುಳ್ಳ ಜೀವವನ್ನು ಕ್ಷಣಕ್ಷಣಕ್ಕೂ ಟೀಕಿಸುತ್ತಿದ್ದೀರಿ. ಅವಳ ಅರಿವನ್ನು ಬುದ್ಧಿಮತ್ತೆಯನ್ನು ಮುಕ್ತಮನಸ್ಸಿನಿಂದ ಸ್ವೀಕರಿಸದೆ ಅವಳ ದೇಹವನ್ನಷ್ಟೇ ಕಣ್ಣಾಡಿಸುವುದು ಖಂಡಿತ ಸ್ವಸ್ಥ ಮನಸ್ಸಿನ ಲಕ್ಷಣವಲ್ಲ. ಮನಸಿಗಂಟಿರುವ, ಅಂಟುವ ಪರಂಪರಾಗತ ಕೊಳೆಯನ್ನು ತೊಳೆದುಕೊಳ್ಳಲು ನಮ್ಮ ಸಂಸ್ಕೃತಿಯೇ ರೂಪಿಸಿರುವ ಹಲವಾರು ಕೌಶಲಗಳಿವೆ, ವಿಧಾನಸಾಧನಗಳಿವೆ. ಅರಿವಿಲ್ಲದೆ ಮೆಟ್ಟಿಕೊಳ್ಳುವ ಅಹಂಕಾರವನ್ನು, ಧಾರ್ಷ್ಟ್ಯತನವನ್ನು ಅವುಗಳ ಮೂಲಕವಾದರೂ ತೇಯ್ದುಕೊಳ್ಳಿ. ಮನುಷ್ಯತ್ವ ಎನ್ನುವುದು ದಿನದಿಂದ ದಿನಕ್ಕೆ ಹೃದಯದೊಳಗೆ ನವೀಕರಣಗೊಳ್ಳುವ ನಿರಂತರ ಪ್ರಕ್ರಿಯೆ.   

ನೋವು, ಅವಮಾನವೆನ್ನುವುದಕ್ಕೆ ಖಂಡಿತ ರಿಯಾಯ್ತಿ ಇಲ್ಲ, ಅದು ಮನೆಯೊಳಗಾದರೂ ಅದರಾಚೆಗಾದರೂ ಒಂದೇ; ಸಾಲುಸಾಲು ಅಹಿತಕರಗಳು. ನಿರ್ಲಕ್ಷಿಸಿ ಹೋಗುವುದೇ ಸರಿ ಎಂಬ ಪ್ರತೀ ಸಲದ ಅವಳ ಗಟ್ಟಿನಿರ್ಧಾರವನ್ನು ಅವಳಾಗಿಯೇ ಮುರಿಯುವಂಥ ಸನ್ನಿವೇಶಗಳು. ತನ್ನ ದಾರಿಯ ನಿಚ್ಚಳವಾಗಿಸಿಕೊಳ್ಳಲು ಶಕ್ತಿ ತಂದುಕೊಳ್ಳಬೇಕೆಂದರೆ ಹೊರಿಸಿದ ಭಾರವನ್ನು ಆಕೆಯೇ ಇಳಿಸಿಕೊಳ್ಳಬೇಕು. ಅದಕ್ಕೊಂದು ವೇದಿಕೆ ‘ಟಿವಿ9 ಕನ್ನಡ ಡಿಜಿಟಲ್ – ಸುಮ್ಮನಿರುವುದು ಹೇಗೆ?’ ಸರಣಿ. ನಮ್ಮ ಬರಹಗಾರರು ‘Body Shaming’ ಪರಿಕಲ್ಪನೆಯಡಿ ಎಂದಿನಂತೆ ಸ್ವಾನುಭವಗಳೊಂದಿಗೆ ತಮ್ಮ ವಿಚಾರಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಓದುಗರಾದ ನೀವೂ ನಿಮ್ಮ ಅನುಭವಾಧಾರಿತ ವಿಚಾರಗಳನ್ನು ನಮಗೆ ಬರೆದು ಕಳಿಸಬಹುದು. tv9kannadadigital@gmail.com

ಪರಿಕಲ್ಪನೆ : ಶ್ರೀದೇವಿ ಕಳಸದ

ಚಳ್ಳಕೆರೆಯ ಕೋರ್ಟಿನಲ್ಲಿ ಕೆಲಸ ಮಾಡುತ್ತಿರುವ ಲೇಖಕಿ ರೇಣುಕಾ ಚಿತ್ರದುರ್ಗ ಅವರು ಆಂಜನೇಯನ ರೂಪಕವನ್ನೇ ಯಾಕಿಲ್ಲಿ ಎಳೆದು ತಂದಿದ್ದು?

