Sydney Diary : ತಿಪ್ಪತಿಪ್ಪಿಯ ದಾಂಪತ್ಯಕಲಹವೂ ಅಂಕಲ್ನ ಕಲ್ಲಲೆ ಬಲ್ಲಲೆ ಶೌವಲೆಯೂ ಮತ್ತು ಕೆಲ ಸತ್ಯಗಳೂ
Culture : ‘‘ನೋಡಮ್ಮಾ ನಿನಗೆ ಒಳ್ಳೆಯ ಸಂಬಳ ಇದೆ. ಓಲ್ಡ್ ಮಂಕ್ ಇರುವುದು ದಿನವಿಡೀ ಕಷ್ಟಪಟ್ಟು ದುಡಿಯುವ ಕಾರ್ಮಿಕ ಬಂಧುಗಳಿಗಾಗಿ. ನಿನ್ನಂಥವರಿಗೆ ಟೀಚರ್ಸ್, ಬ್ಲಾಕ್ ಲೇಬಲ್, ಶಿವಾಸ್ ರಿಗಲ್ ಒಳ್ಳೆಯವು. ಬಾಗಿಲು ಹಾಕಿಕೊಂಡು ಕುಡಿಯುತ್ತೀಯಂತೆ? ನಮ್ಮದು ಕದ್ದು ಮುಚ್ಚಿ ತಿನ್ನುವ ಕುಡಿಯುವ ಸಂಸ್ಕೃತಿಯಲ್ಲ, ನಮ್ಮ ಹೆಣ್ಣುಮಕ್ಕಳು ಯಾವತ್ತೂ ಹಂಚಿಕೊಂಡು ಬಾಳಿದವರು" ಶ್ರೀಹರ್ಷ ಸಾಲಿಮಠ
Sydney Diary | ಸಿಡ್ನಿ ಡೈರಿ : ಹಿಂಗೆ ನನ್ನ ಗೆಳೆಯನ ಹೆಂಡತಿ ನಮಗೆ ಪರಿಚಯವಾಗಿ ಗಂಡನ ಬಗ್ಗೆ ದೂರು ಹೇಳತೊಡಗಿದ ಮೇಲೆ ಮೂರು ಮಕ್ಕಳನ್ನು ಹಡೆದಳು. ಈ ದೂರು ಹೇಳೋದು ಮಕ್ಕಳನ್ನು ಹಡೆಯುವುದು ಏ ಸಪರೇಟ್ ಓ ಅಲಗ್ ಎರಡೂ ಮಿಕ್ಸ್ ಮಾಡಬಾರದು ಅಂದುಕೊಂಡಿದ್ದಳೇನೊ. ಗಂಡ ಹೆಂಡತಿ ಜಗಳದಲ್ಲಿ ಮಕ್ಕಳು ಹುಟ್ಟಲು ಯಾಕೆ ತೊಂದರೆ ಮಾಡಬೇಕು ಪಾಪ? ಆದರೆ ಅವರ ಅದೃಷ್ಟ ನೋಡಿ ಅವರ ಎಲ್ಲಾ ಮಕ್ಕಳು ಹಂದಿ ತಿಂದ ಹಾಗೆ ತಿಂದು ಕ್ವಾಣದ ಹಾಗೆ ಮಲಗಿಬಿಡುತ್ತಿದ್ದವು. ಒಂದು ರಾತ್ರಿಯೂ ನಿದ್ದೆಗೆಡಲಿಲ್ಲ ದಂಪತಿಗಳು! ತಮ್ಮ ಆಸ್ತಿಗೆ ಪಾಲುದಾರರನ್ನು ಇಷ್ಟು ಸುಲಭವಾಗಿ ಹುಟ್ಟಲು ಬಿಟ್ಟ ಮಕ್ಕಳು ಅದೆಷ್ಟು ಮಬ್ಬಿದ್ದಾವೊ ಗೊತ್ತಿಲ್ಲ! ಆತನ ಒಂದು ಕಾಮನ್ ಡಯಲಾಗ್ ಇತ್ತು. ಏನೆ ಮಾಡೋದಿದ್ದರೂ “ಇವತ್ತು ಮಜಾ ಮಾಡಿಬಿಡೋಣ” ಅಂತ ಹೇಳುತ್ತಿದ್ದ. ಅಂದರೆ ಉದಾಹರಣೆಗೆ “ಇವತ್ತು ಇಟಾಲಿಯನ್ ಹೋಟೆಲ್ಗೆ ಹೋಗಿ ಮಜಾ ಮಾಡಿಬಿಡೋಣ!, ಇವತ್ತು ಕಿರಿಕ್ ಪಾರ್ಟಿ ಸಿನಿಮಾಗೆ ಹೋಗಿ ಮಜಾ ಮಾಡಿಬಿಡೋಣ, ಇವತ್ತು ಚೆರ್ರಿ ಹೊಲಕ್ಕೆ ಹೋಗಿ ಮಜಾ ಮಾಡಿಬಿಡೋಣ” ಈ ರೀತಿ. ದಿನಾ ಮಕ್ಕಳು ಬೇಗ ಮಲಗಿಬಿಡುತ್ತಿದ್ದವು ಅಷ್ಟೇ! ಶ್ರೀಹರ್ಷ ಸಾಲಿಮಠ, ಲೇಖಕ, ಸಿಡ್ನಿ
*
(ಕಂತು : 10)
