ಸ್ವಭಾವ ಪ್ರಭಾವ: ಗೊತ್ತಾ ಇಮಾಂಸಾಬಿಗೂ, ಗೋಕುಲಾಷ್ಟಮಿಗೂ ಇರುವ ಸಂಬಂಧ

Caste System : ‘ನೀವು ಬೊಮ್ಮನ್​ಗಳು, ಆರೆಸ್ಸೆಸ್​ನವರು. ನಮ್ಮವರನ್ನೆಲ್ಲ ಇಂಡಿಯಾದಿಂದ ಓಡಿಸೋ ಪ್ಲ್ಯಾನ್ ಮಾಡ್ತಿದ್ದೀರಾ, ನಿನ್ನ ಜೊತೆ ಮಾತಾಡಿದ್ದು ನನ್ನ ಗಂಡನಿಗೆ ಗೊತ್ತಾದರೆ ನನ್ನ ಸಾಯಿಸಿಬಿಡ್ತಾರೆ.’ ಆಕೆ ಸಿಡುಕಿದಾಗ ಅವಳ ಸುಂದರ ಕಣ್ಣುಗಳಲ್ಲಿ ಹೊಮ್ಮಿದ್ದ ದ್ವೇಷ ಭಾವ ಕಂಡು ಮೂಕಳಾಗಿದ್ದೆ.

ಸ್ವಭಾವ ಪ್ರಭಾವ: ಗೊತ್ತಾ ಇಮಾಂಸಾಬಿಗೂ, ಗೋಕುಲಾಷ್ಟಮಿಗೂ ಇರುವ ಸಂಬಂಧ
ರಂಗಭೂಮಿ ಸಿನೆಮಾ ಕಲಾವಿದೆ ವಿದ್ಯಾ ಮೂರ್ತಿ
Follow us
ಶ್ರೀದೇವಿ ಕಳಸದ
|

Updated on:Mar 27, 2022 | 3:46 PM

ಸ್ವಭಾವ ಪ್ರಭಾವ : ನಾವದೆಷ್ಟೇ ಎದೆಸೆಟೆಸಿ ನಿಂತು ಆರ್ಭಟಿಸಿದರೂ ವಾಸ್ತವದಲ್ಲಿ ಒಂದಿಲ್ಲಾ ಒಂದು ರೀತಿಯಲ್ಲಿ ಪರಸ್ಪರ ಅವಲಂಬಿತರು ಎನ್ನುವುದು ಕಟುಸತ್ಯ. ಅಭಿವೃದ್ಧಿ-ತಂತ್ರಜ್ಞಾನ ಈ ಅವಲಂಬನೆಯಿಂದ ಮುಕ್ತಗೊಳಿಸುತ್ತಿದೆ ಎಂದೆನ್ನಿಸಿದರೂ ಅದರ ಪರಿಣಾಮಗಳನ್ನು ನಾವು ಸುಲಭಕ್ಕೆ ಒಪ್ಪಿಕೊಳ್ಳಲಾರೆವು. ಏಕೆಂದರೆ ನಾಗರಿಕ ಜಗತ್ತಿನಲ್ಲಿ ನಮ್ಮ ಅಸ್ತಿತ್ವವನ್ನು ಭದ್ರಗೊಳಿಸಿಕೊಳ್ಳುವ ಕನಸು ಗುರಿಗಳಿಗೆ ತಕ್ಕಂಥ ವೇಗ ನಮಗೆ ಮುಖ್ಯ. ಮೈಮನಸ್ಸನ್ನು ಬೆಸೆದಿರುವ ಬಹುಸಂಸ್ಕೃತಿಯ ಸ್ವೀಕಾರ, ಸಹಕಾರ ಮತ್ತದರ ನಿಧಾನಲಯದ ಅರಿವಿನ ಸೊಬಗು, ಅಂತಃಕರಣದ ತೇವ, ಪ್ರಜ್ಞೆಯ ಆಳ ನಮಗಿಂದು ಬೇಡ. ಹಾಗಾಗಿ ನಮ್ಮ ಬೇರುಗಳಿಗೆ ಕತ್ತರಿ ಬೀಳುವಾಗ ಜಾಣಕುರುಡರಾಗಿರುತ್ತೇವೆ. ಸ್ವಯಂಶೋಧನೆಗೆ ಒಳಪಡುವ ಏಕಾಂತ, ಅಧ್ಯಯನಶೀಲತೆ ನಮಗೆ ಭಯ ತರಿಸುತ್ತದೆ, ಒಂಟಿತನ ಒಡ್ಡುತ್ತದೆ. ಅದಕ್ಕೇ ಸದಾ ಗೌಜಿ, ಗದ್ದಲ, ವಿವಾದದೊಂದಿಗೆ ಗುಂಪು ಕಟ್ಟಿಕೊಳ್ಳುತ್ತ ಹುಸಿ ಶಕ್ತಿಶಾಲಿತನ ಮೆರೆಯುವುದೇ ನಮಗಿಷ್ಟ!; ಈ ಧರ್ಮದವರನ್ನು ಹೊರಗಿಡಿ, ಆ ಧರ್ಮದವರನ್ನು ಹೊರಗಿಡಿ ಎನ್ನುವ ಕೂಗುಮಾರಿಗಳೇ, ದಯವಿಟ್ಟು ನಿಮ್ಮ ಮೂಲಸ್ವಭಾವವೇನು, ಪ್ರಭಾವವೇನು ಎಂಬುದನ್ನು ಪರಾಮರ್ಶೆಗೆ ಒಳಪಡಿಸಿಕೊಳ್ಳಿ. ಪ್ರಭಾವ ಎನ್ನುವುದು ಎಂದಿಗೂ ಸ್ವನಾಶವೇ.

