Column: ವೈಶಾಲಿಯಾನ; ಆಕಾಶವನ್ನು ತೊಗಲಿನಂತೆ ಸುತ್ತಿಡಲು ಸಾಧ್ಯವಿದ್ದಿದ್ದರೆ…

Mukunda Rao : ‘ನಾವು ಕಾಲ ಮತ್ತು ಅಂತರಿಕ್ಷವನ್ನು ಮೀರಿ ಹೋಗಲು ಸಾಧ್ಯವಾದರೆ, ದೇವರನ್ನು ಅವಲಂಬಿಸದೇ, ನಮ್ಮ ದುಃಖ, ಗ್ಲಾನಿಗಳನ್ನು ಪರಿಹರಿಸಿಕೊಳ್ಳುವುದರಲ್ಲಿ ಯಶಸ್ವಿಗಳಾಗಬಹುದೇನೊ!‘ ಮುಕುಂದ ರಾವ್‌

Column: ವೈಶಾಲಿಯಾನ; ಆಕಾಶವನ್ನು ತೊಗಲಿನಂತೆ ಸುತ್ತಿಡಲು ಸಾಧ್ಯವಿದ್ದಿದ್ದರೆ...
Follow us
ಶ್ರೀದೇವಿ ಕಳಸದ
|

Updated on:Aug 06, 2022 | 10:52 AM

Vaishaliyaana : ಉಪನಿಷತ್ತೊಂದರ ಸಾಲು ಹೀಗಿದೆ : “ಮನುಷ್ಯರು ಎಂದು ಆಕಾಶವನ್ನು ಚರ್ಮದ ತೊಗಲೆಂಬಂತೆ ಸುತ್ತಿ ಬದಿಗಿರಿಸಬಲ್ಲರೋ, ಆಗ ಮಾತ್ರ ದೇವರನ್ನು ಸ್ಮರಿಸದೇ ಅವರ ದುಃಖಗಳು ಪರ್ಯವಸಾನಗೊಳ್ಳುತ್ತವೆ.’’ (ಕ್ಞಮಿಸಿ , ಇದು ನನ್ನ ಅಸಮರ್ಪಕವಾದ ಅನುವಾದ!) ಅರ್ಥಾತ್,  ನಮಗೆ ಹೇಗೆ ಆಕಾಶವನ್ನು ತೊಗಲಿನಂತೆ ಸುತ್ತಿಡಲು ಸಾಧ್ಯವಿಲ್ಲವೋ, ಹಾಗೆಯೇ ದೇವರಿಗೆ ಶರಣಾಗದೇ ನಮ್ಮ ಕ್ಲೇಶ- ತಾಪತ್ರಯಗಳ ನಿವಾರಣೆ ಅಶಕ್ಯ, ಅಥವಾ ಇದನ್ನು ಒಂದು ಸವಾಲಾಗಿಯೂ ನೋಡಬಹುದಾಗಿದೆ – ನಾವು ಕಾಲ ಮತ್ತು ಅಂತರಿಕ್ಷವನ್ನು ಮೀರಿ ಹೋಗಲು ಸಾಧ್ಯವಾದರೆ, ದೇವರನ್ನು ಅವಲಂಬಿಸದೇ, ನಮ್ಮ ದುಃಖ, ಗ್ಲಾನಿಗಳನ್ನು ಪರಿಹರಿಸಿಕೊಳ್ಳುವುದರಲ್ಲಿ ಯಶಸ್ವಿಗಳಾಗಬಹುದೇನೊ! ಕಾವ್ಯಮಯವಾದ ಈ ಸಾಲುಗಳನ್ನು ಅಷ್ಟೇ ಮನೋಜ್ಞವಾಗಿ, ಗಾಢವಾಗಿ ಇಂಗ್ಲಿಷಿನಲ್ಲಿ ಅನುವಾದಿಸಿ, ಅದಕ್ಕೆ ಒಂದು ಸುಂದರವಾದ ಭಾಷ್ಯವನ್ನು ಬರೆದ ಲೇಖಕ ಮುಕುಂದ ರಾವ್‌ ಅವರು. Belief and Beyond: Adventures in Consciousness from the Upanishads to Modern times (2019) ಎಂಬ ತಮ್ಮ ಕೃತಿಯ ಮೂರನೆಯ ಭಾಗದಲ್ಲಿ ಇದನ್ನು ಗಹನವಾಗಿ ಚರ್ಚಿಸಿದ್ದಾರೆ. ಡಾ. ಕೆ. ಎಸ್. ವೈಶಾಲಿ (Dr. K.S. Vaishali)

(ಯಾನ 14)

