ಸಂಕ್ರಾಂತಿ ವಿಶೇಷ | ಹೀಗೆ ಮಾಡಿದ್ರೆ ರಂಗೋಲಿ ಬಿಡಿಸೋದು ತುಂಬಾ ಸುಲಭ

ಬೆಳಿಗ್ಗೆ ಎದ್ದು ಹೊಸಲಿಗೆ ನೀರು ಹಾಕಿ ರಂಗುರಂಗಿನ ಸುಂದರ ರಂಗೋಲಿಯನ್ನು ಮನೆಮುಂದೆ ಬಿಡಿಸುತ್ತಾರೆ. ಇದೇ ಮನೆಗೊಂದು ಲಕ್ಷಣ ತರೋದು. ಹಬ್ಬಕ್ಕೆ ಮನೆಗೆ ಬರುವ ಅತಿಥಿಗಳಿಗೂ ಈ ರಂಗೋಲಿ ಖುಷಿಯ ಸ್ವಾಗತ ಕೋರುತ್ತೆ.

  • ಆಯೇಷಾ
  • Published On - 11:47 AM, 13 Jan 2021
ರಂಗೋಲಿ

ಬೆಂಗಳೂರು: ಈಗಿನ ಕಾಲದ ಹೆಂಗಳೆಯರು ಮನೆ ಮುಂದೆ ಪ್ರತಿದಿನ ರಂಗೋಲಿ ಬಿಡಿಸಿಲ್ಲವೆಂದರೂ, ಹಬ್ಬ ಹರಿದಿನಗಳು ಬಂತೆಂದರೆ ಸಾಕು ಅವರ ದಿನಚರಿಯೇ ಬದಲಾಗಿ ಬಿಡುತ್ತೆ. ಬೆಳಿಗ್ಗೆ ಎದ್ದು ಹೊಸಲಿಗೆ ನೀರು ಹಾಕಿ ರಂಗುರಂಗಿನ ಸುಂದರ ರಂಗೋಲಿಯನ್ನು ಮನೆಮುಂದೆ ಬಿಡಿಸುತ್ತಾರೆ. ಇದೇ ಮನೆಗೊಂದು ಲಕ್ಷಣ ತರೋದು. ಹಬ್ಬಕ್ಕೆ ಮನೆಗೆ ಬರುವ ಅತಿಥಿಗಳಿಗೂ ಈ ರಂಗೋಲಿ ಖುಷಿಯ ಸ್ವಾಗತ ಕೋರುತ್ತೆ.

ಕ್ಯಾಲೆಂಡರ್ ಪ್ರಕಾರ ಹೊಸವರ್ಷದಲ್ಲಿ ಬರುವ ಮೊದಲ ದೊಡ್ಡ ಹಬ್ಬ ಸಂಕ್ರಾಂತಿ. ಇದನ್ನು ಸುಗ್ಗಿ ಕಾಲ ಅಂತನೂ ಕರೀತಾರೆ. ಇದು ರೈತರು ತಾವು ಬೆಳೆದ ಬೆಳೆಯ ಫಸಲನ್ನು ಮನೆಗೆ ತರುವ ಸುಂದರ ಸಮಯ. ಹೀಗಾಗಿ ರೈತರ ಮನೆಯಲ್ಲಿ ಈ ಹಬ್ಬವನ್ನು ವಿಶೇಷ ಹಾಗೂ ಅತ್ಯಂತ ಸಂಭ್ರಮದಿಂದ ವಿವಿಧ ರೀತಿಯಲ್ಲಿ ಆಚರಿಸಲಾಗುತ್ತೆ. ಹಬ್ಬದ ಸಡಗರವನ್ನು ಹೆಚ್ಚಿಸುವುದು ಹಾಗೂ ನಾವೂ ಹಬ್ಬ ಮಾಡಿದ್ದೀವಿ ಎಂದು ಗೊತ್ತಾಗೋದೆ ಮನೆ ಮುಂದೆ ಬಣ್ಣಬಣ್ಣದ ರಂಗೋಲಿ ಹಾಕಿದ್ದಾಗ. ಮನೆ ಮುಂದೆ ಹಾಕುವ ರಂಗೋಲಿ ಮನೆಗೆ ಶುಭವನ್ನು ತರುವುದು ಎನ್ನುವ ನಂಬಿಕೆ ಸಹ ಇದೆ.

ಬಗೆಬಗೆ ರಂಗೋಲಿ
ಈ ಬಾರಿಯ ಸಂಕ್ರಾಂತಿಗೆ ನಿಮ್ಮ ಮನೆಯ ಮುಂದೆ ರಂಗೋಲಿ ರಂಗು ಬೆಳಗಬೇಕು ಎಂಬ ಆಸೆ ನಿಮಗಿದ್ದರೆ ಇಲ್ಲಿರುವ ಟಿಪ್ಸ್​ ಗಮನಿಸಿ, ಅನುಸರಿಸಿ. ಚಂದದ ರಂಗೋಲಿ ಚಿತ್ರಗಳನ್ನು ನಮಗೂ ಕಳಿಸಿಕೊಡಿ.