ಬಹುತೇಕ ಸಮಯಗಳಲ್ಲಿ ವಿಶೇಷ ಸಂದರ್ಭವಲ್ಲದಿದ್ದರೆ ನಾನು ಗೆಳೆಯರ ಮನೆಗಳಿಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಿಕೊಳ್ಳುತ್ತೇನೆ. ನಾನು ಅವರ ಮನೆಗೆ ಹೋಗುವುದು, ನಾವು ಗಂಡಸುಗಳೆಲ್ಲ ಕೂತು ಹರಟೆ ಹೊಡೆಯುತ್ತಿದ್ದರೆ ಇಡೀದಿನ ದುಡಿದು ಹೈರಾಣಾದ ಹೆಣ್ಣುಮಕ್ಕಳು ನಮಗಾಗಿ ಮತ್ತೆ ಅಡುಗೆ ಮನೆಯಲ್ಲಿ ಸಾವರಿಸುವುದು ಇವೆಲ್ಲ ನನಗೆ ಮುಜುಗರ ತರುತ್ತವೆ. ಇದಕ್ಕೆ ಅಪವಾದವೆಂದರೆ ಜೀವದ ಗೆಳೆಯ ತಿಪ್ಪ ಮಾತ್ರ. ನಾನು ಹೋದಾಗಲೆಲ್ಲ ತಿಪ್ಪನೇ ಅಡುಗೆ ಮಾಡುವುದು. ಆ ಸಮಯದಲ್ಲಿ ತಿಪ್ಪನ ಹೆಂಡತಿ ಟಿವಿ ನೋಡುವುದೋ ಅಥವಾ ನನ್ನ ಜೊತೆ ಹರಟೆ ಹೊಡೆಯುತ್ತಾ ತಿಪ್ಪನ ಕಾಲೆಳೆಯುವುದೋ ಮಾಡುತ್ತಾಳೆ. ಹೀಗೆ ಒಂದು ದಿನ ಹೋದಾಗ ತಿಪ್ಪ ಅಡುಗೆ ಮಾಡಿ ಮುಗಿಸಿ “ಅಡುಗೆ ಮುಗೀತು. ತಿಪ್ಪೀ ನಿನಗೆ ಕಡಿಮೆ ಎಣ್ಣೆಯ ಅಡುಗೆ ಸಪರೇಟಾಗಿ ಸೈಡಿಗಿಟ್ಟಿದಿನಿ” ಅಂತ ಹೇಳಿ ಬಂದು ನನ್ನ ಜೊತೆ ಕುಳಿತ. ತಿಪ್ಪಿ ಎದ್ದು ಹೋಗಿ ಗಾಜಿನ ಟಂಬ್ಲರ್ ತೆಗೆದುಕೊಂಡು ಜೋಡಿಸಿ “ತಿಪ್ಪು ಇವತ್ತು ಯಾವುದು ಕುಡಿತಿರಾ? ಫೆಂಟೋರಾ ನಾ ಅಥವಾ ಜಾನಿ ವಾಕರ್?” ಅಂತ ಕೇಳಿದಳು. ಆತ “ನನ್ನ ಜೀವದ ಗೆಳೆಯ ಬಂದಿದಾನೆ, ಇವತ್ತು ಶಿವಾಸ್ ರಿಗಲ್ ಹಾಕು” ಅಂದ.
ಆಕೆ ಟಂಬ್ಲರ್ ನಲ್ಲಿ ಶಿವಾಸ್ ರಿಗಲ್ ಸುರಿದು “ತಿಪ್ಪು ಸಿಕ್ಸ್ಟಿ ಹಾಕಿದಿನಿ ಸೋಡಾನಾ, ನೀರಾ?” ಅಂತ ಕೇಳಿದಳು. ಆತ “ನೀರು ಹಾಕು. ಹಾಗೆ ಇವತ್ತು ಉಪ್ಪಿನಕಾಯಿ ಮರಿಬೇಡ” ಅಂದ.
ನನಗೆ ಈ ದೃಶ್ಯವನ್ನು ನೋಡಿ ಭಾವೋದ್ವೇಗದಿಂದ ದೃಗುಜಲವುರವಣಿಸಿದವು.
ನಾನಂದೆ “ಲೋ ತಿಪ್ಪಾ… ಎಂತಾ ಅದ್ಭುತ ಜೋಡಿ ನಿಮ್ಮದು. ನೀನು ಆಕೆಗೆ ಲೋ ಫ್ಯಾಟ್ ಅಡುಗೆ ಮಾಡುತ್ತೀಯಾ ಆಕೆ ನಿನಗೆ ಡ್ರಿಂಕ್ ಸರ್ವ್ ಮಾಡುತ್ತಾಳೆ. ನಾನು ಗ್ಲಾಸ್ ಹಿಡಿದರೆ ಸಾಕು ನನ್ನ ಹೆಂಡತಿ ಬಾರುಕೋಲು ಹಿಡಿದು ಅಟ್ಟಿಸಿಕೊಂಡು ಬರುತ್ತಾಳೆ, ನಾನು ದಿನಾ ಆಕೆಯ ಕೈಲಿ ಅಡುಗೆ ಮಾಡಿಸುತ್ತೇನೆ. ನಿಮ್ಮದು ನಿಜಕ್ಕೂ ಮಾದರಿ ದಾಂಪತ್ಯ!”
ಆತ ಹೆಚ್ಚಿನ ಪ್ರತಿಕ್ರಿಯೆ ಕೊಡುವ ತೊಂದರೆ ತೆಗೆದುಕೊಳ್ಳದೆ, “ಗ್ರಾಸ್ ಇಸ್ ಗ್ರೀನರ್ ಆನ್ ಅದರ್ ಸೈಡ್… ಮುಚ್ಕೊಂಡು ಬುರ್ಜಿ ತಿನ್ನು” ಅಂತ ಹೇಳಿ ತನ್ನ ಟಂಬ್ಲರ್ ಅನ್ನು ಕೈಗೆತ್ತಿಕೊಂಡ.
ಇದಾಗಿ ಕೆಲ ತಿಂಗಳುಗಳು ಕಳೆದವು. ತಿಪ್ಪ ಕರೆ ಮಾಡಿ “ಇವತ್ತಿಗೆ ನಮ್ಮ ಡೈವರ್ಸ್ ಫೈನಲ್ ಆಯ್ತು ಇನ್ನೇನು ಕೋರ್ಟಿನಿಂದ ಆರ್ಡರ್ ಬರಬೇಕಷ್ಟೇ” ಅಂತ ಹೇಳಿದ.