ಬುದ್ಧನ ಬಗ್ಗೆ, ದ್ವೈತ ಹಾಗೂ ಅದ್ವೈತ ಸಿದ್ಧಾಂತಗಳ ಸಾರವನ್ನೊಳಗೊಂಡ ‘ಭಗವದ್ಗೀತೆ’, ‘ಅಷ್ಟಾವಕ್ರ ಗೀತೆ’ ಮತ್ತು ‘ಅವಧೂತ ಗೀತೆ’ಗಳ ಬಗ್ಗೆ ಸೂಕ್ಷ್ಮವಾದ ಒಳನೋಟಗಳಿಂದ, ಸುಲಲಿತವಾಗಿ, ಚಿತ್ತಾಕರ್ಷಕವಾದ ನಿರೂಪಣೆಗಳನ್ನು ಇಂಗ್ಲಿಷಿನಲ್ಲಿ ನೀಡುತ್ತ, ತಮ್ಮ ಅಮೋಘವಾದ ಬರಹಗಳಿಂದ ನಮ್ಮನ್ನು ಬೆರಗುಗೊಳಿಸುವ ಮುಕುಂದ ರಾವ್ ನಮ್ಮವರೇ. ಬೆಂಗಳೂರಿಗೆ ಸಮೀಪದಲ್ಲಿ, ತುಮಕೂರಿನ ಹೊರವಲಯದಲ್ಲಿರುವ ತಮ್ಮ ಪುಟ್ಟ, ಸುಂದರ ಜಮೀನಿನಲ್ಲಿ ಮಡದಿ ರೇಣುರವರೊಡನೆ ವಾಸವಾಗಿದ್ದಾರೆ. ಮುಕುಂದ ರಾವ್ ಅವರ ತಾತ್ವಿಕ ಚಿಂತನೆಗಳ ಹರಹು ವಿಸ್ತಾರವಾಗಿದೆ. ಅವರ ಸಾಹಿತ್ಯ ಸೃಷ್ಟಿಯೂ ವಿಪುಲವಾದದ್ದು. Confessions of a Sanyasi, The Mahatma : A Novel , The Death of an Activist , Rama Revisited and Other stories , Chinnama’s World, In search of Shiva – ಮೊದಲಾದ ಕಾದಂಬರಿಗಳು, ಕಥಾ ಸಂಕಲನಗಳು ಹಾಗೂ Mahatma : Khuda ka Hijra, Babasaheb Ambedkar – ಎಂಬ ನಾಟಕಗಳನ್ನೂ ಹೊರತಂದಿರುವ ಮುಕುಂದ ರಾವ್‌ ಅವರು ಸಾಹಿತ್ಯದ ಬಹುತೇಕ ಪ್ರಕಾರಗಳಲ್ಲಿ ಸಿದ್ಧಹಸ್ತರಾಗಿ ಕೈಯಾಡಿಸಿದ್ದು, ಅನೇಕ ಅಧ್ಯಾತ್ಮಿಕ – ವೈಚಾರಿಕ ಬರಹಗಳ ಸಂಕಲನಗಳನ್ನು ಪ್ರಕಟಿಸಿದ್ದಾರೆ. Dronequill, Harper Collins, Hachette, WestLand , Penguin  ಮೊದಲಾದ ಸುಪ್ರಸಿದ್ಧ, ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಕಾಶನಗಳು ಪ್ರಕಟಿಸಿರುವ ಮುಕುಂದ ರಾವ್‌ ಅವರ ಕೃತಿಗಳು ಅಧ್ಯಾತ್ಮಿಕತೆ ಮತ್ತು ತತ್ವಚಿಂತನೆಗಳಿಗೆ  ಸಂಬಂಧಿಸಿದಂತೆ ತಮ್ಮ ವಿನೂತನವಾದ ಸ್ವಾರಸ್ಯಕರ ಹೊಳಹುಗಳಿಂದ ನಮ್ಮನ್ನು ಸೆಳೆಯುತ್ತವೆ.

