Literature: ಅನುಸಂಧಾನ; ಸಂಪಾದಕರು ಕೊಟ್ಟ ಒಂದು ಶಬ್ದ, ಪ್ರಶ್ನೆಯಿಂದ ಎಲೆನಾ ಅಂಕಣ ಸಿದ್ಧವಾಗುತ್ತಿತ್ತು

|

Updated on: Apr 03, 2022 | 9:27 AM

Elena Ferrante : ಎಲೆನಾ ನಿಜಕ್ಕೂ ಹೆಣ್ಣಲ್ಲ, ಗಂಡು ಎಂದವರು, ಆಕೆಯ ಫೇಕ್ ಸಂದರ್ಶನ ಪ್ರಕಟಿಸಿದವರು... ಹೀಗೆ ಇದೊಂದು ಸಾಹಿತ್ಯ ಕ್ಷೇತ್ರದ ಪ್ರಚಾರಪ್ರಿಯ, ಪ್ರಶಸ್ತಿಪ್ರಿಯ, ಖ್ಯಾತಿಲೋಲುಪ ಸಾಹಿತಿಗಳ ಕುರಿತ ಅನೇಕ ವಿಪರ್ಯಾಸಗಳಿಗೆ ಸವಾಲೊಡ್ಡಿದ ವಿದ್ಯಮಾನವೇ ಸರಿ.

Literature: ಅನುಸಂಧಾನ; ಸಂಪಾದಕರು ಕೊಟ್ಟ ಒಂದು ಶಬ್ದ, ಪ್ರಶ್ನೆಯಿಂದ ಎಲೆನಾ ಅಂಕಣ ಸಿದ್ಧವಾಗುತ್ತಿತ್ತು
Follow us on

ಅನುಸಂಧಾನ | Anusandhaana : ಇಟಾಲಿಯನ್ ಕಾದಂಬರಿಕಾರ್ತಿ ಎಲೆನಾ ಫರಾಂಟೆ (Elena Ferrante) ಎಂದು ಗುರುತಿಸಿಕೊಂಡಿರುವ ವ್ಯಕ್ತಿ ನಿಜಕ್ಕೂ ಯಾರು ಎನ್ನುವ ಕುರಿತೇ ಗೊಂದಲವಿದೆ. ಆ ಹೆಸರಿನ ಹಿಂದಿರುವ ನಿಜವ್ಯಕ್ತಿ ಯಾರು ಎನ್ನುವ ಕುರಿತೇ ಸಂಶೋಧನೆ ನಡೆಯುವಷ್ಟು ಜನರಿಂದ, ಪ್ರಚಾರದಿಂದ ದೂರವುಳಿದಿರುವ ಈಕೆ ಒಂದು ಕೃತಿ ಹೊರಬಿದ್ದ ಬಳಿಕ ಅದಕ್ಕೆ ಲೇಖಕನ ಅಗತ್ಯ ಇಲ್ಲ ಎಂಬ ನಿಷ್ಠುರ ನಿಲುವಿಗೆ ಬದ್ಧರಾಗಿಯೇ ಉಳಿದವರು. 2018ರಲ್ಲಿ ‘ದಿ ಗಾರ್ಡಿಯನ್’ ಈಕೆ ಅಂಕಣ ಬರೆಯಲಿದ್ದಾರೆಂದು ಪ್ರಕಟಿಸಿದಾಗ ಅದೊಂದು ಅಚ್ಚರಿಯ ಸುದ್ದಿಯಾಗಿತ್ತು. ಪ್ರತಿ ವಾರ ಸಂಪಾದಕರು ಒಂದು ಪ್ರಶ್ನೆ/ಶಬ್ದ ಒದಗಿಸಬೇಕು, ಆ ಬಗ್ಗೆ ಎಲೆನಾ ಅಂಕಣ ಬರೆಯಬೇಕು – ಇದು ಕರಾರು. ಆ ತನಕ ಅಂಕಣ ಬರೆಯದಿದ್ದ ಎಲೆನಾ ಅಂಕಣ ಬರೆದರು. ಅಷ್ಟರಲ್ಲಾಗಲೇ ಆಕೆಯ ಕೆಲವು ಬರಹಗಳ ಬಗ್ಗೆ (ನಾನ್-ಫಿಕ್ಷನ್) ಎಲೆನಾ ಬರೆದಿದ್ದೇ ಅಲ್ಲ ಎನ್ನುವ ಗುಲ್ಲೂ ಎದ್ದಿತ್ತು. ಆಕೆಯ ಶೈಲಿಯನ್ನು ಇನ್ಯಾರದೋ ಶೈಲಿಯೊಂದಿಗೆ ಹೋಲಿಸಿ ಅವರಿಬ್ಬರೂ ಒಬ್ಬರೇ ಎನ್ನುವುದು, ಕಾದಂಬರಿಯ, ಆತ್ಮಕತೆಯ ಛಾಯೆಯುಳ್ಳ ಬರವಣಿಗೆಯ ವಿವರಗಳನ್ನಾಯ್ದು ಅವರೇ ಇವರು ಎನ್ನುವುದು ನಡೆದೇ ಇತ್ತು.
ನರೇಂದ್ರ ಪೈ, ಲೇಖಕ, ಅನುವಾದಕ (Narendra Pai)

