Prasad Balipa: ಕಾಲಪುರುಷಂಗೆ ಗುಣಮ್ ಅಣಮ್ ಇಲ್ಲಂ ಗಡಾ; ಭಾಗವತ ಪ್ರಸಾದ ಬಲಿಪರಿಗೆ ನುಡಿನಮನ

Prasad Balipa Obituary: ಹಿರಿಯರಾದ ಶ್ರೀಧರ ಡಿಎಸ್ ಅವರು ಪ್ರಸಾದ ಬಲಿಪರ ನಿಧನಕ್ಕೆ ಸಂತಾಪ ಸೂಚಿಸಿ ಟಿವಿ9 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಪ್ರಸಾದ ಬಲಿಪರ ಬಗೆಗಿನ ಕೆಲವು ಘಟನೆಗಳನ್ನು ಅವರು ನೆನಪಿಸಿಕೊಂಡಿದ್ದು ಅದನ್ನು ಈ ಕೆಳಗೆ ನೀಡಲಾಗಿದೆ.

Prasad Balipa: ಕಾಲಪುರುಷಂಗೆ ಗುಣಮ್ ಅಣಮ್ ಇಲ್ಲಂ ಗಡಾ; ಭಾಗವತ ಪ್ರಸಾದ ಬಲಿಪರಿಗೆ ನುಡಿನಮನ
ಭಾಗವತ ಪ್ರಸಾದ ಬಲಿಪ (ಚಿತ್ರಕೃಪೆ: ನವೀನ್ ಕೃಷ್ಣ ಭಟ್, ಉಪ್ಪಿನಂಗಡಿ)
Follow us
ganapathi bhat
|

Updated on:Apr 12, 2022 | 11:48 AM

ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾಗವತ, ಯಕ್ಷಗಾನದ ಪರಂಪರೆಯ ಹಾಡುಗಾರಿಕೆಗೆ ಹೆಸರಾದ ಬಲಿಪ ಪ್ರಸಾದ ಭಾಗವತರು ಇಂದು (ಏಪ್ರಿಲ್ 11) ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಮೃತರು, ತಂದೆ ಬಲಿಪ ನಾರಾಯಣ ಭಾಗವತ, ಪತ್ನಿ, ಮೂವರು ಹೆಣ್ಣು ಮಕ್ಕಳು, ಬಂಧು ಬಳಗ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರ ಪುತ್ರರಾದ ಬಲಿಪ ಪ್ರಸಾದ್ ಭಾಗವತರು, ಕಟೀಲು ಎರಡನೆಯ ಮೇಳದ ಪ್ರಧಾನ ಭಾಗವತರಾಗಿದ್ದರು. ತಂದೆಯ ಬಳಿಕ ಬಲಿಪ ಶೈಲಿಯ ಭಾಗವತಿಕೆಯನ್ನು ಶೃದ್ಧೆ, ನಿಷ್ಠೆ, ಅಷ್ಟೇ ಪ್ರೀತಿಯಿಂದ ಹಾಡುವ ಮೂಲಕ ಅಭಿಮಾನಿಗಳ ಮನಗೆದ್ದಿದ್ದರು. ಬಲಿಪ ಪ್ರಸಾದ ಭಾಗವತರ ನಿಧನವು ನಿಜಾರ್ಥದಲ್ಲಿ ಯಕ್ಷಗಾನದ ಭಾಗವತಿಕೆ ಕ್ಷೇತ್ರಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ. ಪ್ರಸಾದ ಬಲಿಪರ ಅಸಂಖ್ಯ ಅಭಿಮಾನಿಗಳು ಭಾಗವತರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಯಕ್ಷಗಾನ ಕವಿ, ಕಾದಂಬರಿಕಾರ, ಅರ್ಥದಾರಿ, ಲೇಖಕರೂ ಆಗಿರುವ ಹಿರಿಯರಾದ ಶ್ರೀಧರ ಡಿಎಸ್ ಅವರು ಪ್ರಸಾದ ಬಲಿಪರ ನಿಧನಕ್ಕೆ ಸಂತಾಪ ಸೂಚಿಸಿ ಟಿವಿ9 ಕನ್ನಡ ಡಿಜಿಟಲ್ ಜೊತೆಗೆ ಮಾತನಾಡಿದ್ದಾರೆ. ಪ್ರಸಾದ ಬಲಿಪರ ಬಗೆಗಿನ ಕೆಲವು ಘಟನೆಗಳನ್ನು ಅವರು ನೆನಪಿಸಿಕೊಂಡಿದ್ದು ಅದನ್ನು ಈ ಕೆಳಗೆ ನೀಡಲಾಗಿದೆ.

