New Book : ಕೃಷ್ಣ ಮಾಸಡಿ ಅವರ ‘ಕೃಷ್ಣ ಮಾಸಡಿ ಸಮಗ್ರ ಕತೆಗಳು’ ಕೃತಿ ಬಿಡುಗಡೆ
ಬಹಳ ಹಿಂದೆ ಈ ಚಿಕ್ಕಿಗಳು ನಮ್ಮ ಹತ್ತಿರಾನೆ ಇದ್ವಂತೆ. ನಮ್ಮ ತಲೆ ಮೇಲೆ ನೇತಾಡುತ್ತಿದ್ದು ಕೈಗೆ ಕಾಲಿಗೆ ಸಿಗುತ್ತಿದ್ದವಂತೆ. ನಮ್ಮ ಮನೆಯ ಹಿತ್ತಲಲ್ಲಿರುವ ಒಳಕಲ್ಲಿನಲ್ಲಿ ಮುತ್ತಜ್ಜಿ ರಾಗಿ ಕುಟ್ಟುತ್ತಿರಬೇಕಾದರೆ ಒನಕೆಗೆ ಈ ಚಿಕ್ಕಿಗಳು ಬಡಿದು ತೊಂದರೆ ಕೊಡುತ್ತಿದ್ದವಂತೆ.
Krishna Masadi: ಓಡಿಹೋದ ಕತೆಗಳ ಹಿಂದೆ
ಬಹಳ ಹಿಂದೆ ಈ ಚಿಕ್ಕಿಗಳು ನಮ್ಮ ಹತ್ತಿರಾನೆ ಇದ್ವಂತೆ. ನಮ್ಮ ತಲೆ ಮೇಲೆ ನೇತಾಡುತ್ತಿದ್ದು ಕೈಗೆ ಕಾಲಿಗೆ ಸಿಗುತ್ತಿದ್ದವಂತೆ. ನಮ್ಮ ಮನೆಯ ಹಿತ್ತಲಲ್ಲಿರುವ ಒಳಕಲ್ಲಿನಲ್ಲಿ ಮುತ್ತಜ್ಜಿ ರಾಗಿ ಕುಟ್ಟುತ್ತಿರಬೇಕಾದರೆ ಒನಕೆಗೆ ಈ ಚಿಕ್ಕಿಗಳು ಬಡಿದು ತೊಂದರೆ ಕೊಡುತ್ತಿದ್ದವಂತೆ. ಪ್ರತಿ ಬಾರಿ ಒನಕೆ ಮೇಲೆ ಎತ್ತಿದಾಗ ಚಿಕ್ಕಿಗಳು ಬಡಿದು ಬಡಿದು ರೋಸಿಹೋದ ಆ ಮಾತಾಯಿ ʼಇನ್ನು ಮುಂದೆ ನೀವುಗಳು ದೂರ ದೂರ ಹೋಂಟೋಗಿʼ ಎಂದು ಶಾಪ ಕೊಟ್ಟಳಂತೆ. ಶಾಪದಂತೆ ಚಿಕ್ಕಿಗಳು ಈ ನರಮನುಷ್ಯರಿಂದ ಯಾರಿಗೂ ಸಿಗದಂತೆ ದೂರ ದೂರ ಹೊಂಟುಹೋದವಂತೆ.
ಅಂಗಳದಲ್ಲಿ ಅಜ್ಜಿಯ ಜೊತೆ ಮಲಗಿ ʻಕತೆ ಹೇಳಜ್ಜಿʼ ಎಂದು ಕೇಳಿದಾಗ ನಮ್ಮಜ್ಜಿ ಐದಾರು ವರ್ಷದ ನನಗೆ ಹೇಳುತ್ತಿದ್ದ ಈ ಕತೆ. ಸ್ವಚ್ಚ ಆಗಸದಲ್ಲಿ ಫಳ ಫಳ ಹೊಳೆಯುತ್ತಿರುವ ಚಿಕ್ಕಿಗಳು. ನೋಡುತ್ತಾ ನೋಡುತ್ತಾ ಬಣ್ಣ ಬಣ್ಣದ ಆಕಾರ ಪಡೆದು ಮಿನುಗುತ್ತಾ ಕುಣಿಯುತ್ತಾ ಮಲಗಿರುವ ನನ್ನ ಮೇಲೆ ಬಿದ್ದು ಬಿಟ್ಟರೆ?- ಎಂದು ಯೋಚಿಸುತ್ತಾ ಯೋಚಿಸುತ್ತಾ ನಿದ್ದೆಗೆ ಜಾರುತ್ತಿದ್ದೆ. ಬೆಳೆಯುತ್ತಾ ಬೆಳೆಯುತ್ತಾ ಅಂಗಾತ ಅಕಾಶದ ಕಡೆ ನೋಡಿದರೆ ಅಸಂಖ್ಯ ಚುಕ್ಕಿಗಳು. ಒಂದೊಂದು ಚುಕ್ಕಿಗೆ ಒಂದೊಂದು ಕತೆ. ಹೀಗೆ ಹಿಡಿತಕ್ಕೆ ಸಿಗದ ಅಗಣಿತ ಅನಂತಾನಂತ ಕತೆಗಳು ನನ್ನಲ್ಲಿ ಒಡಮೂಡಿ ಬತ್ತದ ತೊರೆಯಾಗಿ ಹರಿಯುತ್ತಲೇ ಇವೆ.