 

(ಸಂಧಾನ 2)

ಎಲೆನಾ ನಿಜಕ್ಕೂ ಹೆಣ್ಣಲ್ಲ, ಗಂಡು ಎಂದವರು, ಆಕೆಯ ಫೇಕ್ ಸಂದರ್ಶನ ಪ್ರಕಟಿಸಿದವರು… ಹೀಗೆ ಇದೊಂದು ಸಾಹಿತ್ಯ ಕ್ಷೇತ್ರದ ಪ್ರಚಾರಪ್ರಿಯ, ಪ್ರಶಸ್ತಿಪ್ರಿಯ, ಖ್ಯಾತಿಲೋಲುಪ ಸಾಹಿತಿಗಳ ಕುರಿತ ಅನೇಕ ವಿಪರ್ಯಾಸಗಳಿಗೆ ಸವಾಲೊಡ್ಡಿದ ವಿದ್ಯಮಾನವೇ ಸರಿ. ಈ ಎಲ್ಲ ನಿಗೂಢತೆಯಿಂದ ಒಂದು ಲಾಭವಂತೂ ಆಗಿದೆ. ಇದನ್ನು ಎಲೆನಾ ಬರೆದಿದ್ದು ಎಂಬ ಒಂದೇ ಕಾರಣಕ್ಕೆ ನಾವದನ್ನು ಓದುವುದಾದರೆ ಅಥವಾ ಒಬ್ಬ ಲೇಖಕನ ಹೆಸರೇ ನಮಗೆ ಮುಖ್ಯವಾಗಿ ಬರೆದ ಬರಹ ಅಮುಖ್ಯವಾಗುವಷ್ಟು ಹೆಸರಿನ ಭ್ರಾಂತಿಗೆ ಬಿದ್ದು ಓದುವುದಾದರೆ, ಎಲೆನಾ ವಿಷಯದಲ್ಲಿ ನಾವೆಲ್ಲ ಫೂಲ್ ಆಗುತ್ತಿದ್ದೇವಾ ಎನ್ನುವ ಪ್ರಶ್ನೆ ಸದಾ ಉಳಿಯಲಿದೆ. ಈ ಒಂದು ಅನಾಮಿಕತೆಯ ಹಠವೇನಿದೆ, ಅದು ಏನನ್ನೇ ಓದುವಾಗಲೂ ಅಭಿಮಾನವೆಂಬುದು ಭ್ರಮೆಯಾಗದ ಎಚ್ಚರವನ್ನು ಸದಾ ಉಳಿಸಿಕೊಂಡೇ ಓದುವಂತೆ ಮಾಡಿರುವುದು ಸತ್ಯ!

