Chennaveera Kanavi Death: ಲಂಬಾಣಿ ಭಾಷೆ, ಕುಣಿತದ ಮೋಡಿಗೆ ಒಳಗಾಗಿದ್ದ ಕವಿ ಕಣವಿ ಮನಸ್ಸು

Chennaveera Kanavi Passes Away : ‘ಇತ್ತೀಚಿನ ಕವಿಗಳನ್ನು ನೋಡಿದರೆ ಕಣವಿಯವರ ಅಪಾರ ಶಕ್ತಿಯ ಅರಿವಾಗುತ್ತದೆ. ಏಕೆಂದರೆ ಒಂದೆರಡು ಕವನ ಬರೆದ ಕೂಡಲೇ, ಒಂದೆರಡು ಸಂಕಲನ ಬರುತ್ತಿದ್ದಂತೆಯೇ ದೊಡ್ಡ ಕವಿಗಳೆಂದು ಸ್ವಯಂ ಘೋಷಿಸಿಕೊಳ್ಳುವ ಕೆಲವರು ವೇದಿಕೆ ಕಾರ್ಯಕ್ರಮಗಳಿಗೆ, ಸೋಶಿಯಲ್ ಮೀಡಿಯಾಗಷ್ಟೇ ಸೀಮಿತ.’ ನರಸಿಂಹಮೂರ್ತಿ ಪ್ಯಾಟಿ

Chennaveera Kanavi Death: ಲಂಬಾಣಿ ಭಾಷೆ, ಕುಣಿತದ ಮೋಡಿಗೆ ಒಳಗಾಗಿದ್ದ ಕವಿ ಕಣವಿ ಮನಸ್ಸು
ಚೆನ್ನವೀರ ಕಣವಿ ಮತ್ತು ಶಾಂತಾದೇವಿ ಕಣವಿ
Follow us
ಶ್ರೀದೇವಿ ಕಳಸದ
|

Updated on:Feb 16, 2022 | 4:07 PM

ಚೆನ್ನವೀರ ಕಣವಿ | Chennaveera Kanavi: ಇನ್ನು ಗ್ರಾಮೀಣ ಪ್ರದೇಶದ ಹಿನ್ನೆಲೆಯಿಂದ ಬಂದವರಾಗಿದ್ದರಿಂದ ಎಲ್ಲದರಲ್ಲಿಯೂ ಕಣವಿ ಆಸಕ್ತಿ ತೋರಿಸುತ್ತಿದ್ದರು. ಅವರ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲ ಬಗೆಯ ಜನರಿದ್ದರು. ಕೊಂಚ ನಡೆದು ದೂರಕ್ಕೆ ಹೋದರೆ ಅಲ್ಲಿ ಲಂಬಾಣಿ ತಾಂಡಾ. ಲಂಬಾಣಿಗರು ಧರಿಸೋ ದಿರಿಸು, ಅವರ ಭಾಷೆ, ಕುಣಿತ, ಸಂಭ್ರಮ – ಎಲ್ಲವೂ ಅವರನ್ನು ಬೇರೆಯದ್ದೇ ಆದ ಜಗತ್ತಿಗೆ ಕರೆದೊಯ್ಯುತ್ತಿತ್ತು. ಪ್ರತಿಯೊಂದರಲ್ಲಿ ಹೊಸದನ್ನು ಕಾಣುವ ಕಣವಿ ಅವರು ಮಳೆಗಾಲದಲ್ಲಂತೂ ತುಂಬಾನೇ ಖುಷಿಯಾಗಿ ಇರುತ್ತಿದ್ದರಂತೆ. ಅವರಿದ್ದ ಆ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಗಿಡ-ಮರಗಳು ಇದ್ದವು. ಅಲ್ಲದೇ ನಿರಂತರವಾಗಿ ಮಳೆ ಸುರಿಸೋ ಪ್ರದೇಶವೂ ಆದಾಗಿತ್ತು. ಅವರ ಅನೇಕ ಕವಿತೆಗಳು ಮಳೆಯ ಮೇಲೆಯೇ ರಚನೆಗೊಂಡಿವೆ. ಇದೇ ಕಾರಣಕ್ಕೆ ಬೇಂದ್ರೆ ಅವರನ್ನು ಶ್ರಾವಣದ ಕವಿ ಅಂತಾ ಕರೆದರೆ, ಕಣವಿ ಅವರನ್ನು ಮಳೆಗಾಲದ ಕವಿ ಅಂತಾನೇ ಕರೆಯಲಾಗುತ್ತದೆ. ನರಸಿಂಹಮೂರ್ತಿ ಪ್ಯಾಟಿ, ಪತ್ರಕರ್ತ

