ಸಂಕ್ರಾಂತಿ ಸಂಭ್ರಮ | ಎಳ್ಳು-ಬೆಲ್ಲ ತಗೊಳಿ, ಎಳ್ಳಿನಂಗೆ ಪಟಪಟಾ ಅಂತ-ಬೆಲ್ಲದಂಥ ಸಿಹಿಯಾದ ಮಾತನ್ನೇ ಆಡಿ

ಎಂತಹಾ ಜಗಳ ವೈಷಮ್ಯವಿದ್ದರೂ ಮನೆ ಬಾಗಿಲಿಗೆ ಮಕ್ಕಳೋ ಅಥವಾ ಇನ್ಯಾರಾದರೂ ಹಬ್ಬದ ದಿನ ಬಂದರೆ ಖಂಡಿತಾ ಅದನ್ನು ಮರೆತು ಮತ್ತೆ ಒಂದಾಗುವ ಅವಕಾಶಗಳಿರುತ್ತವೆ. ಈ ಎಲ್ಲಾ ಕಾರಣಗಳಿಂದ ಸಂಕ್ರಾಂತಿ ಹಬ್ಬವು ಒಂದು ವಿಶೇಷವಾದ ಹಬ್ಬ. ಏಕತೆಯನ್ನು ಸಾರುವ ಹಾಗೂ ಉಳಿಸಿಕೊಳ್ಳುವ ಹಬ್ಬ.

  • TV9 Web Team
  • Published On - 11:58 AM, 14 Jan 2021
ಎಳ್ಳು-ಬೆಲ್ಲ ಹಂಚುವುದು ಸಂಕ್ರಾಂತಿಯ ಪ್ರಮುಖ ಆಚರಣೆ

ಸಂಕ್ರಾಂತಿ ಹಬ್ಬವನ್ನು ಹಳ್ಳಿಗಳಲ್ಲಿ, ಕೃಷಿ ಲೋಕದಲ್ಲಿ, ರೈತ ಬಂಧುಗಳು ಆಚರಿಸುವ ರೀತಿಯೇ ಒಂದು. ಆದರೆ ಪೇಟೆ, ನಗರಗಳಲ್ಲಿ ಆಚರಿಸುವ ರೀತಿ ಮತ್ತೊಂದು ತರಹ. ಪೇಟೆ, ಶಹರಗಳಲ್ಲಿ ಇಂದು ಎಲ್ಲವೂ ದುಡ್ಡು ಕೊಟ್ಟರೆ ಸಾಕು ಸಿಗುತ್ತದೆ. ಆದರೆ ನಾವು ಮನೆಯಲ್ಲಿಯೇ ಹಬ್ಬ, ಅದಕ್ಕೆ ಬೇಕಾದ ಕೆಲಸಗಳನ್ನು ಮಾಡುವುದರಲ್ಲಿ ಇರುವ ಖುಷಿ ಇನ್ನೆಲ್ಲೂ ಸಿಗಲಾರದು ಎನ್ನುತ್ತಾರೆ ಗೃಹಿಣಿ ವೀಣಾ ಶಾನುಭೋಗ್. ಸಂಕ್ರಾಂತಿ ಹಬ್ಬದ ಎಳ್ಳು-ಬೆಲ್ಲ ಸಂಭ್ರಮವನ್ನು ಅವರು ವಿವರಿಸುವುದು ಹೀಗೆ..