ಬೆಂಗಳೂರಿನಲ್ಲಿ ವಾಸಿಸುತ್ತಿರುವ ರಂಗಭೂಮಿ, ಸಿನೆಮಾ ಕಲಾವಿದೆ ವಿದ್ಯಾ ಮೂರ್ತಿ ಅವರ ಬರಹ

ಏನಾದರೂ ಬರೆಯುವ ಮೊದಲೇ ಒಂದು ವಿಷಯ ಸ್ಪಷ್ಟಪಡಿಸಿಬಿಡುತ್ತೇನೆ. ನಾನು ಇಲ್ಲಿ ಯಾವುದೇ ಜಾತಿ ಮತಗಳ ಹೆಸರು ಉಲ್ಲೇಖಿಸಿದ್ದರೆ, ಅದು ಕೇವಲ ಸಾಂದರ್ಭಿಕವಷ್ಟೆ. ಅದರ ಹಿಂದೆ ಯಾವ ದುರುದ್ದೇಶವಾಗಲಿ, ಹಿಯಾಳಿಕೆಯಾಗಲೀ ಇಲ್ಲ. ನಾನು ಶ್ರೀ ವೈಷ್ಣವ ಎಂದರೆ, ಅಯ್ಯಂಗಾರ್ ಸಂಪ್ರದಾಯಲ್ಲಿ ಜನಿಸಿದವಳು. ಎಲ್ಲರಿಗೂ ತಿಳಿದಿರುವಂತೆ ಗೋಕುಲಾಷ್ಟಮಿ ನಮಗೆ ಅತಿ ದೊಡ್ಡ ಹಬ್ಬ. ತಮಾಷೆಯೆಂದರೆ ಈ ಹಬ್ಬದ ಸಂದರ್ಭದಲ್ಲಿ ಪ್ರತಿವರ್ಷವೂ, ನನ್ನ ಶಾಲಾ ಗೆಳತಿಯರು, ನೆರೆಹೊರೆಯವರು ಎಲ್ಲಾ ತಪ್ಪದೆ ಕೇಳುತ್ತಿದ್ದ ಒಂದೇ ಒಂದು ಪ್ರಶ್ನೆ ಎಂದರೆ, ‘ಇಮಾಂಸಾಬಿಗೂ, ಗೋಕುಲಾಷ್ಟಮಿಗೂ ಏನು ಸಂಬಂಧ’ ಎಂದು. ನನಗೆ ಏನು ಹೇಳಲೂ ತೋಚುತ್ತಿರಲಿಲ್ಲ. ಯಾರಾದರೂ ‘ನೀವು ಯಾವ ಜನ’ ಎಂದು ಕೇಳಿದಾಗ ನಾನು ಐಯ್ಯಂಗಾರ್ ಎಂದು ಹೇಳುತ್ತಿದ್ದೆ. ಅದಕ್ಕವರು, ‘ಓ ಹಾಗಾದರೆ ನೀವು ಬ್ರಾಹ್ಮಣರಲ್ಲವೇ’ ಎಂದು ಮೂಗೆಳೆಯುತ್ತಿದ್ದರು.