ಇದನ್ನೂ ಓದಿ
Image
Literature: ನೆರೆನಾಡ ನುಡಿಯೊಳಗಾಡಿ; ‘ಈಗಲೇ ರಿಕಾರ್ಡ್ ಹಚ್ಚಬಾರದು, ಇನ್ನೂ ಅಪ್ಪನ ಖತಮು ಮುಗಿದಿಲ್ಲ’
Image
Literature : ನೆರೆನಾಡ ನುಡಿಯೊಳಗಾಡಿ; ಬಿಎಂ ಶರ್ಮಾ ಅನುವಾದಿಸಿದ ರಾಹುಲ ಸಾಂಕೃತ್ಯಾಯನ ಕಥೆ ‘ನಿಶಾ‘
Image
Literature: ನೆರೆನಾಡ ನುಡಿಯೊಳಗಾಡಿ; ‘ಉಭಯ ಜೀವನ’ ಕೆಕೆ ಗಂಗಾಧರನ್ ಅನುವಾದಿಸಿದ ಮಲಯಾಳ ಕಥೆ
Image
Literature: ನೆರೆನಾಡ ನುಡಿಯೊಳಗಾಡಿ; ಪಾವಣ್ಣನ್ ಚಿಂತಾಮಣಿ ಕೊಡ್ಲೆಕೆರೆ ಅನುವಾದಿಸಿದ ಬಿ ಜಯಮೋಹನ್ ಕಥೆ ‘ವಿಷಸರ್ಪ’

‘ಪ್ರಾರಂಭವೆನ್ನುವುದರ ಪರಿಕಲ್ಪನೆಯೇ ಒಂದು ಭ್ರಮೆ. ಏಕೆಂದರೆ ಪ್ರತಿಯೊಂದು ಪ್ರಾರಂಭವೂ ಆಗಲೇ ಎರಡನೆಯದು, ಮೂರನೆಯದು ಅಥವಾ ನೂರನೇ ಬಾರಿಯ ಪ್ರಯತ್ನವಾಗಿರುತ್ತದೆ. ಅದೊಂದು ದಿಗಿಲು ಹುಟ್ಟಿಸುವ ವರ್ತುಲ. ಎಂದಿಗೂ ಮುಗಿಯದ, ಕಥೆಯೊಳಗಿನ ಕಥೆ, ವೃತ್ತದೊಳಗಿನ ವೃತ್ತವಿದ್ದಂತೆ. ಅಲ್ಲಿ ಕೇವಲ ಕಥೆಗಳು ಮಾತ್ರ ಇರುತ್ತವೆ. ನಿಮ್ಮವುಗಳು, ನನ್ನವು ಮತ್ತು ಎಲ್ಲೆಲ್ಲೂ ಇರುವ, ಯಾರಿಗೂ ಗೊತ್ತಿರದ, ಅನಾಮಧೇಯರ ಮಹಾನ್ ಕತೆಗಳು ಇತ್ಯಾದಿ – ಇವು ಸಮುದ್ರದಲ್ಲಿ ಬೆರೆತುಹೋದ ಲವಣದೋಪಾದಿಯಲ್ಲಿ ಇರುತ್ತವೆ’ ಎಂದು ಮುಕುಂದ ಅವರ ಕಾದಂಬರಿ In search of Shiva ದಲ್ಲಿ ಬರುವ ‘ಬಹುರೂಪಿ’ ಹೇಳುತ್ತಾನೆ. ಕಾದಂಬರಿಯ ಕಾಲ್ಪನಿಕ ಚೌಕಟ್ಟಿನಲ್ಲಿ ಮುಕುಂದ ರಾವ್‌ ಅವರು ಹನ್ನೆರಡನೆಯ ಶತಮಾನದ ಕಲ್ಯಾಣದಲ್ಲಿ ನಡೆಯುವ ಘಟನಾವಳಿಗಳನ್ನು ಚಿತ್ರಿಸುವ ರೀತಿ ನಮ್ಮನ್ನು ಗಾಢವಾಗಿ ಆವರಿಸಿಕೊಳ್ಳುತ್ತದೆ. ‘ಈ ಪ್ರಾಪಂಚಿಕ ಬದುಕು ನನಗಲ್ಲ’ ಎಂದು ತಂದೆ ಓಂಕಾರ ಶೆಟ್ಟಿಯ ಬಳಿ ಹೇಳುವ ಅಕ್ಕಮಹಾದೇವಿ, ‘ನನ್ನನ್ನು ದೇವ ಚೆನ್ನಮಲ್ಲಿಕಾರ್ಜುನನಿಗೆ ಮದುವೆ ಮಾಡಿಕೊಡಿ, ಅವನಲ್ಲದೇ ಇನ್ನಾರನ್ನೂ ನಾನೊಲ್ಲೆ.’ ಎಂದಾಗ ‘ಹುಚ್ಚು ಹುಡುಗಿ ಈ ಪ್ರಪಂಚದಲ್ಲಿ ಎಲ್ಲರೂ ನಿಜವಾದ ಗಂಡಸರನ್ನು ಮದುವೆಯಾಗುತ್ತಾರೆ. ಸಾಕು ಸುಮ್ಮನಿರು’ ಎಂದು ನಗುವಿನ ಸೋಗು ಹಾಕಿ, ಅವಳನ್ನು ಪ್ರೀತಿಯಿಂದಲೇ ಗದರಿ ಲೋಕದ ರೀತಿ-ನೀತಿಗಳನ್ನು ಮಗಳಿಗೆ ಹೇಳಿಕೊಡಲು ಹೆಣಗುವ ತಾಯಿ ಲಿಂಗಮ್ಮನ ಚಿತ್ರಣ ತುಂಬ ಸಹಜವಾಗಿ ಮೂಡಿಬಂದಿದೆ.