ಸಂಕ್ರಾಂತಿಯ ಸಂಭ್ರಮಕ್ಕೆ ಎಳ್ಳು-ಬೆಲ್ಲ ಮನೆಯಲ್ಲಿಯೇ ಮಾಡಬಹುದು. ಅದೇನು ಕಷ್ಟದ ಕೆಲಸವಲ್ಲ. ಸುಮಾರು 50-60 ಮನೆಗಳಿಗೆ ಸ್ವಲ್ಪ ಹಂಚಲು ಸಾಕಾಗುವಷ್ಟು ಎಳ್ಳು ಬೆಲ್ಲ ಹೀಗೆ ತಯಾರಿಸಬಹುದು. 250 ಗ್ರಾಮ್ ಕರಿಎಳ್ಳು ಅಥವಾ ಬಿಳಿಎಳ್ಳು, 250 ಗ್ರಾಮ್ ಹುರಿಕಡಲೆ (ಪುಟಾಣಿ), 500 ಗ್ರಾಮ್ ನೆಲಕಡಲೆ, 300 ಗ್ರಾಂ ಬೆಲ್ಲ, 1 ಕೊಬ್ಬರಿ ಗಿಟಕು.

ಮಕ್ಕಳು ತಿನ್ನುವಾಗ ಅವುಗಳಲ್ಲಿ ತಮಗೆ ಬೇಕಾದದ್ದನ್ನು ಮಾತ್ರ ಹೆಕ್ಕಿ ತಿನ್ನುತ್ತಾರೆ. ಬೆಲ್ಲ, ನೆಲಕಡಲೆ, ಕೊಬ್ಬರಿ, ಸಕ್ಕರೆ ಮಿಠಾಯಿಗಳನ್ನು ಮಾತ್ರ ಹೆಕ್ಕಿ ಹೆಕ್ಕಿ ತಿಂದು ಎಳ್ಳನ್ನು ಮಾತ್ರ ಉಳಿಸುವುದೂ ಇದೆ. ಹಾಗಾಗಿ ಎಳ್ಳು ಬೆಲ್ಲಕ್ಕೆ ಬಳಸುವ ಸಾಮಾಗ್ರಿಗಳ ಅನುಪಾತದಲ್ಲಿ ವ್ಯತ್ಯಾಸವಾದರೆ ಏನೂ ಸಮಸ್ಯೆಯಿಲ್ಲ.

ಎಳ್ಳನ್ನು ಶುದ್ಧ ಮಾಡಿ (ಶುದ್ಧ ಮಾಡಿದ ಎಳ್ಳು ಸಿಗುತ್ತದೆ), ಬಾಣಲೆಯಲ್ಲಿ ಹಾಕಿ, ಸ್ವಲ್ಪ ಹುರಿದು, ಆರಲು ಅಗಲವಾದ ತಟ್ಟೆಯಲ್ಲೋ ಮೊರದಲ್ಲೋ ಹಾಕಬೇಕು. ನೆಲಕಡಲೆಯನ್ನೂ ಹುರಿದು ಕೈಯಲ್ಲಿಯೇ ತಿಕ್ಕಿದರೆ ಸಿಪ್ಪೆ ಸಲೀಸಾಗಿ ಹೋಗುತ್ತವೆ. ನೆಲಕಡಲೆಯ ಬೇಳೆಗಳು ಸಿಗುತ್ತವೆ. ಜೊತೆಗೆ, ಕೊಬ್ಬರಿ ಗಿಟಕಿನ ಕಪ್ಪು ಸಿಪ್ಪೆಯನ್ನು ಕೆರೆದು ತೆಗೆದು, ಸಣ್ಣಸಣ್ಣ ತುಂಡುಗಳನ್ನಾಗಿ ಹೆಚ್ಚಬೇಕು. ಬೆಲ್ಲವನ್ನೂ ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ ಹುರಿಕಡಲೆಯನ್ನೂ ಸೇರಿಸಿ ಮಿಶ್ರಣ ಮಾಡಿದರೆ ಆಯಿತು.