ಮೊದಲ ಸಲದ ಅನುಭವಗಳು, ಭಯ, ಡೈರಿ ಬರೆಯುವುದು, ಸತ್ಯ ಮತ್ತು ಕಲ್ಪಿತವಾಸ್ತವ, ಸಾವು ಅಥವಾ ರೋಗ – ಯಾವುದು ಹೆಚ್ಚು ಭಯಾನಕ, ನಗು, ತಾಯಾಗುವುದು, ಮಗಳು, ಆಶ್ಚರ್ಯ ಚಿಹ್ನೆ – ಸಾಮಾನ್ಯವಾಗಿ ಆಕೆಯ ಅಂಕಣದ ವಿಷಯಗಳು ಈ ತರದವು. ಅಂಕಣ ತೀರ ಸಣ್ಣವು. 300-400 ಪದಮಿತಿಯವು. ಈಗ ನೀವು ಓದುತ್ತಿರುವ ಲೇಖನ ಹೆಣ್ಣಿನ ಕುರಿತಾದ್ದು. ನಮ್ಮ ಅಮ್ಮ, ಅಕ್ಕ, ಹೆಂಡತಿಯ ಅಂತರಂಗದ ಮಾತುಗಳಂತೆ ಕೇಳಿಸುವ ಈ ಬರಹ ಓದಿದರೆ ಬದುಕಿನಲ್ಲಿ ಸಿಂಪಥಿಗಿಂತ ಎಂಪಥಿ ಎಷ್ಟು ಮುಖ್ಯ ಅನಿಸದೇ ಇರದು.

ಹೆಣ್ಣು ಹೆಣ್ಣೆಂದು…
ಹೇಳಬೇಕೆಂದರೆ ನಾನೆಂದೂ ಬೇರೊಂದು ಹೆಣ್ಣಿನ ಬಗ್ಗೆ, ಅವಳು ನನಗೆಷ್ಟೇ ನೋವು ಕೊಟ್ಟಿರಲಿ, ಕೆಟ್ಟ ಮಾತನಾಡುವುದನ್ನು ಇಷ್ಟಪಡುವುದಿಲ್ಲ. ಇದಕ್ಕಿರುವ ಕಾರಣವಿಷ್ಟೇ, ನನಗೆ ಹೆಣ್ಣಿನ ಪರಿಸ್ಥಿತಿ ಏನೆಂಬುದು ಚೆನ್ನಾಗಿಯೇ ಗೊತ್ತಿದೆ. ಅದು ನನ್ನದೇ, ಅದನ್ನೇ ನಾನು ಅವರಲ್ಲಿಯೂ ಕಾಣುತ್ತೇನೆ ಮತ್ತು ನನಗೆ ಗೊತ್ತು, ಪ್ರತಿಯೊಂದು ದಿನದ ಕೊನೆಗೆ ತಲುಪುವ ಹೊತ್ತಿಗೆ ಆ ಹೆಣ್ಣು ಎಷ್ಟೆಲ್ಲ ಪಾಡುಪಟ್ಟಿರುತ್ತಾಳೆ, ಎಂತಹ ಒದ್ದಾಟ. ಹೋರಾಟ ನಡೆಸಿ ಆ ದಿನವನ್ನು ನೂಕಿರುತ್ತಾಳೆ ಎನ್ನುವ ಸತ್ಯ. ಬಡವಿಯಾಗಿರಲಿ, ಸಿರಿವಂತೆಯಾಗಿರಲಿ, ಮುಗ್ಧೆಯಾಗಿರಲಿ, ಸುಶಿಕ್ಷಿತೆಯಾಗಿರಲಿ, ಸುಂದರಿಯಾಗಲಿ, ಕುರೂಪಿಯಾಗಿರಲಿ, ಖ್ಯಾತಳಾಗಿರಲಿ, ಅನಾಮಿಕಳಾಗಿರಲಿ, ವಿವಾಹಿತೆಯಾಗಿರಲಿ, ಒಂಟಿಯಾಗಿರಲಿ, ನೌಕರಿಯಲ್ಲಿರಲಿ, ನಿರುದ್ಯೋಗಿಯಾಗಿರಲಿ, ಮಕ್ಕಳಿರುವಾಕೆಯಾಗಿರಲಿ, ಇಲ್ಲದಿರಲಿ, ಜೋರಿನವಳಿರಲಿ, ಸಾಧುವಿರಲಿ, ಈ ಜಗತ್ತನ್ನು ನಾವೆಲ್ಲ ಇದು ನಮ್ಮದು ಎಂದು ಎಷ್ಟೇ ಹೇಳಿಕೊಂಡರೂ, ಶತಶತಮಾನಗಳಿಂದ ನಮ್ಮ ಬೇರಿನಿಂದಲೇ ವಿಷವುಣ್ಣಿಸಿ ಬೆಳೆಸಿದ ಈ ಪುರುಷಪ್ರಧಾನ ಸಮಾಜ ನಮ್ಮೆಲ್ಲರನ್ನೂ ಸಮಾನವಾಗಿ, ಆಳವಾಗಿಯೇ ಗಾಯಗೊಳಿಸಿದೆ.