ಆಗ ನನಗೆ ಅದೆಲ್ಲ ಅರ್ಥವೇ ಆಗುತ್ತಿರಲಿಲ್ಲ. ಏನು ಹೇಳಲೂ ತೋಚದೆ ಸುಮ್ಮನಿರುತ್ತದ್ದೆ. ಮುಂದೆಂದೋ ತಿಳಿದಿದ್ದು ನಾವು ಶ್ರೀ ವೈಷ್ಣವರು, ಗುರುಸಮಾನರೆಂದು ಪೂಜಿಸುವ ನಮ್ಮ ಆಳ್ವಾರ್​ಗಳಲ್ಲಿ ಒಬ್ಬರು ಕೃಷ್ಣನ ಪರಮಭಕ್ತೆ, ಮುಸಲ್ಮಾನ ಧರ್ಮದ ಬೀಬಿ ನಾಚಿಯಾರ್. ಬಹುಶಃ ಈ ಕಾರಣಕ್ಕಾಗಿಯೇ ಮಿಕ್ಕ ಬ್ರಾಹ್ಮಣರು ನಮ್ಮನ್ನು ಹಾಗೆ ಪ್ರಶ್ನಿಸುತ್ತಿದ್ದುದು ಎಂದು. ಆದರೆ ಅನ್ಯಜಾತಿಯವರು ನಮ್ಮ ಅಪ್ಪ ಅಮ್ಮನ ಕಾಲಿಗೆ ನಮಸ್ಕರಿಸಿ, ನೀವು ಬ್ರಾಹ್ಮಣರು ನೀವು ಆಶೀರ್ವಾದ ಮಾಡಿದರೆ ನಮಗೆ ಒಳ್ಳೆಯದಾಗತ್ತೆ ಎನ್ನುತ್ತಿದ್ದರು. ಆಗೆಲ್ಲ ನನ್ನ ಗೊಂದಲ ಮತ್ತೂ ಹೆಚ್ಚುತ್ತಿತ್ತು. ಗೊಂದಲ ನಿವಾರಿಸಿಕೊಳ್ಳಲು ಹಿರಿಯರನ್ನು ಕೇಳಿದರೆ ಒತ್ತ ಬೀಳಬಹುದಾದ ಭಯದಿಂದ ಸುಮ್ಮನಾಗಿಬಿಡುತ್ತಿದ್ದೆ.