ಸಕ್ಕರೆ ಅಚ್ಚುಗಳನ್ನು ಮಾಡಲು ಬರುವವರು ಅದನ್ನೂ ಮಾಡುತ್ತಾರೆ. ಕಡ್ಲೆ, ಹುರಿಕಡ್ಲೆಯ ಸಕ್ಕರೆ ಬತ್ತಾಸುಗಳನ್ನೂ ಮಾಡಿ ಅದರ ಜೊತೆ ಹಾಕುವರು ಹಾಕಬಹುದು. ಅಥವಾ ಎಳ್ಳು-ಬೆಲ್ಲ ಆಕರ್ಷಕವಾಗಿ ಕಾಣಲು, ಅಂಗಡಿಯಿಂದ ತಂದ ಬಣ್ಣಬಣ್ಣದ ಜೀರಿಗೆ ಪೆಪ್ಪರ್​ಮೆಂಟನ್ನು ಸ್ವಲ್ಪ ಸೇರಿಸಿದರೆ ಆಯಿತು.

ಸಂಕ್ರಾಂತಿ ಹಬ್ಬದ ದಿನ ಹೀಗೆ ತಯಾರಿಸಿದ ಎಳ್ಳು-ಬೆಲ್ಲವನ್ನು ದೇವರ ಮುಂದೆ ಇಟ್ಟು, ಜೊತೆಗೆ ಕಬ್ಬು, ಬಾಳೆಹಣ್ಣು ಇಟ್ಟು ಪೂಜೆ ಮಾಡುವುದು ವಾಡಿಕೆ. ಸಿಹಿ ಪೊಂಗಲ್ ಮತ್ತು ಖಾರ ಪೊಂಗಲ್ ಮಾಡುವುದು ಸಂಪ್ರದಾಯ.

ಮಕ್ಕಳ ಹಬ್ಬ ಸಂಕ್ರಾಂತಿ
ಸಂಕ್ರಾಂತಿಯ ದಿನ ಮಕ್ಕಳಿಗೆ ಎಳ್ಳೆಣ್ಣೆ ಹಚ್ಚಿ ಅಭ್ಯಂಜನ ಮಾಡಿಸುವರು. ನಂತರ ಮಕ್ಕಳನ್ನು ಕೂರಿಸಿ ಆರತಿ ಮಾಡುವುದು. ಗೋವುಗಳಿದ್ದರೆ ಗೋವುಗಳಿಗೆ ಎತ್ತಿದ ಆರತಿಯನ್ನೇ ಗೋವುಗಳ ಆಶೀರ್ವಾದ ಮಕ್ಕಳಿಗೆ ಸಿಗುತ್ತದೆ ಎಂಬ ನಂಬಿಕೆಯಿಂದ ಮಕ್ಕಳಿಗೂ ಎತ್ತುತ್ತಾರೆ. ಸಂಜೆಯಾಗುತ್ತಲೇ ಗಂಡು ಮಕ್ಕಳಿಗೂ ಹೆಣ್ಣು ಮಕ್ಕಳಿಗೂ ಪಾರಂಪರಿಕ ಉಡುಗೆ ತೊಡುಗೆಯನ್ನು ತೊಡಿಸಿ, ಅಲಂಕಾರ ಮಾಡುತ್ತಾರೆ. ಸ್ನೇಹಿತರ ಜೊತೆ ಗುಂಪಾಗಿ ಸೇರಿ ಸಮೀಪವಿರುವ ಸ್ನೇಹಿತರ, ಆತ್ಮೀಯರ, ಬಂಧುಗಳ ಮನೆಗೆ ಎಳ್ಳು ಬೀರಲು ಹೋಗುವುದೇ ನೋಡಲು ಚಂದ.