ಹೀಗೆ ಕತೆಯೆಂಬ ಬದುಕಿನೊಳಗೆ ಇಳಿದ ಅಸಂಖ್ಯ ಜನ ಮತ್ತು ಘಟನೆಗಳು. ಸಾಸ್ವೆಹಳ್ಳಿ ಶಿವಾನಂದ, ಮಹಮದ್ ಅಹಮದ್, ಚಂದ್ರಶೇಖರಯ್ಯ ಇವರೆಲ್ಲಾ ಗೆಳೆಯರು ನನಗಿಂತ ನಾಲ್ಕೈದು ವರ್ಷ ದೊಡ್ಡವರು. ಸಾಹಿತ್ಯದ ವಿಧ್ಯಾರ್ಥಿಗಳು. ಮತ್ತು ಊರುಗಳು ಶಿವಮೊಗ್ಗ, ಮೈಸೂರು. ೧೯೭೨ ರ ಜನವರಿಯಲ್ಲಿ ಶಿವಮೊಗ್ಗದಲ್ಲಿ ಭೇಟಿಯಾದ ಲಂಕೇಶ್ ಮತ್ತು ಅವರ ಒಡನಾಟ ಮತ್ತು ಲೈಬ್ರರಿ. ೧೯೭೮ರಲ್ಲಿ ಬೇಟಿಯಾದ ಅನಂತಮೂರ್ತಿ ಮತ್ತು ಅವರ ಒಡನಾಟ, ಈ ಇಬ್ಬರು ನನ್ನ ಜೀವನದಲ್ಲಿ ದಶಕಗಳ ಕಾಲ ಇದ್ದವರು.
ಇವರಿಬ್ಬರನ್ನು ಕುರಿತು ಅನುಭವ ಬರೆದುಕೊಳ್ಳಲು ಹತ್ತಿಪ್ಪತ್ತು ವರ್ಷ ಬೇಕಾಗಬಹುದು. ಇಬ್ಬರದೂ ಬೇರೆ ಬೇರೆ ವ್ಯಕ್ತಿತ್ವ. ಹೇಗೆಂದರೆ ನನ್ನ ಬಾಲ್ಯದಲ್ಲಿ ನಂಜನಗೂಡು ಹಲ್ಲಿನ ಪುಡಿ ಎರಡು ರೀತಿಯಲ್ಲಿ ಬರುತ್ತಿತ್ತು. ಒಂದು ಒರಟು ದೊರಗು ದೊರಗು, ಇನ್ನೊಂದು ಬಿಳಿ ಬಣ್ಣದ್ದು ತುಂಬಾ ನುಣುಪು ನಾಜೂಕು. ಒರಟಿಗೆ ಲಂಕೇಶ್, ನುಣುಪಿಗೆ ಅನಂತಮೂರ್ತಿ ಹೊಂದುತ್ತಿದ್ದರು. ನನಗೆ ಲಂಕೇಶ್‌ರು ಹಲವಾರು ಕಡೆ ಕೆಡುಕನ್ನುಮಾಡಿದರು. ಅದೇ ರೀತಿ ಅನಂತಮೂರ್ತಿ ಕೊನೆಯವರೆಗೂ ನನ್ನನ್ನು ಸಲಹಿದರು, ಬಹಷ್ಯ ತಂದೆಯ ತರಹ.