ಶಾಶ್ವತವಾದ ಗೊಂದಲ, ವೈರುಧ್ಯ ಮತ್ತು ನಿಭಾಯಿಸಲಾರದಷ್ಟೂ ಶ್ರಮದ ನಡುವೆಯೇ ಅವಳ ಬದುಕು ಸಾಗಬೇಕಿದೆ. ಎಲ್ಲವನ್ನೂ ಎಂದರೆ ಅಕ್ಷರಶಃ ಎಲ್ಲವನ್ನೂ ಪುರುಷನ ಅಗತ್ಯಗಳಿಗೆ ತಕ್ಕಂತೆ ಹೊಂದಿಸಲಾಗಿದೆ. ಎಲ್ಲಿಯವರೆಗೆ ಎಂದರೆ ನಮ್ಮ ಒಳ ಉಡುಪು, ಲೈಂಗಿಕ ನಡವಳಿಕೆಗಳು, ಹೆರಿಗೆ ಕೂಡಾ. ಗಂಡನ್ನು ಸಂತುಷ್ಟಗೊಳಿಸುವಂಥ ಹೆಣ್ಣಾಗಿ, ಅದಕ್ಕೆ ತಕ್ಕ ಹಾಗೆ, ಅದಕ್ಕೆ ಅಗತ್ಯವಾದ ರೀತಿ ನೀತಿ, ಆದರ್ಶ, ಮಾದರಿಗಳನ್ನು ಅನುಸರಿಸುತ್ತ ಒಂದು ಹೆಣ್ಣಿನ ಪಾತ್ರವನ್ನು ನಿರ್ವಹಿಸಬೇಕು ನಾವು. ಹಾಂ, ಮತ್ತೆ ನಾವು ಸಾರ್ವಜನಿಕ ಕ್ಷೇತ್ರಗಳಲ್ಲಿ ಅವರೊಂದಿಗೆ ಸ್ಪರ್ಧಿಸಬೇಕು, ಮುಖಾಮುಖಿಯಾಗಬೇಕು; ಹೇಗೆಂದರೆ, ಅದು ಸದಾ ಅವರು ಇರುವುದಕ್ಕಿಂತ ಹೆಚ್ಚು ಸಮರ್ಥರು, ಅವರೇ ಮುಖ್ಯ, ಅವರದೇ ಹೆಚ್ಚು ಎಂದು ತೋರಿಸಿಕೊಡುವ ರೀತಿಯಲ್ಲಿ ಇರಬೇಕು ಮತ್ತು ಯಾವತ್ತೂ ಅವರಿಗೆ ಅವಮಾನವಾಗದ ಹಾಗಿರಬೇಕು.

ಇದನ್ನೂ ಓದಿ : Literature : ಇದು ಮೌನ ಮಾತಾಗುವ ‘ಅನುಸಂಧಾನ’, ನರೇಂದ್ರ ಪೈ ಅಂಕಣ ನಾಳೆಯಿಂದ ಆರಂಭ