*

(ಭಾಗ 3)

ಇನ್ನು ಜಾತ್ರೆ, ತೇರು, ಗದ್ದಲ ಕೂಡ ಅವರ ಕಾವ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದ ವಿಷಯವಾಗಿವೆ. ಜಾತ್ರೆ ಅನ್ನುವುದು ಅವರ ಪಾಲಿಗೆ ಸಾಮೂಹಿಕ ಉತ್ಸಾಹದ ಪ್ರತೀಕ. ಈ ಎಲ್ಲ ಕಾರಣಗಳಿಂದಾಗಿ ಅವರ ಬಹುತೇಕ ಕವಿತೆಗಳು ನಿಸರ್ಗ, ಗ್ರಾಮೀಣ ಬದುಕು, ಬವಣೆಯನ್ನೇ ಆಧರಿಸಿ ರಚನೆಯಾಗಿವೆ. ಅವರ ಪಾಲಿಗೆ ಹಳ್ಳಿ ಜೀವನದ ಅನುಭವಗಳೇ ಬರವಣಿಗೆ ಬೆಳೆಯಲು ಸಾಧ್ಯವಾಗಿಸಿತು. ಗ್ರಾಮೀಣ ಪ್ರದೇಶದ ಸಣ್ಣ ಸಣ್ಣ ಸಂಗತಿಗಳೇ ಕಾವ್ಯಕ್ಕೆ ಪ್ರೇರಣೆಯಾದವು. ಅವರ ಕಣ್ಮುಂದಿನ ಬಡ ಜನರ ಮುಗ್ಧತೆ, ಕಷ್ಟ ಮುಂದೆ ಕವಿತೆಗಳಾಗಿ ಮೂಡಿ ಬಂದವು. ಕಷ್ಟ ಕಾಲದಲ್ಲಿಯೂ ಹಳ್ಳಿಗರು ಸಂತೋಷವಾಗಿ ಇರುತ್ತಿದ್ದುದನ್ನು ಕೂಡ ಅವರು ಗಮನಿಸುತ್ತಿದ್ದರು. ಬೆಳಿಗ್ಗೆಯೇ ಎದ್ದು ಕೆಲಸಕ್ಕೆ ಹೋಗುವ ಜನರು, ಸಂಜೆಯವರೆಗೆ ಹೊಲದಲ್ಲಿ ಬೆವರು ಹರಿಸಿ ದುಡಿಯುವುದು ಮತ್ತು ಮರಳಿ ಖುಷಿಯಿಂದ ಬರುವುದು ತಮ್ಮ ಕಾವ್ಯಕ್ಕೆ ಪ್ರೇರಣೆ ನೀಡಿದವು ಅಂತಾ ಹೇಳುತ್ತಿದ್ದರು. ಪ್ರತಿಯೊಂದು ವಿಷಯದ ಬಗ್ಗೆ ಕುತೂಹಲ, ಆಸಕ್ತಿ, ಸೋಜಿಗವನ್ನು ಬಾಲ್ಯದಿಂದ ಕೊನೆಯವರೆಗೂ ಉಳಿಸಿಕೊಂಡು ಬಂದಿದ್ದರಿಂದಲೇ ಅವರಲ್ಲಿನ ಕವಿಯೂ ಕೊನೆಯವರೆಗೆ ಅಷ್ಟೇ ಆರೋಗ್ಯವಂತನಾಗಿ ಉಳಿದುಕೊಂಡುಬಿಟ್ಟ.