ಎಳ್ಳು ಬೀರುವುದು ಎಂದರೆ ಪುಟ್ಟಪುಟ್ಟ ಸ್ಟೀಲ್ ಡಬ್ಬಿ ಅಥವಾ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಒಂದೆರಡು ಚಮಚದಷ್ಟು ಎಳ್ಳು, ಬೆಲ್ಲ, ಹುರಿಗಡಲೆ, ನೆಲಗಡಲೆ, ಕೊಬ್ಬರಿಯ ಮಿಶ್ರಣವನ್ನು ಹಾಕಿ (ಜೊತೆಗೆ ಮಾಡಿದ್ದರೆ ಒಂದು ಸಕ್ಕರೆ ಅಚ್ಚಿನ ಬೊಂಬೆ) ಅದರ ಜೊತೆ ಒಂದು ಪುಟ್ಟ ಕಬ್ಬಿನ ತುಂಡು, ಒಂದು ಬಾಳೆಹಣ್ಣನ್ನು (ಬೇರೆ ಹಣ್ಣುಗಳೂ ಆಗುತ್ತವೆ) ಒಂದು ಹರಿವಾಣದಲ್ಲಿಟ್ಟು ಕೊಡುತ್ತಾರೆ.

ಹೀಗೆ ಕೊಡುವಾಗ, ‘ಎಳ್ಳು ಬೆಲ್ಲ ತಗೊಂಡು ಎಳ್ಳಿನಂಗೆ ಪಟಪಟಾ ಅಂತ, ಬೆಲ್ಲದಂತಹ ಸಿಹಿಯಾದ ಮಾತನ್ನೇ ಆಡಿ’ ಎಂದು ಹೇಳುತ್ತಾರೆ. ಹಿರಿಯರ ಕಾಲಿಗೆ ಅಡ್ಡಬಿದ್ದು ನಮಿಸಿ ಆಶೀರ್ವಾದ ಕೇಳಬೇಕು. ಮನೆಗಳಲ್ಲಿರುವ ಹಿರಿಯರೂ ತಮ್ಮ ಮನೆಯ ಎಳ್ಳು-ಬೆಲ್ಲದ ಮಿಶ್ರಣವನ್ನು ಕೊಡುತ್ತಾರೆ. ಮಕ್ಕಳಿಗೆ ಉಪಯೋಗವಾಗುವ ಸಣ್ಣ ಪುಟ್ಟ ಉಡುಗೊರೆ (ಪೆನ್ಸಿಲ್, ರಬ್ಬರ್ ಬಳಪದ ಕಡ್ಡಿ, ರಿಬ್ಬನ್ನು, ಬಳೆ) ಕೊಡುತ್ತಾರೆ. ಮಕ್ಕಳು ಜಾತಿ ಮತ, ಧರ್ಮಗಳ ಭೇದವಿಲ್ಲದೆ ಆತ್ಮೀಯರೆಲ್ಲರ ಮನೆಗೆ ಹೋಗಿ ಎಳ್ಳು ಬೆಲ್ಲ ಕೊಡುವುದೇ ಒಂದು ವಿಶೇಷ.

ಮಕ್ಕಳು ಎಳ್ಳು-ಬೆಲ್ಲ ಹಂಚಲು ಹೋಗುವಾಗ ಇದ್ದ ಸಂಭ್ರಮಕ್ಕಿಂತಲೂ ಹಿಂತಿರುಗಿ ಬರುವಾಗ ದುಪ್ಪಟ್ಟು ಸಂಭ್ರಮದಲ್ಲಿ ಬರುವುದುಂಟು. ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬದ ಆಚರಣೆಗಳಿಗೆ, ಭೌಗೋಳಿಕ ಹಾಗೂ ವೈಜ್ಞಾನಿಕ ಕಾರಣಗಳು ಆಯಾ ಪ್ರದೇಶಗಳಿಗೂ, ಹವಾಮಾನಕ್ಕೂ ಹೊಂದಿಕೊಂಡು ಇರುತ್ತದೆ. ಅಂತೆಯೇ ಸಂಕ್ರಾಂತಿ ಹಬ್ಬದ ದಿನ ಈ ಎಳ್ಳು-ಬೆಲ್ಲ ಬೀರುವುದು. ಆತ್ಮೀಯರ, ಸ್ನೇಹಿತರ ಮನೆಗಳಿಗೆ ಹೋಗಿ ಹಂಚುವುದು ವಿಶೇಷ.