ಅದಕ್ಕೆ ಸರಿಯಾಗಿ ಹೇಗೋ ಏನೋ ನಮ್ಮ ಮನೆಯವರಿಗೆ ಮುಸಲ್ಮಾನರ ಸಂಪರ್ಕ ಸ್ವಲ್ಪ ಹೆಚ್ಚೇ ಇತ್ತು. ನಮ್ಮ ಮನೆಯ ಗೋಡೆಗೆ ಅಂಟಿದಂತೇ, ಪಕ್ಕದಲ್ಲೇ ಒಂದು ಮುಸ್ಲಿಂ ಪರಿವಾರವಿತ್ತು. ಅವರು ತಿಂದು ಬಿಸಾಡಿದ ಮೂಳೆ ಚೂರುಗಳು ನಮ್ಮ ಹಿತ್ತಲ ಪಾಲು. ನಮ್ಮ ಓನರ್ ಅವರಿಗೆ, ಹಾಗೆ ಹಾಕಬೇಡಿ ಎಂದು ಎಷ್ಟು ಹೇಳಿದರೂ ಕೇಳುತ್ತಿರಲಿಲ್ಲ. ಅದೇ ನಮ್ಮ ತಂದೆ ಅವರ ಮನೆಗೇ ಹೋಗಿ ಮಾತಾಡಿ ಬಂದಾಗ ತಕ್ಷಣವೇ ಕೇಳುತ್ತಿದ್ದರು. ಆಗೆಲ್ಲ ನನಗೆ ನಿಜಕ್ಕೂ ನಮಗೂ ಸಾಬರಿಗೂ ಏನಾದರೂ ನಂಟಿದೆಯೇ ಎಂಬ ಸಂಶಯ ಕಾಡುತ್ತಿತ್ತು.

ಇದನ್ನೂ ಓದಿ : ಸ್ವಭಾವ ಪ್ರಭಾವ : ಬ್ಯಾರಿಗಳು ಕೊಟ್ಟಿದ್ದನ್ನೆಲ್ಲ ತಿನ್ನಬಾರದಂತೆ!

ಇದು ಸಾಲದೆಂಬಂತೆ ನನ್ನ ಅಣ್ಣಂದಿರ ಗೆಳೆಯರು, ನನ್ನ ಆಪ್ತಗೆಳತಿಯರ ಗುಂಪಿನಲ್ಲಿದ್ದ ಮೂರ್ನಾಲ್ಕು ಮುಸ್ಲಿಂ ಗೆಳತಿಯರು ನನ್ನ ಇತರ ಗೆಳತಿಯರೊಂದಿಗೆ ಗೋಕುಲಾಷ್ಟಮಿಗೆ ನಮ್ಮ ಮನೆಗೆ ಬರುತ್ತಿದ್ದರು. ಇತರ ಹಿಂದೂ ಗೆಳೆಯರಂತೆ ಅವರೂ ನಮ್ಮ ಪುಳಿಯೋಗರೆ, ಗಸಗಸೆ ಪಾಯಸ, ಹಬ್ಬದ ಮತ್ತಿತರ ತಿಂಡಿಗಳನ್ನು ಮುಗಿಬಿದ್ದು ತಿನ್ನುತ್ತಿದ್ದರು. ನಾನು ನನ್ನ ಇತರ ಗೆಳತಿಯರಿಗೆ ಕುಂಕುಮ ಕೊಡುವಂತೆ ಅವರಿಗೂ ಕೊಡುತ್ತಿದ್ದೆ. ಆದರೆ, ತಮ್ಮ ಧರ್ಮದಲ್ಲಿ ಕುಂಕುವಿಡುವಂತಿಲ್ಲವೆಂದು ಅವರಿಗೂ ತಿಳಿದಿರಲಿಲ್ಲ ಅವರಿಗೆ ಕೊಡಬಾರದೆಂದು ನನಗೂ ತಿಳಿದಿರಲಿಲ್ಲ, ನಾನು ಕೊಡುತ್ತಿದ್ದೆ ಅವರು ಇಡುತ್ತಿದ್ದರು ಅಷ್ಟೇ. ಅಷ್ಟೇ ಅಲ್ಲದೆ, ಪೂಜೆಗೆಂದು ಬರುವಾಗ ಬರಿಗೈಯಲ್ಲಿ ಹೋಗಬಾರದೆಂದು ಅವರ ಮನೆಯಿಂದ ನಮಗೆ ಡ್ರೈ ಫ್ರೂಟ್ಸ್ ತಂದುಕೊಂಡುತ್ತಿದ್ದರು.

