ಪ್ರತಿಷ್ಠೆ ಬಿಟ್ಟು ಮೆಗ್ಗಾನ್ ಆಸ್ಪತ್ರೆಗೆ ಈಶ್ವರಪ್ಪ ಎಂಟ್ರಿ: ನಿರ್ದೇಶಕರಿಗೆ ಬೆವರಿಳಿಸಿದ ಮಿನಿಸ್ಟರ್!

ಶಿವಮೊಗ್ಗ: ಬಡರೋಗಿಗಳ ಪಾಲಿಗೆ ಸಂಜೀವಿನಿ ಆಗಬೇಕಿದ್ದ ಮೆಗ್ಗಾನ್ ಜಿಲ್ಲಾಸ್ಪತ್ರೆ ಅವ್ಯವಸ್ಥೆಯ ಆಗರವಾಗಿದೆ. ಇದೇ ವಿಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪ ಹಾಗೂ ಆಸ್ಪತ್ರೆ ನಿರ್ದೇಶಕರ ನಡುವೆ 3 ತಿಂಗಳಿಂದ ಶೀತಲ ಸಮರ ನಡೀತಿತ್ತು. ನಿರ್ದೇಶಕರು ತಮ್ಮ ಮಾತಿಗೆ ಬೆಲೆ ಕೊಟ್ಟಿಲ್ಲ ಅಂತ ಸಚಿವರು ಆಸ್ಪತ್ರೆಯತ್ತ ಸುಳಿದಿರಲಿಲ್ಲ. ಅಷ್ಟೇ ಯಾಕೆ ಕೆಲ ದಿನಗಳ ಹಿಂದೆ ಸಂಸದ ಬಿ.ವೈ.ರಾಘವೇಂದ್ರ ಜೊತೆ ಮೊಬೈಲ್​ನಲ್ಲಿ ಮಾತನಾಡುವಾಗ, ಆ ಅಯೋಗ್ಯ ಇರೋವರೆಗೆ ಆಸ್ಪತ್ರೆಗೆ ಕಾಲಿಡಲ್ಲ ಅಂತ ಪ್ರತಿಜ್ಞೆ ಮಾಡಿದ್ರು.

ಸಿಮ್ಸ್ ನಿರ್ದೇಶಕರಿಗೆ ಈಶ್ವರಪ್ಪ ಕ್ಲಾಸ್​:
ಯೆಸ್, ತಮ್ಮ ಪ್ರತಿಷ್ಠೆ ಮತ್ತು ಪ್ರತಿಜ್ಞೆಯನ್ನ ಬದಿಗಿಟ್ಟ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಕೊನೆಗೂ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಸಭೆ ನಡೆಸಿದ್ರು. ಮೊದಲೇ ಸಿಮ್ಸ್ ನಿರ್ದೇಶಕರಾದ ಲೇಪಾಕ್ಷಿ ಮೇಲೆ ಕೋಪಗೊಂಡಿದ್ದ ಸಚಿವರು, ಸಭೆಯಲ್ಲಿ ಅವರನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ್ರು. ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಕ್ಲಾಸ್ ತೆಗೆದುಕೊಂಡ್ರು. ಅತ್ತ ಸಿಮ್ಸ್ ನಿರ್ದೇಶಕರು ಮಾತ್ರ ತಾಳ್ಮೆಯಿಂದಲೇ ಸಮಸ್ಯೆಗಳ ಕುರಿತು ಮಾಹಿತಿ ನೀಡ್ತಿದ್ರು.

ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ:
ಬರೀ ನಿರ್ದೇಶಕರು ಮಾತ್ರವಲ್ಲ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಸೇರಿದಂತೆ ಇತರೆ ಅಧಿಕಾರಿಗಳಿಗೂ ಜಿಲ್ಲಾ ಉಸ್ತುವಾರಿ ಸಚಿವರು ಸಖತ್ತಾಗೆ ಬೆವರಿಳಿಸಿದ್ರು. ಬಳಿಕ ಮಾತನಾಡಿದ ಸಚಿವ ಈಶ್ವರಪ್ಪ, ನಾನು ಆಸ್ಪತ್ರೆಗೆ ಭೇಟಿ ನೀಡಿರೋದ್ರಲ್ಲಿ ಯಾವುದೇ ಪ್ರತಿಷ್ಠೆ ಇಲ್ಲ. ಆಸ್ಪತ್ರೆ ಅಭಿವೃದ್ಧಿಯಾಗಬೇಕು ಅನ್ನೋದು ನನ್ನ ಆಸೆ ಅಂದ್ರು.

ಒಟ್ನಲ್ಲಿ, ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ ಮೆಗ್ಗಾನ್ ಆಸ್ಪತ್ರೆಗೆ ಹಿಡಿದ ಗ್ರಹಣ ಬಿಟ್ಟಿದೆ. ರೋಗಿಗಳ ಹಿತದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಕೊನೆಗೂ ಜಿಲ್ಲಾಸ್ಪತ್ರೆಗೆ ಕಾಲಿಟ್ಟಿದ್ದಾರೆ. ಜೊತೆಗೆ ಸಮಸ್ಯೆಗೆ ಕಾರಣವಾಗಿರುವ ಅಧಿಕಾರಿಗಳನ್ನ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡು ಬಿಸಿ ಮುಟ್ಟಿಸಿದ್ದಾರೆ.

Related Tags:

Related Posts :

Category: