Column: ವೈಶಾಲಿಯಾನ; ತಾಯ್ನಾಡಿಗೆ ಮರಳಿದ ಡಾ. ವಸುಂಧರಾ, ನೆನಪರುಚಿಯಲ್ಲಿ ‘ಊರೆಂಬ ಉದರ’ದ ಪ್ರಮೀಳಾ

Kidwai : ಇದು ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಪ್ರಪ್ರಥಮ ಅಸ್ತಿಮಜ್ಜೆ ಕಸಿ ಚಿಕಿತ್ಸೆ. ಬಾಲಕ ಜೀವನ್‌ಕುಮಾರ್​ಗೆ ಇದು ಮರುಹುಟ್ಟು. ಖಾಸಗಿ ಆಸ್ಪತ್ರೆಗಳಲ್ಲಿ ಇದರ ವೆಚ್ಚ ಸುಮಾರು 50 ಲಕ್ಷ ರೂಪಾಯಿ. ಕಿದ್ವಾಯಿಯಲ್ಲಿ ಬಡರೋಗಿಗಳಿಗೆ ಉಚಿತವಾಗಿ ನೀಡಲಾಗುತ್ತಿದೆ.

Column: ವೈಶಾಲಿಯಾನ; ತಾಯ್ನಾಡಿಗೆ ಮರಳಿದ ಡಾ. ವಸುಂಧರಾ, ನೆನಪರುಚಿಯಲ್ಲಿ ‘ಊರೆಂಬ ಉದರ’ದ ಪ್ರಮೀಳಾ
ಡಾ. ವಸುಂಧರಾ
ಶ್ರೀದೇವಿ ಕಳಸದ | Shridevi Kalasad

|

Jun 25, 2022 | 12:04 PM

ವೈಶಾಲಿಯಾನ | Vaishaliyaana : ಹಲವಾರು ಬಾರಿ ನಮ್ಮ ಬಂಧು ಬಳಗದವರು, ಆಪ್ತೇಷ್ಟರ ನಡುವೆ ಇರುವ ಅಸಾಮಾನ್ಯ ವ್ಯಕ್ತಿಗಳನ್ನು, ಸಾಧಕರನ್ನು ನಾವು ಗಮನಿಸಿರುವುದೇ ಇಲ್ಲ. ಅವರು ನಮಗೆ ಹೇಗೆ ಸಂಬಂಧವೆನ್ನುವುದನ್ನು ಮಾತ್ರ ನೆನಪಿನಲ್ಲಿಟ್ಟುಕೊಂಡಿರುತ್ತೇವೆ. ಯಾವುದೋ ಒಂದು ವಿಶಿಷ್ಟ ಸಂದರ್ಭದಲ್ಲಿ ಅವರ ಮಹತ್ವದ ಸಾಧನೆ ಕಣ್ಣು ಕೋರೈಸುವಂತೆ ನಮ್ಮ ಅರಿವಿಗೆ ಬಂದಾಗ, ನಾವು ಆವಾಕ್ಕಾಗಿ ‘ಅರೆರೆ ! ಈ ಕೆಲವು ವರ್ಷಗಳಲ್ಲಿ ಎಷ್ಟೆಲ್ಲ ಬೆಳೆದಿದ್ದಾರಲ್ಲ! ಎಂದು ಅಚ್ಚರಿ ಪಡುತ್ತೇವೆ. ಅಭಿಮಾನ, ಹೆಮ್ಮೆಯಿಂದ ಮೂಕವಿಸ್ಮಿತರಾಗುತ್ತೇವೆ. ಅಂತಹುದೇ ಒಂದು ಅಚ್ಚರಿಯ ಬೆಳವಣಿಗೆಯ ಬಗ್ಗೆ ಹೇಳುವವಳಿದ್ದೇನೆ. ತೊಂಭತ್ತರ ದಶಕದ ದಿನಗಳವು. ನಾನು ಕಾಲೇಜಿನ ತರುಣಿ. ನಾನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿಗಳನ್ನು ನೀಡುತ್ತಿದ್ದೆ. ಶ್ರೀ ಮದನಂತೇಶ್ವರ ಸಿದ್ಧಿ ವಿನಾಯಕ ದೇವಾಲಯ ಕಾಸರಗೋಡಿನ ಸಮೀಪದಲ್ಲಿರುವ ಮಧೂರಿನ ಸುಪ್ರಸಿದ್ಧ ದೇವಸ್ಥಾನ, ಇಲ್ಲಿ ನಡೆಯುವ ‘ಮೂಡಪ್ಪ ಸೇವೆ’ ಆ ಪ್ರಾಂತ್ಯದಲ್ಲಿಯೇ ಬಹಳ ವಿಶೇಷವಾದದ್ದು. ಆ ಸಮಯದಲ್ಲಿ ಸುತ್ತ ಮುತ್ತಲ ಊರುಗಳಿಂದ ಸಾವಿರಾರು ಭಕ್ತರು ಅಲ್ಲಿ ನೆರೆಯುತ್ತಾರೆ. ಆಗ ಸಾಂಸ್ಕೃತಿಕ ಉತ್ಸವಗಳೂ ನಡೆಯುತ್ತವೆ. ಡಾ. ಕೆ. ಎಸ್. ವೈಶಾಲಿ (Dr. K.S. Vaishali)