ಯಾಕೆಂದರೆ, ಸೂರ್ಯನು ತನ್ನ ಪಥದಲ್ಲಿ ದಕ್ಷಿಣದಿಂದ ಉತ್ತರಕ್ಕೆ ಚಲಿಸುತ್ತಾನೆ. ಋತುಮಾನದ ಜೊತೆ ಹವಾಮಾನ ಬದಲಾಗುತ್ತದೆ. ಹವಾಮಾನದ ಕಾರಣ ಮನುಷ್ಯನ ದೇಹದೊಳಗೂ, ಹೊರಗೂ ಕೆಲವು ಬದಲಾವಣೆಗಳು ಆಗುವುದು ಸಹಜ. ಮಾಘದ ಚಳಿಯ ಕಾರಣ ಚರ್ಮವು ಒಣಗುತ್ತದೆ, ಸುಕ್ಕುಗಟ್ಟುತ್ತದೆ, ಕಾಂತಿಹೀನವಾಗುತ್ತದೆ. ಪಚನ ಶಕ್ತಿಯು ಕಡಿಮೆಯಾಗುತ್ತದೆ. ಎದೆಯುರಿ, ದೇಹದಲ್ಲಿ ಜಡತ್ವ ಉಂಟಾಗುತ್ತದೆ. ಜಡತ್ವದಿಂದ ರಕ್ತಚಲನೆಯಲ್ಲಿ ವ್ಯತ್ಯಾಸ, ರಕ್ತಹೀನತೆ, ಪ್ರೋಟೀನಿನ ಅಂಶ, ಕಬ್ಬಿಣದ ಅಂಶ ಕಡಿಮೆಯಾಗುತ್ತದೆ. ಜಡತ್ವದಿಂದ ಶರೀರವೂ ಸ್ಥೂಲವಾಗಬಹುದು. ಮೂಳೆಗಳ ಸವೆತ ಇವೆಲ್ಲವೂ ಸಾಮಾನ್ಯವಾಗಿ ಆಗುವಂತವು.

ಎಳ್ಳಿನಲ್ಲಿರುವ ಚರ್ಮ ಸಂಬಂಧಿತ ಸಮಸ್ಯೆಗಳ ವಿರುದ್ಧ ಹೋರಾಡುವ ಗುಣ, ಎಳ್ಳು, ಬೆಲ್ಲ, ಹುರಿಗಡಲೆ, ನೆಲಗಡಲೆ, ಕೊಬ್ಬರಿಯಲ್ಲಿರುವ ಔಷಧೀಯ ಅಂಶಗಳು ದೇಹದ ತೂಕದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಚಳಿಗೆ ತಂಪಾದ ದೇಹದಲ್ಲಿ ಬಿಸಿಯನ್ನು ಉತ್ಪತ್ತಿ ಮಾಡುತ್ತದೆ. ಮೂಳೆಗಳನ್ನು ಸದೃಢವಾಗಿಸಿ ಮೂಳೆ ಸವೆತವನ್ನು ತಡೆಗಟ್ಟುತ್ತದೆ. ಸಾಕಷ್ಟು ಪ್ರೋಟೀನ್ ಮತ್ತು ಕಬ್ಬಿಣದ ಅಂಶಗಳೂ ಇರುವ ಕಾರಣ ರಕ್ತಹೀನತೆಯನ್ನು ದೂರ ಮಾಡಿ, ರಕ್ತಶುದ್ಧಿಯಾಗಿ ಆರೋಗ್ಯವಂತ ಮನುಷ್ಯನನ್ನಾಗಿ ಮಾಡುವಲ್ಲಿ ಉಪಯುಕ್ತವಾಗುತ್ತದೆ. ಕೊಲೆಸ್ಟರಾಲ್‌ ನಿಯಂತ್ರಿಸುತ್ತದೆ. ಆ್ಯಂಟಿ ಅ್ಯಕ್ಸಿಡೆಂಟ್ ಆಗಿರುವ ಕಾರಣ ಪಚನಕ್ರಿಯೆಯೂ ಚೆನ್ನಾಗಿ ಆಗಿ ದೇಹದ ಜಡತ್ವವೂ ಮಾಯವಾಗುತ್ತದೆ.