೩೦-೫-೧೯೭೬ ರ ಭಾನುವಾರದ ಪ್ರಜಾವಾಣಿಯ ಪುರವಣಿಯಲ್ಲಿ ನನ್ನ ಕತೆ ʼಪುರುಷನ ಮುಂದೆ ಮಾಯೆ ಸ್ತ್ರೀಯೆಂಬ ・ʼ ಪ್ರಕಟವಾಗಿದ್ದು ಪ್ರಮುಖ ಘಟನೆ. ಹೀಗೆ ಚುಕ್ಕಿಗಳ ಹಿಂದೆ, ಕತೆಗಳ ಹಿಂದೆ, ಬದುಕಿನ ಹಿಂದೆ , ಸಮಾಜವಾದದ ಹಿಂದೆ, ಚಳುವಳಿಗಳ ಹಿಂದೆ, ಸಿನಿಮಾಗಳ ಹಿಂದೆ, ಗೆಳತಿಯರ ಹಿಂದೆ ಸಾಗುತ್ತಾ ಸಾಗುತ್ತಾ ಬರೆದ ಎಲ್ಲಾ ಕತೆಗಳು ಇಲ್ಲಿವೆ. ಬಹಳ ಉಮೇದಿನಿಂದ ಹೆಚ್ಚು ಕತೆಗಳನ್ನು ಬರೆದಿದ್ದು ೭೬ ರಿಂದ ೮೦ ರವರೆಗೆ. ನಂತರ ಇತರೆ ಕಡೆಯ ಸೆಳೆತ ಬರೆಯಲು ನಿರಾಸಕ್ತಿಯಾಗಿ ಪರಿಣಮಿಸಿತು.
ಹಲವರ ಒತ್ತಾಯದ ಮೇಲೆ ಬರೆದ ಕತೆಗಳೇ ಹೆಚ್ಚು ಎಂದು ಹೇಳಬಹುದು. ಅವರಲ್ಲಿ ಬಹಳ ಪ್ರಮುಖರೆಂದರೆ ಜಿ.ಎಸ್. ಸದಾಶಿವ. ನಂತರ ಅನೇಕರು ಅವರಲ್ಲಿ ಜಯಂತ್ ಕಾಯ್ಕಿಣಿ, ಬಸವರಾಜ್, ಬಿ.ಎಂ.ಹನೀಫ್, ಸಂದೀಪ್ ನಾಯಕ್ ಹೀಗೆ ಪ್ರಕಟಣೆಯ ಒತ್ತಡದಲ್ಲಿ ಬರೆದವು ಹೆಚ್ಚು. ಕೆ.ವಿ.ಸುಬ್ಬಣ್ಣ ನನ್ನ ಪ್ರಥಮ ಕತೆಗಳ ಸಂಕಲನʻ ಪುರುಷನ ಮುಂದೆ ಮಾಯೆ ಸ್ತ್ರೀಯೆಂಬ..ʼ ಪ್ರಕಟಿಸದವರು.
ನಂತರ ಜಾಣಗೆರೆ ವೆಂಕಟರಾಮಯ್ಯ ʻಗ್ಯಾನಿ ಮತ್ತು ಗುಲಾಬಿʼ ಮತ್ತು ಕುರುವ ಬಸವರಾಜ್ ʻಬೂತʼ ಪ್ರಕಟಿಸಿದವರು. ಮೊದಲ ಸಂಕಲನ ಸ್ನೇಹಲತಾರೆಡ್ಡಿಗೆ , ಎರಡನೆಯದು ಮೀನಾಪ್ರಸಾದ್‌ಗೆ ಮತ್ತು ಮೂರನೆಯದನ್ನು ಅನಂತಮೂರ್ತಿಗೆ ಅರ್ಪಿಸಿದ್ದೆ. ಬರೆದಿದ್ದು ಕಡಿಮೆ ಎಂದು ನನಗನ್ನಿಸಿಲ್ಲ.
ಆದರೆ ಬರೆಯಲೇ ಬೇಕೆಂದು ಕುಳಿತು ಬೇರೆ ಬೇರೆ ಕಡೆ ಎದ್ದು ನಡೆದಿದ್ದು ನೆನಪಾಗುತ್ತದೆ. ಹಾಗೆ ತಿರುಗಿ ಬಂದು ಬರೆಯಲು ಕುಳಿತರೆ ಕತೆಗಳೇ ಓಡಿಹೋಗಿದ್ದವು. ಈಗಲೂ ಓಡಿ ಹೋಗಿರುವ ಮೂರ್ನಾಲ್ಕು ಕತೆಗಳ ಬರುವಿಕೆಗಾಗಿ ಕಾದಿದ್ದೇನೆ. ʻಪಂಪʼ, ʻಪುತಿನ.ʼ ʻಜಿಎಸ್ಸೆಸ್ʼ, ʻಅನಂತಮೂರ್ತಿʼ ಹೀಗೆ ಅನೇಕ ಸಾಹಿತಿಗಳ ಸಾಕ್ಷ್ಯಚಿತ್ರಗಳನ್ನು ಮಾಡಿದ್ದರಿಂದ ಸಾಹಿತ್ಯದ ಒಡನಾಟ ಹೆಚ್ಚು ಎಂದು ಹೇಳಬಹದು. ಅದೇ ರೀತಿ ಸಿನಿಮಾ, ರಾಜಕೀಯ ಮುಂತಾದ ಜನಗಳು.