ಗಂಡ ಕೌಶಿಕನನ್ನು ತೊರೆದು, ದಿಗಂಬರೆಯಾಗಿ ಹೊರಡುವ ಅಕ್ಕಮಹಾದೇವಿ ಕಲ್ಯಾಣದ ಅನುಭವ ಮಂಟಪದ, ಶೂನ್ಯ ಸಿಂಹಾಸನದ ಮೇಲೆ ವಿರಾಜಮಾನನಾದ ಅಲ್ಲಮಪ್ರಭುವಿನ ಹರಿತವಾದ ಪ್ರಶ್ನೆಗಳಿಗೆ ಬಸವಣ್ಣನವರನ್ನೂ ಒಳಗೊಂಡು, ಅಲ್ಲಿ ನೆರೆದಿದ್ದ ಶಿವ ಶರಣ- ಶರಣೆಯರ ಸಮ್ಮುಖದಲ್ಲಿ ಉತ್ತರಿಸುವ ಪ್ರಸಂಗವನ್ನು ಮುಕುಂದ ರಾವ್ ವರ್ಣಿಸುವ ರೀತಿ ನಮ್ಮನ್ನು ಸ್ತಂಭೀಭೂತರನ್ನಾಗಿಸುತ್ತದೆ. ಇಡೀ ಕಾದಂಬರಿಯಲ್ಲಿಯೇ ನಾವು ಮತ್ತೆ ಮತ್ತೆ ಮೆಲುಕು ಹಾಕಬೇಕೆನ್ನಿಸುವ ಸಾಲುಗಳು ಇಲ್ಲಿವೆ. ಅನುಭವ ಮಂಟಪದಲ್ಲಿ ತಲ್ಲೀನತೆಯಿಂದ ತನ್ನ ‘ನಿರ್ಲಜ್ಜೇಶ್ವರ’ನನ್ನು ಸ್ಮರಿಸುತ್ತ, ವಚನವನ್ನು ವಾಚಿಸುತ್ತ, ವೇಶ್ಯೆಯಾಗಿದ್ದ ತಾನು ಶರಣರ ಸಮೂಹದಲ್ಲಿ ಶಿವ ಧ್ಯಾನದಲ್ಲಿ ತೊಡಗಿರುವ ಚಮತ್ಕಾರಿಕ ಬದಲಾವಣೆಯನ್ನು ಕುರಿತು, ರೋಮಾಂಚಿತಳಾಗಿ, ಕಣ್ಣೀರುಗರೆಯುವ ಶರಣೆ ಸೂಳೆ ಸಂಕವ್ವ (ಇಲ್ಲಿ ಸೋಮವ್ವ) ನಮ್ಮ ಮನಸ್ಸನ್ನು ಕಲಕುತ್ತಾಳೆ.