ನನ್ನ ಅಣ್ಣನ ಗೆಳೆಯ ಕಿಂಗ್ ಹುಸೇನ್, ನಮ್ಮ ಭಗವದ್ಗೀತೆಯ ಅಷ್ಟೂ ಶ್ಲೋಕಗಳನ್ನು ಸ್ಫುಟವಾಗಿ ಹೇಳುತ್ತಿದ್ದ. ಚರಿತ್ರೆಯಲ್ಲಿ ಬರುವ ಐಲುದೊರೆ ತುಘಲಕ್, ಕ್ರೂರಿಗಳಾದ ಔರಂಗ್ ಜೇಬ್, ಖಿಲ್ಜಿಗಳನ್ನು ನಾವು ದ್ವೇಷಿಸುವಂತೆ ಅವರೂ ದ್ವೇಷಿ ಸುತ್ತಿದ್ದರು. ವಿಶೇಷ ದಿನಗಳಲ್ಲಿ ಬಿಟ್ಟು ಮಿಕ್ಕ ದಿನಗಳಲ್ಲಿ ಅವರ ವೇಷಭೂಷಣವೂ ನಮ್ಮಂತೆಯೇ ಇರುತ್ತಿತ್ತು. ಮನೆಯ ಹಿರಿಯ ಹೆಂಗಸರೂ ದಿನನಿತ್ಯ ಬುರ್ಖಾ ಹಾಕುತ್ತಿರಲಿಲ್ಲ. ಹಿಜಾಬ್ ಅಂತೂ ನಾವು ನೋಡೇ ಇರಲಿಲ್ಲ. ಇದೆಲ್ಲಾ ಕಾರಣಗಳಿಂದಾಗಿ ನಮಗೆ ಅವರು ನಮ್ಮವರಲ್ಲ ಭಾರತೀಯರಲ್ಲ ಎಂದು ಒಂದು ಕ್ಷಣವೂ ಅನ್ನಿಸುತ್ತಿರಲಿಲ್ಲ. ಅಷ್ಟು ಮುಗ್ಧವಾಗಿರುತ್ತಿತ್ತು ನಮ್ಮ ಒಡನಾಟ.

ಶಾಲೆಯಲ್ಲೂ ಅಷ್ಟೇ, ಆಟೋಟಗಳಲ್ಲಿ ಅವರು ಎಂದೂ ಮುಂದು. ನಾವು ಪುಳಿಚಾರ್​ಗಳಿಗಿಂತ ಅವರು ಶಕ್ತಿವಂತರು, ಅವರಿಗೆ ನಮ್ಮಂತೆ ಬೇಗ ಸುಸ್ತಾಗುತ್ತಿರಲಿಲ್ಲ, ಸುಲಭದಲ್ಲಿ ಬಿಟ್ಟುಕೊಡುತ್ತಿರಲಿಲ್ಲ. ಹಾಗಾಗಿ ಎಲ್ಲಾ ಆಟೋಟಗಳಲ್ಲೂ ಅವರಿಗೇ ಬಹುಮಾನ ಕಟ್ಟಿಟ್ಟ ಬುತ್ತಿ. ಅಂತರ್ಶಾಲಾ ಸ್ಪರ್ಧೆಗಳಲ್ಲಿ ಅವರು ಚಾಂಪಿಯನ್​ಶಿಪ್ ಗೆದ್ದುಬಂದರೆ ನಮಗೆಲ್ಲ ಹೆಮ್ಮೆ.

ಇದನ್ನೂ ಓದಿ : ಸ್ವಭಾವ ಪ್ರಭಾವ: ‘ನಮ್ಮ ಇಸ್ಲಾಂಪೂರಕ್ಕೆ ವಹಾಬಿಸಮ್ ಕಾಲಿಟ್ಟಿಲ್ಲ, ಸಂಘಪರಿವಾರ ಕೆಮ್ಮಂಗಿಲ್ಲ’