ಹೆಣ್ಣಂದ್ರೆ ಇಂಗೇ ಇರಬೇಕು ಅಂತ ಪಟ್ಟೆ ಕೊರ್ಕೊಳ್ಳೋ ಹೆಣ್ಣೇ ಮೊದಲ್ ಬದ್ಲಾಗ್ಬೇಕ್. ಬೆಳ್ಳಗೆ, ತೆಳ್ಳಗೆ, ಉದ್ದಕೆ ಚನಾಗಿರೋ ಹೆಣ್ಣನ್ನ ನನ ಮಗನಿಗೆ ತರ್ತೀನಿ ಅಂತ ಕನಸ್ ಕಾಣೋದನ್ನ ಮೊದಲ್ ನಿಲ್ಲಸಬೇಕ್. ಎಣ್ಮಕ್ಕಳೇ ಇಂಗಲ್ಲಾ ಗೆರೆ ಕೊಂರ್ಕೊಂಡಿರೋದ್ಕೇ ಈ ಗಂಡ್ಐಕ್ಳು ನಮ್ ಜೀವಾ ತಿಂತಿರೋದು ಇನ್ನೊಂದ್ಹೆಜ್ಜೆ ಮುಂದ್ಹೋಗಿ ಕಣ್ಣಲ್ಲೇ ನಮ್ ದೇಹಾನಾ ಎಳದೆಳದು ಅಳದಳದು ಬಿಸಾಕ್ತಿರದು.

ಅಂದಾಚೆಂದಾ ಅಂದೇಟಿಗೆ ಗಂಡೈಕ್ಳ ಕಣ್ಗಳು ಹೆಣ್ಮಕ್ಕಳ ಎದೆ, ಸೊಂಟದ ಸುತ್ತಾನೇ ಓಡಾಡೋದೂ ಅಂದಾಡೋದಲ್ವರಾ? ಮನಸಿಗಂಟಿರೋ ಉಳುಕಿಗೆ ಇತಿಹಾಸಾ ಹುಡುಕ್ಕೊಂಡ್ ಕೂತ್ಕೊಳಕ್ಕಾಯ್ತದಾ? ಎದೆ ದಪ್ಪಗಿರಾ ಹೆಣ್ಮಕ್ಕಳ ಕಂಡ್ರೆ ಹೈವೇ ರೋಡ್ ಇದ್ದಂಗೈತೆ ಅಂತ ಆಡ್ಕೋತವೆ. ದೊಡ್ಡಕಿದ್ದರೆ ಗುಡ್ಡ ಬೆಟ್ಟ ಎಲ್ಲ ಇಲ್ಲೇ ಇದಾವಲ್ಲೋ ಅಂತ ಅಣಕಿಸ್ತವೆ. ಈಗ ನೋಡಿ ಬಿಗ್​ ಬಾಸ್​ನಲ್ಲಿ ವಸಿ ದಪ್ಪಗಿರೋ ಸುಭಾ ಪೂಂಜಾ ಪಟ ಹಾಕಿ ಪೇಸ್​ಬುಕ್​ನಲ್ಲಿ ಏನೇನೆಲ್ಲ ಪೋಲಿ ಮಾತಾಡ್ತಾವಂತೀರಿ ಈ ಗಂಡಗಳು, ಸಾನೆ ಬೇಜಾರಾಯ್ತದೆ. ಆ ಪೋಸ್ಟ್​ಗಳಿಗೆ ಪುತುಪುತು ಅಂತ ಬಂದ್​ ಬಿಳೋ ಕಾಮೆಂಟ್ಗಳೋ ಇಕೃತಾ ಅಂದ್ರೆ ಇಕೃತಾ.  ಇಪರ್ಯಾಸ ಅಂದ್ರೆ ಸುಭಾ ಪೂಂಜಾಳನ್ನ ಸಿನೇಮಕ್ಕೆ ಸೇರಿಸ್ಕಳ್ಳೋ ನಿರ್ದೇಸಕ್ರುಗಳೂ ಅವ್ಳನಾ ಅಂಗೇ ತೋರಸ್ತವೆ. ಸಾನೆ ಬ್ಯಾಸ್ರಾ ದುಕ್ಕಾ ಅಂದ್ರೆ ಈ ಸುಭಾನೂ ಅವರೇಳ್ದಂಗೇ ಅಪ್ಕೋಂಡ್ ಮುಂದುವರೀತಳೆ!