ಈ ವರ್ಷ Hachette India ವತಿಯಿಂದ ಮುಕುಂದ ರಾವ್‌ರವರ ಮತ್ತೊಂದು ಪುಸ್ತಕ India’s Greatest Minds : Spiritual Masters , Philosophers, Reformers ಹೊರಬಂದಿದೆ. ಐನೂರು ಪುಟಗಳ ಈ ಪುಸ್ತಕ ಅವರ ಆಳವಾದ ಅಧ್ಯಯನ, ಪರಿಶ್ರಮದ ಫಲವಾಗಿದ್ದು , ತಮ್ಮ ಪ್ರಸ್ತಾವನೆಯಲ್ಲಿ ಲೇಖಕರು ಮಾನವರು ತಲೆ-ತಲಾಂತರದಿಂದಲೂ ತಮ್ಮ ಅಸ್ತಿತ್ವದ ಕುರಿತಾಗಿ ‘ನಾನು ಯಾರು?’ ‘ನನ್ನ ಬದುಕಿನ ಗುರಿಯೇನು?’ ‘ಸಾವಿನಾಚೆ ಏನಿದೆ?’ ‘ಪ್ರಜ್ಞೆಯೆಂದರೇನು ?’ ‘ದೇವರಿದ್ದಾನೆಯೇ?’ ‘ಜೀವದ ಉಗಮ –ವಿಕಾಸ ಹೇಗೆ ಸಂಭವಿಸಿತು?’ ‘ಈ ಬ್ರಹ್ಮಾಂಡದ ರಹಸ್ಯವೇನು ?’ ‘ಕಾಲವೆಂದರೇನು?’ ಎಂಬ ಅಧ್ಯಾತ್ಮಿಕ ಪ್ರಶೆಗಳನ್ನು, ಅನಾದಿ ಕಾಲದಿಂದಲೂ ಎಡೆಬಿಡದೆ ಕೇಳುತ್ತಲೇ ಬಂದಿದ್ದಾರೆ. ಈ ನಿಟ್ಟಿನಲ್ಲಿ ಸುಮಾರು 2,500 ವರ್ಷಗಳ ಹಿಂದೆ, ಈ ಬಗೆಯ ತಾತ್ವಿಕ ಅನ್ವೇಷಣೆಗಳು ಜಗತ್ತಿನ ಹಲವಾರು ಭಾಗಗಳಲ್ಲಿ ನಡೆಯುತ್ತಿದ್ದಾಗ, ಅವುಗಳ ಜಿಜ್ಞಾಸೆಯಲ್ಲಿ ತೊಡಗಿದ್ದ ಹಲವಾರು ಚಿಂತನಾ ಕ್ರಮಗಳು ಭಾರತ ಉಪಖಂಡದಲ್ಲಿ ಅನೇಕ ಶತಮಾನಗಳಿಂದಲೂ ಚಾಲ್ತಿಯಲ್ಲಿದ್ದು, ಈ ಬಗೆಯ ಪ್ರಶ್ನೆಗಳನ್ನು ಅನೇಕ ವಿಧದಲ್ಲಿ ಎದುರಿಸುವ ಪ್ರಯತ್ನ ಮಾಡಿದ್ದವು, ಅವುಗಳಲ್ಲಿ ಕೆಲವು ಮುಖ್ಯ ವಿಚಾರಧಾರೆಗಳನ್ನು, ಚಿಂತಕರನ್ನು ಪರಿಚಯಿಸುವ ಕಿರು ಪ್ರಯತ್ನವನ್ನು ತಾನು ಮಾಡಿದ್ದೇನೆಂದು ಬರೆಯುತ್ತಾರೆ.

ನಮ್ಮ ಸಮಕಾಲೀನ ಭಾರತೀಯ ಪ್ರಜ್ಞೆಯನ್ನು ರೂಪಿಸುವುದರಲ್ಲಿ ಮಹತ್ವದ ಪಾತ್ರ ವಹಿಸಿದ ಅಧ್ಯಾತ್ಮಿಕ ಚಂತಕರೆಲ್ಲರನ್ನೂ ರಾಷ್ಟ್ರೀಯತೆಯ ಚೌಕಟ್ಟಿನಲ್ಲಿಟ್ಟು ನೋಡುವುದು ಕೂಡ ಸಮಂಜಸವಲ್ಲವೆಂದು ಅವರು ವಿವರಿಸುತ್ತಾರೆ. ಹಿಂದೂ ತತ್ವಶಾಸ್ತ್ರ, ಅಧ್ಯಾತ್ಮಿಕ ಚಿಂತನೆಯ ಅಡಿಪಾಯವನ್ನು ಸ್ಥಾಪಿಸಿದ ಆರು ಮೂಲ ದಾರ್ಶನಿಕರ ಪೈಕಿ ತಾನು ಕೇವಲ ಕಪಿಲ, ಕಣಾದ ಮತ್ತು ಪತಂಜಲಿಯವರ ವಿಚಾರ ಧಾರೆಗೆ ತನ್ನ ಅಧ್ಯಯನವನ್ನು ಸೀಮಿತಗೊಳಿಸಿದ್ದು, ತಿಲಕ್, ಈ. ವಿ. ರಾಮಸ್ವಾಮಿ (ಅವರ ಪಟ್ಟಿಯಲ್ಲಿರುವ ಏಕೈಕ ನಾಸ್ತಿಕವಾದಿ) ಜ್ಯೋತಿರಾವ್ ಫುಲೆ, ರಾಮ್‌ಮನೋಹರ್ ಲೋಹಿಯಾ ಮೊದಲಾದ ರಾಜಕೀಯ ಚಿಂತಕರು, ಸಮಾಜ ಸುಧಾರಕರನ್ನೂ ಕೂಡ, ಅಧ್ಯಾತ್ಮಿಕ ಚಿಂತಕರನ್ನು ಕುರಿತಾದ ತಮ್ಮ ಅಧ್ಯಯನದಲ್ಲಿ ಸೇರಿಸಿಕೊಂಡಿರುವುದರ ಬಗ್ಗೆ ಸ್ಪಷ್ಟೀಕರಣವನ್ನೂ ನೀಡುತ್ತಾರೆ. ಇವರೆಲ್ಲರೂ ಕ್ರಿಯಾಶೀಲ ಚಿಂತಕರಾಗಿ, ನಮ್ಮ ಸಾಮಾಜಿಕ ಹಾಗೂ ಸಾಂಸ್ಕೃತಿಕ ಪ್ರಜ್ಞೆಯನ್ನು ರೂಪಿಸುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರಿಂದ, ಅವರನ್ನೂ ಈ ಮಹಾನ್ ಭಾರತೀಯ ಗಾಥೆಯಲ್ಲಿ ಸೇರ್ಪಡಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎನ್ನುವ ಅರ್ಥಗರ್ಭಿತವಾದ ತಮ್ಮ ನಿಲುವನ್ನು ವಿಶದೀಕರಿಸುತ್ತಾರೆ.

