ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸಂವಿಧಾನ ದಿನ ಆಚರಿಸಿದ ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. ಸರ್ಕಾರದ ನಡೆಗಳನ್ನು ಟೀಕಿಸಿದ್ದಾರೆ.
ಜಮ್ಮು ಕಾಶ್ಮೀರ: ಸಂವಿಧಾನವನ್ನೇ ಬದಲು ಮಾಡಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಂವಿಧಾನ ದಿನ ಆಚರಿಸುವುದು ಆಶ್ಚರ್ಯ ಮೂಡಿಸಿದೆ ಎಂದು ಪಿಡಿಪಿ ಪಕ್ಷದ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೇಂದ್ರ ಸರ್ಕಾರದ ಮೇಲೆ ಹರಿಹಾಯ್ದಿದ್ದಾರೆ. ಕೇಂದ್ರ ಸರ್ಕಾರ ಇಂದು ಸಂವಿಧಾನ ದಿನ ಆಚರಿಸಿದ ಹಿನ್ನೆಲೆಯಲ್ಲಿ ಅವರು ಸರ್ಕಾರವನ್ನು ಟೀಕಿಸಿದ್ದಾರೆ.
ಬಿಜೆಪಿ ಅಜೆಂಡಾಗಳ ಮೂಲಕ ಕೇಂದ್ರ ಸರ್ಕಾರ ಈಗಾಗಲೇ ಸಂವಿಧಾನವನ್ನು ಬದಲಾಯಿಸಿದೆ. ಸಿಎಎ, ಎನ್ಆರ್ಸಿ, ಲವ್ ಜಿಹಾದ್ನಂತಹ ಕಾಯ್ದೆಗಳನ್ನು ಜಾರಿಗೆ ತರಲು ಪ್ರಯತ್ನಿಸಿ ಸಂವಿಧಾನ ದೇಶದ ಜನರ ನೀಡಿದ ಮೂಲಭೂತ ಹಕ್ಕುಗಳನ್ನು ಸರ್ಕಾರ ಕಸಿಯುತ್ತಿದೆ. ಜಮ್ಮು ಕಾಶ್ಮೀರದ ರಾಜಕೀಯ ನಾಯಕರಿಗೆ ತನಿಖಾ ಸಂಸ್ಥೆಗಳ ಮೂಲಕ ಕಿರುಕುಳ ನೀಡುತ್ತಿದೆ ಎಂದು ಸಹ ಅವರು ಆಪಾದಿಸಿದ್ದಾರೆ.
ಮೆಹಬೂಬಾ ಮುಫ್ತಿ ಸೇರಿದಂತೆ ಜಮ್ಮು ಕಾಶ್ಮೀರದ ಹಲವು ನಾಯಕರಿಗೆ ಕೇಂದ್ರ ಸರ್ಕಾರ ಗೃಹ ಬಂಧನ ವಿಧಿಸಿತ್ತು. ಹೀಗಾಗಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಜನಬೆಂಬಲ ರೂಪಿಸಲು ಕಾಶ್ಮೀರದ ಪ್ರಾದೇಶಿಕ ಪಕ್ಷಗಳು ಗುಫ್ಕಾರ್ ಕೂಟ ರಚಿಸಿಕೊಂಡಿವೆ.