(ಯಾನ 13)

ಈ ಉತ್ಸವದಲ್ಲಿ ನಾನೂ ಸಂಗೀತ ಕಛೇರಿಯನ್ನು ನಡೆಸಿಕೊಟ್ಟಿದ್ದೆ. ನನ್ನ ಜೊತೆ ಗುರುಗಳಾದ ಪಂಡಿತ್ ಶೇಷಾದ್ರಿ ಗವಾಯಿಗಳೂ ಹಾಗೂ ಪಂಡಿತ್ ಎಮ್. ನಾಗೇಶ್‌ರವರೂ ಇದ್ದರು. ಸಂಬಂಧದಲ್ಲಿ ನನ್ನ ತಾಯಿಯ ದೊಡ್ಡಪ್ಪನಾದ, ಹತ್ತಿರದ ಬದಿಯಡ್ಕದ ಹಿರಿಯ ವೈದ್ಯರಾದ, ಅಪಾರ ದೈವಭಕ್ತಿಯುಳ್ಳ, ಆದರ್ಶ ವೈದ್ಯರಾಗಿ ಅಲ್ಲಿ ಜನಸೇವೆ ಮಾಡುತ್ತಿದ್ದ, ಡಾ. ಪೊಸವಣಿಕೆ ಸುಬ್ರಹ್ಮಣ್ಯ ಶಾಸ್ತ್ರಿಗಳು 1950ರ ದಶಕದಲ್ಲಿಯೇ ಆ ದೇಗುಲದ ಜೀರ್ಣೋದ್ಧಾರದ ಕಾರ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದ್ದರು. ‘ನವಜೀವನ’ ಎಂಬ ಪ್ರೌಢಶಾಲೆಯನ್ನೂ ಪ್ರಾರಂಭಿಸಿದ್ದರು. ನನ್ನ ತಾಯಿ ಶಾಲಿನಿ ಶ್ರೀನಿವಾಸ ತನ್ನ ದೊಡ್ಡಪ್ಪನ ವಿಶೇಷ ಸಾಧನೆಗಳ ಬಗ್ಗೆ ತುಂಬು ಅಭಿಮಾನದಿಂದ ಬದಿಯಡ್ಕದ ಕರ್ಮಯೋಗಿ ಡಾ. ಪೊಸವಣಿಕೆ ಸುಬ್ರಹ್ಮಣ್ಯ ಶಾಸ್ತ್ರಿ ಎಂಬ ಸುಂದರವಾದ ಹೊತ್ತಗೆಯನ್ನು ಬರೆದು ಪ್ರಕಟಿಸಿದ್ದಾರೆ.

ಪುಸ್ತಕದಲ್ಲಿ ಅವರು ಹೀಗೆ ಬರೆದಿದ್ದಾರೆ: “ಶಾಸ್ತ್ರಿಗಳಿಗೆ  ಮೊದಲಿನಿಂದಲೂ ಆಯುರ್ವೇದ ಚಿಕಿತ್ಸೆಯಲ್ಲಿ ತೀವ್ರ ಆಸಕ್ತಿ. ಶಾಸ್ತ್ರಾರೀತ್ಯ ಆ ವಿದ್ಯೆಯನ್ನು ಕಲಿತು , ಆಯುರ್ವೇದ ಔಷಧಿಗಳನ್ನು ತಯಾರಿಸುತ್ತಿದ್ದರು. ಗುಡ್ಡ, ಕಾಡು, ತೋಟಗಳಲ್ಲಿ ಸಿಗುವ ನಾನಾ ರೀತಿಯ ಅಮೂಲ್ಯ ವನಸ್ಪತಿಗಳನ್ನು ಸಂಗ್ರಹಿಸಿ, ಮನೆಯಲ್ಲಿ ನೂರಾರು ಆಸವ, ಅರಿಷ್ಠ, ಲೇಹ್ಯಾದಿಗಳನ್ನೂ, ವಿವಿಧ ರೀತಿಯ ತೈಲಗಳನ್ನೂ ಸ್ವತಃ ತಾವೇ ತಯಾರಿಸುತ್ತಿದ್ದರು. ಹೀಗೆ ತಯಾರುಗೊಂಡ ಔಷಧದ ಕುಪ್ಪಿಗಳನ್ನು ಜೋಡಿಸಲು ಏನಿಲ್ಲವೆಂದರೂ ಸುಮಾರು 2-3 ಕೋಣೆಯಾದರೂ ಬೇಕಾದೀತು. ಇಂದಿಗೂ ಈ ಔಷಧಗಳಿಗೆ ಅಪಾರ ಬೇಡಿಕೆ ಇದೆ.” ನನ್ನ ತಾಯಿ ತಮ್ಮ ಪುಸ್ತಕದಲ್ಲಿ ಹೇಳಿದಂತೆ “ಡಾ. ಸುಬ್ರಹ್ಮಣ್ಯ ಶಾಸ್ತ್ರಿಗಳಿಗೆ ‘ಡಾ. ಶಾಸ್ತ್ರಿ’ ಎಂಬ ಹೆಸರು ಸಹಜವಾಗಿ ಮನೆತನದಿಂದ ಬಂದ ಹೆಸರಲ್ಲ. ಅವರ ಸಂಸ್ಕೃತ ಪಾಂಡಿತ್ಯಕ್ಕಾಗಿ ಪಂಡಿತರು ‘ಶಾಸ್ತ್ರಿ’ ಎಂಬ ಬಿರುದನ್ನಿತ್ತು ಗೌರವಿಸಿದ್ದರು. … ನಾಲ್ಕು ಗೋಡೆಯ ಮೇಲೊಂದು ನೆರಳಿಗಿದ್ದ ಸೂರು, ಶಾಸ್ತ್ರಿಗಳ ‘ಆಸ್ಪತ್ರೆ’ಯಾಯಿತು. ಆಸ್ಪತ್ರೆ ಮೇಲ್ನೋಟಕ್ಕೆ ಹರಕು ಮುರುಕಾಗಿಯೇ ಇತ್ತು. ಆದರೆ ಆಸ್ಪತ್ರೆ ದೊಡ್ಡದೋ- ಸಣ್ಣದೋ, ಚೆಂದವೋ, ಕೊಳಕ್ಕೋ, ಅದು ಮುಖ್ಯವಲ್ಲ. ಒಳಗಿದ್ದ ವೈದ್ಯನ ತಿಳುವಳಿಕೆ, ವೈದ್ಯಕೀಯ ಜ್ಞಾನ, ಅಪಾರವಾದ ತಾಳ್ಮೆ, ಪರೋಪಕಾರ ಬುದ್ಧಿ, ಧರ್ಮಶ್ರದ್ಧೆ, ದೈವಭಕ್ತಿ ಹಾಗೂ ಹೃದಯವೈಶಾಲ್ಯದಿಂದಾಗಿ ಅವರು ಬದಿಯಡ್ಕದ ಸುತ್ತಮುತ್ತಲಿನ ಗ್ರಾಮದವರಿಗೆ ಒಂದು ವರದಾನವಾಗಿ ಪರಿಣಮಿಸಿದ್ದರೆಂದರೆ ಅತಿಶಯೋಕ್ತಿಯಾಗಲಾರದು.”