ನನಗೆ ತುಂಬ ಇಷ್ಟವಾದ ತರುಣಿಯೊಬ್ಬಳು ಹೇಳಿದ್ದಳು, ಗಂಡಸರ ಜೊತೆ ಸದಾ ಕಷ್ಟವೇ. ಸದಾ ಜಾಗೃತವಾಗಿರಬೇಕು, ಕಲಿಯುತ್ತಿರಬೇಕು, ಎಲ್ಲೂ ನನ್ನದು ‘ಅತಿ’ ಆಗದ ಹಾಗೆ. ಅವಳ ಮಾತಿನ ಅರ್ಥ, ಅವಳು ತನ್ನನ್ನು ತಾನು ನಿಯಂತ್ರಿಸಿಕೊಳ್ಳುತ್ತಿರಬೇಕು, ತುಂಬ ಚಂದ ಕಾಣಿಸದ ಹಾಗೆ, ತುಂಬ ಬುದ್ಧಿವಂತೆಯಾಗದ ಹಾಗೆ, ತುಂಬ ಕರುಣಾಳುವಾಗದ ಹಾಗೆ, ತುಂಬ ಸ್ವತಂತ್ರಳಾಗದ ಹಾಗೆ, ತುಂಬ ಉದಾರಿಯಾಗದ ಹಾಗೆ, ತುಂಬ ಉತ್ಸಾಹಿಯಾಗದ ಹಾಗೆ, ತುಂಬ ಒಳ್ಳೆಯವಳಾಗದ ಹಾಗೆ. ಹೆಣ್ಣಿನ ಎಲ್ಲ ‘ಹೆಚ್ಚುಗಾರಿಕೆ’ ಗಂಡಸಿನಲ್ಲಿ ಹಿಂಸಾತ್ಮಕ ಪ್ರತಿಕ್ರಿಯೆಯನ್ನು ಉದ್ದೀಪಿಸುತ್ತದೆ ಮತ್ತು ಅದು ಸಾಲದೆಂಬಂತೆ ಅವಳು ಬೇರೆ ಹೆಂಗಸರ ವೈರತ್ವವನ್ನೂ ಕಟ್ಟಿಕೊಳ್ಳಬೇಕಾಗುತ್ತದೆ. ಪ್ರತಿದಿನ ಗಂಡಸರು ತಿಂದುಳಿಸಿದ್ದಕ್ಕಾಗಿ ತಮ್ಮತಮ್ಮಲ್ಲೇ ಹೋರಾಟ ನಡೆಸುವುದನ್ನು ಮನಸಾ ಸ್ವೀಕರಿಸಿರುವ ಹೆಂಗಸರ ವೈರತ್ವವೂ ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿರುತ್ತದೆ. ಅದೇ ಪುರುಷರ ‘ಹೆಚ್ಚುಗಾರಿಕೆ’ ಸಾಮಾನ್ಯವಾಗಿ ಎಲ್ಲರ ಮೆಚ್ಚುಗೆಗೆ ಮತ್ತು ಅವರಿಗೇ ಅಧಿಕಾರದ ಸ್ಥಾನಮಾನ ನೀಡುವುದಕ್ಕೆ ಕಾರಣವಾಗುತ್ತದೆ.

ಇದೆಲ್ಲದರ ಪರಿಣಾಮವೇನಾಗುತ್ತದೆ? ಸ್ತ್ರೀಶಕ್ತಿಯೇ ಉಸಿರುಗಟ್ಟಿ ಸಾಯುತ್ತದೆ ಮಾತ್ರವಲ್ಲ, ಸ್ವತಃ ನಾವೂ ಉಸಿರುಗಟ್ಟುವ ಸ್ಥಿತಿಯಲ್ಲಿ ಬದುಕುತ್ತಿರುತ್ತೇವೆ. ಇವತ್ತಿಗೂ, ಒಂದು ಶತಮಾನದ ಸ್ತ್ರೀವಾದಿ ಚಳವಳಿಯ ನಂತರವೂ ನಾವಿನ್ನೂ ಪೂರ್ತಿಯಾಗಿ ನಮ್ಮತನವನ್ನು ಕಂಡುಕೊಳ್ಳುವುದಾಗಿಲ್ಲ, ನಾವಿನ್ನೂ ಪೂರ್ತಿಯಾಗಿ ನಮಗೇ ಸೇರಿದವರಾಗಿ ಬದುಕುವ ದಿನ ಬಂದಿಲ್ಲ. ನಮ್ಮ ಕುಂದುಕೊರತೆಗಳು, ನಮ್ಮ ಕ್ರೌರ್ಯ, ನಮ್ಮ ಅಪರಾಧಗಳು, ನಮ್ಮ ಮೌಲ್ಯಗಳು, ನಮ್ಮ ಸಂತೋಷ, ನಮ್ಮದೇ ಆದ ಭಾಷೆ ಕೂಡಾ ಪುರುಷ ನಿರ್ಮಿತ ವರ್ಗಶ್ರೇಣಿಗಳಲ್ಲಿ ವಿನಯಪೂರ್ವಕವಾಗಿ ದಾಖಲಿಸಲ್ಪಡುತ್ತವೆ, ಪುರಸ್ಕಾರವೋ ತಿರಸ್ಕಾರವೋ ನಮ್ಮದಲ್ಲದ ನಿಯಮಾವಳಿಗನುಗುಣವಾಗಿ ನಿರ್ಧರಿಸಲ್ಪಡುತ್ತವೆ ಮತ್ತು ಹಾಗೆ ನಮ್ಮನ್ನು ಅಂತಿಮವಾಗಿ  ಗುಜರಿಗೆ ಹಾಕಲಾಗುತ್ತದೆ. ಬೇರೆಯವರಿಗೂ, ಸ್ವತಃ ನಮ್ಮನಮ್ಮೊಳಗೂ ನಾವು ನಮ್ಮನ್ನೇ ಹೆಣ್ಣುಹೆಣ್ಣೆಂದು ಹೀಗಳೆದು ತುಚ್ಛೀಕರಿಸಲು ಬೇಕಾದ ಒಂದು ಫಲವತ್ತಾದ ನೆಲೆಯನ್ನು ಇದು ಒದಗಿಸಿಕೊಡುವಂತಿದೆ. ನಾವು ಸದಾ ಜಾಗೃತವಾದ, ನಿರಂತರವೂ ನಿಷ್ಠುರವೂ ಆದ ಒಂದು ರಕ್ಷೆಯನ್ನು ನಿರ್ಮಿಸಿಕೊಳ್ಳದೇ ಹೋದರೆ ಸ್ವಾಯತ್ತವಾಗಿ ನಾವೇನೆಂದು ತೋರಿಸಿಕೊಡುವುದು ಸಾಧ್ಯವಾಗದು.

