ವಾರ್ಷಿಕ ಶಾಲಾ ಶುಲ್ಕ ಸಂಗ್ರಹಕ್ಕೆ ಸುರೇಶ್ ಕಡಿವಾಣ: ದಿಡ್ಡಿ ಬಾಗಿಲು ತಡವಾಗಿ ಹಾಕುವ ಯತ್ನ!

  • TV9 Web Team
  • Published On - 11:55 AM, 7 Sep 2020

ಚಾಮರಾಜನಗರ: ಮಹಾಮಾರಿ ಕೊರೊನಾದಿಂದಾಗಿ ಶಾಲೆಗಳು ಮುಚ್ಚಿವೆ. ಆನ್​ಲೈನ್​ನಲ್ಲಿ ಪಾಠಗಳನ್ನು ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಭವಿಷ್ಯಕ್ಕೆ ಮಂಕು ಬಡಿದಂತಾಗಿದೆ. ಆದರೆ ಈಗಾಗಲೇ ಬಹುತೇಕ ಖಾಸಗಿ ಶಾಲೆಗಳು ವಾರ್ಷಿಕ ಶುಲ್ಕ ಸಂಗ್ರಹ ಮಾಡುತ್ತಿವೆ.

ಶಾಲೆ ತೆರೆದಿಲ್ಲದಿದ್ದರೂ ವಾರ್ಷಿಕ ಶಾಲಾ ಶುಲ್ಕ ಪಾವತಿಸಲು ಪೋಷಕರಿಗೆ ಶಾಲೆಗಳು ಒತ್ತಡ ಹಾಕುತ್ತಿವೆ. ಬಹುತೇಕ ಶಾಲೆಗಳಲ್ಲಿ ಪೋಷಕರಿಂದ ಈ ವಾರ್ಷಿಕ ಶುಲ್ಕ ಕಟ್ಟಿಸಿಕೊಳ್ಳಲಾಗಿದೆ. ಇದು ಶಿಕ್ಷಣ ಸಚಿವ ಸುರೇಶ್​ ಕುಮಾರ್ ಅವರ ಗಮನಕ್ಕೆ ತಡವಾಗಿ ಬಂದಂತಿದ್ದು, ಖಾಸಗಿ ಶಾಲೆಗಳಿಂದ 1 ವರ್ಷದ ಶುಲ್ಕ ಸಂಗ್ರಹ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಸಚಿವ ಸುರೇಶ್ ಕುಮಾರ್ ಖಾಸಗಿ ಶಾಲೆಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಖಾಸಗಿ ಶಾಲೆಗಳು ವಾರ್ಷಿಕ ಶುಲ್ಕ ಸಂಗ್ರಹಿಸುವಂತಿಲ್ಲ. ಒಂದು ಟರ್ಮ್​ನ (ಕ್ವಾರ್ಟರ್​ ಶುಲ್ಕ) ಶುಲ್ಕವನ್ನ ಮಾತ್ರ ಸಂಗ್ರಹಿಸಬೇಕು. ಸಂಗ್ರಹಿಸಿದ ಶುಲ್ಕವನ್ನು ಶಿಕ್ಷಕರ ವೇತನಕ್ಕಾಗಿ ಮಾತ್ರ ಬಳಕೆ ಮಾಡಿಕೊಳ್ಳಬೇಕು. ಖಾಸಗಿ ಶಾಲೆಗಳ ಶಿಕ್ಷಕರ ಸಮಸ್ಯೆ ನೋಡಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸಂಗ್ರಹಿಸಿದ ಶುಲ್ಕದಿಂದ ಶಿಕ್ಷಕರ ವೇತನವಷ್ಟೇ ನೀಡಬೇಕು. ಶಿಕ್ಷಕರ ವೇತನ ನೀಡದೆ ಅನ್ಯ ಕಾರ್ಯಕ್ಕೆ ಬಳಸಿದರೆ‌ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಖಾತೆ ಸಚಿವ ಎಸ್​.ಸುರೇಶ್​ ಕುಮಾರ್ ಎಚ್ಚರಿಕೆ ನೀಡಿದ್ದಾರೆ.