***

ಮುದದಿಂದ ನಿನ್ನ ಕೊಂಡಾಡುವೆನು ಅನವರತ ಪದ್ಯದಲ್ಲಿ ‘ಮಹಶೇಷಗರಿದು’ ಎಂಬುದನ್ನು ಉಳಿದ ಎಲ್ಲಾ ಭಾಗವತರೂ ಹೇಳುತ್ತಾರೆ. ಆದರೆ, ಪ್ರಸಾದ್ ಬಲಿಪರು ಹೇಳುತ್ತಿರಲಿಲ್ಲ. ಅವರು ಕೇವಲ ‘ಶೇಷಗರಿದು’ ಎಂಬ ಪದ ಮಾತ್ರ ಹೇಳುತ್ತಿದ್ದರು. ನಾನು ಮೊದಲು ಇದನ್ನು ಗಮನಿಸಿದೆ. ನಂತರ, ಯಾಕೆ ಹೀಗೆ ಎಂದು ಕೇಳಿದಾಗ ಪ್ರಸಾದ ಬಲಿಪರು, ‘ನಮ್ಮ ತಂದೆಯವರು ಇದನ್ನು ಹೇಳಿಕೊಟ್ಟಿಲ್ಲ. ಹೇಳಬಾರದು ಹೇಳಿದ್ದಾರೆ’ ಎಂದು ತಿಳಿಸಿದ್ದರು. ನಾನು ಮತ್ತೆ ಹೋಗಿ ಸಭಾಲಕ್ಷಣದ ಕೃತಿ ತೆಗೆದು ನೋಡಿದಾಗ ಅದರ ಮುದ್ರಣದಲ್ಲಿಯೂ ಮಹಶೇಷಗರಿದು ಎಂಬ ಪದವೇ ಇತ್ತು. ಕೊನೆಗೆ ಅದರ ಮೂರೂ ಪದ್ಯಗಳನ್ನು ಗಮನಿಸುವಾಗ ಈ ಮಹ ಎಂಬ ಪದ ಹೆಚ್ಚಿಗೆ ಇದೆ. ಅಂದರೆ ಪದ್ಯಗಳ ಲಕ್ಷಣಗಳ ಪ್ರಕಾರ ಆ ಪದ ಇಲ್ಲ. ಬಲಿಪ ಪರಂಪರೆ ಎಂದರೆ ಅದು. ಖಚಿತ ಎಂದರೆ ಖಚಿತ!

ಬಲಿಪರಿಗೆ ಪಾರ್ತಿಸುಬ್ಬ ಪ್ರಶಸ್ತಿ ಬಂದಾಗ ಮಂಗಳೂರಿನ ಸುರತ್ಕಲ್​ನಲ್ಲಿ ಸುರತ್ಕಲ್ ವಾಸುದೇವ ರಾಯರು ಸನ್ಮಾನ ಮಾಡಿದ್ದರು. ಆ ದಿನ ನಡೆದ ತಾಳೆಮದ್ದಳೆ ಕಾರ್ಯಕ್ರಮಕ್ಕೆ ಪ್ರಸಾದ ಬಲಿಪರೇ ಭಾಗವತರು. ಅವರ ಅಭಿಮಾನಿ ಒಬ್ಬರು ಬಂದು ಪ್ರಸಾದರಿಗೆ ಬಂಗಾರದ ಉಂಗುರವನ್ನು ತೊಡಿಸಿ ಸನ್ಮಾನಿಸಬೇಕು ಎಂದು ಕಾದಿದ್ದರು. ಏನೇ ಮಾಡಿದರೂ ಅದಕ್ಕೆ ಪ್ರಸಾದ ಬಲಿಪರು ಒಪ್ಪಲಿಲ್ಲ. ನನ್ನ ತಂದೆಯವರ ಜೊತೆಗೆ ಕೂತು ನಾನು ಶಾಲು ಹಾಕಿಸಿಕೊಳ್ಳುವ ಪ್ರಾಯ ನನಗೆ ಆಗಲಿಲ್ಲ. ನಾನು ಅದಕ್ಕೆ ಯೋಗ್ಯನಲ್ಲ, ದಯವಿಟ್ಟು ಮಾಡಬೇಡಿ ಎಂದು ಹೇಳಿದ್ದರು. ಇದು ಅವರ ಗುರುಭಕ್ತಿ ಹಾಗೂ ತಂದೆಯ ಮೇಲಿನ ಭಕ್ತಿ, ಅಷ್ಟೂ ವಿನಯವಂತರು.