ಇದನ್ನೂ ಓದಿ : Music: ವೈಶಾಲಿಯಾನ; ‘ಕರೀಮ ನಾಮ ತೇರೋ, ತೂ ಸಾಹೇಬ’ ಕಿಶೋರಿತಾಯಿ ಧ್ಯಾನಸ್ಥರಾಗಿ ಹಾಡುವಾಗ

ನಾನು ಮಧೂರಿನ ಸಿದ್ಧಿ ವಿನಾಯಕ ದೇವಾಲಯದಲ್ಲಿ ಸಂಗೀತ ಕಛೇರಿ ನೀಡುವಾಗ ಬದಿಯಡ್ಕದ ಮನೆ, ಅಮ್ಮನ ದೊಡ್ಡಪ್ಪ- ದೊಡ್ಡಮ್ಮನನ್ನು ಕಳೆದುಕೊಂಡು ಬಿಕೋ ಎನ್ನತೊಡಗಿತ್ತು. ಆದರೆ ಡಾ. ಶಾಸ್ತ್ರಿಯವರ ಪುಟಾಣಿ ಮೊಮ್ಮಗಳು ವಸುಂಧರಾ, ಅವರ ಪುತ್ರ ಕಾಸರಗೋಡಿನಲ್ಲಿ ವಕೀಲರಾಗಿದ್ದ ಕೈಲಾಸನಾಥ್ ಹಾಗೂ ಅವರ ಮಡದಿ ಸಾವಿತ್ರಿಯವರ ಪುತ್ರಿ, ನನ್ನನ್ನು ಆತ್ಮೀಯತೆ- ಸ್ನೇಹ ಭಾವದಿಂದ ಸ್ವಾಗತಿಸಿದ್ದಳು. ನನಗೆ ಮನೆಯ ನೆರೆಹೊರೆ, ನವಜೀವನ ಹೈಸ್ಕೂಲು ಎಲ್ಲವನ್ನೂ ತೋರಿಸುತ್ತ, ಪಟ-ಪಟನೆ ಮಾತನಾಡುತ್ತ, ತನ್ನ ಪ್ರೀತಿಯ ಅಜ್ಜನಂತೆ ತಾನೂ ವೈದ್ಯಳಾಗಿ ಜನಸೇವೆ ಮಾಡಬೇಕೆಂಬ ಅಭಿಲಾಷೆಯನ್ನು ನನ್ನ ಬಳಿ ವ್ಯಕ್ತ ಪಡಿಸಿದ್ದಳು. ದಶಕಗಳ ಹಿಂದೆ ನಡೆದ ಈ ಘಟನೆಗಳನ್ನು ನಾನು ಮರೆತೇ ಬಿಟ್ಟಿದ್ದೆ. ಬಳಿಕ ಬಾಲಕಿ ವಸುಂಧರಾ ಬೆಳೆದು ಕೋಲಾರ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯಾಗಿ, ಮದುವೆಯಾಗಿ, ವೈದ್ಯರಾಗಿದ್ದ ತನ್ನ ಸಂಗಾತಿಯೊಡನೆ ಅಮೆರಿಕಾಗೆ ತೆರಳಿ ಅಲ್ಲಿ ಉನ್ನತ ವೈದ್ಯಕೀಯ ವ್ಯಾಸಂಗ ಮಾಡಿ, ಉದ್ಯೋಗ ಮಾಡುತ್ತಿರುವುದರ ಬಗ್ಗೆ ಕೇಳಿದ್ದೆ. ತನ್ನ ವ್ಯಾಸಂಗ ಸಂಪೂರ್ಣಗೊಳಿಸಿ, ಪತಿಯೊಡನೆ ಅಮೆರಿಕಾದಲ್ಲಿಯೇ ನೆಲೆಸಿ ವೈದ್ಯ ವೃತ್ತಿ ನಡೆಸಿಕೊಂಡು ಹೋಗಬಹುದು ಎಂದುಕೊಂಡಿದ್ದವರಿಗೆಲ್ಲ ಡಾ ವಸುಂಧರಾ ಭಾರತಕ್ಕೆ ತನ್ನ ಕುಟುಂಬ ಸಮೇತ ಹಿಂದಿರುಗಿದ್ದು ಆಶ್ಚರ್ಯದ ಸಂಗತಿಯಾಗಿತ್ತು.

ಆದರೆ ಆಕೆಗೆ ಅದು ಬಹಳ ಸಹಜವಾದ ತೀರ್ಮಾನ. ತನ್ನ ಅಜ್ಜನಂತೆ ತಾನೂ ತನ್ನ ಸಮಾಜ ಹಿತಕ್ಕಾಗಿ ದುಡಿಯಬೇಕು, ತನ್ನ ಮಕ್ಕಳು ಭಾರತದಲ್ಲಿ, ಕರ್ನಾಟಕದಲ್ಲಿ ಓದಬೇಕು, ನಮ್ಮ ಸಂಸ್ಕೃತಿ, ಸಂಗೀತ, ನೃತ್ಯ, ಭಾಷೆಗಳನ್ನು ಅರಿಯಬೇಕೆಂಬ ಹೆಬ್ಬಯಕೆಯಿಂದ ತಾಯ್ನಾಡಿಗೆ ತನ್ನ ಪತಿ ಮತ್ತು ಮೂರು ಮುದ್ದಾದ ಮಕ್ಕಳೊಡನೆ ಭಾರತಕ್ಕೆ ಹಿಂದಿರುಗಿ ಬೆಂಗಳೂರಿನಲ್ಲಿ ನೆಲೆಸಿರುವ ಡಾ. ವಸುಂಧರಾ ಇತ್ತೀಚೆಗಷ್ಟೇ ವೈದ್ಯಕೀಯ ರಂಗದಲ್ಲಿ ಒಂದು ಅಪರೂಪದ ಸಾಧನೆ ಮಾಡಿ ಮಿಂಚಿದ್ದಾರೆ. ಇತ್ತೀಚೆಗಷ್ಟೇ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ವತಿಯಿಂದ ಹಾಡ್ಗಿನ್ಸ್ ಲಿಂಪೋಮಾ ಎಂಬ ಅರ್ಬುದ ರೋಗದಿಂದ ಬಳಲುತ್ತಿದ್ದ 8 ವರ್ಷದ ಬಾಲಕನಿಗೆ ಅಸ್ತಿಮಜ್ಜೆ ಕಸಿ ಚಿಕಿತ್ಸೆ ಯಶಸ್ವಿಯಾಗಿ ಮಾಡಿದ ವೈದ್ಯರ ತಂಡದಲ್ಲಿ ಡಾ. ವಸುಂಧರಾ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಪ್ರಪ್ರಥಮ ಅಸ್ತಿಮಜ್ಜೆ ಕಸಿ ಚಿಕಿತ್ಸೆಯಾಗಿದೆ. 9 ತಿಂಗಳಿನಿಂದ ಬಳಲುತ್ತಿದ್ದ ತುಮಕೂರಿನ ಜೀವನ್‌ಕುಮಾರ್ ಎಂಬ ಈ ಬಾಲಕನಿಗೆ ಇದು ಬಹುಶಃ ಮರುಹುಟ್ಟು ಎಂದೇ ಹೇಳಬಹುದೇನೋ!