ಮದ್ವೆ ಅಂತಾದ್ ಮೇಲೆ ಅಟ್ಟಿ, ಅಸಾ, ಕೆಲ್ಸಾ ಬೊಗ್ಸೆ, ಮಕ್ಳು, ಮರಿ, ಕುರಿ ಕೊಂಯ್ ಕೊಟ್ರ ಬ್ಯಾನೆ ಬವನೆ ಅಂತಿದ್ದಾದೇ. ಇಂಗಿದ್ದಾಗ ಸಣ್ಣ ದಪ್ಪಗಾಗೋದು ದೊಡ್ಡ ಇಸಯಾನಾ? ತಮಿಳ್ ರಾಜಕಾರಣಿ ಯೋಳ್ತಾನೆ, ‘ಇದೇಸಿ ಆಲ್ ಕುಡದು ಕುಡದೂ ಸೊಂಟ ಈಟು ದಪ್ಪ ಊದ್ಕಂಡೈತೆ’ ಅಂತ. ಆದರೆ ನಿಜಾಯಿತಿ ಮಾತು ಏನಪ ಅಂದ್ರೆ ಆಕೆ ಮಕ್ಳಿಗೆ, ಗಂಡನಿಗೆ ಹಾಲು ಹಿಟ್ಟು ಇಕ್ಕೋದ್ರಲ್ಲೇ ಕುರಿಕ್ವಾಣ ಬಿದ್ದೋಗಿರ್ತದೆ. ಇನ್ನ ತಾನು ಹಾಲು!? ಅಕಸ್ಮಾತ್ ಆಕೆ ದಿನಾ ರಾತ್ರಿ ಹಾಲ್ ಕುಡ್ಕಂಡ್ ಮಲಗಿದ್ರೆ ಮೂಳೇನಾದ್ರೂ ವಸಿ ಗಟ್ಟಿಯಾಗಿದ್ದಾತು. ಅದ ಬಿಟ್ಟು ರಾತ್ರಿ ಉಳೀತು ಅಂತ ಬೆಳಗ್ಗೆ, ಬೆಳಗ್ಗೆ ಉಳೀತು ಅಂತ ರಾತ್ರಿ; ಉಳದಪಳದ ತಂಗಳಾನ್ನಾ ಮಕ್ಕಳಿಗೆ ಗಂಡನಿಗೆ ತಿನ್ನಿಸೋದು ಮಹಾಪಾಪ ಅಲ್ವರಾ ಅಂತ ಅಣೇಲ್​ ಯಾರೋ ಬರ್ದಿದ್ದನ್ನ ಅಳಸ್ಕಳ್ದೆ ತನ್ ತಲೆಯಾರಾ ತಾನೇ ಆರೋಗ್ಯ ಹಾಳ್ ಮಾಡ್ಕಳ್ತವ್ಳೆ ದೊಡ್ ದಯಾಮಯಿ!

