ಸಚಿವರ ಸಾಮೂಹಿಕ ರಾಜೀನಾಮೆ: ಬೀಸೋ ದೊಣ್ಣೆಯಿಂದ ಕಮಲ್ ನಾಥ್ ಸರ್ಕಾರ ಪಾರು!

ಭೋಪಾಲ್: ಮಧ್ಯಪ್ರದೇಶ ಸರ್ಕಾರ ನಡುಗುತ್ತಿದೆ. ದೇಶದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿರುವ ಬೆರಳೆಣಿಕೆಯಷ್ಟು ರಾಜ್ಯಗಳ ಪೈಕಿ ಮಧ್ಯಪ್ರದೇಶವೂ ಒಂದು. ಆದ್ರೆ ಆಂತರಿಕ ಕಲಹದ ಪರಿಣಾಮ ಸರ್ಕಾರ ಬೀಳುವ ಹಂತ ತಲುಪಿದೆ. ಇನ್ನು ಕಮಲ್ ನಾಥ್ ತಮ್ಮ ಸರ್ಕಾರ ಉಳಿಸಿಕೊಳ್ಳಲು ಶತಾಯಗತಾಯ ಹೋರಾಟ ನಡೆಸುತ್ತಿದ್ದಾರೆ.

ದೇಶದ ಭಾಗಶಃ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಕಾಂಗ್ರೆಸ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರಕ್ಕೆ ಸೋಲುಣಿಸಿ, ಬಹುಮತ ಪಡೆಯಲಾಗದಿದ್ರು ಸರ್ಕಾರ ರಚಿಸಿದ್ದ ಕಮಲ್ ನಾಥ್​ಗೆ ನಡುಕ ಶುರುವಾಗಿದೆ. ಇನ್ನೇನು ಸರ್ಕಾರ ಬಿದ್ದೇ ಹೋಗುತ್ತೆ ಅನ್ನುವ ಹೊತ್ತಲ್ಲಿ, ಕಮಲ್ ನೆರವಿಗೆ ಬಂದ ಸಚಿವರು ಸಾಮೂಹಿಕವಾಗಿ ರಾಜೀನಾಮೆ ನೀಡಿ, ಸರ್ಕಾರ ಉಳಿಸಲು ಸಾಥ್ ನೀಡಿದ್ದಾರೆ.

ಮುನಿಸಿಕೊಂಡವರ ಮನವೊಲಿಸಲು ಕಮಲ್ ನಾಥ್ ಸರ್ಕಸ್..! 
ಮಧ್ಯಪ್ರದೇಶದಲ್ಲಿ ಇಷ್ಟೆಲ್ಲಾ ಸೀನ್ ಕ್ರಿಯೇಟ್ ಆಗಲು ಕಾರಣ ಜ್ಯೋತಿರಾದಿತ್ಯ ಌಂಡ್ ಟೀಂ. ಸಿಂಧಿಯಾ ನೇತೃತ್ವದ ತಂಡ ಕಮಲ್ ನಾಥ್ ಕೆಳಗಿಳಿಸಲು ಪ್ರಯತ್ನಿಸುತ್ತಲೇ ಇದೆ. ಸರ್ಕಾರ ರಚಿಸಿದಾಗಿನಿಂದ್ಲೂ ಇದೇ ಪರಿಸ್ಥಿತಿ ಮುಂದುವರಿದಿದೆ. ಆದ್ರೆ ಈಗ ಪರಿಸ್ಥಿತಿ ತೀರಾ ಬಿಗಡಾಯಿಸಿದೆ. ಬೆಂಬಲಿಗರ ಜತೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಬೆಂಗಳೂರು ಸೇರಿದ್ದಾರೆ. ಮಧ್ಯಪ್ರದೇಶದ 6 ಸಚಿವರು ಸೇರಿ 17 ಕಾಂಗ್ರೆಸ್ ಶಾಸಕರು ಬೆಂಗಳೂರು ತಲುಪಿದ್ದಾರೆ.

