ಇನ್ನೂ ಮುಗಿದಿಲ್ಲ ನೋಟ್​ ಬ್ಯಾನ್​ ಗೋಳು..

ಚೆನ್ನೈ: ನವಂಬರ್​ 8, 2016. ಆ ಒಂದು ದಿನ ಭಾರತೀಯರ ನೆನಪಿನಿಂದ ಎಂದೂ ಮಾಸದ ದಿನ. ಆ ಒಂದು ದಿನ ಪ್ರಧಾನಿ ಮೋದಿ ಮಾಡಿದ ಘೋಷಣೆ ಇಡೀ ದೇಶದ ಆರ್ಥಿಕ ಚಿತ್ರಣವನ್ನೇ ಬದಲಿಸಿಬಿಟ್ಟಿತ್ತು. ಆದರೆ, ಇಡೀ ದೇಶದಲ್ಲೇ ತಲ್ಲಣ ಉಂಟುಮಾಡಿದ ಆ ಒಂದು ದಿನ ತಮಿಳುನಾಡಿನ ಈ ದಂಪತಿಗೆ ಗೊತ್ತೇ ಇಲ್ಲವಂತೆ. ಹೌದು, ಇದು ನಂಬೋಕೆ ಸ್ವಲ್ಪ ಕಷ್ಟವಾದ್ರೂ ತಮಿಳುನಾಡಿನ ಪೋತಿಯಾ ಮೂಪನೂರೆ ಎಂಬ ಕುಗ್ರಾಮದಿಂದ ವರದಿಯಾಗಿರೋ ರಿಯಲ್​ ಸ್ಟೋರಿ ಇದು.

ಜೀವನೋಪಾಯಕ್ಕಾಗಿ ಊದುಬತ್ತಿ ತಯಾರಿಸುತ್ತಿದ್ದ ಗ್ರಾಮದ ನಿವಾಸಿ 58 ವರ್ಷದ ಸೋಮು ಹಾಗೂ ಪಳನಿ ಅಮ್ಮಾಳ್​ ದಂಪತಿಗೆ ನೋಟ್​ ಬ್ಯಾನ್​ ಬಗ್ಗೆ ತಿಳಿದುಬಂದಿದ್ದೇ ಕಳೆದ ಶುಕ್ರವಾರ. ಅದು ತಮ್ಮ ಬಳಿಯಿದ್ದ ಹಳೇ 500 ಮತ್ತು 1,000 ಮೌಲ್ಯದ ನೋಟ್​ಗಳನ್ನ ಬ್ಯಾಂಕ್​ಗೆ ಕಟ್ಟಲು ಹೋದ ವೇಳೆ.

ಅಷ್ಟಕ್ಕೂ, ಇವರಿಗೆ ನೋಟ್ ಬ್ಯಾನ್​ ಬಗ್ಗೆ ಯಾಕೆ ತಿಳಿಯಲಿಲ್ಲ ಎಂಬುದೇ ಕುತೂಹಲಕಾರಿ ಸಂಗತಿ. ಕಳೆದ 10  ವರ್ಷಗಳಿಂದ ಊದುಬತ್ತಿ ಮತ್ತು ಕರ್ಪೂರ ತಯಾರಿಸಿ ಅಕ್ಕಪಕ್ಕದ ಹಳ್ಳಿಗಳಲ್ಲಿ ಈ ದಂಪತಿ ಮಾರುತ್ತಿದ್ದರು. ಬಂದ ಸಂಪಾದನೆಯ ಒಂದು ಭಾಗವನ್ನ ಸೋಮು ತಮ್ಮ ತಾಯಿಗೆ ನೀಡುತ್ತಿದ್ದರಂತೆ. ಜೊತೆಗೆ, ಆಗಾಗ ತಮ್ಮ ತಾಯಿ ಬಳಿಯಿದ್ದ 500 ಮತ್ತು 1,000 ನೋಟುಗಳಿಗೆ ಚಿಲ್ಲರೆ ಮಾಡಿಸಿ ಬಳಸಿಕೊಳ್ಳುತ್ತಿದ್ದರಂತೆ. ಆದರೆ, ಈ ಮಧ್ಯೆ ಅದರ ಅವಶ್ಯಕತೆ ಬೀಳದೆ ಕೆಲವು ವರ್ಷಗಳಿಂದ ತಮ್ಮ ಅನಕ್ಷರಸ್ಥ ತಾಯಿ ಬಳಿ ಕೇಳಿರಲಿಲ್ಲವಂತೆ.

ಕೊರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಂಪಾದನೆಗೆ ಕಲ್ಲುಬಿದ್ದಾಗ..
ಆದರೆ, ಇತ್ತೀಚೆಗೆ ಕೊರೊನಾ ಹರಡುವಿಕೆಯನ್ನ ತಡೆಯಲು ಕೇಂದ್ರ ಘೋಷಿಸಿದ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಂಪಾದನೆಯ ದಾರಿಗೆ ಕಲ್ಲುಬಿತ್ತಂತೆ. ಜೀವನ ನಡೆಸಲು ಕಷ್ಟವಾದಾಗ ಸೋಮುಗೆ ನೆನಪಾಗಿದ್ದು ಆತನ ತಾಯಿಯ ಬಳಿ ಕೊಟ್ಟಿದ್ದ ಹಣ. ಅದನ್ನು ಪಡೆದು ಬ್ಯಾಂಕ್​ನಲ್ಲಿ ಜಮಾ ಮಾಡಲು ಹೋದ ಸೋಮುಗೆ ಆಗಲೇ ತಿಳಿದಿದ್ದು ಆ ನೋಟುಗಳನ್ನ ಸರ್ಕಾರ ಬಹಳ ಹಿಂದೆಯೇ ಅಮಾನ್ಯೀಕರಣ ಮಾಡಿತ್ತು ಎಂದು.

ಸುದ್ದಿ ಕೇಳಿ ಸ್ವಲ್ಪ ಶಾಕ್​ ಆದ ಸೋಮು ಇದೀಗ ಸಿಎಂ ಪಳನಿಸ್ವಾಮಿಗೆ ನೆರವು ಕೋರಿ ಪತ್ರ ಬರೆದಿದ್ದಾರೆ. ಜೊತೆಗೆ, ಪೊಲೀಸರ ಸಹಾಯ ಕೇಳಿದ್ದಾರೆ. ಆದರೆ, ಇವರಿಗೆ ಎಷ್ಟರ ಮಟ್ಟಿಗೆ ಸರ್ಕಾರ ನೆರವು ನೀಡಲು ಸಾಧ್ಯ ಎಂಬುದು ಕಾದು ನೋಡಬೇಕಿದೆ.

Related Tags:

Related Posts :

Category:

error: Content is protected !!