ಆ ಇಡೀ ದಿನ ತಿಪ್ಪನ ಸಂಸಾರ ಮುರಿದು ಹೋದದ್ದಕ್ಕೆ ಖಿನ್ನನಾಗಿ ಕುಳಿತಿದ್ದೆ. ಈ ಮೇಲೆ ಹೇಳಿದ ಘಟನೆ ನಡೆದಾಗ ತಿಪ್ಪ ತಿಪ್ಪಿಯ ದಾಂಪತ್ಯ ಮೇಲ್ನೋಟಕ್ಕೆ ಮಾದರಿ ದಾಂಪತ್ಯ ಅಂತ ಅನ್ನಿಸುತ್ತಿದ್ದರೂ ಅವರಿಬ್ಬರ ಮುನಿಸು ತಾರಕದಲ್ಲಿತ್ತು. ದಿನದಿನವೂ ಕಚ್ಚಾಡುತ್ತಿದ್ದರು. ಆಗಾಗ್ಗೆ ಸಿಕ್ಕಿದಾಗೆಲ್ಲ ತಿಪ್ಪ ತನ್ನ ಮೈಮುಖದ ಮೈಮೇಲಿನ ಗಾಯಗಳನ್ನು ತೋರಿಸಿ ತಿಪ್ಪಿ ತನಗೆ ತನ್ನ ಹೈಹೀಲ್ಡ್ ಚಪ್ಪಲಿಯಿಂದ ಥಳಿಸಿದ್ದನ್ನು ಹೇಳಿಕೊಂಡು ಗೋಳಾಡುತ್ತಿದ್ದ. ತಿಪ್ಪಿಯಾದರೋ ನನ್ನನ್ನು ಹೊರತುಪಡಿಸಿ ತಿಪ್ಪನ ಯಾವ ಗೆಳೆಯರೊಡನೆಯೂ ಮಾತನಾಡುತ್ತಿರಲಿಲ್ಲ. ಆಕೆಯನ್ನು ತಿಪ್ಪನ ಹೇಳಿಕೆಯ ಆಧಾರದ ಮೇಲೆ ಜಡ್ಜ್ ಮಾಡದವನು ನಾನೊಬ್ಬನೆ ಎಂದು ಆಕೆ ಹೇಳಿಕೊಂಡಿದ್ದಳು. ನಾನಾದರೂ ಆಕೆ ಎದುರಿಗೆ ಇರಲಿ ಇಲ್ಲದಿರಲಿ ಆಕೆಯೊಡನೆ ಅನುಸರಿಸಿಕೊಂಡು ಹೋಗು ಅಂತ ತಿಪ್ಪನಿಗೇ ಬುದ್ದಿ ಹೇಳುತ್ತಿದ್ದೆ. ಆತ ನಾನು ಹೇಳದಿದ್ದರೂ ಸಾಕಷ್ಟು ಅನುಸರಿಸಿಕೊಂಡು ಹೋಗಿದ್ದ ಅನ್ನಿ. ಅದಾದರೂ ಅವರ ಮದುವೆ ಮುರಿದುಬಿತ್ತು.
ಹಾಗೆ ನೋಡಿದರೆ ತಿಪ್ಪ ನನಗಿಂತ ಒಳ್ಳೆಯ ಗಂಡ ಹಾಗೂ ತಂದೆ. ಆತ ಮನೆಯಲ್ಲಿದ್ದರೆ ಮಗುವಿಗೆ ಊಟ ಮಾಡಿಸುವುದು ಅದರ ಹೇಸಿಗೆ ಬಳಿಯುವುದರಿಂದ ಹಿಡಿದು ಪ್ರತಿಯೊಂದು ಕೆಲಸವನ್ನೂ ಆತನೇ ಮಾಡುತ್ತಿದ್ದ. ಯಾವ ಹೆಣ್ಣಾದರೂ ತನಗೆ ಇಂತಹ ಗಂಡ ಬೇಕು ಅಂತ ಬಯಸುವ ವ್ಯಕ್ತಿತ್ವ ತಿಪ್ಪನದು. ತಿಪ್ಪಿಯೂ ಕೆಟ್ಟ ಹುಡುಗಿಯೇನಲ್ಲ. ಆತನೊಡನೆ ಹೆಗಲಿಗೆ ಹೆಗಲು ಕೊಟ್ಟು ಸಂಸಾರ ಮಾಡಿದವಳು. ಆತ ಕೆಲಸ ಅಂತ ದೇಶವಿದೇಶಗಳಿಗೆ ಹೋದಾಗೆಲ್ಲ ಏಕಾಂಗಿಯಾಗಿ ಮಗುವನ್ನು ನೋಡಿಕೊಂಡು ಗಂಡನ ಕೆಲಸಗಳಿಗೆ ಚ್ಯುತಿ ಬಾರದಂತೆ ಸಂಸಾರ ನಡೆಸಿದವಳು. ಇಬ್ಬರಲ್ಲಿ ಜಗಳ ಆಡಲು ಹೆಚ್ಚು ಕಾರಣಗಳೂ ಇರಲಿಲ್ಲ ಅಂತ ತಿಳಿನೋಟದಲ್ಲಿ ನನಗೆ ಅನ್ನಿಸುತ್ತದೆ. ಇಬ್ಬರು ಅಷ್ಟು ಒಳ್ಳೆಯವರಾಗಿದ್ದರೂ ಅದೆಲ್ಲೋ ಚಿಕ್ಕ ಪುಟ್ಟ ಹೊಂದಾಣಿಕೆಗಳು ಕಣ್ಣಿಗೆ ಕಾಣದ ಪ್ರತಿಷ್ಠೆಗಳು ಕಾಣದ ಗೋಡೆಯೊಂದನ್ನು ಕಟ್ಟಿಟ್ಟಿದ್ದವು. ತಿಪ್ಪ ತಿಪ್ಪಿ ಇಬ್ಬರಲ್ಲೂ ಎಲ್ಲರಿಗೂ ಕಿರಿಕಿರಿ ಎನಿಸುವ ಕೆಲ ಗುಣಗಳಿದ್ದವು. ತಿಪ್ಪಿ ಮೂರು ತಾಸು ಜಳಕ ಮಾಡುತ್ತಿದ್ದಳು. ತಿಪ್ಪ ಜಿಬುಟ. ಒಂದು ಹಟ ಹಿಡಿದರೆ ಅದು ತೀರುವವರೆಗೆ ಬಿಡುತ್ತಿರಲಿಲ್ಲ. ತಿಪ್ಪಿ ಮಾಂಸಾಹಾರಿ ತಿಪ್ಪ ಅಪ್ಪಟ ಸಸ್ಯಾಹಾರಿ. ತಿಪ್ಪ ಮಗುವಿಗೆ ಮಾಂಸ ತಿನ್ನಲು ಬಿಡುತ್ತಿರಲಿಲ್ಲ. ಎಲ್ಲಾದರೂ ಹೋಟೆಲ್ಗೆ ಹೋದಾಗ ತಿಪ್ಪಿ ನಾನ್ ವೆಜ್ ಆರ್ಡರ್ ಮಾಡಿದರೆ ಮಗು ಆಕೆಯ ತಟ್ಟೆಯಲ್ಲಿ ತಿನ್ನಲು ಆಸೆ ಪಡುತ್ತಿತ್ತು. ಆದರೆ ತಿಪ್ಪಿ ಮಗುವಿಗೆ ಅತ್ಯಂತ ಒರಟಾಗಿ ನಿಮ್ಮಪ್ಪನ ತಟ್ಟೆಯಲ್ಲಿ ತಿನ್ನು ಅಂದುಬಿಡುತ್ತಿದ್ದಳು.