ನಮ್ಮ ಅಮ್ಮನ ಕಾಲದವರು ಸೆಗಣಿ ಬೆರೆಸಿದ ನೀರಿನಿಂದ ಅಂಗಳ ಸಾರಿಸಿ, ಸ್ಚಚ್ಛ ಬಿಳಿಬಣ್ಣದ ರಂಗೋಲಿ ಪುಡಿಯಿಂದ ಚುಕ್ಕಿ ಸೇರಿಸಿ ರಂಗೋಲಿ ಬಿಡಿಸುತ್ತಿದ್ದರು. ಆದ್ರೆ ನಾವು 5ಜಿ ಯುಗದವರು ಜಸ್ಟ್ ಒಂದು ಕ್ಲಿಕ್​ನಿಂದ ಇಡೀ ಬ್ರಹ್ಮಾಂಡದ ಜಾತಕವನ್ನೇ ತಿಳ್ಕೊತಿದ್ದೀವಿ. ರಂಗೋಲಿ ಬಿಡಿಸೋಕೆ ಆಗಲ್ವಾ? ಈ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಹಲವು ಒಳ್ಳೇ ಕೆಲಸಗಳಿಗೂ ಸಹಕಾರಿಯಾಗಿದೆ.

ಸಂಕ್ರಾಂತಿ ರಂಗೋಲಿ (ಚಿತ್ರಕೃಪೆ: Make Rangoli)

ಯುಟ್ಯೂಬ್, ಫೇಸ್​ಬುಕ್, ಇನ್​ಸ್ಟಾಗ್ರಾಂನಂಥ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳನ್ನು ನೋಡಿಕೊಂಡು ವರ್ಣಮಯವಾದ ರಂಗೋಲಿ ಬಿಡಿಸಬಹುದು. ಯುಟ್ಯೂಬ್​ನಲ್ಲಿ ಒಂದು ಚುಕ್ಕಿಯಿಂದ ಹಿಡಿದು ಪೂರ್ತಿ ರಂಗೋಲಿ ಬಿಡಿಸುವವರೆಗಿನ ಪ್ರತಿ ಹಂತದ ಮಾಹಿತಿ ಕೊಟ್ಟಿರ್ತಾರೆ. ಸಂಕ್ರಾಂತಿ ಹಿನ್ನೆಲೆ ಇರೋದ್ರಿಂದ ಈ ಹಬ್ಬಕ್ಕೆ ತಕ್ಕಂತಹ ರಂಗೋಲಿಗಳಿಗೆ ಯುಟ್ಯೂಬ್​ ಫೀಡ್​ನಲ್ಲಿ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಯುಟ್ಯೂಬ್​ನಲ್ಲಿ ಲಭ್ಯವಿರುವ Make Rangoli, Poonam Borkar, Rangoli colors and designs by Keerthi, Saanvi Arts, Rangoli by Sneha J, easy rangoli ಯುಟ್ಯೂಬ್​ ಚಾನೆಲ್​ಗಳು ನಿಮ್ಮ ರಂಗೋಲಿ ಕಲಿಯುವ, ಹಾಕುವ ಆಸೆಗೆ ನೀರೆರೆಯುತ್ತವೆ.

ಟ್ರೆಂಡಿಂಗ್ ಅಂಡ್ ಈಜಿ ಸ್ಪೂನ್ ರಂಗೋಲಿ
ಹೌದು ಕೆಲ ದಿನಗಳಿಂದ ಸ್ಪೂನ್​ನಿಂದ ಬಿಡಿಸುವ ರಂಗೋಲಿ ಭಾರೀ ಟ್ರೆಂಡಿಂಗ್ ಆಗಿದೆ. ಇದು ತುಂಬಾ ಸುಲಭ ಹಾಗೂ ಆಕರ್ಷಕ. ಕೆಲವರಿಗೆ ರಂಗೋಲಿ ಪುಡಿಯನ್ನು ಕೈಯಲ್ಲಿ ಹಿಡಿಯಲು ಸಹ ಬರಲ್ಲ. ಅಂಥವರೂ ಸಹ ಈ ರಂಗೋಲಿಯನ್ನು ಟ್ರೈ ಮಾಡಬಹುದು. ವಿವಿಧ ಬಣ್ಣಗಳು, ಒಂದು ಸ್ಪೂನ್ ಇದ್ರೆ ಸಾಕು.

ಸ್ಟಿಕರ್ ರಂಗೋಲಿ
ಕೆಲವರು ದಿನಾ ರಂಗೋಲಿ ಬಿಡಲು ಆಗಲ್ಲ ಅಂತ ಸ್ಟಿಕರ್ ರಂಗೋಲಿ ಮೊರೆ ಹೋಗ್ತಾರೆ. ನಿಮಗೆ ಇಷ್ಟವಾದ ರಂಗೋಲಿ ಡಿಸೈನ್​ನ ಸ್ಟಿಕರ್​ ತಂದು ಒಮ್ಮೆ ಅಂಟಿಸಿದ್ರೆ ಸಾಕು ವರ್ಷಾನುಗಟ್ಟಲೆ ಬಳಿಕೆ ಬರುತ್ತೆ.