ಮುಕುಂದ್‌ರವರ ಅಭಿಮತದಂತೆ ಇವರೆಲ್ಲರೂ ಆಧುನಿಕ ಆಚಾರ್ಯರು. ಏಕೆಂದರೆ ಅವರು ಭಾರತೀಯರಲ್ಲಿ ತಮ್ಮ ರಾಷ್ಟ್ರದ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಇತಿಹಾಸವನ್ನು ವಿಮರ್ಶಾತ್ಮಕ ನಿಟ್ಟಿನಲ್ಲಿ ನೋಡಿ, ಅಮಾನವೀಯವಾದ, ಪ್ರತಿಗಾಮಿ ಧಾರ್ಮಿಕ ನಂಬಿಕೆಗಳು ಮತ್ತು ಸಾಮಾಜಿಕ ಆಚರಣೆಗಳನ್ನು ದಿಕ್ಕರಿಸುವ ನೈತಿಕ ಧೀಮಂತಿಕೆಯನ್ನು ರೂಢಿಸಿಕೊಳ್ಳುವುದಕ್ಕೆ ಪ್ರೇರೇಪಣೆ ನೀಡಿದವರು. ದಯೆ, ಸಮಾನತೆ, ವ್ಯಕ್ತಿಸ್ವಾತಂತ್ರ್ಯ, ಸರ್ವಧರ್ಮ ಸಹಿಷ್ಣುತೆಯ ತಳಹದಿಯ ಮೇಲೆ ಸಮಾಜವನ್ನು ಕಟ್ಟಲು ಹುರಿದುಂಬಿಸಿದ ಮಹಾನುಭಾವರು. ಕವಿಯಿತ್ರಿಯರು, ಸಂತರೂ ಆದ ಅಕ್ಕ ಮಹಾದೇವಿ, ಮೀರಾಬಾಯಿ ಪುರುಷ ಪ್ರಧಾನ ಸಮಾಜವು ಮಹಿಳೆಯರ ಮೇಲೆ ಹೇರಿದ್ದ ಕೌಟುಂಬಿಕ ನಿರ್ಬಂಧಗಳಿಂದ ಕಳಚಿಕೊಂಡು ಕ್ರಾಂತಿಕಾರಕ ಅಧ್ಯಾತ್ಮಿಕತೆಯನ್ನು ಪ್ರತಿಪಾದಿಸಿದರು. ಬಸವಣ್ಣನವರು ಬ್ರಾಹ್ಮಣಿಕೆಯ ಯಜಮಾನಿಕೆಯನ್ನು ವಿರೋಧಿಸಿ, ಸಮಾನ ಮನಸ್ಕರ, ಸತ್ಯದ ಅನ್ವೇಷಕರ ಒಂದು ಸಮುದಾಯವನ್ನು ಕಟ್ಟಲು ಶ್ರಮಿಸಿದರು.