ತಿಪ್ಪ ತಿಪ್ಪಿಯ ಜಗಳವನ್ನು ನಾನು ನೇರವಾಗಿ ನೋಡಿಲ್ಲವಾದರೂ ಕೆಲ ವಿಷಯಗಳಲ್ಲಿ ಇಬ್ಬರೂ ಹಿಂದೆ ಸರಿಯಲು ಒಪ್ಪುತ್ತಿರಲಿಲ್ಲ ಅಂತ ನಾನು ಊಹಿಸಬಲ್ಲೆ. ಹಿನ್ನೆಲೆಯಾಗಿ ನನ್ನದೇ ಒಂದು ಘಟನೆ ಹೇಳುತ್ತೇನೆ. ನಾನು ಕಾಫ್ ಹಾರ್ಬರ್ನಿಂದ ಸಿಡ್ನಿಗೆ ರೈಲುಗಾಡಿಯಲ್ಲಿ ಬರುವವನಿದ್ದೆ. ನನಗೆ ಕಿಟಕಿಯ ಬಳಿ ಸೀಟು ಸಿಕ್ಕಿತ್ತು, ಕಿಟಕಿ ಸೀಟು ನನಗೆ ಇಷ್ಟವೇಕೆಂದರೆ ಅದು ನನ್ನನ್ನು ಮತ್ತು ನನ್ನ ಪ್ರಯಾಣವನ್ನು ಹೊರಜಗತ್ತಿಗೆ ಜೋಡಿಸಿಬಿಡುತ್ತದೆ. ಅಕ್ಕಪಕ್ಕದ ಪ್ರಯಾಣಿಕರ ನಂಟು ಬಿಟ್ಟುಹೋಗಿ ನನ್ನೊಡನೆ ನಾನು ಸಮಯ ಕಳೆಯುವ ಅದ್ಭುತ ಅವಕಾಶವದು! ನಾನು ರೈಲಿನೊಳಗೆ ಹೋದಾಗ ನನ್ನ ಸೀಟಿನಲ್ಲಿ ಸುಮಾರು ಎಪ್ಪತೈದು ದಾಟಿದ ತುಂಬಾ ಲಕ್ಷಣವಾದ ಮುದುಕಿಯೊಂದು ಕುಳಿತಿತ್ತು.
ನಾನು ಆಕೆಯ ಗಮನ ಸೆಳೆದು “ಇದು ನನ್ನ ಸೀಟು” ಅಂತ ಹೇಳಿದೆ. ಆ ಅಜ್ಜಿ ಒರಟಾಗಿ, “ನೀನು ಇನ್ನೊಮ್ಮೆ ಸರಿಯಾಗಿ ನೋಡುವುದು ಒಳ್ಳೆಯದು. ಇದು ನನ್ನ ಸೀಟು” ಅಂತ ಹೇಳಿ ಆ ಕಡೆ ಮುಖ ತಿರುಗಿಸಿತು. ನಾನು ಮತ್ತೆ ಕರೆದು “ನೋಡಿ ಇದು ನನ್ನ ಟಿಕೆಟ್ ನಂಬರು. ಇಲ್ಲಿ ಸೀಟ್ನ ಮೇಲೆ ನೋಡಿ ಹೀಗೆ ಬರೆದಿದೆ” ಅಂತ ತೋರಿಸಿದೆ. ಅಜ್ಜಿಗೆ ಮನದಟ್ಟಾದಂತೆ ಕಾಣಲಿಲ್ಲ. ಮತ್ತೆ ವಾದಿಸತೊಡಗಿತು. ನಾನು ರೈಲು ಸಿಬ್ಬಂದಿಯನ್ನು ಕರೆದು ಟಿಕೆಟ್ ತೋರಿಸಿದೆ. ಸಿಬ್ಬಂದಿ ನಾನು ಹೇಳುತ್ತಿರುವುದು ಸರಿಯೆಂದೂ ಅಜ್ಜಿ ನನಗೆ ಸೀಟು ಬಿಟ್ಟುಕೊಡಬೇಕೆಂದೂ ಹೇಳಿದರು. ಅಜ್ಜಿ ಪೆಚ್ಚಾಗಿ ತನ್ನ ಸೀಟು ಬಿಟ್ಟುಕೊಡಲು ತಯಾರಾಯಿತು. ನಾನು “ಪರವಾಗಿಲ್ಲ.. ನೀವೇ ಕೂತುಕೊಳ್ಳಿ. ನನಗೆ ನಾನು ಸರಿ ಅಂತ ಸಾಬೀತು ಪಡಿಸಬೇಕಿತ್ತಷ್ಟೇ ” ಅಂತ ಆಕೆಗೆ ಹೇಳಿದೆ. ಆಕೆ ಕೂತುಕೊಂಡಳು. ರಾತ್ರಿಯೆಲ್ಲ ನನಗೆ ನನ್ನ ಗೆಲುವಿನದೆ ಚಿಂತೆ. ನನಗೆ ಆ ಸೀಟಿನ ಆಸೆ ಇರಲಿಲ್ಲ. ಗೆಲುವಿನ ಆಸೆ ಇತ್ತು. ಅಷ್ಟಕ್ಕೂ ಈ ಗೆಲುವಿನಿಂದ ನಾನು ಸಾಧಿಸಿದ್ದೇನು? ನನ್ನ ಅಹಮಿಕೆಗೊಂದು ಕ್ಷುದ್ರ ತೃಪ್ತಿ ಸಿಕ್ಕಿರಬಹುದಷ್ಟೇ! ಆ ಅಜ್ಜಿಯ ಮನಸ್ಸಿಗೆ ಎಷ್ಟು ಒತ್ತಡ ನನಗೆ ಎಷ್ಟು ಒತ್ತಡ, ಸಿಬ್ಬಂದಿಗೆ ತೊಂದರೆ, ಅಕ್ಕಪಕ್ಕದವರಿಗೆ ತೊಂದರೆ! ನನ್ನೊಳಗಿನ ಅಹಮಿಕೆಯೊಂದು ತನ್ನ ನವರಂಧ್ರಗಳನ್ನು ಮುಚ್ಚಿಕೊಂಡಿದ್ದರೆ ಎಲ್ಲರ ಜೀವನ ಎಷ್ಟು ಸುಗಮವಾಗುತ್ತಿತ್ತು! ಅಂದಿನಿಂದ ನಾನು ಜನರ ಜೊತೆ ವಾದಕ್ಕಿಳಿಯುವುದನ್ನು ಗಣನೀಯವಾಗಿ ಕಡಿಮೆ ಮಾಡಿದೆ.