ಭಾಗ 1 : Chennaveera Kanavi Death: ‘ವಿಶ್ವವಿನೂತನ ವಿದ್ಯಾಚೇತನ ಸರ್ವ ಹೃದಯ ಸಂಸ್ಕಾರಿ ಜಯಭಾರತಿ’

ಇತ್ತೀಚಿನ ಕವಿಗಳನ್ನು ನೋಡಿದರೆ ಚೆನ್ನವೀರ ಕಣವಿ ಅವರ ಅಪಾರ ಶಕ್ತಿಯ ಅರಿವಾಗುತ್ತದೆ. ಏಕೆಂದರೆ ಒಂದೆರಡು ಕವನ ಬರೆದ ಕೂಡಲೇ, ಒಂದೆರಡು ಸಂಕಲನ ಬರುತ್ತಿದ್ದಂತೆಯೇ ದೊಡ್ಡ ಕವಿಗಳೆಂದು ಸ್ವಯಂ ಘೋಷಿಸಿಕೊಳ್ಳುವ ಕೆಲವರು, ಬಳಿಕ ಬರೆದಿದ್ದು ಕಡಿಮೆಯೇ. ಕೇವಲ ವೇದಿಕೆ ಕಾರ್ಯಕ್ರಮಗಳಿಗೆ, ಸೋಶಿಯಲ್ ಮೀಡಿಯಾಗಳಿಗೆ ಸೀಮಿತವಾಗುವ ಅವರ ಶಕ್ತಿ, ಅಲ್ಲಿಗೇ ಮುಗಿದೂ ಹೋಗುತ್ತದೆ. ಇಂಥ ಹೊಸ ಕವಿಗಳಿಗೆ ಚೆನ್ನವೀರ ಕಣವಿ ಆದರ್ಶವಾಗುತ್ತಾರೆ. ಕಣವಿ ಅವರು ಅದ್ಭುತವಾದ 600ಕ್ಕೂ ಹೆಚ್ಚು ಕವಿತೆಗಳನ್ನು ಬರೆದಿದ್ದಾರೆ. ಇನ್ನು ಕವಿತೆಗಳೊಂದಿಗೆ ಗದ್ಯವನ್ನೂ ಬರೆದಿದ್ದಾರೆ. ಆದರೆ ಅವರು ಗದ್ಯಕ್ಕಿಂತ ಪದ್ಯ ಯಾವತ್ತೂ ವಿಭಿನ್ನವೇ ಅಂತಾ ಪ್ರತಿಪಾದಿಸುತ್ತಾ ಬಂದವರು. ಅಲ್ಲದೇ ಅದಕ್ಕೆ ಅವರು ಕಾರಣವನ್ನೂ ನೀಡುತ್ತಿದ್ದರು. ಕವಿತೆ ಯಾವಾಗಲೂ ಲಯಾತ್ಮಕವಾಗಿರುತ್ತದೆ. ಶಬ್ದ, ಛಂದಸ್ಸು, ಲಯ ಕವಿಗೆ ಬಹಳ ಮುಖ್ಯ. ಕವಿತೆ ಹೇಳುವಾಗ ಭಾಷಾ ಬೋಧನೆಯೂ ಆಗುತ್ತದೆ. ಛಂದಸ್ಸಿನ ಬಗ್ಗೆಯೂ ಹೇಳಿದ ಹಾಗಾಗುತ್ತದೆ. ಕವಿತೆಯಲ್ಲಿ ಬೇರೆ ಬೇರೆ ಅರ್ಥಗಳ ಬಗ್ಗೆಯೂ ಹೇಳಬಹುದು. ಇದೇ ಕಾರಣಕ್ಕೆ ಪದ್ಯ ಯಾವತ್ತೂ ಶ್ರೇಷ್ಠ ಅನ್ನೋದು ಅವರ ಅಭಿಪ್ರಾಯವಾಗಿತ್ತು. ಕಣವಿ ಅವರ ಆರಂಭದ ರಚನೆಗಳಲ್ಲಿ ರಮ್ಯ ಮನೋಧರ್ಮ, ಆದರ್ಶಪ್ರಿಯತೆ, ವ್ಯಕ್ತಿತ್ವ ನಿರ್ಮಾಣದ ಹಂಬಲಗಳು ವಿಶೇಷವಾಗಿ ಕಂಡು ಬರುತ್ತವೆ.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 2 : Chennaveera Kanavi Death: ಕಣವಿಯವರ ಅಪ್ಪ ಸಕ್ಕರೆಪ್ಪ ಇಷ್ಟಲಿಂಗ ಪೂಜಿಸಿದರೂ, ದೇವಸ್ಥಾನಕ್ಕೆ ಮಾತ್ರ ಹೋಗುತ್ತಿರಲಿಲ್ಲ

Published On - 4:03 pm, Wed, 16 February 22