ಕೆಳಜಾತಿಯ ಚಮ್ಮಾರನಾದ ರವಿದಾಸ ವೇದಗಳ ಪ್ರಾಮುಖ್ಯತೆಯನ್ನು ಧಿಕ್ಕರಿಸಿ, ಒಂದು ಜಾತ್ಯಾತೀತ ಸಮಾಜದ ಕನಸನ್ನು ಕಂಡ. ಅದಕ್ಕೆ ಆತ ‘ಬೇಗಂಪುರ’ ಅಂದರೆ ದುಃಖ-ಕ್ಲೇಶಗಳಿಲ್ಲದ ಪ್ರದೇಶವೆಂದು ನಾಮಕರಣ ಮಾಡಿದ. ಅಸ್ಸಾಮಿನಲ್ಲಿ ಕವಿ-ಸಂತ, ಸಮಾಜ ಸುಧಾರಕ ಶಂಕರದೇವ ಜಾತಿ ಪದ್ಧತಿ, ಮೂರ್ತಿ ಪೂಜೆಯನ್ನು ಖಂಡಿಸಿ ‘ಏಕಶರಣ ಧರ್ಮ’- ಎಲ್ಲ ಜಾತಿ, ಧರ್ಮದವರಿಗೆ ಹಾಗೂ ಆದಿವಾಸಿಗಳಿಗೆ ಆಶ್ರಯ ನೀಡುವ ಧರ್ಮವನ್ನು ಹುಟ್ಟು ಹಾಕಿದರು. ಒರಿಸ್ಸಾದಲ್ಲಿ ಖೊಂಡ್ ಬುಡಕಟ್ಟಿನವರಾದ ಮಹಿಮಾ ಗೋಸಾಯಿನ್ ಮತ್ತು ಆತನ ಅನುಯಾಯಿಯಾದ ಭೀಮಾ ಭೋಯಿ ಜಾತಿಯ ಶ್ರೇಣೀಕೃತ ವ್ಯವಸ್ಥೆಯನ್ನು ತಿರಸ್ಕರಿಸಿ ಮೂರ್ತಿ ಪೂಜೆ, ದೇವಸ್ಥಾನ, ಪುರೋಹಿತರಿಂದ ದೂರವಾದ, ಸ್ತ್ರೀ-ಪುರುಷರ ಸಮಾನತೆಯನ್ನು ಎತ್ತಿ ಹಿಡಿಯುವ ‘ಮಹಿಮಾ ಧರ್ಮ’ವನ್ನು ಸ್ಥಾಪಿಸಿದರು. ಮುಕುಂದ ರಾವ್‌ ಅವರ ಈ ಮಹಾನ್ ಅಧ್ಯಾತ್ಮಿಕ ಗಾಥೆಯಲ್ಲಿ ಜಾತಿಯತೆಯ ವಿರುದ್ಧ ಸೆಣೆಸಿದ ಸಮಾಜ ಸುಧಾರಕರು, ವರ್ಣ ಸಂಕರದ ಪ್ರತಿಪಾದಕರು, ಅನುಭಾವದ ಪಥವನ್ನು ಕ್ರಮಿಸಿದ ಕಬೀರ್, ಬುಲ್ಲೆ ಶಾ, ಶಿರ್ಡಿಯ ಸಾಯಿ ಬಾಬ, ಲಲ್ಲೇಶ್ವರಿ, ಪಂಡಿತಾ ರಮಾಬಾಯಿ, ನಾರಾಯಣ ಗುರು – ಹೀಗೆ ಅನೇಕರು ಗುರುತಿಸಲ್ಪಡುತ್ತಾರೆ.

