ಈ ಹಾಸ್ಟೆಲ್​ನ ನೀರಿನ ಟ್ಯಾಂಕ್​ ನೋಡಿಬಿಟ್ಟರೆ ಬೆಚ್ಚಿ ಬೀಳೋದು ಗ್ಯಾರಂಟಿ: ಇಲ್ಲಿನ ವಿದ್ಯಾರ್ಥಿಗಳಿಗೆ ಆರೋಗ್ಯದ ಚಿಂತೆ

ಸಮಸ್ಯೆ ಇರುವುದು ಇದೊಂದೇ ಹಾಸ್ಟೆಲ್​ನಲ್ಲಿ ಅಲ್ಲ. ಈ ವಿಶ್ವವಿದ್ಯಾಲಯ ವ್ಯಾಪ್ತಿಯ ಇನ್ನೂ ಅನೇಕ ಹಾಸ್ಟೆಲ್ ನಲ್ಲಿ ಇದಕ್ಕಿಂತಲೂ ಘೋರ ಸಮಸ್ಯೆಗಳಿವೆ. ಆದರೆ ವಿದ್ಯಾರ್ಥಿಗಳು ಅವುಗಳನ್ನು ಹೇಳಿಕೊಳ್ಳಲು ಭಯಪಡುತ್ತಾರೆ.

  • ನರಸಿಂಹಮೂರ್ತಿ ಪ್ಯಾಟಿ
  • Published On - 18:20 PM, 7 Jan 2021
ಗಲೀಜು ತುಂಬಿರುವ ನೀರಿನ ಟ್ಯಾಂಕ್​

ಧಾರವಾಡ: ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಗೋದಾವರಿ ವಿದ್ಯಾರ್ಥಿಗಳ ವಸತಿ ನಿಲಯ ಪ್ರಾರಂಭವಾಗಿ ಕೆಲವು ತಿಂಗಳುಗಳು ಕಳೆದಿವೆ. ವಿದ್ಯಾರ್ಥಿಗಳೂ ಬಂದು ವಾಸವಾಗಿದ್ದಾರೆ. ಆದರೆ ಇಲ್ಲಿನ ವ್ಯವಸ್ಥೆ ಮಾತ್ರ ಘನಘೋರವಾಗಿದೆ.

ಕೊರೊನಾ ಹಾವಳಿ ಕಡಿಮೆಯಾಗುತ್ತಿರುವ ಬೆನ್ನಲ್ಲೇ ಈಗೀಗ ಶಾಲಾ ಕಾಲೇಜುಗಳು ಓಪನ್ ಆಗುತ್ತಿವೆ. ಕೊವಿಡ್​-19 ನಿಯಂತ್ರಣಾ ನಿಯಮಗಳನ್ನು ರೂಪಿಸಿ ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳನ್ನು ಆರಂಭ ಮಾಡಿದೆ. ಇದಕ್ಕೂ ಮೊದಲೇ ರಾಜ್ಯದ ವಿಶ್ವವಿದ್ಯಾಲಯಗಳ ವ್ಯಾಪ್ತಿಯ ಕೆಲವು ವಸತಿ ನಿಲಯಗಳು ಪ್ರಾರಂಭವಾಗಿವೆ. ಆದರೆ ಕೊರೊನಾ ಕಾಲದಲ್ಲಿ ಮುಚ್ಚಿದ್ದ ಹಾಸ್ಟೆಲ್​ಗಳನ್ನು ತೆರೆಯುವ ಮೊದಲು, ಅಲ್ಲಿನ ಸ್ವಚ್ಛತೆಗೆ ಆದ್ಯತೆ ನೀಡಿಲ್ಲ. ಅದಕ್ಕೊಂದು ನಿದರ್ಶನವೆಂದರೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಯ ಗೋದಾವರಿ ಹಾಸ್ಟೆಲ್​. ಇಲ್ಲಿನ ನೀರಿನ ಟ್ಯಾಂಕ್​ಗಳನ್ನು ನೋಡಿಬಿಟ್ಟರೆ ಭಯವಾಗುವುದು ಗ್ಯಾರಂಟಿ.