ನಮ್ಮ ಶಾಲೆಯಲ್ಲಿ ಪ್ರತಿ ಶುಕ್ರವಾರ ಸರಸ್ವತೀ ಪೂಜೆ ಇರುತ್ತಿತ್ತು. ಆಗ ನಮ್ಮೊಡನೆ ಸೇರಿ ಅವರೂ ಭಜನೆ ಮಾಡುತ್ತಿದ್ದರು ಚರಪು ಸ್ವೀಕರಿಸುತ್ತಿದ್ದರು. ಆಗಲೂ ಅವರು ನಮಗಿಂತ ಬೇರೆ ಎನಿಸುತ್ತಲೇ ಇರಲಿಲ್ಲ. ನನ್ನ ಆಪ್ತ ಗೆಳತಿಯರ ಗುಂಪಿನಲ್ಲಿ ಕನೀಝ್ ಬಾನು ಎಂಬ ಸುಂದರಿಯಾದ ಹುಡುಗಿಯಿದ್ದಳು. ಅವಳೋ ನಮ್ಮ ಹಿಂದಿ ಮಾ‌ಸ್ಟರನ್ನು ಕಂಡರೆ ಪ್ರಾಣ ಬಿಡುತ್ತಿದ್ದಳು ಆ ವಯಸ್ಸಿಗೇ. ‘ನಾನು ಹಿಂದಿ ಸರ್​ನ್ನ ಲವ್ ಮಾಡ್ತೀನಿ ಮದುವೆ ಆದರೆ ಅವರನ್ನೇ’ ಎನ್ನುತ್ತಿದ್ದಳು. ಅದು ಒನ್ ವೇ ಲವ್ ಬೇರೆ. ಆ ಕಾಲದಲ್ಲಿ ಅಂತರ್ಜಾತೀಯ ವಿವಾಹಕ್ಕೆ ಒಪ್ಪಿಗೆ ಇಲ್ಲವೆಂದು ತಿಳಿದಿತ್ತೇ ವಿನಾ, ಹಿಂದು ಮುಸ್ಲಿಮ್ ನಡುವೆ ವಿವಾಹ ಸಾಧ್ಯವೇ ಇಲ್ಲ ಎಂದು ನಮಗ್ಯಾರಿಗೂ ಗೊತ್ತಿರಲಿಲ್ಲ. ಆದರೂ ನಾವು ಅವಳಿಗ ‘ಇದು ಮದುವೆಯ ಬಗ್ಗೆ ಯೋಚಿಸುವ ವಯಸ್ಸಲ್ಲ ಈಗ ಓದುವುದಷ್ಟೇ ನಮ್ಮ ಕರ್ತವ್ಯ ಇಷ್ಟಕ್ಕೂ ಅಂತರ್ಜಾತೀಯ ವಿವಾಹಕ್ಕೆ ಯಾರೂ ಒಪ್ಪುವುದಿಲ್ಲ’ ಎಂದು ಪರಿಪರಿಯಾಗಿ ಹೇಳಿದರೂ ಕೇಳುತ್ತಿರಲಿಲ್ಲ. ಅದಕ್ಕೆ ನಾವು ‘ಹೋಗಿ ಬೇಕಾದರೆ ಮಾಸ್ಟರ್​ನೇ ಕೇಳು’ ಎಂದಿದ್ದಕ್ಕೆ ಅವಳು ಹಾಗೆಯೇ ಮಾಡಿಬಿಡುವುದೇ!