ಬಹುಷಃ ತಿಪ್ಪ ತಿಪ್ಪಿಯ ದಾಂಪತ್ಯದ ತೊಂದರೆಯೂ ಇದೇ ಇದ್ದೀತು. ಒಂದು ಸಾರಿ ಎದುರುವಾದದಲ್ಲಿ ಸೋತರೇನಾಗುವುದು? ಅಥವಾ ಪ್ರತೀ ಸಾರಿ ಸೋತರೂ ಏನಾಗಲಿದೆ? ಒಂದು ಹಂತದಲ್ಲಿ ವಾದದಲ್ಲಿ ಸೋಲುವುದು ಅಭ್ಯಾಸವಾಗಿಬಿಡಬೇಕು. ಈಗ ನಾನು ಮತ್ತು ನನ್ನ ಹೆಂಡತಿ ಜಗಳ ಶುರು ಮಾಡಿದರೆ ಮೂವತ್ತು ಸೆಕಂಡೂ ಸಹ ಆ ಜಗಳ ನಿಲ್ಲುವುದು ಅಸಾಧ್ಯ. ಎರಡು ಮೂರು ವಾಕ್ಯಗಳಾಗುತ್ತಿದ್ದಂತೆ ಇಬ್ಬರಿಗೂ ನಗು ಶುರುವಾಗುತ್ತದೆ. ಒಮ್ಮೆ ಇಬ್ಬರೂ ಜಗಳ ಆಡಿಯೇ ತೀರಬೇಕೆಂಬ ಛಲದಿಂದ ಇಬ್ಬರೂ ಒಬ್ಬರೊಬ್ಬರ ದೋಷಗಳನ್ನು ಎಣಿಸುತ್ತಾ ಹೋದೆವು. ಮತ್ತೆ ಎರಡೇ ನಿಮಿಷಗಳಲ್ಲಿ ನಗು ಬರತೊಡಗಿ, ಇವೆಲ್ಲ ಚರ್ಚೆ ಮಾಡಲೂ ನಗಣ್ಯ ವಿಚಾರಗಳು ಎನ್ನಿಸತೊಡಗಿತು. ಯಾಕೆಂದರೆ ಇಬ್ಬರೂ ಪರಸ್ಪರರ ಬಗ್ಗೆ ಇಷ್ಟೆಲ್ಲ ಗೊತ್ತಿದ್ದೇ ಅಲ್ಲವೇ ಇಷ್ಟು ವರ್ಷ ಸಂಸಾರ ನಡೆಸಿರುವುದು! ಇವುಗಳು ಅಷ್ಟು ಮುಖ್ಯ ವಿಷಯಗಳಾಗಿದ್ದರೆ ಯಾವತ್ತೋ ಬೇರೆಯಾಗಬೇಕಿತ್ತು. ಮುಖ್ಯವಾದದ್ದೇನೆಂತೆ ತಪ್ಪು ಯಾರದ್ದೇ ಇರಲಿ ಆಕೆಗೆ ಸಿಟ್ಟು ಬಂದಾಗ ನಾನು ಸುಮ್ಮನಿರುತ್ತೇನೆ, ನನಗೆ ಸಿಟ್ಟು ಬಂದಾಗ ಆಕೆ ಸುಮ್ಮನಿರುತ್ತಾಳೆ. ಅಲ್ಲಿಗೆ ಮುಗಿದು ಹೋಯಿತು. ಮೂವತ್ತು ಸೆಕೆಂಡುಗಳ ನಂತರ ಸಿಟ್ಟು ಇಳಿದ ಮೇಲೆ ನಮ್ಮ ತಪ್ಪಿದ್ದರೆ ನಮಗೇ ಅರಿವಾಗಿರುತ್ತದೆ.