ಸ್ಟಿಕರ್ ರಂಗೋಲಿ (ಚಿತ್ರಕೃಪೆ: Lets make Art ಯುಟ್ಯೂಬ್ ಚಾನೆಲ್)

ಚಾಕ್​ಪೀಸ್ ರಂಗೋಲಿ
ಬಳಪ ಅಥವಾ ಚಾಕ್​ಪೀಸ್ ಬಳಸಿ ಮೊದಲಿಗೆ ಡಿಸೈನ್ ಡ್ರಾ ಮಾಡಿಕೊಂಡು ಬಳಿಕ ಅದಕ್ಕೆ ಕೊಂಚ ಕಲಾತ್ಮಕವಾಗಿ ಹೂ, ಬಣ್ಣ, ಬಣ್ಣದ ವಸ್ತುಗಳನ್ನು ಬಳಸಿ ಅಥವಾ ರಂಗೋಲಿ ಪುಡಿಯನ್ನು ಟೀ ಸೋಸುವ ಯಂತ್ರದಿಂದ ಉದುರಿಸುವ ಮೂಲಕ ಅಲಂಕಾರ ಮಾಡಬಹುದು. ಹೀಗೆ ಮಾಡಿದರೆ ನಿಮ್ಮ ರಂಗೋಲಿ ಇತರರಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.

ಜರಡಿ ರಂಗೋಲಿ. (ಚಿತ್ರಕೃಪೆ: ColorsWheel Rangoli)

ಸಿದ್ಧ ರಂಗೋಲಿ
ಇದು ಜರಡಿ ಮಾದರಿಯಲ್ಲಿ ಇರುತ್ತೆ. ಜರಡಿಯಲ್ಲಿ ಹಿಟ್ಟು ಜಾಲರಿಸುವಂತೆ ರಂಗೋಲಿ ಪುಡಿಯನ್ನು ಹಾಕಿ ಜಾಲರಿಸಿದ್ರೆ ಸಾಕು ಅದೇ ಡಿಸೈನ್ ಅಂಗಳದಲ್ಲಿ ಮೂಡುತ್ತೆ. ಪ್ಲಾಸ್ಟಿಕ್ ಹಾಳೆಯ ಮೇಲೆ ಅಚ್ಹಾದ ಬಣ್ಣಬಣ್ಣದ ಹರಳು, ಮಣಿ, ಲೇಸ್, ಕಸೂತಿದಾರ ಮುಂತಾದವನ್ನು ಗೋಂದು ಹಾಕಿ ಅಂಟಿಸಿ ಸಜ್ಜಾದ ಕಲಾತ್ಮಕ ಸಿದ್ಧ ರಂಗೋಲಿ ಸಹ ಸಿಗುತ್ತೆ. ಸಾಮಾಜಿಕ ಜಾಲತಾಣಗಳ ಮೂಲಕ ಹೊಸ ಮಾದರಿಯಲ್ಲಿ ರಂಗೋಲಿ ಬಿಡೋದನ್ನು ತಿಳಿದುಕೊಳ್ಳಬಹುದು.

ರಂಗೋಲಿ ತಂಡ
ಮನೆಗಳ ಮುಂದೆ ರಂಗೋಲಿ ಬಿಡಿಸಲೆಂದೇ ಕೆಲ ತಂಡಗಳು ಇವೆ. ಇಂಥವರನ್ನು ಸಂಪರ್ಕಿಸಿ ಹಬ್ಬ-ಸಂದರ್ಭಕ್ಕೆ ತಕ್ಕಂತೆ ರಂಗೋಲಿ ಹಾಕಿಸಿಕೊಳ್ಳಬಹುದು. ಒಟ್ಟಿನಲ್ಲಿ ನಾನು ಹೇಳೋದು ಇಷ್ಟೇ, ಹೇಗಾದ್ರೂ ಸರಿ ಈ ಸಲದ ಸಂಕ್ರಾಂತಿಗೆ ಮನೆಮುಂದೆ ರಂಗೋಲಿ ಬಿಡಿ. ಹೊಸ ವರ್ಷದ ಮೊದಲ ಹಬ್ಬವನ್ನು ಹರುಷದಿಂದ ಸಂಭ್ರಮದಿಂದ ಸ್ವಾಗತಿಸಿ, ಹ್ಯಾಪಿ ಸಂಕ್ರಾಂತಿ.

ರೆಸಿಪಿ | ಸಂಕ್ರಾಂತಿ ಸಂಭ್ರಮಕ್ಕೆ ಪೊಂಗಲ್ ಮೆರುಗು