1980ರಲ್ಲಿ ಗಾಂಧಿಬಜಾರ್‌ನ ಲಂಕೇಶ್‌ರ ರೂಂನಲ್ಲಿ ಜಾಣಗೆರೆ ಮತ್ತು ನಾನು ಕುಳಿತುಕೊಳ್ಳುತ್ತಿದ್ದೆವು. ಅಲ್ಲಿ ಕುಳಿತು ಧ್ಯಾನಿಸಿದ ಮತ್ತು ಬಯಸಿದ ಸಮಸಮಾಜದ ಕನಸು ಹೆಣೆಯುತ್ತಿದ್ದೆವು. ʻಲಂಕೇಶ್ ಪತ್ರಿಕೆʼ ಎಂಬುದೊಂದು ನಮ್ಮ ಮೂವರಿಂದ ಹಿಗ್ಗುತ್ತಾ ಹೋಗಿ ನಾಡಿನೆಲ್ಲಡೆ ಆವರಿಸಿಕೊಂಡಿತು. ಬರುಬರುತ್ತಾ ಲಂಕೇಶ್‌ರು ʻಉಪದೇಶʼ ಕ್ಕೆ ಜೋತು ಬಿದ್ದಿದ್ದು ಕಂಡು ಅಂದರೆ ಉದಾಹರಣೆಯಾಗಿ ・ಕುಡಿಯಬಾರದು, ಹಾದರ ಮಾಡಬಾರದು ಜೂಜು ಆಡಬಾರದು ಎಂದು ಬರೆದ ಲಂಕೇಶ್‌ರೇ ಅವುಗಳ ಹಿಂದೆ ಹೋಗುತ್ತಿದ್ದದ್ದನ್ನು ಕಂಡ ನಾವಿಬ್ಬರು ಅವರೊಬ್ಬರೆದುರಿಗೆ ಪ್ರತಿಭಟಿಸಿದೆವು.
ಅದುವರೆಗೆ ನಮ್ಮ ಮಾತನ್ನು ಕೇಳುತ್ತಿದ್ದ ಲಂಕೇಶ್ ನಮ್ಮ ಅಭಿಪ್ರಾಯಗಳಿಗೆ ಬೆಲೆ ಕೊಡದೇ ಇದ್ದಾಗ ಜಾಣಗೆರೆ ನಾನು ಹೊರಗಡೆ ಬಂದೆವು. ಹೀಗೆ ಜೊತೆ ಜೊತೆಯಲಿ ಒಂದೂವರೆ ವರ್ಷಕ್ಕೂ ಹೆಚ್ಚುಕಾಲ ಕೂತ ಗೆಳೆಯ ಜಾಣಗೆರೆ ಈ ʻಸಮಗ್ರ ಕತೆಗಳುʼ ತರಲು ಪ್ರೇರಣೆಯಾಗಿದ್ದಾರೆ.
ಜಿ.ಎಸ್. ಆಮೂರ, ತಿರುಮಲೇಶ್, ಮಲ್ಲೇಪುರಂ, ಟಿ.ಪಿ.ಅಶೋಕ್, ಜಿ.ಪಿ. ಬಸವರಾಜ್, ಮುಂತಾಗಿ ಅನೇಕರು ನನ್ನ ಕತೆಗಳ ಬಗ್ಗೆ ವಿಮರ್ಷೆ ಬರದಿದ್ದಾರೆ. ʻಸಮಗ್ರ ಕತೆಗಳುʼ ಮುನ್ನುಡಿಯಾಗಿ ಹೆಚ್.ಎಸ್. ರಾಘವೇಂದ್ರರಾವ್ ಬರೆದಿದ್ದಾರೆ. ನನ್ನ ಬಗ್ಗೆ ಒಳ್ಳೆಯದನ್ನು ಬಯಸಿದ ಅವರಿಗೆ ಕೃತಜ್ಞತೆಗಳು. ನನ್ನ ಚಿತ್ರ ರಚಿಸಿದ ಗೆಳೆಯ ಎಂ.ಎಸ್ ಮೂರ್ತಿ, ನಮ್ಮೂರಿನ ಕೋಟೆಯ ಮುಖಪುಟ ರಚಿಸಿದ ನನ್ನ ಮಗಳು ಚೆಲುವೆ ಮತ್ತು ಫೊಟೋ ತೆಗೆದ ವರ್ಷಿಣಿ ಅವರನ್ನು ಇಲ್ಲಿ ನೆನೆಯುತ್ತಾನೆ.
Published On - 2:50 pm, Sun, 10 July 22