ಕಣ್ಮರೆಯಾದ ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಹಿರಿಯ ಸಾಹಿತಿಯ ನಿಧನಕ್ಕೆ ಗಣ್ಯರ ಕಂಬನಿ

, ಕಣ್ಮರೆಯಾದ ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ಹಿರಿಯ ಸಾಹಿತಿಯ ನಿಧನಕ್ಕೆ ಗಣ್ಯರ ಕಂಬನಿ

ಇವ್ರು ನೋಡಲು ಮೃಧು ಸ್ವಭಾವ ಆದ್ರೆ, ಕಠೋರ ಮಾತು, ನಿಷ್ಠುರ ನಿಲುವುಗಳ ಮೂಲಕವೇ ಕನ್ನಡ ಭಾಷೆ ಮತ್ತು ಇತಿಹಾಸಕ್ಕಾಗಿ ಹೋರಾಡಿದವರು. ಒಂದು ರೀತಿ ಸಂಶೋಧಕರ ಸಂಶೋಧಕರಾಗಿ, ಕನ್ನಡ ಭಾಷೆ, ನಾಡು ನುಡಿಗೆ ತಮ್ಮ ಜೀವನವನ್ನೇ ಧಾರೆ ಎರೆದವರು ಚಿದಾನಂದ ಮೂರ್ತಿಗಳು. ಕಾಲನ ಓಟಕ್ಕೆ ಸಿಲುಕಿ, ಭೂಲೋಕದಲ್ಲಿ ಸಂಶೋಧನೆ ನಿಲ್ಲಿಸಿ, ದಿಗಂತದಲ್ಲೂ ಹೊಸ ಸಂಶೋಧನೆ ಮಾಡಲು ಹೊರಟು ಬಿಟ್ಟಿದ್ದಾರೆ.

ಸಂಶೋಧಕರ ಸಂಶೋಧಕ. ಇತಿಹಾಸ ಕೆದಕಿ ಚರಿತ್ರೆ ಸೃಷ್ಟಿಸಿದ ಚಿಂತಕ. ಕನ್ನಡ ಭಾಷೆಯ ಗರುಡ. ಹಂಪಿ ವಿಶ್ವವಿದ್ಯಾಲಯದ ಗಾರುಡಿಗ. ಶಾಸ್ತ್ರೀಯ ಭಾಷೆಗಾಗಿ ಹೋರಾಡಿದ ವಿಮರ್ಶಕ, ಕನ್ನಡ ಸಾಹಿತ್ಯ ಲೋಕದ ದಿಗ್ಗಜ ಡಾ. ಚಿದಾನಂದ ಮೂರ್ತಿ. ಹೌದು, ಬದುಕಿನುದ್ದಕ್ಕೂ ಇತಿಹಾಸದ ಅನ್ವೇಷಣೆಯಲ್ಲೇ ಆನಂದ ಕಂಡ ಚಿದಾನಂದ ಮೂರ್ತಿ ಇಹಲೋಕ ತ್ಯಜಿಸಿ ಚಿರನಿದ್ರೆಗೆ ಜಾರಿದ್ದಾರೆ.

ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಚಿದಾನಂದ ಮೂರ್ತಿ ಅವ್ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೇ ನಿನ್ನೆ ಕೊನೆಯುಸಿರೆಳೆದಿದ್ದಾರೆ. ನಂತ್ರ ಆರ್​​​​ಪಿಸಿ ಲೇಔಟ್​​​​​ನಲ್ಲಿ ಸ್ವಗೃಹಕ್ಕೆ ಚಿಮೂ ಅವ್ರ ಮೃತದೇಹ ತರಲಾಯ್ತು. ಸಂಬಂಧಿಕರು ಸೇರಿದಂತೆ ನೂರಾರು ಸಾರ್ವಜನಿಕರು ಹಿರಿಯ ಸಾಹಿತಿಯ ಅಂತಿಮ ದರ್ಶನ ಪಡೆದ್ರು. ಇದೇ ವೇಳೆ ಮಾತನಾಡಿದ ಸುತ್ತೂರು ಶ್ರೀಗಳು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಚಿಮೂ ಅವ್ರ ಕೊಡುಗೆ ವಿಶೇಷವಾದದ್ದು ಅಂದ್ರು.

ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಚಿಮೂ ನಿವಾಸಕ್ಕೆ ತೆರಳಿ ಅಂತಿಮ ದರ್ಶನ ಪಡೆದ್ರು. ಇದೇ ವೇಳೆ ಮಾತನಾಡಿದ ಸಿದ್ದರಾಮಯ್ಯ, ಚಿದಾನಂದಮೂರ್ತಿ ಅಗಲಿಕೆಯಿಂದ ಸಾಹಿತ್ಯ ಕ್ಷೇತ್ರಕ್ಕೆ ನಷ್ಟವಾಗಿದೆ ಅಂದ್ರು.

ಇನ್ನು, ರಾಜ್ಯೋತ್ಸವ, ಪಂಪ ಪ್ರಶಸ್ತಿ ಪುರಸ್ಕೃತ ಚಿಮೂ ಅವರ ಅಗಲಿಕೆಗೆ ಪ್ರಧಾನಿ ಮೋದಿ ಕೂಡ ಟ್ವೀಟ್​​​​ನಲ್ಲಿ ಸಂತಾಪ ಸೂಚಿಸಿದ್ರು.. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಚಿಮೂ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು.

ದಾವಣಗೆರೆಯ ಚನ್ನಗಿರಿ ತಾಲೂಕಿನ ಹಿರೇಕೊಗಲೂರಿನಲ್ಲಿ ಜನಿಸಿದ ಚಿಮೂ, ಮೈಸೂರು ವಿವಿಯಲ್ಲಿ ಉನ್ನತ ವ್ಯಾಸಂಗ ಮಾಡಿದ್ರು.. ಸಂಶೋಧನ ಪ್ರಬಂಧಗಳ ಮೂಲಕ ಸಂಸ್ಕೃತಿ ಉಳಿವಿಕೆಗಾಗಿ ದುಡಿದ ಜೀವಕ್ಕೆ, ಹುಟ್ಟೂರಿನಲ್ಲೂ ಸಂತಾಪ ಸೂಚಿಸಲಾಯ್ತು.. ಗ್ರಾಮದ ಬಸ್ ನಿಲ್ದಾಣದ ವೃತ್ತದಲ್ಲಿ ಸೇರಿದ ಜನರೆಲ್ಲ ಚಿಮೂಗೆ ಶ್ರದ್ಧಾಂಜಲಿ ಕೋರಿದ್ರು. ಹಾಗೇ, ಹುಟ್ಟೂರಿನಲ್ಲೇ ಚಿಮೂ ಅಂತ್ಯಕ್ರಿಯೆಗೆ ಒತ್ತಾಯಿಸಿದ್ರು.

ಇನ್ನು, 88 ವರ್ಷದ ವಿಮರ್ಶಕ ‘ಚಿಮೂ’ ಕಾವ್ಯನಾಮದಿಂದಲೇ ಖ್ಯಾತರಾಗಿದ್ರು. ಸುಮ್ಮನಹಳ್ಳಿ ಚಿತಾಗಾರದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆಯಂತೆ. ಬದುಕಿನುದ್ದಕ್ಕೂ ತನ್ನದೇ ವಿಶಿಷ್ಟ ಸಿದ್ಧಾಂತಗಳಲ್ಲಿ ಬಾಳಿದ್ದರಿಂದ, ಯಾವುದೇ ಪೂಜೆ ಪುನಸ್ಕಾರಗಳು ಇರಲ್ಲ ಅಂತಾ ಅವರ ಪುತ್ರ ವಿನಯ್ ಹೇಳಿದ್ದಾರೆ.

ವೀರಶೈವ ಧರ್ಮ, ಪಾಂಡಿತ್ಯ ರಸ, ಬಸವಣ್ಣ, ಹೊಸತು ಹೊಸತು ಸೇರಿ ಹಲವು ಪುಸ್ತಕಗಳನ್ನೂ ರಚಿಸಿದ್ದು, ರಾಜ್ಯೋತ್ಸವ ಪ್ರಶಸ್ತಿ, ಕೇಂದ್ರ ಅಕಾಡೆಮಿ ಸಾಹಿತ್ಯ ಪ್ರಶಸ್ತಿ, ಪಂಪ ಪ್ರಶಸ್ತಿ ಸೇರಿ ಹತ್ತಾರು ಮುಕುಟಗಳು ಅವರ ಮುಡಿಗೇರಿವೆ. ಒಟ್ನಲ್ಲಿ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನದ ಮೂಲಕ ಸಂಚಲನ ಮೂಡಿಸಿದ್ದ ವಿದ್ವಾಂಸ ಇನ್ನು ನೆನಪು ಮಾತ್ರ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!