ಸುಮಾರು ಹನ್ನೆರಡು ವರ್ಷಗಳ ಹಿಂದೆ, ಯಾವುದೋ ಕಿರುತೆರೆಯ ಸಮಾರಂಭದಲ್ಲಿ ಇದ್ದಕ್ಕಿದ್ದ ಹಾಗೆ, ಬುರ್ಖಾ ಧರಿಸಿ ಮುಖದ ತೆರೆ ಮೇಲೇರಿಸಿದ್ದ ಮುಸ್ಲಿಂ ಹೆಂಗಸೊಬ್ಬಳು ಕಣ್ಣಿಗೆ ಬಿದ್ದಳು. ನೋಡಲು ಸುಂದರವಾಗಿದ್ದರೂ, ಮುಖದಲ್ಲೇನೋ ಒಂದು ತೆರನಾದ ಸಿಟ್ಟು ಸೆಡವಿನ ಭಾವ, ಸಾಮಾನ್ಯವಾಗಿ ಯಾವ ಮುಸ್ಲಿಂ ಸ್ತ್ರೀಯರು ಇಂಥ ಸಮಾರಂಭಗಳಿಗೆ ಬುರ್ಖಾ ಧರಿಸಿ ಬರುತ್ತಿರಲಿಲ್ಲವಾದ್ದರಿಂದ ನಾನು ಆಕೆ ಯಾರಿರಬಹುದೆಂಬ ಕುತೂಹಲದಿಂದ ಅವಳನ್ನೇ ಗಮನಿಸುತ್ತಿದ್ದೆ. ಅರೆ! ನನ್ನ ಆಪ್ತ ಗೆಳತಿ ಕನೀಝ್ ಬಾನು! ತಡೆಯಲಾರದ ಖುಷಿಯಿಂದ ಅವಳನ್ನು ಮಾತನಾಡಿಸಲು ಅವಳೆಡೆಗೆ ಧಾವಿಸಿದೆ.

ಇದನೂ ಓದಿ : ಸ್ವಭಾವ ಪ್ರಭಾವ : ‘ಆದ್ರೂ ಮುಸ್ಲಿಮ್ಸ್ ಬಗ್ಗೆ ಕೇರ್ಫುಲ್ ಆಗಿ ಇರಬೇಕು’ ಹೀಗಂದ ಆ ನವಯುವಕ

ಆದರೆ ಅವಳು ನನ್ನನ್ನು ನೋಡುತ್ತಿದ್ದ ಹಾಗೆ, ತನ್ನ ಸುಂದರ ಮುಖವನ್ನು ಬೇರೆಡೆಗೆ ಹೊರಳಿಸಿದಳು. ಅವಳಿಗೆ ನನ್ನ ಗುರುತು ಸಿಗಲಿಲ್ಲವೆಂದುಕೊಂಡು ಅವಳ ಭುಜ ತಟ್ಟಿ ಮತ್ತೆ ಮಾತನಾಡಿಸಲು ಯತ್ನಿಸಿದೆ. ಆಗ ಅವಳು ಸರಕ್ಕನೇ ನನ್ನ ಕಡೆ ತಿರುಗಿ, ‘ನೀವು ಬೊಮ್ಮನ್​ಗಳು, ಆರೆಸ್ಸೆಸ್ ನವರು. ನಮ್ಮವರನ್ನೆಲ್ಲ ಇಂಡಿಯಾದಿಂದ ಓಡಿಸೋ ಪ್ಲ್ಯಾನ್ ಮಾಡ್ತಿದ್ದೀರಾ, ನಿನ್ನ ಜೊತೆ ನಾನು ಮಾತಾಡಿದ್ದು ನನ್ನ ಗಂಡನಿಗೆ ಗೊತ್ತಾದರೆ ನನ್ನ ಸಾಯಿಸಿಬಿಡ್ತಾರೆ, ಮಾತಾಡದೆ ಸುಮ್ಮನೆ ಹೊರಟು ಹೋಗು.’ ಎಂದು ಸಿಡುಕಿದಾಗ ಅವಳ ಸುಂದರ ಕಣ್ಣುಗಳಲ್ಲಿ ಹೊಮ್ಮಿದ್ದ ದ್ವೇಷ ಭಾವವನ್ನು ಕಂಡು ಮೂಕಳಾಗಿದ್ದೆ.

