ಹಿಡಿ ಗಾತ್ರದ ಪಿಟ್ಟ ಹಕ್ಕಿಯ ಸಾವಿರಾರು ಕಿಲೋಮೀಟರ್ ಸಂಚಾರದ ಸಾಹಸ ಕಥೆ

ನೋಡಲು ಹಿಡಿಗಾತ್ರದ ಹಕ್ಕಿ. ಹೆಸರು ಪಿಟ್ಟ, ಹಿಮಾಲಯ, ನೇಪಾಳ, ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬರುವ ಚಿಕ್ಕ ಹಕ್ಕಿಯ ಸಾಹಸದ ಕಥೆ ಇಲ್ಲಿದೆ ಓದಿ.

  • ದಿಲೀಪ್ ಚೌಡಹಳ್ಳಿ
  • Published On - 6:22 AM, 13 Jan 2021
ಪಿಟ್ಟ ಹಕ್ಕಿ ( ನವರಂಗ)

ಮೈಸೂರು: ಹಕ್ಕಿಗಳು ವಿದೇಶಗಳಿಂದ ವಲಸೆ ಬರೋದು ಸರ್ವೇ ಸಾಮಾನ್ಯ.‌ ಆದರೆ ಈ ವಲಸೆ ಹಕ್ಕಿಗಳು ಹಿಡಿ ಗಾತ್ರದಷ್ಟಿದ್ದರೂ, ಹಿಮಾಲಯದಿಂದ ದಕ್ಷಿಣ ಭಾರತದವರೆಗೆ ವಲಸೆ ಬರುತ್ತವೆ. ಈ ಹಕ್ಕಿಯನ್ನು ಪುಟ್ಟ ಗಾತ್ರದ ಪಿಟ್ಟ (ನವರಂಗ) ಎಂದು ಕರೆಯಲಾಗುತ್ತದೆ. ಈ ಹಕ್ಕಿಯ ವೈಶಿಷ್ಟ್ಯ ಏನಿರಬಹುದು ಎಂಬುದೇ ಕುತೂಹಲದ ಕೆರಳಿಸುವ ಸಂಗತಿ.

ಸಾಮಾನ್ಯವಾಗಿ ಚಳಿಗಾಲದ ಸಂದರ್ಭದಲ್ಲಿ ಆಹಾರಕ್ಕಾಗಿ ಹಕ್ಕಿಗಳು ವಲಸೆ ಹೋಗುತ್ತವೆ. ನಂತರ ಇಲ್ಲಿ ಕೆಲ ತಿಂಗಳು ವಾಸ್ತವ್ಯ ಮಾಡಿ ಮತ್ತೆ ಅವುಗಳು ತಮ್ಮ ಜಾಗಕ್ಕೆ ತೆರಳಿ ಸಂತಾನೋತ್ಪತ್ತಿಯಲ್ಲಿ ತೊಡಗುತ್ತವೆ. ಎಲ್ಲಾ ವಲಸೆ ಹಕ್ಕಿಗಳು ಮಾಡುವಂಥ ಕ್ರಿಯೆ ಇದು. ಅದೇ ರೀತಿ ಪುಟ್ಟ ಗಾತ್ರದ ಪಿಟ್ಟ ಹಕ್ಕಿಯು ಕೂಡ ವಲಸೆ ಬರೋದು ವಿಶೇಷ.

ಪಿಟ್ಟ ಹಕ್ಕಿಯ ಜೀವನ ಕ್ರಮ: ಪಿಟ್ಟ ಹಕ್ಕಿಯು ಹಿಮಾಲಯ, ಪಾಕಿಸ್ತಾನ, ನೇಪಾಳದಲ್ಲಿ ಕಂಡು ಬರುವಂತ ಹಕ್ಕಿಗಳಾಗಿದೆ. ಇವುಗಳ ಆಹಾರ ಸಣ್ಣ ಗಾತ್ರದ ಕೀಟಗಳಾಗಿವೆ. ಚಳಿಗಾಲದಲ್ಲಿ ಅಥವಾ ಹಿಮ ಬೀಳುವ ಸಮಯದಲ್ಲಿ ಕೀಟಗಳು ಭೂಮಿಯೊಳಗೆ ಸೇರಿಳ್ಳುತ್ತವೆ. ಈ ರೀತಿ ಭೂಮಿಗೆ ಕೀಟ ಸೇರಿಕೊಂಡರೆ ಪಿಟ್ಟಗಳಿಗೆ ಆಹಾರದ ಕೊರತೆಯುಂಟಾಗುತ್ತದೆ. ಹಾಗಾಗಿ, ಈ ಹಕ್ಕಿ ಹಿಮಾಲಯದಿಂದ ಹಾರಿಕೊಂಡು ದಕ್ಷಿಣ ಭಾರತದ ಕಡೆ ವಲಸೆ ಬರುತ್ತವೆ. ಇವುಗಳು ಕರ್ನಾಟಕದಿಂದ ಶ್ರೀಲಂಕಾದವರೆಗೂ ವಲಸೆ ಹೋಗುತ್ತವೆ. ಗುಂಪಾಗಿ ಬರುವಂಥ ಈ ಹಕ್ಕಿಗಳು ಕಾಡಿನ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ.