ಮೊನ್ನೆ ನನ್ನ ಗೆಳ್ತಿ, ‘ನೋಡೆ ರೇಣು, ಎಂಟ್ ಬಾದಾಮಿ ನೆನ್ಸಿ ತಲಾ ಎಲ್ಡೆಲ್ಡು ಬಾದಾಮಿನಾ ಮಕ್ಕಳಿಗೆ, ಗಂಡನಿಗೆ, ಅತ್ತೆಗೆ ಎದ್ದೋಟಿಗೆ ತಿನ್ನಕ್ಕೆ ಕೊಡ್ತೀನೇ. ಸಂಜೆ ಎಲ್ರಿಗೂ ಒಂದೊಂದ್ ಗಲಾಸ್ ಹಾಲು ಕೊಡ್ತೀನೇ’ ಅಂತ ಹೆಮ್ಮೆಯಿಂದ ಹೇಳ್ಕಂಡ್ತಿದ್ಲು. ಉಸ್ರು ಬಿಗೀತಿತ್ತು ಆದ್ರೂ ನನಗ ನಾನೇ ಸಮಾಧಾನ ಮಾಡ್ಕಂಡೇ ಯೋಳ್ದೆ, ‘ಇನ್ಮೇಲೆ ಹನ್ನೊಂದು ಬಾದಾಮಿ ನೆನೆಸಿ ನೀ ಮೂರ್ ತಿನ್ನು, ರಾತ್ರಿ ನೀನೂ ಹಾಲ್ ಕುಡಿ’ ಅಂದೆ. ಬೆಳಿಗ್ಗೆ ಐದ್ ಗಂಟೆಗೆ ಎದ್ದು ಆರು ಜನರ ಅಷ್ಟೂ ಕೆಲ್ಸಾ ಮಾಡಿ ಆಪೀಸಿಗೆ ಬರೋ ನಿನಗೆ ಅವ್ರಿಗಿಂತ ಜಾಸ್ತಿ ಸಕ್ತಿ ಬೇಕಂದೆ. ನಕ್ಕಬಿಟ್ಲು. ತಾನೂ ಎಲ್ಡ್ ಬಾದಾಮಿ ತಿಂತಾಳಾ? ಡೌಟು.

ಇಂತಾದರಲ್ಲಿ ಈ ಗಂಡಸ್ರೂ ಈಪರಿ ಯೋಳಿಕೆ ಕೊಡ್ತವೆ. ಸೊಂಟ ದಪ್ಪ ಇರಬಾರ್ದು, ಕರ್ರಗೆ ಇರಬಾರ್ದು, ಕುಳ್ಳಗಿರಬಾರ್ದು… ಇನ್ನೂ ಅದೇನೇನೂ ಬಾರದು ಹೊರ್ಸಿ ಹೊರ್ಸಿ ನಮ್ಮನ್ನ ಹೈರಾಣ್ ಮಾಡ್ತಾವೋ.

body shaming

ಸೌಜನ್ಯ : ಅಂತರ್ಜಾಲ

ನಾನೋ ಕಪ್ಪು. ಅದು ಸಾಲ್ದು ಅಂತ ಚಿಕ್ಕೋಳಿದ್ದಾಗ ಜಾರ್ಗುಂಡಿ ಜಾರಿದ್ದೇ ಮುಂದಿನ ಹಲ್ಲು ಕಪ್ಪಗಾಗೋಯ್ತು ಬಿಡ್ತಾರಾ ಅಕ್ಕಪಕ್ಕ ಮಂದಿ? ಮದುವೆ ಆಗೋಗಂಟ ಅವಮಾನ ನುಂಗಿನುಂಗಿನುಂಗಿಟ್ಟೆ. ಆದರೂ ಒಂದೊಂದಿನ ಕ್ವಾಪ ಬಂದು, ಯಾಕ್ರೇ ನಂಗೆ ಕರಿಕಾಳಿ ಅಂತೀರಾ? ನಿಮ್ಮನೇಲೇನು ದೀಪನೇ ಹಚ್ಚಲ್ವೆನು, ನಿಮ್ ಕಲರ್ರೇ ಸಾಕಾ? ಅಂತೆಲ್ಲಾ ಕೂಗಾಡಿದ್ರೂ ಮತ್ತವರು ನಂಗೆ ಕರಿಕಾಳಿ ಅಂತಾನೇ ಕರೀತಿದ್ರು.

ಆಗ ಕಾಲೇಜು ಓದ್ತಿದ್ದ ಅಕ್ಕಂದಿರೆಲ್ಲ ಸಿನ್ಮಾ ನಟರಿಗೆ ಪತ್ರಾ ಬರ್ದು ಪಟ ತರಸ್ಕೊಳ್ಳೋವ್ರು. ನಾನೂ ಒಂದಿನ ವಿನೋದ್ ಕುಮಾರ್ ಆಳ್ವಾಗೆ ಇಷ್ಟುದ್ದಾ ಪತ್ರ ಬರೆದೆ; ನೀನಂದ್ರೆ ಯಾಕೆ ನನಗಿಷ್ಟ ಅಂತೆಲ್ಲ. ಮತ್ತೆ ನಿಂದೊಂದು ಪೋಟೋ ಕೂಡ ಕಳ್ಸು ಅಂತ ಕೆಳ್ಕಂಡೆ. ನಾ ಪತ್ರಾ ಬರ್ದ್​ ರೀತಿಗೆ ಬೋ ಕುಸಿಯಾಗಿ ಆತ, ಆತ್ಮೀಯ ರೇಣು ಅಂತ ಇಷ್ಟುದ್ದಾ ಪತ್ರಾ ಬರ್ದು ದೊಡ್ಡದೊಂದ ತನ್ನ ಕಲರ್ ಪಟ ಕಳಿಸಿದ. ನಾನಾಗ ಐಸ್ಕೂಲ್​ ಓದ್ತಿದ್ದೆ. ಗೆಳ್ತೀರಿಗೆಲ್ಲಾ ಹೆಮ್ಮೆಯಿಂದಾ ತೋರಸ್ದೆ. ಎಲ್ರಿಗೂ ವಾರೆವ್ವಾ! ಆದ್ರೆ ಅವ ನಂಗೆ ಪಟ ಕಳ್ಸಿದ್ದಕ್ಕೆ ಒಬ್ಬ ಗೆಳ್ತಿಗೆ ಒಟ್ಟೆಕಿಚ್ಚಾಯ್ತೇನೋ, ‘ಪತ್ರ ನೋಡಿ ಅವ್ನು ಮಾರೋಗಿರ್ಬೋದು. ಆದ್ರೆ ನಿಜ್ವಾಗ್ಲೂ ನಿನ್ನ ಮಕಾ ನೋಡ್ಬುಟ್ರೆ ಎದರ್ಕಂಡ್ ಓಡೋಗ್ಬುಡ್ತಾನಟ್ಟೇಯಾ!’ ಇಂಗಂತ ಜೋರಾಗ್​ ನಕ್ಬಿಟ್ಟಿದ್ಲು. ಅಲ್ಲಿಂದಾ ನನಗೆ ನನ್​ ಬಗ್ಗೆನೇ ಸಾನೆ ಬ್ಯಾಸ್ರ ಬಂದೋಯ್ತು. ನಾ ಮತ್ ನನ್ ನಾ ಸರಿ ಮಾಡ್ಕಳಕೆ ಭಾಳಾನೇ ದಿನ ಬೇಕಾಯ್ತು. ಜನ್ರ್ ಜತೆ ಮಾತ್ ಓಗ್ಲಿ ಮಕಾ ಕೊಡೋದ್ನೂ ನಿಲ್ಲಸ್ಬುಟ್ಟೆ. ಆದರೆ, ಯಾವಾಗ್ ನೌಕ್ರಿಗೆ ಅತ್ಕೊಂಡ್ನೋ ನನ್ನ ಆತ್ಮಾ ಪುಟೀತಾ ಓಯ್ತು ನೋಡಿ.

