ಟೀಮ್ ಇಂಡಿಯಾದ ಮೆಡಿಕಲ್ ತಂಡ ಬುಮ್ರಾ ಅವರೊಂದಿಗಿದ್ದು ಗಾಯದ ಸಮಸ್ಯೆಯನ್ನು ಮತ್ತು ಚೇತರಿಕೆಯ ಗತಿಯನ್ನು ಗಮನಿಸುತ್ತಿದೆ, ಬುಮ್ರಾ ಬ್ರಿಸ್ಬೇನ್ ಟೆಸ್ಟ್ನಲ್ಲಿ ಆಡುತ್ತಾರೆಯೇ ಇಲ್ಲವೇ ಎನ್ನುವುದನ್ನು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ನಿರ್ಧರಿಸುತ್ತಾರೆ ಎಂದು ರಾಠೋರ್ ಹೇಳಿದ್ದಾರೆ.
ಉದರದ ಸ್ನಾಯು ಸೆಳೆತಕ್ಕೊಳಗಾಗಿರುವ ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅಸ್ಟ್ರೇಲಿಯಾದ ವಿರುದ್ಧ ಬ್ರಿಸ್ಬೇನ್ನಲ್ಲಿ ಜನೆವರಿ 15ರಿಂದ ನಡೆಯಲಿರುವ 4ನೇ ಮತ್ತು ಅಂತಿಮ ಟೆಸ್ಟ್ ಆಡಲಾರರೆಂದೇ ಟೀಮ್ ಮ್ಯಾನೇಜ್ಮೆಂಟ್ ಸಿಡ್ನಿ ಟೆಸ್ಟ್ ಕೊನೆಗೊಂಡ ನಂತರ ಹೇಳಿತ್ತು. ಅದರೆ, ಟೀಮಿನ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋರ್ ಒಂದು ಆಶಾದಾಯಕ ಅಪ್ಡೇಟನ್ನು ಗುರುವಾರ ಬೆಳಗ್ಗೆ ನೀಡಿದ್ದಾರೆ.
ಭಾರತೀಯ ಸುದ್ದಿಸಂಸ್ಥೆಯೊಂದರ ಜೊತೆ ಇಂದು ಬೆಳಗ್ಗೆ ಮಾತಾಡಿರುವ ರಾಠೋರ್, ಮೆಡಿಕಲ್ ಟೀಮ್ ಅವರ ಸ್ನಾಯು ಸೆಳೆತದ ಸಮಸ್ಯೆಯನ್ನು ಸತತವಾಗಿ ಮಾನಿಟರ್ ಮಾಡುತ್ತಿದೆ, ಅವರು ಬ್ರಿಸ್ಬೇನ್ ಟೆಸ್ಟ್ ಆಡುತ್ತಾರೋ ಇಲ್ಲವೋ ಎನ್ನುವ ಬಗ್ಗೆ ಶುಕ್ರವಾರ ಬೆಳಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದೆಂದು ಹೇಳಿದ್ದಾರೆ.
‘ಟೀಮ್ ಇಂಡಿಯಾದ ಮೆಡಿಕಲ್ ತಂಡ ಬುಮ್ರಾ ಅವರ ಸಮಸ್ಯೆಯ ಮೇಲೆ ನಿರಂತರವಾಗಿ ನಿಗಾ ಇಟ್ಟಿದೆ. ಅವರು ಬ್ರಿಸ್ಬೇನ್ ಟೆಸ್ಟ್ನಲ್ಲಿ ಆಡಬಲ್ಲರೇ ಅಥವಾ ಇಲ್ಲವೇ ಅಂತ ನಾಳೆ ಗೊತ್ತಾಗುತ್ತದೆ,’ ಎಂದು ರಾಠೋರ್ ಹೇಳಿದ್ದಾರೆ.
ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಠೋರ್
‘ಈಗಲೂ ಅವರ ಗಾಯದ ಸಮಸ್ಯೆಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತದೆ. ನಮ್ಮ ಮೆಡಿಕಲ್ ತಂಡ ಅವರೊಂದಿಗಿದ್ದುಕೊಂಡು ಚೇತರಿಕೆಯ ಅಂಶವನ್ನು ಗಮನಿಸುತ್ತಿದೆ. ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರ ಮೇಲೆ ನಾವು ಯಾವ ಒತ್ತಡವನ್ನೂ ಹೇರುತ್ತಿಲ್ಲ. ಬುಮ್ರಾ ಆಡುವ ಇಲೆವೆನ್ನಲ್ಲಿತ್ತಾರೆಯೇ ಇಲ್ಲವೇ ಎನ್ನುವುದನ್ನು ಅವರೇ ನಿರ್ಧರಿಸುತ್ತಾರೆ, ಎಂದು ರಾಠೋರ್ ಹೇಳಿದ್ದಾರೆ.