ಸಾಂಖ್ಯ ಸಿದ್ಧಾಂತದ ಹರಿಕಾರ ಋಷಿ ಕಪಿಲನಿಂದ ಪ್ರಾರಂಭಗೊಂಡು ರೈಮುಂಡೊ ಪಣಿಕ್ಕರ್‌ವರೆಗೆ, 63 ಅಧ್ಯಾಯಗಳಲ್ಲಿ ಭಾರತೀಯ ಅಧ್ಯಾತ್ಮಿಕ ಪ್ರಜ್ಞೆಯ ರೂವಾರಿಗಳ ವಿಸ್ತೃತ ಅಧ್ಯಯನವನ್ನು ಕೈಗೊಂಡಿರುವ ಲೇಖಕರು ಪ್ರತಿಯೊಬ್ಬ ಚಿಂತಕ- ದಾರ್ಶನಿಕರ ಬದುಕು, ಸಾಹಿತ್ಯ, ಕಾವ್ಯ ರಚನೆಗಳನ್ನು ಕಟ್ಟಿಕೊಡುವ, ಉಲ್ಲೇಖಿಸುವ ರೀತಿ ಅತ್ಯಂತ ಶ್ಲಾಘನೀಯ. ಅನೇಕ ಚಿಂತಕರು, ತತ್ವಜ್ಞಾನಿಗಳ ಕುರಿತಾದ ಎಲ್ಲ ಮುಖ್ಯವಾದ ಮಾಹಿತಿಗಳೂ ಈ ಅಧ್ಯಾಯಗಳಲ್ಲಿ ದೊರಕುತ್ತವೆ. ಪ್ರಾಚೀನ ಭಾರತದ ವೇದ ಕಾಲದ ಬ್ರಹ್ಮವಾದಿನಿಯರಾದ ಸುಲಭಾ ಮೈತ್ರೇಯಿ, ಗಾರ್ಗಿ ವಾಚಕ್ನವಿ, ಜಿನ ಪಂಥದ ಸನ್ಯಾಸಿಯರಾದ ಆರ್ಯಿಕೆಯರು, ಬುದ್ಧ ಭಿಕೂನಿಯರಾದ ‘ಶಾಕ್ಯಾಧಿತೆ’ಯರ ‘ತೇರಿ ಗಾಥ’ಗಳ ಸಂವಾದಗಳ ಸಂಕೀರ್ಣತೆಯ ಅರಿವು ಮೂಡಿಸುವಲ್ಲಿ ಲೇಖಕರು ತೋರಿರುವ ಶ್ರದ್ಧೆ ಅಭಿನಂದನಾರ್ಹ. ಶಿಶುನಾಳ ಶರೀಫ, ಅಭಂಗಕಾರನಾದ ದಲಿತ ಸಂತ ಚೋಕಾ ಮೇಳ, ಬಹಿನಾಬಾಯಿ, ಸೂಫಿ ಪಂಥದ ದಾರ್ಶನಿಕರಾದ ನಿಜಾಮುದ್ದೀನ್ ಔಲಿಯಾ, ಬಾಬಾ ಫರೀದ್, ಜಿಡ್ಡು ಕೃಷ್ಣಮೂರ್ತಿ, ಯು.ಜಿ. ಕೃಷ್ಣಮೂರ್ತಿಯವರ ವ್ಯಕ್ತಿ ಚಿತ್ರಣಗಳು ಎಷ್ಟು ಕ್ಲೀಷೆರಹಿತವಾಗಿ, ಗಾಢವಾಗಿ ಅನಾವರಣಗೊಳ್ಳುತ್ತವೆಯೆಂದರೆ ಅವುಗಳನ್ನು ಓದಿಯೇ ಸವಿಯಬೇಕು. ನನಗಂತೂ ಈ ಪುಸ್ತಕದಲ್ಲಿ ಮೈಮರೆತಿದ್ದಾಗ ಒಂದು ರಮ್ಯವಾದ ‘ರುಹಾನಿಯತ್’ – ಅನುಭಾವ – ಅಧ್ಯಾತ್ಮಿಕ ಸಂಗೀತೋತ್ಸವಕ್ಕೆ ಹೋಗಿ ಬಂದ ಸುಂದರ ಅನುಭವದಂತೆಯೇ ಅನಿಸಿತ್ತು.

ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಇಂಟರ್‌ಮೀಡಿಯೆಟ್ ವಿದ್ಯಾರ್ಥಿಯಾಗಿದ್ದಾಗ ತೀವ್ರ ಅಧ್ಯಾತ್ಮಿಕ ಹಂಬಲದಿಂದ ರಾಮಕೃಷ್ಣಾಶ್ರಮವನ್ನು ಸೇರಿದ್ದ ಮುಕುಂದ ರಾವ್ ತಮ್ಮ ಪಯಣವನ್ನು ಅಪ್ಯಾಯಾನವಾಗಿ ದಾಖಲಿಸಿದ್ದಾರೆ. ಮನುಷ್ಯನನ್ನು ಕಾಡುವ ದ್ವಂದ್ವಗಳು, ಧರ್ಮ ಸಂಕಟಗಳು, ಯಾತನೆಗಳು, ಬಿಕ್ಕಟ್ಟುಗಳ ಬಗ್ಗೆ ಅಪಾರವಾದ ಸಹಾನುಭೂತಿ – ಅನುಭೂತಿ , ಅಂತಃಕರಣದಿಂದ ಬರೆಯುವ ಮುಕುಂದ ರಾವ್ ತಮ್ಮ ಅಮೂಲ್ಯವಾದ ಕೃತಿಗಳಾದ Belief and Beyond :Adventures in Consciousness from the Upanishads to Modern Times ಮತ್ತು India’s Greatest Minds : Spiritual Masters, Philosophers, Reformers ಗಳಲ್ಲಿ ವಿಭಿನ್ನ ಮಾದರಿಯ ತತ್ವಜ್ಞಾನಿಯಾಗಿ ಹೊರಹೊಮ್ಮಿ, ಓದುಗರನ್ನು ಸೆಳೆಯುತ್ತಾರೆ.

(ಮುಂದಿನ ಯಾನ : 20.8.2022)

ಈ ಅಂಕಣದ ಎಲ್ಲಾ ಬರಹಗಳನ್ನು ಓದಲು ಕ್ಲಿಕ್ ಮಾಡಿ

Published On - 10:50 am, Sat, 6 August 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್