ಅರಿವು, ಅನುಭವ, ಅನುಭಾವಕ್ಕೆ ಸಿಗುವ ಒತ್ತು ಮತ್ತದನ್ನು ದಕ್ಕಿಸಿಕೊಡುವ ಬದುಕಿನ ಪರಿಪೂರ್ಣ ಗಳಿಗೆಗಳನ್ನು ‘ಅಂತರ್ಜಾಲವೆಂಬ ಮಾಹಿತಿಯ ಪ್ರವಾಹ’ದಿಂದ ನಮ್ಮದಾಗಿಸಿಕೊಳ್ಳಲು ಸಾಧ್ಯವೇ? ಅಂತೆಯೇ ನಾವು ಮತ್ತೆ ಮತ್ತೆ ಪುಸ್ತಕಗಳಿಗೆ ಮೊರೆ ಹೋಗುತ್ತೇವೆ, ಹೋಗುತ್ತಲಿದ್ದೇವೆ.
‘ವರ್ಷಾಂತ್ಯ ವಿಶೇಷ’ ಎಂದರೆ ಸಾಮಾನ್ಯವಾಗಿ ಆಯಾ ವರ್ಷದಲ್ಲಿ ಪ್ರಕಟವಾದ ಪುಸ್ತಕಗಳನ್ನಷ್ಟೇ ಪರಿಗಣಿಸುವ ಸಂಪ್ರದಾಯ ಮಾಧ್ಯಮ ಜಗತ್ತಿನಲ್ಲಿದೆ. ಆದರೆ 2020ರ ಈ ಇಡೀ ವರ್ಷ ನಾವು ಹೇಗೆ ಬದುಕಿದೆವು? ಇದು ನಮಗೆ ನಾವೇ ಪ್ರಾಮಾಣಿಕವಾಗಿ ಕೇಳಿಕೊಳ್ಳಬೇಕಾದ ಪ್ರಶ್ನೆ ಮತ್ತು ಉತ್ತರ. ಹೀಗಿರುವಾಗ ಮಾಧ್ಯಮವೂ ಸೇರಿದಂತೆ ಸಮಾಜವು ವರ್ತಮಾನಕ್ಕೆ ಸ್ಪಂದಿಸುವ, ಪ್ರತಿಕ್ರಿಯಿಸುವ ರೀತಿಯಲ್ಲಿ ವ್ಯತ್ಯಾಸವಾದರೇನೇ ಅದು ಸಹಜತೆ. ಆ ಸಹಜತೆಯ ಬುನಾದಿಯಲ್ಲಿಯೇ ‘tv9 ಕನ್ನಡ ಡಿಜಿಟಲ್, ವರ್ಷಾಂತ್ಯ ವಿಶೇಷ 2020; ಓದಿನಂಗಳ’ ಸರಣಿಯನ್ನು ಪ್ರಸ್ತುತ ಸನ್ನಿವೇಶಕ್ಕೆ ತಕ್ಕಂತೆ ರೂಪಿಸಲು ನಿರ್ಧರಿಸಿತು.
ಅಕ್ಷರನಂಟಿನೊಂದಿಗೆ ಹೃದಯ ಮೆದುಳನ್ನು ಬೆಸೆದುಕೊಂಡಿರುವ 45 ಹಿರಿಕಿರಿಯ ಸಹೃದಯ ಓದುಗರು, ಕಥೆಗಾರರು, ಕಾದಂಬರಿಕಾರರು, ವಿವಿಧ ಕ್ಷೇತ್ರದ ಲೇಖಕರನ್ನು ಈ ವರ್ಷ ಓದಿದ ಯಾವುದೇ ಪ್ರಕಾರದ, ಯಾವುದೇ ಭಾಷೆಯ, ಯಾವುದೇ ಹೊತ್ತಿನಲ್ಲೂ ಪ್ರಕಟವಾದ ಪುಸ್ತಕಗಳ ಪೈಕಿ ನಿಮ್ಮನ್ನು ಆಳವಾಗಿ ತಟ್ಟಿದ ಎರಡು ಪುಸ್ತಕಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಬಹುದೇ ಎಂದು ಕೇಳಲಾಯಿತು. ಈ ಸರಣಿಯಲ್ಲಿ ಪ್ರಕಟವಾದ 90 ಪುಸ್ತಕಗಳ ಸ್ಥೂಲನೋಟದೊಳಗೆ ವಿವಿಧ ಸಂಸ್ಕೃತಿ, ಸಂವೇದನೆ, ದೃಷ್ಟಿಕೋನ, ಅಭಿರುಚಿಯ ಭಾವ-ಭಿತ್ತಿ ನಮ್ಮನ್ನು ಆವರಿಸಿಕೊಂಡಿತು.
ಈ ಸರಣಿಯ ಭಾಗವಾದ, ಆ ಮೂಲಕ ಕನ್ನಡದ ಓದುಗರ ಜ್ಞಾನ ಮತ್ತು ಸಂವೇದನೆಯನ್ನು ವಿಸ್ತರಿಸಲು ಕಾರಣರಾದ ಎಲ್ಲರಿಗೂ ಧನ್ಯವಾದಗಳು. ಈ ಸರಣಿಯ ಎಲ್ಲಾ ಬರಹಗಳು ಈ ಲಿಂಕ್ನಲ್ಲಿ ಲಭ್ಯ. ನೀವೂ ಓದಿ, ನಿಮ್ಮಿಷ್ಟದವರಿಗೂ ಓದಿಸಿ. ಓದಲು ಲಿಂಕ್.. tv9kannada.com/tag/book-reading