ಸಂಸಾರ ಅನ್ನೋದು ಒಂದು ಟೀಮ್ ವರ್ಕ್. ಗಂಡ ಹೆಂಡತಿ ಇಬ್ಬರೂ We make a best team ಅನ್ನೋದನ್ನ ಒಬ್ಬರಿಗೊಬ್ಬರು ಮನದಟ್ಟು ಮಾಡಬೇಕು. ಜೀವನ ಒಂದು ಆಟ ಒಟ್ಟಿಗೇ ಆಡೋಣ, ಆಟದ ಮಜಾ ಅನುಭವಿಸೋಣ ಅಂತ. ಇದಿಲ್ಲದೇ ಹೋದರೆ ಜೀವನದ ಪ್ರತಿ ಹೆಜ್ಜೆಯೂ ಹತಾಶೆಯಾಗತೊಡಗೊತ್ತದೆ. ನಾನು ನೋಡಿದ ಹಾಗೇ ಶೇ. ಎಂಬತ್ತರಷ್ಟು ಜನ ಈ ಹತಾಶೆಯನ್ನು ಅನುಭವಿಸುತ್ತಿರುತ್ತಾರೆ. ನನಗೆ ಇಲ್ಲಿನ ಕೆಲ ಸಂಘಗಳ ಕಾರ್ಯಕ್ರಮಗಳಿಗೆ ಹೋದಾಗ ಯಾರ ಗಂಡ ಯಾರು ಯಾರ ಹೆಂಡತಿ ಯಾರು ಎಂಬುದೇ ಗೊತ್ತಾಗುವುದಿಲ್ಲ. ಅಪರಿಚಿತರ ಜೊತೆಗೆ ಮಾತಾಡುವಷ್ಟೇ ನಿರ್ಗುಣವಾಗಿ ಗಂಡನ ಜೊತೆ ಮಾತಾಡುತ್ತಿರುತ್ತಾರೆ. ಅವರ ಕೆಮಿಸ್ಟ್ರಿ ಅಷ್ಟು ಖರಾಬಾಗಿರುತ್ತದೆ. ಎಲ್ಲರೂ ಒಂದೊಂದು ದಿಕ್ಕು! ಎಷ್ಟೋ ಸಾರಿ ಗಂಡ ತನ್ನ ಹೆಂಡತಿಯ ಬಗ್ಗೆ ದೂರುವುದು ಹೆಂಡತಿ ತನ್ನ ಗಂಡನ ಬಗ್ಗೆ ದೂರುವುದು ಕಂಡಿದ್ದೇನೆ. ಅದೆಷ್ಟು ದೂರುತ್ತಾರೆಂದರೆ ಯಾಕಾದರೂ ಜೊತೆಗಿದ್ದಾರೋ ಅನ್ನುವಷ್ಟು. ಆದರೆ ಈ ದೂರುವಿಕೆಯ ನಡುವೆಯೇ ಅದ್ಯಾವ ಮಾಯದಲ್ಲಿ ಎರಡು ಮಕ್ಕಳನ್ನು ಹಡೆದಿರುತ್ತಾರೋ ನಾ ಕಾಣೆ.
ಹಿಂಗೆ ನನ್ನ ಗೆಳೆಯನ ಹೆಂಡತಿ ನಮಗೆ ಪರಿಚಯವಾಗಿ ಗಂಡನ ಬಗ್ಗೆ ದೂರು ಹೇಳತೊಡಗಿದ ಮೇಲೆ ಮೂರು ಮಕ್ಕಳನ್ನು ಹಡೆದಳು. ಈ ದೂರು ಹೇಳೋದು ಮಕ್ಕಳನ್ನು ಹಡೆಯುವುದು ಏ ಸಪರೇಟ್ ಓ ಅಲಗ್ ಎರಡೂ ಮಿಕ್ಸ್ ಮಾಡಬಾರದು ಅಂದುಕೊಂಡಿದ್ದಳೇನೊ. ಗಂಡ ಹೆಂಡತಿ ಜಗಳದಲ್ಲಿ ಮಕ್ಕಳು ಹುಟ್ಟಲು ಯಾಕೆ ತೊಂದರೆ ಮಾಡಬೇಕು ಪಾಪ? ಆದರೆ ಅವರ ಅದೃಷ್ಟ ನೋಡಿ ಅವರ ಎಲ್ಲಾ ಮಕ್ಕಳು ಹಂದಿ ತಿಂದ ಹಾಗೆ ತಿಂದು ಕ್ವಾಣದ ಹಾಗೆ ಮಲಗಿಬಿಡುತ್ತಿದ್ದವು. ಒಂದು ರಾತ್ರಿಯೂ ನಿದ್ದೆಗೆಡಲಿಲ್ಲ ದಂಪತಿಗಳು! ತಮ್ಮ ಆಸ್ತಿಗೆ ಪಾಲುದಾರರನ್ನು ಇಷ್ಟು ಸುಲಭವಾಗಿ ಹುಟ್ಟಲು ಬಿಟ್ಟ ಮಕ್ಕಳು ಅದೆಷ್ಟು ಮಬ್ಬಿದ್ದಾವೊ ಗೊತ್ತಿಲ್ಲ! ಆತನ ಒಂದು ಕಾಮನ್ ಡಯಲಾಗ್ ಇತ್ತು. ಏನೆ ಮಾಡೋದಿದ್ದರೂ “ಇವತ್ತು ಮಜಾ ಮಾಡಿಬಿಡೋಣ” ಅಂತ ಹೇಳುತ್ತಿದ್ದ. ಅಂದರೆ ಉದಾಹರಣೆಗೆ “ಇವತ್ತು ಇಟಾಲಿಯನ್ ಹೋಟೆಲ್ಗೆ ಹೋಗಿ ಮಜಾ ಮಾಡಿಬಿಡೋಣ!, ಇವತ್ತು ಕಿರಿಕ್ ಪಾರ್ಟಿ ಸಿನಿಮಾಗೆ ಹೋಗಿ ಮಜಾ ಮಾಡಿಬಿಡೋಣ, ಇವತ್ತು ಚೆರ್ರಿ ಹೊಲಕ್ಕೆ ಹೋಗಿ ಮಜಾ ಮಾಡಿಬಿಡೋಣ” ಈ ರೀತಿ. ದಿನಾ ಮಕ್ಕಳು ಬೇಗ ಮಲಗಿಬಿಡುತ್ತಿದ್ದವು ಅಷ್ಟೇ!