ಭೌಗೋಳಿಕವಾಗಿ ಸೂರ್ಯನ ಚಲನೆ ಮತ್ತು ಬೆಳೆದ ಬೆಳೆಯ ಸಂತೋಷಕ್ಕೂ, ಶ್ರಮಪಟ್ಟ ದೇಹಕ್ಕೆ ಹಬ್ಬದ ವಾತಾವರಣ ಎಷ್ಟು ಸುಖ ಸಂತೋಷ ಕೊಡುತ್ತದೋ, ಅಷ್ಟೇ ವೈಜ್ಞಾನಿಕವಾಗಿಯೂ ಈ ಹಬ್ಬದ ದಿನ ಉಪಯೋಗಿಸುವ ಎಳ್ಳು, ಬೆಲ್ಲ, ಕೊಬ್ಬರಿ, ನೆಲಕಡಲೆ, ಶೇಂಗಾ ಬೀಜಗಳು ದೇಹಕ್ಕೆ ಪುಷ್ಟಿಯನ್ನು ಕೊಡುತ್ತವೆ.

ಎಲ್ಲರೂ ಹಬ್ಬದ ನೆಪದಲ್ಲಿ ಎಳ್ಳು ಬೆಲ್ಲ ಹಂಚಿಕೊಂಡು ಸ್ವೀಕರಿಸುವರು. ಎಂತಹಾ ಜಗಳ ವೈಷಮ್ಯವಿದ್ದರೂ ಮನೆ ಬಾಗಿಲಿಗೆ ಮಕ್ಕಳೋ ಅಥವಾ ಇನ್ಯಾರಾದರೂ ಹಬ್ಬದ ದಿನ ಬಂದರೆ ಖಂಡಿತಾ ಅದನ್ನು ಮರೆತು ಮತ್ತೆ ಒಂದಾಗುವ ಅವಕಾಶಗಳಿರುತ್ತವೆ. ಈ ಎಲ್ಲಾ ಕಾರಣಗಳಿಂದ ಸಂಕ್ರಾಂತಿ ಹಬ್ಬವು ಒಂದು ವಿಶೇಷವಾದ ಹಬ್ಬ. ಏಕತೆಯನ್ನು ಸಾರುವ ಹಾಗೂ ಉಳಿಸಿಕೊಳ್ಳುವ ಹಬ್ಬ.

ಸಂಕ್ರಾಂತಿ ವಿಶೇಷ | ಹೀಗೆ ಮಾಡಿದ್ರೆ ರಂಗೋಲಿ ಬಿಡಿಸೋದು ತುಂಬಾ ಸುಲಭ

ಸಂಕ್ರಾಂತಿಯಂದು ಎಳ್ಳು-ಬೆಲ್ಲ ಬೀರಲು ಪರಿಸರ ಸ್ನೇಹಿ ಮಣ್ಣಿನ ಮಡಿಕೆ

ಸಂಕ್ರಾಂತಿ ಸಂಭ್ರಮ | ಎಳ್ಳುಬೆಲ್ಲ ಹಂಚಿ ಸ್ನೇಹ ಬೆಸೆಯುವ ಹಬ್ಬಕ್ಕಿದೆ ಧಾರ್ಮಿಕ ಮಹತ್ವ

ರೆಸಿಪಿ | ಸಂಕ್ರಾಂತಿ ಸಂಭ್ರಮಕ್ಕೆ ಪೊಂಗಲ್ ಮೆರುಗು