ಇರ್ಲಿ, ನಾವ್ ಎಣ್ಮಕ್ಕಳು ನಮ್ ಜನಾ ಯಾವುದ್ನಾ ಅಂದಾಚೆಂದಾ ಅಂತ ಅಣೆಪಟ್ಟಿ ಕಟ್ಟಿಟ್ಟಿದಾರೋ ಅದ್ನೆಲ್ಲಾ ಮೀರಿ ಬೆಳದ್ರೇನೇ ಬದ್ಕು. ನಾವು ನಮ್ ಓದಿನಿಂದಾ, ಬುದ್ವಂತಿಕೆಯಿಂದಾ,  ದೈರ್ಯದಿಂದಾ, ಸ್ವಾವಲಂಬನೆಯಿಂದಾ ಇವರ ಹಳಸು ಮಾತಗಳ್ಗೆ ಉತ್ತರಾ ಕೊಡಕ್ಕೇಬೇಕು. ನಿಜ ಯೋಳಬೇಕೆಂದ್ರೆ, ಸ್ವಾವಲಂಬಿ ಹೆಣ್​ಕ್ಕಳಷ್ಟು ಗ್ಲಾಮರಸ್ ಮಹಿಳೆ ಯಾರಿದ್ದಾರೆ ಯೋಳಿ? ಆಕೆ ಮನಸ್ನಿಂದಾ ಯಾಗಾಗ್ಲೂ ಸುಂದ್ರಿ, ಸಿರಿವಂತಿ. ಗಂಡ್​ಹೈಕ್ಳು ದೌರ್ಜನ್ಯ ಎಸಗ್ತಾರಾ? ಒದ್ದು ದಾಟಿ ಬರೋಷ್ಟು, ನುಗ್ಗಾಗಿದ್ ಬದಕನ್ನಾ ರಿಪೇರಿ ಮಾಡ್ಕೊಳೋಷ್ಟು ಶಕ್ತಿ ಆಕೆಗೆ ಐತೆ!

ಬೋ ಸಕ್ತಿಸಾಲಿಯಾದ ಆಂಜನೇಯಪ್ಪಂಗೆ ತನ್ ಸಕ್ತಿ ಬಗ್ಗೆ ತನಗೇ ಗೊತ್ತಿಲ್ವಂತೆ. ನಮ್​ನಿಮ್ಮಂತೋರ್ ಹೊಗ್ಳಿದ್ರೆ ಮಾತ್ರ ತನ್ ಸಕ್ತಿ ನೆಪ್ಪಿಗ್​ ಬತ್ತೈತಂತೆ ಇಂಗಂತ ಪುರಾಣದಲ್ ಯೋಳವ್ರೇ. ಅಂಗೇಯಾ ನಮ್ ಹೆಣ್ಮಕ್ಳಿಗೂ ಬೋ ಸಕ್ತಿ ಐತೆ, ಆದ್ರೆ ಅದು ಅವ್ರವರ್ಗೇ ಗೊತ್ತಾಗಾಕಿಲ್ಲ. ತನ್ ಸಕ್ತಿ ತಾನೇ ಮರ್ತು ಗಂಡಸನ್ ತನ್ ಕಡೆ ಮಾಡ್ಕಳಕೆ ಸಿಂಗಾರಾ ಪಿಂಗಾರಾ ಅಂತ ದ್ಯಾನಿಸ್ಕಂಡಿರದೇ ದೊಡ್ ಸಾದ್ನೆ ಅಂತನ್ನೋ ಬ್ರಮೇನಾ ಬಿಟ್ರೆ ಮಾತ್ರಾ ಗಂಡೈಕ್ಳು ಎಣ್ಣಿನ್ ಮೈಕೈ ಆಡ್ಕಳದನ್ ಬುಟ್ಟಾರು. ಆದ್ರೆ ಎಣ್​ಐಕ್ಳಿಗೆ ತನ್​ ಒಳಗಿನ್ ಸಕ್ತಿ ಬಗ್ಗೆ ತಿಳಿಯೋಳವ್ರು ಯಾರು, ಮತ್ತೆಂಗೆ?

ಇದನ್ನೂ ಓದಿ : Body Shaming ; ಸುಮ್ಮನಿರುವುದು ಹೇಗೆ? : ‘ರಸ್ತೆ ಮೇಲೆ ಬಿದ್ದ ಹಾಳೆಯನ್ನೂ ಓದುವ ಅಕ್ಕ ಇವಳೇ ನೋಡು

Summaniruvudu Hege series on Body Shaming controversial statement by Dindigul Leoni and response from writer Renuka Chitradurga