ಗಂಡ ತನ್ನ ಬಗ್ಗೆ ಹೇಳುವುದನ್ನು ಹೆಂಡತಿಯೂ, ಹೆಂಡತಿ ಹೇಳುವುದನ್ನು ಗಂಡನೂ ಸಮಾಧಾನದಿಂದ ಸ್ಪರ್ಧಾಮನೋಭಾವನೆಯಿಂದ ಕೇಳಬೇಕು. ಪರಸ್ಪರ ಕೇಳದಿದ್ದಾಗ ಬೇರೆಯವರೆದುರಿಗೆ ಹೇಳಿಕೊಳ್ಳುವ ಅವಕಾಶವಾಗುತ್ತದೆ. ನಾನು ಮತ್ತು ನನ್ನ ಹೆಂಡತಿ ಆಗಾಗ ಹೇಳಿಕೊಳ್ಳುತ್ತಿರುತ್ತೇವೆ. we don’t bitch about our spouses with others because we bitch on each others face!” ಅಂತ. ಕಂಡೋರೆದುರಿಗೆ ತಮ್ಮ ಸಂಸಾರದ ಬಗ್ಗೆ ಬಿಚ್ಚಿಕೊಳ್ಳುವುದಕ್ಕಿಂದ ಒಬ್ಬರೊಬ್ಬರೆದುರಿಗೆ ಬಿಚ್ಚಿಕೊಳ್ಳುವುದು ಒಳ್ಳೆಯದು. (ಪನ್ ಇಂಟೆಂಡೆಡ್ ಫಾರ್ ವೈಸ್ ಪೀಪಲ್!)
ನಮ್ಮ ಪರಿಚಯದವರಲ್ಲಿ ಒಬ್ಬ ಹುಡುಗಿಗೆ ಪದೇಪದೇ ಮದುವೆ ಮುರಿದು ಬೀಳುತ್ತಿತ್ತು. ಆಕೆ ಅದು ತನ್ನ ತಂದೆಯ ಅಧಿಕ ಪ್ರಸಂಗದಿಂದ ಅಂತ ಆಕೆ ನಂಬಿದ್ದಳು. ಅದು ಬಹುತೇಕ ನಿಜವೂ ಆಗಿತ್ತೆನ್ನಿ. ಹಾಗಾಗಿ ಆಕೆ ಪದೇಪದೇ ಖಿನ್ನತೆಗೊಳಗಾಗುತ್ತಿದ್ದಳು. ಒಮ್ಮೆ ಆಕೆಯ ತಂದೆ ನನಗೆ ಕರೆ ಮಾಡಿ “ನೋಡಪ್ಪಾ ಈಕೆ ದಿನಾ ಬಾಟಲಿ ಹೆಂಡವನ್ನು ತೆಗೆದುಕೊಂಡು ಬಂದು ರೂಮಲ್ಲಿ ಬಾಗಿಲು ಹಾಕಿಕೊಂಡು ಕುಡಿಯುತ್ತಾಳೆ. ನಮ್ಮ ಮಾತು ಕೇಳುತ್ತಿಲ್ಲ. ನಿನ್ನ ಮಾತಾದರೆ ಕೇಳುತ್ತಾಳೆ. ನಮ್ಮ ಸಂಸ್ಕೃತಿ ಎಂತದ್ದು ನಮ್ಮ ಹೆಣ್ಣುಮಕ್ಕಳು ಹೇಗೆ ನಡೆದುಕೊಳ್ಳಬೇಕು ಎಲ್ಲ ತಿಳಿಸಿ ಗೈಡ್ ಮಾಡಪ್ಪಾ” ಅಂತ ಹೇಳಿ ಆಕೆಗೆ ಫೋನ್ ಕೊಟ್ಟರು.
ನಾನು ಕೇಳಿದೆ. “ಯಾವ ಬ್ರ್ಯಾಂಡ್?’’
“ಓಲ್ಡ್ ಮಾಂಕ್ ಅಣ್ಣಾ! ನಮ್ಮ ಕೊಲೀಗ್ಗಳು ಇದರ ಬಗ್ಗೆ ಮಾತಾಡುತ್ತಿದ್ದುದು ಕೇಳಿಸಿಕೊಂಡು ತಂದೆ”
“ಓಹೊ.. ನೋಡಮ್ಮಾ ನಿನಗೆ ಒಳ್ಳೆಯ ಸಂಬಳ ಇದೆ. ಓಲ್ಡ್ ಮಂಕ್ ಇರುವುದು ದಿನವಿಡೀ ಕಷ್ಟಪಟ್ಟು ದುಡಿಯುವ ಕಾರ್ಮಿಕ ಬಂಧುಗಳಿಗಾಗಿ. ನಿನ್ನಂತವರು ಕುಡಿದು ಡಿಮಾಂಡ್ ಹೆಚ್ಚಿಸಿ ಬೆಲೆ ಹೆಚ್ಚು ಮಾಡಿ ಅವರಿಗೆ ತೊಂದರೆ ಕೊಡಬಾರದು. ಸ್ಕಾಚ್ ಆದರೆ ಮೃದುವಾಗಿರುತ್ತದೆ. ಟೀಚರ್ಸ್, ಬ್ಲಾಕ್ ಲೇಬಲ್, ಶಿವಾಸ್ ರಿಗಲ್ ಇವು ಒಳ್ಳೆಯವು. ಸೋಡಾ ಅಥವಾ ಕೋಲ್ಡ್ ಡ್ರಿಂಕ್ಸ್ ಬೆರೆಸಿಕೊಂಡರೆ ಸಹಜ ರುಚಿ ಕಳೆದುಹೋಗುತ್ತದೆ. ನೀರೇ ಉತ್ತಮ. ತೀರಾ ಒಗರೆನಿಸಿದರೆ ಉಪ್ಪಿನಕಾಯಿ ಸೈಡ್ಗೆ ತುಂಬಾ ಒಳ್ಳೆಯದು. ಸೈಡ್ಸ್ಗೆ ತೀರಾ ಕರಿದ ಪದಾರ್ಥಗಳನ್ನು ನೆಂಚಿಕೊಂಡು ತೂಕ ಹೆಚ್ಚಿಸಿಕೊಂಡು ಆರೋಗ್ಯ ಹಾಳು ಮಾಡಿಕೊಳ್ಳಬೇಡ. ಹಾಗೆ ದಿನದಿನವೂ ಕುಡಿಯುವುದು ಒಳ್ಳೆಯದಲ್ಲ. ಅದು ವ್ಯಸನವಾಗದಂತೆ ಎಚ್ಚರಿಕೆ ವಹಿಸಿಕೊ. ಅಂಕಲ್ ನಿನಗೆ ಗೈಡ್ ಮಾಡಲು ಹೇಳಿದರು ಮಾಡಿದ್ದೇನೆ. ಹಾಗೆ ಅದೇನು ಬಾಗಿಲು ಹಾಕಿಕೊಂಡು ಒಬ್ಬಳೇ ಕುಡಿಯುತ್ತೀಯಂತೆ. ಅದು ತಪ್ಪು. ಎಲ್ಲರೊಡನೆ ಹಂಚಿಕೊಂಡು ಕುಡಿಯಬೇಕು. ನೋಡು ಬಾಗಿಲು ಹಾಕಿಕೊಂಡು ಒಬ್ಬಳೇ ಕುಡಿಯುತ್ತೀಯಾ ಅಂತ ಅಂಕಲ್ ಬೇಜಾರಾಗಿದಾರೆ. ನಮ್ಮ ಸಂಸ್ಕೃತಿ ಕದ್ದು ಮುಚ್ಚಿ ತಿನ್ನುವ ಕುಡಿಯುವ ಸಂಸ್ಕೃತಿಯಲ್ಲ, ನಮ್ಮ ಹೆಣ್ಣುಮಕ್ಕಳು ಯಾವತ್ತೂ ಹಂಚಿಕೊಂಡು ಬಾಳಿದವರು” ಅಂತ ತಿಳಿ ಹೇಳಿದೆ.
