ಚೆನ್ನವೀರ ಕಣವಿ | Chennaveera Kanavi : ನಾಲ್ಕು ತಿಂಗಳ ಹಿಂದೆ ಧಾರವಾಡಕ್ಕೆ ಹಿರಿಯ ಕವಿ ಎಚ್. ಎಚ್. ಶಿವಪ್ರಕಾಶ ಬಂದಿದ್ದರು. ಬೆಳಿಗ್ಗೆ ಹತ್ತರ ಸುಮಾರಿಗೆ ಫೋನ್ ಮಾಡಿ, ಚೆನ್ನವೀರ ಕಣವಿ ಅವರ ಮನೆಗೆ ಹೋಗೋಣ, ಅವರ ಪತ್ನಿ ಶಾಂತಾದೇವಿಯವರು ತೀರಿಕೊಂಡ ಬಳಿಕ ಭೇಟಿಯಾಗಿಲ್ಲ. ಮತ್ತೆ ಮೂರನೇ ಅಲೆ ಯಾವಾಗ ಶುರುವಾಗುತ್ತೋ ಗೊತ್ತಿಲ್ಲ. ಒಂದರ್ಧ ಗಂಟೆ ಮಾತಾಡಿಕೊಂಡು ಬರೋಣ ಬನ್ನಿ ಅಂದರು. ನಾನು ಫೋನ್ ಮಾಡಿ, ಕಣವಿಯವರು ಮನೆಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡೆ. ಧಾರವಾಡದ ಕಲ್ಯಾಣ ನಗರದ ಒಂಭತ್ತನೇ ಕ್ರಾಸ್ನಲ್ಲಿರುವ ಅವರ ಮನೆಗೆ ಶಿವಪ್ರಕಾಶ ಮತ್ತು ಅಗ್ರಹಾರ ಕೃಷ್ಣಮೂರ್ತಿಯವರೊಂದಿಗೆ ಹೋದೆ. ಮನೆಯೊಳಗೆ ಹೋಗುತ್ತಲೇ ಕಟ್ಟಿಗೆ ಕುರ್ಚಿ ಮೇಲೆ ಗುಬ್ಬಿಯಂತೆ ಕುಳಿತಿದ್ದ ಕಣವಿ ಅವರನ್ನು ನೋಡಿ ಅಚ್ಚರಿಯಾಯಿತು. ಅವರ ದೇಹಕ್ಕೆ ಎಷ್ಟೇ ವಯಸ್ಸಾಗಲಿ, ಅವರ ಶಿಸ್ತಿಗೆ ವಯಸ್ಸಾಗೋದೇ ಇಲ್ಲ ಅನ್ನಿಸಿತು. ಮತ್ತದೇ ಪ್ಯಾಂಟು, ಗರಿ ಗರಿ ಶರ್ಟು, ತಲೆ ಮೇಲೆ ಟೋಪಿ, ಕಪ್ಪು ಕನ್ನಡಕ, ಕೈಯಲ್ಲಿ ಗಾಂಧಿ ತಾತನ ಕೋಲು. ಒಳ ಹೋಗುತ್ತಲೇ ಕವಿಗಳಿಬ್ಬರ ಉಭಯ ಕುಶಲೋಪರಿ ಮಾತುಗಳು.