ನನ್ನದೇ ಪ್ರಸಂಗ ಭೃಗು ಶಾಪದ ಒಂದು ಸಾಲಿನ ಬಗ್ಗೆ ಅವರು ಬಂದು ಮಾತನಾಡಿದ್ದರು. ಒಂದು ಸಾಲನ್ನು ಹಾಡಲು ಸ್ವಲ್ಪ ಕಷ್ಟ ಆಗುತ್ತಿರುವ ಬಗ್ಗೆ ಹೇಳಿದ್ದರು. ಆ ಸಾಲು ‘ಶ್ವಾಪದರನಿಗ್ರಹಣದಾ ಕಲಾಪದುಪಕ್ರಮ’ ಎಂದಾಗಿತ್ತು. ಅಲ್ಲಿ ಗಣದ ಪ್ರಕಾರ ಸಾಲನ್ನು ಒಡೆಯುವಾಗ- ಶ್ವಾಪ| ದರನಿ| ಗ್ರಹಣ| ದಾಕ| ಲಾಪ| ದುಪಕ್ರಮ|| ಎಂದಾಗುತ್ತದೆ. ಆದರೆ, ಅದನ್ನು ಸಾಹಿತ್ಯದ ಪ್ರಕಾರ ಹಾಡಲು ಒಡೆಯುವಾಗ- ಶ್ವಾಪದರ ನಿಗ್ರಹಣದಾ ಹೀಗೆ ಆಗುತ್ತಿತ್ತು. ಆಗ ನಿ ಎಂಬುದು ಗುರು ಆಗಿ ಮುಂದಿನ ಗಣಕ್ಕೆ ಸೇರಿ ಒಂದು ಮಾತ್ರೆ ಹೆಚ್ಚಾಗುತ್ತಿತ್ತು. ಇದು ಭಾಗವತನಿಗೆ ತಪ್ಪುತ್ತದೆ. ಇದೆಲ್ಲಾ ಬಹಳ ಸೂಕ್ಷ್ಮ ವಿಚಾರಗಳು.

ನಂಬಲಾಗದು, ನಂಬದೆ ವಿಧಿಯಿಲ್ಲ. ಪ್ರಸಾದರೆ, ಬಲಿಪ ಪರಂಪರೆಯು ಸಮರ್ಥವಾಗಿ ನಿಮ್ಮಿಂದ ಮುಂದುವರಿಯುತ್ತದೆ ಎಂದು ಗಟ್ಟಿಯಾಗಿ ನಂಬಿದ್ದೆ. ತಾಳ, ಲಯಗಳ ಗಟ್ಟಿ ಹಿಡಿತ, ತಾಳ ಹಾಕದೇ ಹೀಗೇ ಹಾಡಿದರೂ ತಾಳ ಹಾಕುವ ನಡೆ. ಅರ್ಧ ಮಾತ್ರೆಯ ವ್ಯತ್ಯಾಸವೂ ತಿಳಿಯುವ ಸೂಕ್ಷ್ಮ. ಇಂದಿನ ತಲೆಮಾರಿನ ಶ್ರೇಷ್ಠ ಭಾಗವತರು. ಛೆ. ಯಕ್ಷಗಾನ ಬಡವಾಗಲು ಇದಕ್ಕಿಂತ ಮತ್ತೇನು. ದೇವರೇ ಒಳ್ಳೆಯ ಮರವನ್ನು ಹುಡುಕಿ ಹುಡುಕಿ ಕಡಿಯುವ ಕಟುಕನಾದೆಯಾ. ಮುದ್ದಣ ಅಂದನಲ್ಲ. ಕಾಲಪುರುಷಂಗೆ ಗುಣಮ್ ಅಣಮ್ ಇಲ್ಲಂ ಗಡಾ. ಹೋಗಿ ಮತ್ತೆ ಬನ್ನಿ ಬಲಿಪರೆ. ನಿಮ್ಮ ತಂದೆಯವರಿಗೆ ಪುತ್ರಶೋಕ ಬರಬಾರದಿತ್ತು. ಓಂ ಶಾಂತಿಃ.

-ಶ್ರೀಧರ ಡಿಎಸ್

ಇದನ್ನೂ ಓದಿ: ಯಕ್ಷಗಾನ ಕಲಿಕೆಗೆ ಹೊರ ರಾಜ್ಯದಿಂದ ಆಗಮಿಸಿದ ತಾರಾ ಬಳಗ; ಕರಾವಳಿ ಕಲೆಗೆ ಮನಸೋತ ಹಿಂದಿ ಕಿರುತೆರೆ ಕಲಾವಿದರು

ಇದನ್ನೂ ಓದಿ: New Book : ಅಚ್ಚಿಗೂ ಮೊದಲು ; ‘ಯಕ್ಷಗಾನ ಲೀಲಾವಳಿ’ ಪತ್ರಕರ್ತೆ ವಿದ್ಯಾರಶ್ಮಿ ಪೆಲತ್ತಡ್ಕ ನಿರೂಪಿಸಿದ ಲೀಲಾವತಿ ಬೈಪಾಡಿತ್ತಾಯ ಅವರ ಆತ್ಮಕಥನ ಬಿಡುಗಡೆ

Published On - 9:05 pm, Mon, 11 April 22