ಆಕೆ “ಆಯ್ತು ಅಣ್ಣಾ ತುಂಬಾ ಥ್ಯಾಂಕ್ಸ್ ” ಅಂತ ಹೇಳಿ ಫೋನಿಟ್ಟಳು.
ಸಲ್ಪ ಹೊತ್ತಿನ ನಂತರ ಅಂಕಲ್ ಕರೆ ಮಾಡಿ ‘ಕಲ್ಲಲೆ ಬಲ್ಲಲೆ ಶೌವಲೆ’ ಅಂತ ರೇಗಾಡಿ ಫೋನಿಟ್ಟರು. ಯಾಕೆ ಏನು ಗೊತ್ತಾಗಲಿಲ್ಲ!
ಆ ಹುಡುಗಿಗೆ ಸಲ್ಪ ದಿನಗಳ ನಂತರ ಮದುವೆಯಾಯಿತು. ಮದುವೆಯಾಗಿ ಒಂದೆರಡು ವಾರಕ್ಕೆ ಜಗಳ ಮಾಡಿಕೊಂಡು ಗಂಡಹೆಂಡತಿ ಆದರ್ಶ ದಂಪತಿಗಳು ಅಂತ ಹೆಸರಾದ ನಮ್ಮ ಬಳಿ ಬಂದರು. ಮೊದಲು ಅವರಿಗೆ ಪರಸ್ಪರರ ಸ್ವಭಾವ ಭವಿಷ್ಯ ಇತ್ಯಾದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಹರೆಯವನ್ನು ಸದುಪಯೋಗಪಡಿಸಿಕೊಳ್ಳಲು ಹೇಳಿದೆವು. ಅದು ಅವರಿಗೆ ಅಷ್ಟು ಅರ್ಥವಾದಂತೆ ಕಾಣಲಿಲ್ಲ. ನಾನೂ ತಲೆ ಕೆಟ್ಟು “ನೋಡ್ರಯ್ಯಾ ಸೆಕ್ಸ್ ಮಾಡಿ ಸೆಕ್ಸು… ಇವನು ಹಂಗೆ ಅವಳು ಹಿಂಗೆ ನಮ್ಮ ಕರಿಯರ್ ಏನು ಭವಿಷ್ಯ ಏನು ಯಾವ ಕಂಪನಿಗೆ ಹೋಗಬೇಕು ಮನೆ ತಗೊಬೇಕು ಎಷ್ಟು ಮಕ್ಕಳು ಮಾಡಿಕೊಬೇಕು ಅಂತ ತಲೆ ಕೆಡಿಸಿಕೊಳ್ಳಬೇಡಿ. ಜೊತೆಗೆ ಸಾಧ್ಯವಾದಷ್ಟು ಸಮಯ ಕಳೆಯಿರಿ. ದೈಹಿಕ ಹೊಂದಾಣಿಕೆಯಾಯಿತು ಅಂದರೆ ಮಾನಸಿಕ ಹೊಂದಾಣಿಕೆ ತಾನಾಗಿಯೇ ಆಗುತ್ತದೆ. ಒಂದು ಹಂತದ ನಂತರ ನಿಮಗೆ ಇನ್ನೊಬ್ಬರ ನೆಗೆಟಿವ್ಗಳು ಚಿಕ್ಕದು ಮತ್ತು ನಿಮ್ಮ ಸಂಬಂಧ ದೊಡ್ಡದು ಅನ್ನಿಸತೊಡಗುತ್ತದೆ. ಸೆಕ್ಸ್ ಲೈಫ್ ಬಗ್ಗೆ ಗಮನ ಹರಿಸಿ” ಅಂತ ಹೇಳಿದೆ. ಅವರು ಮುಖ ಮುಖ ನೋಡಿಕೊಂಡು ಎದ್ದು ಹೋದರು. ಇಲ್ಲಿಯವರೆಗೆ ಅವರ ದಾಂಪತ್ಯದ ಬಗ್ಗೆ ಯಾವ ದೂರೂ ಬಂದಿಲ್ಲ.
(ಮುಂದಿನ ಕಂತು : 23.1.2022)
ಹಿಂದಿನ ಕಂತು : Sydney Diary : ಗಾಂಧೀಜಿ ಉಪವಾಸವನ್ನೇ ಆಯುಧವನ್ನಾಗಿ ಪರಿವರ್ತಿಸಿ ಚಳವಳಿ ರೂಪಿಸಿದ್ದು ಯಾಕೆ?
ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ಕಾಜಾಣ ಪ್ರೆಸೆಂಟ್ ಮೇಡಮ್ ಕೆಂಬೂತ ಪ್ರೆಸೆಂಟ್ ಮೇಡಮ್ ಗುಬ್ಬಚ್ಚಿ ಅಬ್ಸೆಂಟ್ ಮೇಡಮ್