ಸಂಪುಟ ಪುನಾರಚನೆಯಿಂದ ದೂರವಾಗುತ್ತಾ ಮುನಿಸು..?
ಇದ್ರಿಂದ ಕಮಲ್ ಸರ್ಕಾರಕ್ಕೆ ಎಳ್ಳುನೀರು ಗ್ಯಾರಂಟಿ ಅನ್ನೋ ಹೊತ್ತಲ್ಲೇ ಕಮಲ್ ಎಚ್ಚೆತ್ತಿದ್ದಾರೆ. ಮುನಿಸಿಕೊಂಡವರ ಮನವೊಲಿಕೆಗೆ ಕಮಲ್ ನಾಥ್ ಮುಂದಾಗಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕಮಲ್ ನೆರವಿಗೆ ಆಗಮಿಸಿರುವ ಸಚಿವರು, ಸಾಮೂಹಿಕ ರಾಜೀನಾಮೆ ನೀಡಿ ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. 3 ದಿನದ ಒಳಗಾಗಿ ಸಂಪುಟ ಪುನಾರಚನೆಯಾಗುವ ಸಾಧ್ಯತೆಯಿದ್ದು, ಎಲ್ಲಾ ಬೆಳವಣಿಗೆಗಳ ಕುರಿತು ಸೋನಿಯಾ ಮತ್ತು ರಾಹುಲ್ ಗಾಂಧಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಇಂದು ನಿರ್ಧಾರವಾಗುತ್ತಾ ಕಮಲ್ ಸರ್ಕಾರದ ಹಣೆಬರಹ..?
ಅಂದಹಾಗೆ ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ ಇಂದು ಮಧ್ಯಪ್ರದೇಶ ಕಾಂಗ್ರೆಸ್​ನ ಶಾಸಕಾಂಗ ಸಭೆ ನಡೆಯಲಿದೆ. ಶಾಸಕಾಂಗ ಸಭೆಯಲ್ಲಿ ಕಮಲ್ ನಾಥ್ ಕೈಗೊಳ್ಳಲಿರುವ ನಿರ್ಧಾರ ಹಾಗೂ ಇದಕ್ಕೆ ಶಾಸಕರು ನೀಡಲಿರುವ ಬೆಂಬಲ, ಮಧ್ಯಪ್ರದೇಶ ಸರ್ಕಾರದ ಭವಿಷ್ಯ ನಿರ್ಧರಿಸಲಿದೆ. ಮತ್ತೊಂದ್ಕಡೆ ಇಷ್ಟೆಲ್ಲಾ ಸೀನ್ ಕ್ರಿಯೇಟ್ ಆಗಲು ಬಿಜೆಪಿ ಕಾರಣ ಅಂತಾ ‘ಕೈ’ ನಾಯಕರು ಆರೋಪಿಸುತ್ತಿದ್ದು, ಇದನ್ನ ಕಮಲ ಪಾಳಯ ನಿರಾಕರಿಸಿದೆ.

ಒಟ್ನಲ್ಲಿ ಹಾಗೋ, ಹೀಗೋ ಸರ್ಕಾರ ರಚಿಸಿದ್ದ ಕಾಂಗ್ರೆಸ್​ಗೆ ಮಧ್ಯಪ್ರದೇಶದಲ್ಲೂ ಕಂಟಕ ಎದುರಾಗಿದೆ. ಇದು ಕಾಂಗ್ರೆಸ್​ನ ಭವಿಷ್ಯವನ್ನ ಮತ್ತಷ್ಟು ಮಂಕಾಗಿಸಿದ್ದು ಕಾಂಗ್ರೆಸ್ ಹೈಕಮಾಂಡ್​ಗೂ ಇದು ದೊಡ್ಡ ತಲೆನೋವು ತಂದಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!