ಮಾಯಾಂಕ್ ಎಲ್ಲ ಫಾರ್ಮಾಟ್​ಗಳಲ್ಲೂ ಇನ್ನಿಂಗ್ಸ್ ಆರಂಭಿಸಲಿ: ತೆಂಡೂಲ್ಕರ್

ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಆರಂಭ ಆಟಗಾರರಾಗಿರುವ ಕರ್ನಾಟಕದ ಮಾಯಾಂಕ್ ಅಗರ್​ವಾಲ್ ಅವರ ಬ್ಯಾಟಿಂಗ್ ಶೈಲಿ ಮತ್ತು ವೈಖರಿಯಿಂದ ಬಹಳ ಇಂಪ್ರೆಸ್ ಆಗಿರುವ ಲಿಟಲ್ ಮಾಸ್ಟರ್, ಸಚಿನ್ ತೆಂಡೂಲ್ಕರ್ ಅವರನ್ನು ಒಂದು ದಿನದ ಅಂತರರಾಷ್ಟ್ರೀಯ ಮತ್ತು ಟಿ20ಐ ಪಂದ್ಯಗಳಲ್ಲೂ ಆರಂಭ ಆಟಗಾರನಾಗಿ ಆಡಿಸಬೇಕೆಂದು ಹೇಳಿದ್ದಾರೆ.

  • Arun Belly
  • Published On - 16:28 PM, 25 Nov 2020

ಕ್ರಿಕೆಟ್​ ದಂತಕಥೆ ಸಚಿನ್ ತೆಂಡೂಲ್ಕರ್ ಕ್ರೀಡೆಯ ಬಗ್ಗೆ ಮಾತಾಡುತ್ತಿದ್ದರೆ ಅವರೆದುರು ಕುಳಿತವರು ಮೈಯೆಲ್ಲಾ ಕಿವಿಯಾಗಿಸಿಕೊಂಡು ಆಲಿಸುತ್ತಾರೆ. ಅಂತರರಾಷ್ಟ್ರೀಯ ಮತ್ತು ಸ್ಫರ್ಧಾತ್ಮಕ ಕ್ರಿಕೆಟ್​ನಿಂದ ದೂರ ಸರಿದು ಸುಮಾರು 8 ವರ್ಷಗಳಾದರೂ ಈ ಮಹಾನ್ ಆಟಗಾರ ಹೊಂದಿರುವ ಪ್ರಭಾವ ಹಾಗಿದೆ. ಅವರ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲು ಕಾರಣವಿದೆ. ಸಚಿನ್ ಯಾರನ್ನೂ ಸುಮ್ಮನೆ ಹೊಗಳುವುದಿಲ್ಲ. ಆಟಗಾರನೊಬ್ಬನ ಸಾಮರ್ಥ್ಯವನ್ನು ಕೂಲಂಕಶವಾಗಿ ಅವಲೋಕಿಸಿದ ನಂತರವೇ ಅವರು ಕಾಮೆಂಟ್ ಮಾಡುತ್ತಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾದ ಆರಂಭ ಆಟಗಾರರಾಗಿರುವ ಕರ್ನಾಟಕದ ಮಾಯಾಂಕ್ ಅಗರ್​ವಾಲ್ ಅವರ ಬ್ಯಾಟಿಂಗ್ ಶೈಲಿ ಮತ್ತು ವೈಖರಿಯಿಂದ ಬಹಳ ಇಂಪ್ರೆಸ್ ಆಗಿರುವ ಲಿಟಲ್ ಮಾಸ್ಟರ್, ಅವರನ್ನು ಒಂದು ದಿನದ ಅಂತರರಾಷ್ಟ್ರೀಯ ಮತ್ತು ಟಿ20ಐ ಪಂದ್ಯಗಳಲ್ಲೂ ಆರಂಭ ಆಟಗಾರನಾಗಿ ಆಡಿಸಬೇಕೆಂದು ಹೇಳಿದ್ದಾರೆ.