ಪ್ರಮುಖ ಬೌಲರ್ಗಳ ಅನುಪಸ್ಥಿತಿಯಿಂದ ದುರ್ಬಲಗೊಂಡಿರುವ ಭಾರತೀಯ ತಂಡಕ್ಕೆ ಬುಮ್ರಾ ಆಡುವುದು ಅತ್ಯವಶ್ಯಕವಾಗಿದೆ. ಅವರು ಕೇವಲ 50 ಪ್ರತಿಶತದಷ್ಟು ಫಿಟ್ ಇದ್ದರೂ ಆಡಿಸಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ‘ಆಟಗಾರರಲ್ಲಿ ಗಟ್ಟಿತನ ಸಿದ್ಧತೆಯ ಮೂಲಕ ಬರುತ್ತದೆ ಎಂದು ನಾನು ಭಾವಿಸುತ್ತೇನೆ. ನಮ್ಮ ಆಟಗಾರರ ಮೇಲೆ ನಮಗೆ ಭರವಸೆಯಿದೆ ಮತ್ತು ಅವರಿಗೆ ತಮ್ಮ-ತಮ್ಮ ಸಾಮರ್ಥ್ಯಗಳ ಮೇಲೆ. ಒಂದು ಕೆಟ್ಟ ಇನ್ನಿಂಗ್ಸ್ನ ಆಧಾರದ ಮೇಲೆ ನಮ್ಮ ಆಟಗಾರರ ಸಾಮರ್ಥ್ಯವನ್ನು ಅಳೆಯಲಾಗದು. ಅಡಿಲೇಡ್ ಟೆಸ್ಟ್ನಲ್ಲಿ ಅವಮಾನಕರ ಸೋಲು ಆನುಭವಿಸಿದ ನಂತರ ಅವರು ಸುದೀರ್ಘ ಅವಧಿಗಳವರೆಗೆ ಅಭ್ಯಾಸ ನಡೆಸಿ ನಂಬಲಸದಳವೆನಿಸುವ ಮನೋಬಲವನ್ನು ಪ್ರದರ್ಶಿಸಿದ್ದಾರೆ,’ ಎಂದು ರಾಠೋರ್ ಹೇಳಿದ್ದಾರೆ.
ಶಮಿ, ಬುಮ್ರಾ ಮತ್ತು ಉಮೇಶ್
‘ನನ್ನ ವೈಯಕ್ತಿಕ ಆಭಿಪ್ರಾಯ ಹೇಳುವುದಾದರೆ, ನಮ್ಮ ಹುಡುಗರು ಸಶಕ್ತರಾಗಿದ್ದಾರೆ ಮತ್ತು ಅವರ ಮನಸ್ಥೈರ್ಯ ಅಚಲವಾಗಿದೆ. ಬಿಸ್ಬೇನ್ನಲ್ಲಿ ಮೈದಾನಕ್ಕಿಳಿಯುವ ಆಟಗಾರರು ನಮಗೆ ಲಭ್ಯವಿರುವ ಆಟಗಾರರನ್ನೊಳಗೊಳ್ಳಲಿರುವ ಅತ್ಯುತ್ತಮ ತಂಡವಾಗಿರುತ್ತದೆ. ಅವರು ತಮ್ಮ ಸಾಮರ್ಥ್ಯಕ್ಕನುಗುಣವಾದ ಪ್ರದರ್ಶನ ನೀಡಿದ್ದೇಯಾದಲ್ಲಿ, ಟೀಮ್ ಇಂಡಿಯಾ ಕಳಪೆ ಪ್ರದರ್ಶನ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ,’ ಎಂದು ರಾಠೋರ್ ಹೇಳಿದ್ದಾರೆ.
ಭಾರತದ ಬೌಲಿಂಗ್ ದಾಳಿ ಈಗಾಗಲೇ ಮೊಹಮ್ಮದ್ ಶಮಿ (ಮೊಣಕೈ ಮೂಳೆ ಮುರಿತ), ಉಮೇಶ್ ಯಾದವ್ (ಮೀನಖಂಡದ ಸಮಸ್ಯೆ) ಮತ್ತು ರವೀಂದ್ರ ಜಡೇಜಾ (ಹೆಬ್ಬಟ್ಟಿನ ಗಾಯ) ಅವರ ಸೇವೆಯನ್ನು ಕಳೆದುಕೊಂಡಿದೆ. ಭಾರತ ಮತ್ತು ಆಸ್ರೇಲಿಯಾ ನಡುವೆ ಬಾರ್ಡರ್-ಗಾವಸ್ಕರ್ ಟ್ರೋಫಿಗಾಗಿ ನಡೆಯುವ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯು 1-1 ರಿಂದ ಸಮವಾಗಿದ್ದು, ನಾಲ್ಕನೆ ಮತ್ತು ಅಂತಮ ಟೆಸ್ಟ್ ಬ್ರಿಸ್ಬೇನ್ನಲ್ಲಿ ನಡೆಯಲಿದೆ. ಸಿಡ್ನಿಯಲ್ಲಿ ನಡೆದ ಮೂರನೆ ಟೆಸ್ಟ್ ಡ್ರಾನಲ್ಲಿ ಕೊನೆಗೊಂಡಿತ್ತು.