ಇವಳೇನಾ ನನ್ನ ಆಪ್ತಗೆಳತಿ, ನಮ್ಮ ಮನೆಯ ತಿಂಡಿ ತಿನಿಸುಗಳನ್ನು ಚಪ್ಪರಿಸುತ್ತಿದ್ದವಳು. ತನ್ನ ಇಷ್ಟದ ಬೊಂಬೆ ತನಗೆ ಬೇಕೇಬೇಕು ಎಂದು ಹಠ ಹಿಡಿಯುವ ಮಗುವಿನಂತೆ ನಮ್ಮ ಹಿಂದಿ ಮಾಸ್ಟರ್ ಹಿಂದೆ ಬಿದ್ದಿದ್ದವಳು, ನಮ್ಮೊಂದಿಗೆ ಭಜನೆ ಮಾಡುತ್ತಿದ್ದವಳು ಎಲ್ಲಾ ಇವಳೇನಾ? ಎಂಬ ಸಖೇದಾಶ್ಚರ್ಯದಲ್ಲಿ ನನ್ನ ತೆರೆದ ಬಾಯಿ ಮುಚ್ಚಿರಲಿಲ್ಲ, ಕಣ್ಣಂಚಿನಲ್ಲಿ ಜಿನುಗಿದ ಹನಿಯಿಂದ ಕಣ್ಣು ಮಂಜಾಗಿ ಮುಂದಿನವರು ಸರಿಯಾಗಿ ಕಾಣುತ್ತಿರಲಿಲ್ಲ. ನಿಮಿಷವೆರಡಲ್ಲಿ ದೃಷ್ಟಿ ತಿಳಿಯಾದಾಗ ಅವಳು ಅಲ್ಲಿ ಇರಲೇ ಇಲ್ಲ. ಅತಿ ಎನಿಸುವಷ್ಟು ಭಾವುಕಳಾದ ನನಗೆ ಎಷ್ಟೋ ದಿನಗಳು ಈ ಆಘಾತದಿಂದ ಹೊರಬರಲು ಸಾಧ್ಯವೇ ಆಗಿರಲಿಲ್ಲ. ಎಷ್ಟೋ ದಿನಗಳನಂತರ ನನಗೆ ತಿಳಿಯಿತು ಅವಳು ಮದುವೆಯಾಗಿದ್ದು ರಾಜಕಾರಣಿಯೊಬ್ಬಳನ್ನು ಎಂದು.

ಹೌದಲ್ಲವೇ, ಯಾವುದೇ ಜಾತಿ ಮತಭೇದದ ಸೋಂಕಿಲ್ಲದೆ, ತಮ್ಮತಮ್ಮ ಇತಿಮಿತಿಯನ್ನು ಅರಿತಿದ್ದ ನಿರ್ಮಲ ಸ್ನೇಹಾಮೃತವನ್ನು ಹಾಲಾಹಲವಾಗಿಸಿದ್ದು ಈ ಹೊಲಸು ರಾಜಕೀಯವೇ ಅಲ್ಲವೇ! ಎಲ್ಲಾ ರಾಜಕೀಯ ಪಕ್ಷಗಳೂ ತಂತಮ್ಮ ಸ್ವಾರ್ಥಕ್ಕೆ ಮುಗ್ಧ ಸಂಬಂಧಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದರಿಂದಲೇ ತಾನೇ ಇಡೀ ವಿಶ್ವ ಅಶಾಂತಿಯ ಬೀಡಾಗಿರುವುದು. ಇದೆಲ್ಲಾ ಮತ್ತೆ ಸರಿಹೋಗುವುದೋ ಅಥವಾ ಎಲ್ಲಾ ಕನಸಿನ ದಿನಗಳಾಗಿಯೇ ಉಳಿದು ಹೋಗುವುದೋ? ಇದಕ್ಕೆ ಸಕಲಜೀವಿಗಳ ಸೃಷ್ಟಿಕರ್ತನೇ ಉತ್ತರಿಸಬೇಕು.

ಪ್ರತಿಕ್ರಿಯೆಗಾಗಿ :  tv9kannadadigital@gmail.com

ಇದನ್ನೂ ಓದಿ : ಸ್ವಭಾವ ಪ್ರಭಾವ: ಈಗಲೂ ಲತೀಫ್ ಸಾಹೇಬರ ಹೆಂಡತಿಯ ಮಸಾಲೆಖಾರವೇ ನನ್ನಡುಗೆಗೆ

Published On - 3:45 pm, Sun, 27 March 22

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್