ಕೆಟ್ಟ ಗಲೀಜಾಗಿದೆ ಟ್ಯಾಂಕ್​..!
ಹಾಸ್ಟೆಲ್​ ಆವರಣದಲ್ಲಿ ಅಳವಡಿಸಲಾಗಿರುವ ಈ ನೀರಿನ ಟ್ಯಾಂಕ್​ನೊಳಗೆ ಒಮ್ಮೆ ಇಣುಕಿಬಿಟ್ಟರೆ ಬೆಚ್ಚಿ ಬೀಳುವಂತಾಗುತ್ತದೆ. ಟ್ಯಾಂಕ್​ನ ತುಂಬೆಲ್ಲ ಗಲೀಜು ತುಂಬಿಕೊಂಡಿದೆ. ಮೊದಲನೇದಾಗಿ ಯಾವ ಟ್ಯಾಂಕ್​ಗಳಿಗೂ ಮುಚ್ಚಳವೇ ಇಲ್ಲ. ಇದರಲ್ಲಿ ಬಿದ್ದ ಎಲೆಗಳು ಕೊಳೆತು ಹೋಗಿವೆ. ಇನ್ನು ಹಲ್ಲಿ, ಓತಿಕ್ಯಾತಗಳೂ ಕಾಣಿಸುತ್ತವೆ. ತಳದಲ್ಲಂತೂ ಮಣ್ಣು, ಕೆಸರಿನ ರಾಶಿಯೇ ತುಂಬಿಕೊಂಡಿದೆ. ಈ ನೀರು ಕುಡಿದ ವಿದ್ಯಾರ್ಥಿಗಳ ಆರೋಗ್ಯ ಕೆಡುವುದು ನಿಶ್ಚಿತ ಎನ್ನುತ್ತಿದ್ದಾರೆ ಸ್ಥಳೀಯರು. ಇನ್ನು ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ.ಗುಡಸಿ ಬಳಿ ಕೇಳಿದರೆ, ನಾನು ಇಂಥ ಟ್ಯಾಂಕ್​ಗಳನ್ನೆಲ್ಲ ನೋಡುತ್ತ ಕೂರಲು ಆಗತ್ತಾ ಎಂದು ಪ್ರಶ್ನಿಸಿದ್ದಾರೆ. ಇವರು ಅಧಿಕಾರ ಸ್ವೀಕರಿಸಿ ಅರ್ಧವರ್ಷವೇ ಕಳೆಯುತ್ತ ಬಂದರೂ ಇಲ್ಲಿನ ಪರಿಸ್ಥಿತಿಯ ಬಗ್ಗೆ ಅರಿವೇ ಇಲ್ಲದಂತೆ ಇದ್ದದ್ದು ಆಶ್ಚರ್ಯ ಎನ್ನುತ್ತಾರೆ ಶಿಕ್ಷಣ ಪ್ರೇಮಿಗಳು.

ಇದೊಂದೇ ಹಾಸ್ಟೆಲ್ ಅಲ್ಲ 
ಇನ್ನು ಇಂಥ ಸಮಸ್ಯೆ ಇರುವುದು ಇದೊಂದೇ ಹಾಸ್ಟೆಲ್​ನಲ್ಲಿ ಅಲ್ಲ. ಈ ವಿಶ್ವವಿದ್ಯಾಲಯ ವ್ಯಾಪ್ತಿಯ ಇನ್ನೂ ಅನೇಕ ಹಾಸ್ಟೆಲ್ ನಲ್ಲಿ ಇದಕ್ಕಿಂತಲೂ ಘೋರ ಸಮಸ್ಯೆಗಳಿವೆ. ಆದರೆ ವಿದ್ಯಾರ್ಥಿಗಳು ಅವುಗಳನ್ನು ಹೇಳಿಕೊಳ್ಳಲು ಭಯಪಡುತ್ತಾರೆ. ಕುಡಿಯುವ ನೀರನ್ನೇ ಸರಿಯಾಗಿ ನೀಡಲು ಸಾಧ್ಯವಾಗದ ಹಾಸ್ಟಲ್​ ಸಿಬ್ಬಂದಿಯಿಂದ ಒಳ್ಳೆಯ ಆಹಾರ ನಿರೀಕ್ಷೆ ಮಾಡಲಾದರೂ ಹೇಗೆ ಸಾಧ್ಯ ಎಂಬುದು ಬಹುತೇಕ ವಿದ್ಯಾರ್ಥಿಗಳ ಪ್ರಶ್ನೆ.

 

ಹು-ಧಾ ಪಾಲಿಕೆಗೆ ಹರಿದು ಬಂತು ಭರ್ಜರಿ ತೆರಿಗೆ! ಕೊರೊನಾ ಹಾವಳಿಯಿಂದ ತತ್ತರಿಸಿದ್ದರೂ.. ತೆರಿಗೆ ಕಟ್ಟುವಲ್ಲಿ ಜನ ಹಿಂದೆ ಬಿದ್ದಿಲ್ಲ