ಮತ್ತೊಂದು ಮಹತ್ವದ ವಿಚಾರವೆಂದರೆ ಖಾಸಗಿ ಆಸ್ಪತ್ರೆಗಳಲ್ಲಿ ಬಹು ದುಬಾರಿಯಾದ ಚಿಕಿತ್ಸೆ ಇದು. ಇದರ ವೆಚ್ಚ ಸುಮಾರು 50 ಲಕ್ಷ ರೂಪಾಯಿಗಳಷ್ಟಿದೆ. ಕಿದ್ವಾಯಿ ಸಂಸ್ಥೆಯ ನಿರ್ದೇಶಕರಾದ ಡಾ. ಸಿ. ರಾಮಚಂದ್ರ ಅವರ ನೇತೃತ್ವದಲ್ಲಿ ಈ ಚಿಕಿತ್ಸೆಯನ್ನು ಬಡರೋಗಿಗಳಿಗೆ ಉಚಿತವಾಗಿ ನೀಡಲಾಗುತ್ತಿದ್ದು, ಡಾ. ವಸುಂಧರಾ ಅತ್ಯಂತ ಕಳಕಳಿಯಿಂದ ಈ ಶಸ್ತ್ರಚಿಕಿತ್ಸಾ ಘಟಕದಲ್ಲಿ ನಿಸ್ಪೃಹತೆಯಿಂದ ವೈದ್ಯೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಳತೆ, ಸಜ್ಜನಿಕೆ, ಪರೋಪಕಾರಿ ಆದರ್ಶ ಮನೋಭಾವಗಳನ್ನು ಒಗ್ಗೂಡಿಸಿಕೊಂಡು, ಸ್ವದೇಶದಲ್ಲಿ ವೈದ್ಯಕೀಯ ಸೇವೆ ಮಾಡಬೇಕೆಂಬ ಹೆಬ್ಬಯಕೆಯನ್ನು ಹೊತ್ತಿರುವ ಡಾ. ವಸುಂಧರಾರವರ ಆದರ್ಶ ಮನೋಭಾವ, ಇನ್ನೂ ಅವರಂತೆ ಭಾರತಕ್ಕೆ ಮರಳಿ ಬಂದು ಇಲ್ಲಿಯೇ ಸೇವೆ ಸಲ್ಲಿಸುವ ಕನಸಿರುವ ವೈದ್ಯರಿಗೆ ಸ್ಫೂರ್ತಿಯಾಗಲಿ.

ಇತ್ತೀಚೆಗೆ ನನ್ನ ಮನಸೂರೆಗೊಂಡ ಅಪರೂಪದ ಕೃತಿ ಪ್ರಮೀಳಾ ಸ್ವಾಮಿಯವರ ಊರೆಂಬ ಉದರ: ಒಂದು ಸಂಕೇತಿ ಗ್ರಾಮದ ವೃತ್ತಾಂತ ಎಂಬ ಆತ್ಮಕಥೆಯ ಬಗ್ಗೆಯೂ ಇಲ್ಲಿ ಪ್ರಸ್ತಾಪಿಸಲೇಬೇಕು. ನನಗೆ ಆತ್ಮೀಯರಾದ  ಪತ್ರಕರ್ತೆ ಮತ್ತು ಪ್ರಸ್ತುತ ಪ್ರಾಧ್ಯಾಪಕಿಯಾಗಿರುವ ದೀಪಾ ಗಣೇಶ್‌ರವರ ತಾಯಿ ಪ್ರಮೀಳಾ ಸ್ವಾಮಿಯವರು ಇಷ್ಟು ಮನೋಜ್ಞವಾಗಿ ತಾನು ಹುಟ್ಟಿ ಬೆಳೆದ ಗ್ರಾಮ ‘ಕುಪ್ಪಹಳ್ಳಿ’ ಅಥವಾ ‘ಹೇಮಗಿರಿ’ಯನ್ನು ಚಿತ್ರಿಸಬಹುದೆಂಬ ಕಲ್ಪನೆಯೇ ನನಗಿರಲಿಲ್ಲ. ಸಖೇದಾಶ್ಚರ್ಯದಿಂದ ನಾನು ಈ ಪುಸ್ತಕವನ್ನು ಕೈಗೆತ್ತಿಕೊಂಡು ಓದತೊಡಗಿದಾಗ, ಒಂದು ಹೊಸ ಪ್ರಪಂಚವೇ ನನ್ನ ಕಣ್ಣ ಮುಂದೆ ಅನಾವರಣಗೊಂಡಿತ್ತು. ‘ಸೂಪ ಶಾಸ್ತ್ರದ ಸುತ್ತಾ’ ಎಂಬ ದೀಪಾ ಗಣೇಶ್‌ರವರ ಪ್ರಾಸ್ತಾವಿಕ ನುಡಿಯಲ್ಲಿ, ತಮ್ಮ ಅಜ್ಜನ ಮನೆಯಲ್ಲಿ ನಡೆಯುತ್ತಿದ್ದ ಹಬ್ಬದ ಸಂಭ್ರಮಾಚರಣೆಗಳ ಕುರಿತಾದ ಅವರ ಮೋಹಕ ವರ್ಣನೆ ಮನಸ್ಸಿಗೆ ಮುದ ನೀಡುತ್ತದೆ.