ನರಸಿಂಹಮೂರ್ತಿ ಪ್ಯಾಟಿ, ಪತ್ರಕರ್ತ
*
(ಭಾಗ 1)
ಹೀಗೆ ಅನೇಕ ಕಾವ್ಯಾಸಕ್ತರೊಂದಿಗೆ ಚೆನ್ನವೀರ ಕಣವಿಯವರ ಮನೆಗೆ ಸಾಕಷ್ಟು ಸಲ ಹೋಗಿದ್ದಿದೆ. ಆದರೆ ಈಗ ನೋಡುತ್ತಿದ್ದ ಕಣವಿ ಅಜ್ಜ ಕೊಂಚ ನೋವಿನಲ್ಲಿದ್ದಾರೆ ಅನ್ನುವುದು ಗಮನಕ್ಕೆ ಬಂತು. ಪತ್ನಿ ತೀರಿಕೊಂಡ ಬಳಿಕ ಅವರ ವರ್ತನೆಯಲ್ಲಿ ಈ ಬದಲಾವಣೆ ಕಂಡು ಬರುತ್ತಿದೆ ಅಂತಾ ಊಹಿಸುವುದು ನನಗೆ ಕಷ್ಟವಾಗಲಿಲ್ಲ. ಒಂದರ್ಧ ಗಂಟೆಯ ಬಳಿಕ ಹೋಗೋಣ ಅಂತಾ ಹಿರಿಯ ಕವಿ ಸನ್ನೆ ಮಾಡಿದರು. ಮೂವರೂ ಎದ್ದು ನಿಂತೆವು. ಕಣವಿಯವರು ಕೂಡ ಎದ್ದು ನಿಂತರು. ಅಷ್ಟೇ ಅಲ್ಲ, ಎಲ್ಲರನ್ನೂ ಕಳಿಸಲು ಹೊರಗಡೆ ಬಂದರು. ಅವರು ಯಾವತ್ತೂ ಹಾಗೆಯೇ… ಯಾರೇ ಮನೆಗೆ ಬಂದರೆ, ನೀರು-ಚಹಾ ಸೇವನೆ ಕಂಪಲ್ಸರಿ. ಇನ್ನು ಅವರು ಹೊರವರೆಗೂ ಬಂದು ಎರಡೂ ಕೈಮುಗಿದು ನಮಸ್ಕರಿಸೋದು ಕೂಡ ಮ್ಯಾಂಡೆಟರಿ. ಹೊರಗೆ ಬರಬೇಡಿ ಅಂತಾ ಎಷ್ಟೇ ಹೇಳಿದರೂ ಕೇಳುವ ಸ್ಥಿತಿಯಲ್ಲಿ ಅವರು ಇರಲಿಲ್ಲ. ಹೊರಗೆ ಬಂದವರೇ ನನ್ನ ಕಡೆ ತಿರುಗಿ, “ಒಂದೆರಡು ಫೋಟೋ ತೆಗೀರಪಾ” ಅಂತಾ ಬಾಯ್ತುಂಬಾ ನಕ್ಕರು. ಬೇರೆ ಬೇರೆ ಕೋನಗಳಿಂದ ಹತ್ತಾರು ಫೋಟೋ ಕ್ಲಿಕ್ಕಿಸಿದ ಬಳಿಕವಷ್ಟೇ ನಮ್ಮನ್ನು ಅಲ್ಲಿಂದ ಬೀಳ್ಕೊಟ್ಟರು. ಅಂದಿನ ನಗು ಮರೆಯುವ ಮುನ್ನವೇ ಅವರು ನಮ್ಮನ್ನು ಅಗಲಿದ್ದಾರೆ. ಕೊರೊನಾ ಇರದೇ ಇದ್ದರೆ, ಅವರು ನಮ್ಮೊಂದಿಗೆ ಇನ್ನಷ್ಟು ಕಾಲ ಇರುತ್ತಿದ್ದರೇನೋ? ಸಾವಿಗೆ ಯಾವುದಾದರೊಂದು ನೆಪ ಬೇಕಷ್ಟೇ..!