ಹಾಗಾಗಿ ನಾನು ಸದಾ ಎಲ್ಲಾ ಹೆಣ್ಣುಮಕ್ಕಳ ಬಗ್ಗೆ ಆಪ್ತವಾದ ಒಂದು ಭಾವನೆಯನ್ನೇ ಹೊಂದಿದ್ದೇನೆ. ಕೆಲವೊಮ್ಮೆ ಅದು ಈ ಕಾರಣಕ್ಕಾಗಿ, ಮತ್ತು ಕೆಲವೊಮ್ಮೆ ಅದು ಆ ಕಾರಣಕ್ಕಾಗಿ, ನಾನು ನನ್ನನ್ನೇ ಅತ್ಯಂತ ಉನ್ನತವಾದ ಮತ್ತು ಅಷ್ಟೇ ನಿಕೃಷ್ಟವಾದ ಸ್ಥಿತಿಯಲ್ಲಿ ಕಂಡುಕೊಳ್ಳುತ್ತಲೇ ಇರುತ್ತೇನೆ. ಕೆಲವೊಮ್ಮೆ ಮಂದಿ ನನ್ನನ್ನೇ ನೇರವಾಗಿ ಕೇಳುವುದಿದೆ, ಒಬ್ಬಳೇ ಒಬ್ಬ ದ್ವೇಷಿಸಬಹುದಾದ ಹೆಣ್ಣುಮಗಳು ನಿಮಗೆ ಸಿಕ್ಕಿದ್ದೇ ಇಲ್ಲವೆ ಹಾಗಾದರೆ? ನಿಶ್ಚಯವಾಗಿ ಅಂಥವರನ್ನು ನಾನು ಬಲ್ಲೆ. ಸಾಹಿತ್ಯದಲ್ಲಿ ಅಂಥವರು ಸಿಗುತ್ತಾರೆ ಮತ್ತು ಅದೇ ಥರ ನಮ್ಮ ದೈನಂದಿನ ಬದುಕೂ ಇದ್ದೇ ಇರಬೇಕಲ್ಲ. ಆದರೆ, ಎಲ್ಲವನ್ನೂ ಗಮನಕ್ಕೆ ತೆಗೆದುಕೊಂಡ ಮೇಲೂ, ನಾನು ಅವರ ಪರವಾಗಿಯೇ ನಿಲ್ಲುತ್ತೇನೆ.

ಪ್ರತಿಕ್ರಿಯೆಗಾಗಿ : tv9kannadadigital@gmail.com

ಹಿಂದಿನ ಸಂಧಾನ : Literature: ಅನುಸಂಧಾನ; ಬರವಣಿಗೆ ಆತ್ಮಕಥಾನಕವೇ, ನೀವು ಬರೀತೀರೋ ಹೊತ್ತಿಗೇ ಅದು ನಿಮ್ಮನ್ನ ಬರೀತಿರುತ್ತೆ