“ಅಡುಗೆಮನೆಯನ್ನು ಯಜ್ಞಶಾಲೆಯಂತೆ ಶ್ರದ್ಧೆಯಿಂದ ಕಂಡು, ಅವರಿವರೆನ್ನದೇ ಎಲ್ಲರನ್ನೂ ಸಂತೋಷಗೊಳಿಸಿದ ಅಮ್ಮನಿಗೆ ಏನಾದರೂ ಕೊಡಬೇಕೆಂದರೆ ಅವಳಿಂದ ಅಡುಗೆಯ ಬಗ್ಗೆಯೇ ಪುಸ್ತಕ ಬರೆಸಬೇಕು ಎನಿಸಿತು. ಇದು ತಲೆಯಲ್ಲಿ ಬಂದ ಪ್ರಾಥಮಿಕ ಸ್ವರೂಪದ ಯೋಚನೆ. ಇದೇ ಈ ಪುಸ್ತಕಕ್ಕೆ ಕಾರಣ.” ಎಂಬ ಗಹನವಾದ ಸಾಲುಗಳು ಅಜ್ಜಿ- ತಾಯಿ- ಮಗಳನ್ನು ಬೆಸೆದ ಸೂಪ ಶಾಸ್ತ್ರದ ಬಗ್ಗೆ ಒಂದು ಅಮೋಘವಾದ ತತ್ವ ಚಿಂತೆಯೆಂದು ನಿಸ್ಸಂದೇಹವಾಗಿ ಹೇಳಬಹುದು. ಪಾಕ ಪ್ರವೀಣೆಯಾಗಿದ್ದ ತನ್ನ ತಾಯಿಯ ಜೀವನೋತ್ಸಾಹ, ಆಕೆಯ ಸಂಗೀತ ಪ್ರೀತಿ, ಕಸೂತಿ, ದೇವರನ್ನು ಸಿಂಗರಿಸುವ ವೈಖರಿಯ ಸ್ವಾರಸ್ಯಕರವಾದ ನಿರೂಪಣೆಯನ್ನು ದೀಪಾ ನೀಡುತ್ತಾರೆ. ಆಹಾರದ ಬಗ್ಗೆ ಅರ್ಥಗರ್ಭಿತವಾದ ಚಿಂತನೆ- ವಿಚಾರಗಳನ್ನು ಮಂಡಿಸುವ ದೀಪಾ “ಆಹಾರದ ಪರಿಕಲ್ಪನೆ ತೈತ್ರೇಯ ಉಪನಿಷತ್ತಿನಲ್ಲಿ ಸ್ವಾರಸ್ಯಕರವಾಗಿದೆ.

ಇದನ್ನೂ ಓದಿ  : Music: ವೈಶಾಲಿಯಾನ; ‘ಇದನ್ನು ನೀವು ‘ಹರಾಮ್’ ಎಂದರೆ, ನಾನು ಮತ್ತಷ್ಟು ಹರಾಮ್;’ ಎಂದಿದ್ದರು ಬಿಸ್ಮಿಲ್ಲಾ ಖಾನ್

Vaishaliyaana Column by Dr K S Vaishali

ಪ್ರಮೀಳಾ ಸ್ವಾಮಿಯವರ ಕೃತಿ

ಈ ಭೂಮಿಯ ಮೇಲೆ ಜೀವಿಸುವ ಪ್ರತಿ ಜೀವಿಯ ಮೂಲವೂ ಆಹಾರ. ಬದುಕು ನಡೆವುದು ಆಹಾರದಿಂದ. ಕಡೆಗೆ ಮರಳುವುದು ಆಹಾರವಾಗಿ. ಹಾಗಾಗಿ ಆಹಾರವೇ ಈ ಪೃಥ್ವಿಯ ಅತ್ಯಂತ ಹಳೆಯ ಜೀವಿ. ಬೈಬಲ್ ಮತ್ತು ವೇದಗಳು ಹೇಳುವಂತೆ, ಊಟವೆನ್ನಿ, ಆಹಾರವೆನ್ನಿ, ಈ ಪ್ರಾಚೀನ ಜೀವಿ ಇರುವುದು ದೇವರನ್ನು ಸಂತುಷ್ಟಗೊಳಿಸುವುದಕ್ಕಾಗಿ.” ಎಂದು ಆಹಾರದ ಸ್ವರೂಪ, ಲಕ್ಷಣಗಳನ್ನು ವಿಶ್ಲೇಷಿಸುವುದು, ಆಹಾರ ಹಾಗೂ ಅಡುಗೆಯ ಬಗ್ಗೆ ಒಂದು ಹೊಸ ಹೊಳಹನ್ನು ನೀಡುತ್ತದೆ. ದೀಪಾರವರ ತಾರ್ಕಿಕ ವಿಶ್ಲೇಷಣೆ ಮತ್ತೊಂದು ಮಜಲನ್ನು ತಲುಪುವುದು ಈ ಕೆಳಗಿನ ಅಮೋಘ, ಕಾವ್ಯಮಯ ಸಾಲುಗಳಲ್ಲಿ: “ಭಾರತದ ಸಾಂಸ್ಕೃತಿಕ ಸಮುದಾಯಗಳು ಬೆಸೆದಿರುವುದು ಆಹಾರದಿಂದ. ಆಹಾರ ಪರಂಪರೆಗಳಿಂದ, ದೇವರುಗಳಿಂದ. ಈ ಪರಂಪರೆಗಳು ಕಾಣದ ದೈವಕ್ಕೆ ನೈವೇದ್ಯವನ್ನು ಅರ್ಪಿಸಿ ಪ್ರಸಾದಾನುಗ್ರಹಿಗಳಾಗುವುದು ಒಂದು ರೀತಿಯಾದರೆ, ಪರಂಪರೆಯಿಂದಲೇ ಪ್ರಸಾದಾನುಗ್ರಹಿಗಳಾಗುವುದೂ ಸಾಧ್ಯವಿಲ್ಲವೇ? ಅಡುಗೆಯ ಕ್ರಮಗಳು, ಪಾಕ ನಿಘಂಟುಗಳು, ಪಾತ್ರೆಗಳು, ಆವರಣಗಳು, ಇವೆಲ್ಲವೂ ಇಹ-ಪರಗಳನ್ನು ಬೆಸೆಯುವ ಪ್ರಕ್ರಿಯೆಗಳಲ್ಲವೇ?