ಇದನ್ನೂ ಓದಿ : New Book : ಅಚ್ಚಿಗೂ ಮೊದಲು : ‘ಕೃಷ್ಣಾಚಾರ್ ಆ್ಯಟ್ ಕಿಷ್ಕಿಂದಾ ಬಾರ್‘ ನರಸಿಂಹಮೂರ್ತಿ ಪ್ಯಾಟಿಯವರ ಪ್ರಬಂಧಗಳು
ಕನ್ನಡ ಕಾವ್ಯ ಪ್ರಪಂಚದ ಚರ್ಚೆ ಬಂದಾಗ ಅನೇಕರ ಹಿರಿಯ, ಪ್ರಸಿದ್ಧ ಕವಿಗಳ ಹೆಸರುಗಳು ಮುಂಚೂಣಿಯಲ್ಲಿ ಬಂದು ನಿಲ್ಲುತ್ತವೆ. ಅಂಥವುಗಳಲ್ಲಿ ಒಂದು ಚನ್ನವೀರ ಕಣವಿ. ಪಠ್ಯ ಪುಸ್ತಕಗಳಿಂದ ಹಿಡಿದು ಮನೆಯಲ್ಲಿ, ಮನದಲ್ಲಿ ಗುನುಗುನುಗುವ ಭಾವಗೀತೆಗಳಲ್ಲಿ ಇವರ ಹೆಸರು ಹಾಸುಹೊಕ್ಕಾಗಿದೆ. ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ… ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ ಜಯಭಾರತಿ… ಅನ್ನುವ ಭಾವಗೀತೆಗಳನ್ನು ಎಲ್ಲರೂ ಕೇಳುತ್ತಾ, ಹಾಡುತ್ತಾ ಬೆಳೆದವರೇ. ಸಾಹಿತ್ಯಿಕ ಕಾರ್ಯಕ್ರಮ ಇದ್ದರಂತೂ ಅಲ್ಲಿ ಚೆನ್ನವೀರ ಕಣವಿ ಅವರ ಹಾಡು ಲೌಡ್ ಸ್ಪೀಕರ್ನಲ್ಲಿ ಬಾರದೆ ಇದ್ದರೆ ಆ ಕಾರ್ಯಕ್ರಮ ಅಪೂರ್ಣ. ಚೆನ್ನವೀರ ಕಣವಿ ತಮ್ಮ ಜೀವನದ ಕೊನೆಯವರೆಗೂ ಸೃಜನಶೀಲತೆಯನ್ನು ಉಳಿಸಿಕೊಂಡು ಬಂದ ಕವಿ. ತಮ್ಮ ಪದ್ಯಗಳ ಮೂಲಕವೇ ಅವರು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ. ಅವರು ಕನ್ನಡಿಗರನ್ನು ಉಲ್ಲಾಸಗೊಳಿಸಿದ ಅನನ್ಯ ಕವಿಯೂ ಹೌದು. ಕನ್ನಡ ಭಾಷೆಯ ಮಹತ್ವದ ಕವಿಗಳ ವಿಚಾರ ಬಂದಾಗ ಇವರ ಹೆಸರು ಮುಂಚೂಣಿಗೆ ಬಂದು ನಿಲ್ಲುತ್ತದೆ. ಕಣವಿ ಅವರು ಸೃಜನಶೀಲತೆಯ ಅನನ್ಯ ಚೇತನವಾಗಿ ಕಂಡು ಬರುತ್ತಾರೆ. ಇದೇ ಕಾರಣಕ್ಕೆ ವರಕವಿ ದ.ರಾ. ಬೇಂದ್ರೆ ಅವರು ಕಣವಿಯವರ ಕವಿತೆ ಓದಿ, ಇವುಗಳಲ್ಲಿ ಜೀವಂತ ಗತಿ ಇದೆ ಅಂತಾ ಅಭಿಪ್ರಾಯಪಟ್ಟಿದ್ದರು. ಇಂಥ ವಿಭಿನ್ನ ಕವಿ, ಸಾಹಿತಿ ಚನ್ನವೀರ ಕಣವಿ ನಮ್ಮನ್ನಗಲಿದ್ದಾರೆ. ತಮ್ಮ ಜೀವಿತದ ಕೊನೆಯವರೆಗೂ ಕವಿತೆ, ಸಾಹಿತ್ಯವನ್ನೇ ಉಸಿರಾಡಿ, ತಮ್ಮ 95 ನೇ ವಯಸ್ಸಿಗೆ ವಿದಾಯ ಹೇಳಿದ ಕಣವಿ ಅವರು ಅನೇಕರನ್ನು ಪ್ರಭಾವಿಸಿದ ಕವಿಯೂ ಹೌದು.
(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)
ಇದನ್ನೂ ಓದಿ : Chennaveera Kanavi Death: ‘ಅರಿವೇ ಗುರು, ನುಡಿ ಜ್ಯೋತಿರ್ಲಿಂಗ, ದಯವೇ ಧರ್ಮದ ಮೂಲತರಂಗ’
Published On - 2:47 pm, Wed, 16 February 22