ಮಹಾಮೋಸ: ರೈತರಿಂದ ಕಾಫಿ ಖರೀದಿಸಿ ಖದೀಮ ಎಸ್ಕೇಪ್, ಅನ್ನದಾತ ಕಣ್ಣೀರು!

ಕೊಡಗು: ಕಣ್ಣಿಗೆ ಕೂಲಿಂಗ್ ಗ್ಲಾಸು.. ತೋಳ್ ಮೇಲೆ ಟ್ಯಾಟೂ.. ಕಲರ್ ಕಲರ್ ಟಿ ಶರ್ಟ್ ಹಾಕ್ಕೊಂಡು ಪೋಸ್ ಕೊಟ್ಟಿರೋ ಈ ಆಸಾಮಿ ಮಾಡದೇ ಇರೋ ಶೋಕಿಗಳೇ ಇಲ್ಲ. ಆಡದೇ ಇರೋ ಆಟಗಳೇ ಇಲ್ಲ. ಈತನ ಮೋಸದಾಟದಿಂದಲೇ ಇವರೆಲ್ಲಾ ಈಗ ಬೀದಿ ಪಾಲಾಗಿದ್ದಾರೆ.

ರೈತರಿಂದ ಕಾಫಿ ಖರೀದಿ ಮಾಡಿ ಮೋಸ..!
ಹೀಗೆ ಅಲೆದಾಡಿ ಸುಸ್ತಾಗಿರೋ ಇವ್ರು ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಾಫಿ ಬೆಳೆಗಾರರು. ಭಯಂಕರ ಮಳೆ ಮಧ್ಯೆಯೂ ಅಲ್ಪಸ್ವಲ್ಪ ಕಾಫಿ ಬೆಳೆದಿದ್ರು. ಅದನ್ನೇ ಮಾರಿ ಜೀವನ ಸಾಗಿಸಬೇಕು ಅಂದ್ಕೊಂಡಿದ್ರು. ಆದ್ರೀಗ ನಿತ್ಯ ಕೆಲಸ. ಕಾರ್ಯ ಬಿಟ್ಟು ಅಲೆದಾಡುವಂತಾಗಿದೆ.

ಯಾಕಂದ್ರೆ, ಈ ಐನಾತಿ ಗುರು ಪ್ರಸಾದ್ ಮಾಡಿದ ಮೋಸ ಅಂತಿಂಥಾದ್ದಲ್ಲ. ವಿರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದಲ್ಲಿ ಕಾಫಿ ಖರೀದಿಸೋ ಧಾನ್ಯಲಕ್ಷ್ಮೀ ಕಾಫಿ ಕ್ಯೂರಿಂಗ್ ಕಂಪನಿ ನಡೆಸ್ತಿದ್ದ ಈತ, ರೈತರಿಂದ ಕಾಫಿ ಬೆಳೆ ಖರೀದಿಸಿದ್ದ. ಅದಕ್ಕೆ ಚೆಕ್ ಕೂಡ ನೀಡಿದ್ದ. ಆದ್ರೆ, ಆ ಚೆಕ್ ಪಡೆದ ರೈತರು ಬ್ಯಾಂಕ್​ಗೆ ಹೋದಾಗ ಬರಸಿಡಿಲೇ ಬಡಿದಂತಾಗಿತ್ತು. ಯಾಕಂದ್ರೆ, ಆ ಚೆಕ್​ನಲ್ಲಿ ಯಾವ ಹಣವೂ ಇರಲಿಲ್ಲ.

ಕಂಪನಿಗೆ ಬಾಗಿಲು ಹಾಕಿ ಐನಾತಿ ಎಸ್ಕೇಪ್:
ಇನ್ನು, ಸುಮಾರು 36ಕ್ಕೂ ಹೆಚ್ಚು ರೈತರಿಂದ ಈ ಆಸಾಮಿ ಕಾಫಿ ಖರೀದಿಸಿದ್ದ. ಈಗ್ಲೂ ಒಬ್ಬೊಬ್ಬ ರೈತರಿಗೂ ತಲಾ 20, 10 ಲಕ್ಷದಷ್ಟು ಹಣ ನೀಡಬೇಕಿದೆ. ಆದ್ರೀಗ ಈ ಐನಾತಿ ಯಾರ ಕೈಗೂ ಸಿಗುತ್ತಿಲ್ಲ. ರೈತರಿಗೆ ನೀಡಬೇಕಿದ್ದ ಸುಮಾರು 3.5 ಕೋಟಿ ಹಣ ವಂಚಿಸಿ ಕಂಪನಿಗೆ ಬಾಗಿಲು ಹಾಕಿ ಎಸ್ಕೇಪ್ ಆಗಿದ್ದಾನೆ.

ಹಣ ಕಳೆದುಕೊಂಡ ಅನ್ನದಾತ ಕಣ್ಣೀರು:
ಅಲ್ದೆ, ಈ ಕಂಪನಿಯನ್ನೇ ಬೆರೆಯವ್ರಿಗೆ ಮಾರಾಟ ಮಾಡಿದ್ದಾನೆ ಅಂತಾ ಹೇಳಲಾಗ್ತಿದ್ದು, ಧಾನ್ಯಲಕ್ಷ್ಮೀ ಬೋರ್ಡ್ ಬದಲಿಗೆ ಅರೆಬಿಕಾ ಕಾಫಿ ಕ್ಯೂರಿಂಗ್ ವರ್ಕ್ಸ್ ಅಂತಾ ಬದಲಾಗಿದೆ.‌ ಆದ್ರೀಗ ಕಾಫಿ ಬೆಳೆ ಖರೀದಿ ಮಾಡಿದ್ದ ಗುರುಪ್ರಸಾದ್ ಸುಳಿವೇ ಸಿಗ್ತಿಲ್ಲ. ಹೀಗಾಗಿ, ವಂಚನೆಗೊಳಗಾದ ರೈತರ ಬದುಕು ಬೀದಿಗೆ ಬಿದ್ದಿದೆ.

ಸದ್ಯ ಈತನ ವಿರುದ್ಧ ವಿರಾಜಪೇಟೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ. ಒಟ್ನಲ್ಲಿ, ಪ್ರವಾಹದಿಂದ ನಲುಗಿದ್ದ ಕಾಫಿ ಬೆಳೆಗಾರರ ಗಾಯದ ಮೇಲೆ ಈ ಕಿರಾತಕ ಬರೆ ಎಳೆದಿದ್ದು, ಅಕ್ಷರಶಃ ಕಂಗಾಲಾಗಿದ್ದಾರೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!