ಅಮ್ಮ ನಿತ್ಯ ತನ್ನ ತಾಯಿಯನ್ನೋ, ಸೋದರತ್ತೆಯನ್ನೋ, ಬಾಲಮ್ಮಾಮಿಯನ್ನೋ ನೆನೆಸಿ ಮಾಡುವ ಅಡುಗೆ, ಕಾಣದ ದೈವಕ್ಕಿಡುವ ನೈವೇದ್ಯದಂತೆಯೇ ಅಲ್ಲವೇ? ಭೌತಿಕ ಆವರಣವನ್ನು ಮೀರಿ, ಭಾವವಾಗುವ ಈ ಲಂಘನ, ರುಚಿಯು ರಸವಾಗುವ ಅನುಭವದಂತೆ. ಈ ಸ್ಮೃತಿಕೋಶಗಳನ್ನು ಪ್ರತಿನಿತ್ಯವೂ, ಸೃಜನಶೀಲವಾಗಿ ಪುನರ್ಭವಿಸಲು ಸಾಧ್ಯವಾದುದರಿಂದಲೇ ಪರಂಪರೆಗಳು ಜೀವಂತವಾಗಿ ಉಳಿದು, ಹೊಸ ಹೊಸ ರೂಪದಲ್ಲೂ, ಬಣ್ಣದಲ್ಲೂ, ವಾಸನೆಯಲ್ಲೂ ಅವತರಿಸುತ್ತಲೇ ಇವೆ. ಸಮುದಾಯಗಳನ್ನು ಬೆಸೆಯುವ ದೇವರು, ತನ್ನ ಧರ್ಮದ ಸಂಕೋಲೆಗಳನ್ನು ಮೀರಿ, ತನ್ನ ರೂಪವನ್ನು ಮೀರಿ, ಸಂತ ಜ್ಞಾನೇಶ್ವರನು ಹೇಳುವಂತೆ, ಅನ್ನ ಬ್ರಹ್ಮನಾಗುತ್ತಾನೆ. ಈ ಅನ್ನ ಬ್ರಹ್ಮನ ಸೇವೆಯಲ್ಲಿದ್ದ ಅಮ್ಮ-ಅಜ್ಜಿಯರನ್ನು ನೆನೆಯುತ್ತಲೇ, ತಮ್ಮತಮ್ಮ ಊರು, ಊಟೋಪಚಾರಗಳು, ಕಥೆಯನ್ನು ಕಾಪಿಟ್ಟುಕೊಂಡ ಎಲ್ಲ ಅಮ್ಮಂದಿರನ್ನೂ ಇಲ್ಲಿ ನೆನೆಯುತ್ತೇನೆ.” ಎನ್ನುತ್ತಾರೆ.

ಇದನ್ನೂ ಓದಿ : Odinangala : ವರ್ಷಾಂತ್ಯ ವಿಶೇಷ ; ‘ಓದಿನಂಗಳ’ದೊಳಗೆ ‘ಅಲೆಮಾರಿಯೊಬ್ಬಳ ಆತ್ಮವೃತ್ತಾಂತ’ ಹಿಡಿದಿಟ್ಟಿದ್ದಾರೆ ವಿನಯಾ ಒಕ್ಕುಂದ