ಸುದ್ದಿಸಂಸ್ಥೆಯೊಂದರ ಜೊತೆ ಬುಧವಾರದಂದು ಮಾತಾಡಿರುವ ಸಚಿನ್, ‘‘ಟೆಸ್ಟ್​ಗಳಲ್ಲಿ ಮಾಯಾಂಕ್ ತಮ್ಮ ಛಾಪನ್ನು ಮೂಡಿಸಿದ್ದಾರೆ, ನಿಸ್ಸಂದೇಹವಾಗಿ ಟೀಮು ಆತುಕೊಳ್ಳಬಹುದಾದ ಆಟಗಾರ ಅವರು. ಅವರನ್ನು ಸೀಮಿತ ಓವರ್​ಗಳ ಪಂದ್ಯಗಳಲ್ಲೂ ಓಪನರ್ ಆಗಿ ಆಡಿಸಬೇಕು,’’ ಎಂದು ಸಚಿನ್ ಹೇಳಿದ್ದಾರೆ.

ಇಂಡಿಯನ್ ಪ್ರಿಮೀಯರ್ ಲೀಗ್ 2020ರಲ್ಲಿ ಮಾಯಾಂಕ್ ಅವರ ಪ್ರದರ್ಶನಗಳನ್ನು ಸಚಿನ್ ಗಮನಿಸಿದ್ದಾರೆ. ಓದುಗರಿಗೆ ತಿಳಿದಿರುವಂತೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ ಆಡುವ ಮಾಯಾಂಕ್ ಈ ಸೀಸನ್​ನಲ್ಲಿ ಆಡಿದ 11 ಪಂದ್ಯಗಳಲ್ಲಿ 1 ಶತಕ ಮತ್ತು 2 ಅರ್ಧಶತಕಗಳನ್ನೊಳಗೊಂಡ 424 ರನ್​ಗಳನ್ನು 154.45 ಸ್ಟ್ರೈಕ್ ರೇಟ್​ನೊಂದಿಗೆ ಗಳಿಸಿದರು. ಪಂಜಾಬ್ ತಂಡದ ನಾಯಕ ಕೆ ಎಲ್ ರಾಹುಲ್​ರೊಂದಿಗಿನ ಅವರ ಜೊತೆಯಾಟಗಳು ಐಪಿಎಲ್ ಸೀಸನ್​ನ ಪ್ರಮುಖ ಅಂಶಗಳಲ್ಲೊಂದಾಗಿತ್ತು.

‘‘ಮಾಯಾಂಕ್​ಗೆ, ರಾಹುಲ್ ಮತ್ತು ಶುಭ್​ಮನ್ ಗಿಲ್ ಮತ್ತು ಪೃಥ್ವಿ ಶಾ ಅವರಿಂದ ಸ್ಫರ್ಧೆ (ಸೀಮಿತ ಓವರ್​ಗಳ ಪಂದ್ಯಗಳಲ್ಲಿ) ಎದುರಾಗಲಿದೆ. ರೊಹಿತ್ ಶರ್ಮ ಅವರು ಈ ಫಾರ್ಮಾಟ್ ಪಂದ್ಯಗಳಿಗೆ ಆಯ್ಕೆಯಾಗಿರದಿರುವುದರಿಂದ ಅತ್ಯುತ್ತಮ ಫಾರ್ಮ್​ನಲ್ಲಿರುವ ಶಿಖರ್ ಧವನ್ ಜೊತೆ ಯಾರನ್ನು ಇನ್ನಿಂಗ್ಸ್ ಆರಂಭಿಸಲು ಕಳಿಸಬೇಕೆನ್ನುವ ತಲೆನೋವು ಟೀಮಿನ ಥಿಂಕ್ ಟ್ಯಾಂಕ್​ಗೆ ಶುರುವಾಗಿರಬಹುದು. ನನ್ನ ದೃಷ್ಟಿಯಲ್ಲಿ ಮಾಯಾಂಕ್ ಕೇವಲ ಒಂದು ದಿನದ ಪಂದ್ಯಗಳಿಗೆ ಮಾತ್ರವಲ್ಲ, ಟಿ20ಐ ಮ್ಯಾಚ್​ಗಳಿಗೂ ಓಪನರ್ ಆಗಿ ಆಡಿಸಬೇಕು,’’ ಎಂದು ಸಚಿನ್ ಹೇಳಿದ್ದಾರೆ.

ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಆಸ್ಟ್ರೇಲಿಯ ಟೀಮಿಗೆ ವಾಪಸ್ಸಾಗಿರುವುದರಿಂದ ಅತಿಥೇಯರ ಬ್ಯಾಟಿಂಗ್ ಸದೃಢಗೊಂಡಿದೆಯೆಂದು ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ 100 ಶತಕಗಳನ್ನು ಬಾರಿಸಿ ರಿಟೈರಾದ ಸಚಿನ್ ಹೇಳುತ್ತಾರೆ.

‘‘ಭಾರತ ಕಳೆದ ಬಾರಿ ಎದುರಿಸಿದ ಆಸ್ಟ್ರೇಲಿಯ ತಂಡದ ಬ್ಯಾಟಿಂಗ್​ಗಿಂತ ಈಗಿನ ತಂಡದ ಬ್ಯಾಟಿಂಗ್ ಹೆಚ್ಚು ಬಲಶಾಲಿಯಾಗಿದೆ. ವಾರ್ನರ್ ಮತ್ತು ಸ್ಮಿತ್ ತಂಡಕ್ಕೆ ವಾಪಸ್ಸಾಗಿರುವುದು ಅದರ ಬ್ಯಾಟಿಂಗ್ ಬಲವನ್ನು ಇಮ್ಮಡಿಗೊಳಿಸಿದೆ. ಇವರಿಬ್ಬರೂ ವಿಶ್ವದರ್ಜೆಯ ಆಟಗಾರರು. ಟೆಸ್ಟ್ ಕ್ರಿಕೆಟ್​ನಲ್ಲಿ ಸ್ಮಿತ್ ವಿಶ್ವದ ನಂಬರ್ ವನ್ ಆಟಗಾರರಾಗಿದ್ದಾರೆ. ಅವರೊಂದಿಗೆ, ಅತ್ಯಂತ ಭರವಸೆದಾಯಕ ಮತ್ತು ಅಪಾರ ಪ್ರತಿಭಾವಂತ ಮಾರ್ನಸ್ ಲಬುಶೇನ್ ಇದ್ದಾರೆ. ಹಾಗಾಗಿ, ಭಾರತದ ಬೌಲರ್​ಗಳು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಬೇಕಾಗಲಿದೆ,’’ ಎಂದು ಸಚಿನ್ ಹೇಳಿದ್ದಾರೆ.

ಎಲ್ಲರಂತೆ ಸಚಿನ್ ಸಹ, ಕೊನೆಯ ಮೂರು ಟೆಸ್ಟ್​ಗಳಿಗೆ ವಿರಾಟ್​ ಕೊಹ್ಲಿಯವರ ಗೈರುಹಾಜರಿ ದೊಡ್ಡ ಶೂನ್ಯವನ್ನು ಸೃಷ್ಟಿಸಲಿದೆಯೆಂದು ಹೇಳುತ್ತಾರೆ.

‘‘ಕೊನೆಯ 3 ಟೆಸ್ಟ್​ಗಳಿಗೆ ವಿರಾಟ್ ಅಲಭ್ಯತೆ ನಿಸ್ಸಂದೇಹವಾಗಿ ದೊಡ್ಡ ಶೂನ್ಯವನ್ನು ಸೃಷ್ಟಿಸಲಿದೆ. ಅವರ ಸ್ಥಾನವನ್ನು ತುಂಬುವುದು ಅಸಾಧ್ಯ. ಆದರೆ ಹಾಗಂತ, ಟೀಮು ನಿರಾಶೆಗೊಳಗಾಗಬೇಕಿಲ್ಲ. ಅವರ ಅಲಭ್ಯತೆ ಬೆಂಚ್ ಮೇಲೆ ಕೂತಿರುವ ರಿಸರ್ವ್ ಆಟಗಾರರಿಗೆ ಒಂದು ಸುವರ್ಣಾವಕಾಶವನ್ನು ಒದಗಿಸಲಿದೆ. ತಾವು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ಸಿದ್ಧರಿರುವುದನ್ನು ಸಾಬೀತು ಮಾಡಲು ಅವರು ಈ ಅವಕಾಶವನ್ನು ಬಳಸಿಕೊಳ್ಳಬೇಕು,’’ ಎಂದು ಮಾಸ್ಟರ್ ಬ್ಲಾಸ್ಟರ್ ಯುವ ಆಟಗಾರರಿಗೆ ಸಲಹೆ ನೀಡಿದ್ದಾರೆ.