ಒಂದೇ ಸ್ಥಳಕ್ಕೆ ಪ್ರತಿ ವರ್ಷ ವಲಸೆ ಬರುವ ಪಿಟ್ಟ ಹಕ್ಕಿಗಳು: ಹಿಂದೆ ಯಾವ ಸ್ಥಳಕ್ಕೆ ವಲಸೆ ಬಂದಿದ್ದವೋ, ಪ್ರತಿ ವರ್ಷ ಅದೇ ಸ್ಥಳಕ್ಕೆ ವಲಸೆ ಬರೋದು ಈ ಹಕ್ಕಿಯ ವಿಶೇಷ. ಅದರಲ್ಲೂ ಹೆಚ್ಚಾಗಿ, ಯಾವ ಮರದಲ್ಲಿ ಕಾಣಿಸಿಕೊಂಡಿರುತ್ತದೆ ಅದೇ ಮರದಲ್ಲಿ ಮುಂದಿನ ವರ್ಷವು ಕಾಣಿಸಿಕೊಂಡಿರುವ ದಾಖಲೆಗಳಿದೆ. ಈ ಹಕ್ಕಿಯ ವಲಸೆ ಕ್ರಿಯೆ ಪಕ್ಷಿತಜ್ಞರಿಗೂ ಅಚ್ಚರಿ ಮೂಡಿಸುವಂಥದ್ದು.

ಪಿಟ್ಟ ಹಕ್ಕಿಯ ವಿಶೇಷ: ಪಿಟ್ಟವನ್ನು ಕನ್ನಡದಲ್ಲಿ ನವರಂಗ ಎಂದು ಕರೆಯಲಾಗುತ್ತದೆ. ಇದರ ಮೈ ಹಲವು ಬಣ್ಣಗಳಿಂದ ಕೂಡಿರುವುದರಿಂದ ನವರಂಗ ಎಂದು ಹೆಸರು ಬಂದಿದೆ.‌ ನೋಡಲು ಹಿಡಿಗಾತ್ರದಲ್ಲಿರುವುದರಿಂದ ಇದನ್ನ ನೋಡಿದರೆ ಹಾರಾಟ ಮಾಡಲು ಸಾಧ್ಯವೇ ಎನಿಸುತ್ತದೆ. ಆದರೆ ಹಿಮಾಲಯದಿಂದ ವಲಸೆ ಬರುತ್ತವೆ ಎಂಬುದೇ ಅಚ್ಚರಿ ಮೂಡಿಸುವ ಸಂಗತಿ.

ಪ್ರತಿವರ್ಷ ಈ ಹಕ್ಕಿಗಳು ಹಿಂದೆ ಬಂದಂತ ಸ್ಥಳಕ್ಕೆ ವಲಸೆ ಬರುತ್ತವೆ. ಆದರೆ ಈ ಬಾರಿ ಆ ಸ್ಥಳಕ್ಕೆ ವಲಸೆ ಬಂದಿಲ್ಲ ಎಂದರೆ ವಲಸೆಯೆ ಬಂದಿಲ್ಲ ಎಂದರ್ಥವಲ್ಲ.‌ ಆ ಸ್ಥಳಗಳಲ್ಲಿ ಏನಾದರೂ ಬದಲಾವಣೆಯಾಗಿದ್ದರೆ. ಆಹಾರಕ್ಕಾಗಿ ಅವುಗಳು ಬೇರೆ ಸ್ಥಳಕ್ಕೆ ವಲಸೆ ಹೋಗುತ್ತವೆ.‌ ವಲಸೆ ಬರುವಾಗ ಇವುಗಳು ಸಾಕಷ್ಟು ಸವಾಲುಗಳನ್ನು ಎದುರಿಸುತ್ತವೆ. ಬಿರುಗಾಳಿ ಚಂಡಮಾರುತಗಳಿಗೆ ಸಿಲುಕಿ ಪ್ರಾಣಕಳೆದುಕೊಳ್ಳುವ ಸಾಧ್ಯತೆಗಳು ಇರುತ್ತವೆ ಎಂದು ಪಕ್ಷಿತಜ್ಞ ಮನು tv9 ಡಿಜಿಟಲ್​ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

ಕಬಿನಿ ಹಿನ್ನೀರಿನಲ್ಲಿ ವಿದೇಶಿ ಪಕ್ಷಿಗಳು ಕಲರವ: ಫಾರಿನ್ ಹಕ್ಕಿಗಳ ನೋಟವೇ ಬಲುಚೆಂದ