ಆಹಾರದ ಕುರಿತಾಗಿ ಅವರು ಭಾವಪರವಶವರಾಗಿ ಮಾಡುವ ಜಿಜ್ಞಾಸೆಯನ್ನು ಮತ್ತೆ ಮತ್ತೆ ಮೆಲುಕು ಹಾಕಬೇಕೆನ್ನಿಸುತ್ತದೆ. ತನ್ನ ಮಗಳು ದೀಪಾಳ ಒತ್ತಾಸೆಗೆ ಮಣಿದು ಈ ಸ್ಮೃತಿಗಳನ್ನು ದಾಖಲಿಸಲು ಹೊರಟಿದ್ದೇನೆಂದು ಬರೆಯುವ ಪ್ರಮೀಳಾ ಸ್ವಾಮಿಯವರ ಸಂಕೇತಿ ಗ್ರಾಮವೊಂದರ ವೃತ್ತಾಂತದ ಮೋಡಿಗೆ ಯಾವ ಭೋಜನ ಪ್ರಿಯರಾದರೂ ಮರುಳಾಗದಿರಲು ಸಾಧ್ಯವಿಲ್ಲ. ಪ್ರಮೀಳಾ ಸ್ವಾಮಿಯವರ ಸರಳ, ಆಕರ್ಷಕ, ಸುಂದರ ನಿರೂಪಣೆಯಲ್ಲಿ ಕಾವಲಿ ಬಿಸಿ ಮಾಡಿಕೊಳ್ಳುವದರಿಂದ ಹಿಡಿದು ಮಾವಿನ ಮಿಡಿ, ಮಾವಿನ ಕಾಯಿ ಪಲ್ಯ, ಗಿಣ್ಣು, ಗಿಣ್ಣಿನ ಇಡ್ಲಿ, ಗಿಣ್ಣಿನ ಎರಿಯಪ್ಪ, ಚಕ್ಕುಲಿ, ಕೋಡುಬಳೆ, ಗೋಧಿ ಉಂಡೆ, ಗಸಗಸೆ ಪಾಯಸ, ಹಬ್ಬಗಳಲ್ಲಿ ತಯಾರಿಸುತ್ತಿದ್ದ ಬಗೆ ಬಗೆಯ ಅನ್ನಗಳು- ಚಿತ್ರಾನ್ನ, ವಾಂಗಿ ಬಾತ್, ನಿಂಬೆ ಅನ್ನ, ಹೆರಳೆಕಾಯಿ ಅನ್ನ, ಉಳ್ಳಂದೋಗರೆ, ಒಬ್ಬಟ್ಟು, ಶಂಕರಪೋಳಿ, ಸಜ್ಜಪ್ಪ, ಹಪ್ಪಳ, ಸಂಡಿಗೆ ಹಾಕುವ ವಿಧಾನ – ಹೀಗೆ ಅನೇಕ ತಿನಿಸುಗಳನ್ನು ತಯಾರಿಸುವ ಬಗ್ಗೆ ಉಪಯುಕ್ತವಾದ ಮಾಹಿತಿಗಳಿವೆ.

ಪ್ರತಿಯೊಂದು ಅಧ್ಯಾಯದಲ್ಲೂ ಖಾದ್ಯಗಳೊಂದಿಗೆ ಬೆಸೆದುಕೊಂಡಿರುವ ನೆನಪುಗಳು, ಅದರ ಸುತ್ತ ಪರಿಭ್ರಮಿಸುವ ಕತೆಗಳು ಎಷ್ಟು ನವಿರಾಗಿ, ಆರ್ಷಕವಾಗಿ ಮೂಡಿಬಂದಿವೆಯೆಂದರೆ ವೈದೇಹಿಯವರು ಹೇಳುವಂತೆ “ಈ ಕೃತಿಯಲ್ಲಿ ಇವೆಲ್ಲ ಅವಿಭಾಜ್ಯವಾಗಿ ಅಂಟಿ ಬಂದಂತೆ, ಅಸಂಗತವೆನ್ನಿಸದಂತೆ, ಮುಂದಣ ಪೀಳಿಗೆಗಳಿಗೆ ದಾಟಿಸುವ ಸಿರಿ ಅರಿವಿನಂತೆ, ಪ್ರಸ್ತಾಪವಾಗಿದೆ. ಇದರಿಂದಾಗಿ ಕೃತಿಗೆ ಅದರದೇ ಆದ ಅಸ್ಮಿತೆಯೂ ಪ್ರಾಪ್ತವಾಗಿದೆ ಮತ್ತು ಇದು ಸುತರಾಂ ಒಬ್ಬ ಪುರುಷ ಬರೆಯಬಹುದಾದ ಬರವಣಿಗೆಯೇ ಅಲ್ಲ ಆಗಿಸಿದೆ.” ಗೆಳತಿ ದೀಪಾಳ ತಾಯಿ ಪ್ರಮೀಳಾ ಸ್ವಾಮಿಯವರ ಸ್ಮೃತಿ ಚಿತ್ರದ ವಿಸ್ಮಯಕಾರಿ, ಸೋಜಿಗದ ಅನಾವರಣವನ್ನು, ಬೆಕ್ಕಸ ಬೆರಗಾಗಿ ಓದುತ್ತಾ, ಅಚ್ಚರಿ ಪಡುತ್ತ, ಅವರ ಕುಪ್ಪ ಹಳ್ಳಿಯ ಮನೆಯ ಅನೇಕ ಬಗೆಯ ತಿಂಡಿ-ತೀರ್ಥಗಳನ್ನು ಸಂಗ್ರಹಿಸಿಡಲು ಉಪಯೋಗಿಸುತ್ತಿದ್ದ ಅರೆಕತ್ತಲಿನ ‘ಕಾಫಿ ತಿಂಡಿ ರೂಮು’ ನೆನೆಸುತ್ತ, ಅರ್ಚಕ ಬಿ.ರಂಗಸ್ವಾಮಿಯವರು ಆಸ್ಥೆಯಿಂದ ಸಂಪಾದಿಸಿಕೊಟ್ಟ ಹಳ್ಳಿಯ ಹಾಡುಗಳನ್ನು ಗುನುಗುತ್ತ ಮುಕ್ತಾಯ ಹಾಡುತ್ತಿದ್ದೇನೆ.

(ಮುಂದಿನ ಯಾನ : 9.7.2022)

ಈ ಅಂಕಣದ ಎಲ್ಲಾ ಬರಹಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada