‘ಮಿಸ್​ ದೆಹಲಿ’ ಅರೆಸ್ಟ್! ವಂಚಿಸಲು ಹೋಗಿ ಗೆಳೆಯನ ಜೊತೆಗೆ ಸಿಕ್ಕಿಬಿದ್ದ ಸುಂದರಿಯ ಕತೆ ಇದು

  • sadhu srinath
  • Published On - 17:21 PM, 20 Nov 2020

ನವದೆಹಲಿ: ಟ್ರಿಪ್ ಗೆ ಹೋಗಿ ಮಜಾ ಮಾಡುವುದಕ್ಕಾಗಿ ಫಾರ್​ಎಕ್ಸ್​ ಸಂಸ್ಥೆಯ (ವಿದೇಶಿ ಕರೆನ್ಸಿ ವಿನಿಮಯ) ಉದ್ಯೋಗಿಯನ್ನೇ ವಂಚಿಸಿದ್ದ ಯುವತಿ ಮತ್ತವಳ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರೂ ಸೇರಿ, ಪಕ್ಕಾ ಪ್ಲ್ಯಾನ್ ಮಾಡಿ, ನ.5ರಂದು ಉದ್ಯೋಗಿಯಿಂದ 3,300 US ಡಾಲರ್​​ಗಳನ್ನು ಎಗರಿಸಿದ್ದರು.

ಯುವತಿಯ ಹೆಸರು ಅಮೃತಾ ಸೇಥಿ ಹಾಗೂ ಆಕೆಯ ಗೆಳೆಯ ಅಕ್ಷಿತ್ ಜಾಂಬ್. ಅಮೃತಾ ಸೇಥಿ ತಾನೊಬ್ಬ ಸಾಮಾಜಿಕ ಕಾರ್ಯಕರ್ತೆ, ಫ್ಯಾಶನ್ ಡಿಸೈನರ್, ಏಷ್ಯಾದ ಟಾಪ್ ಟೆನ್ ವೃತ್ತಿಪರ ಪೋಕರ್ ಆಟಗಾರರಲ್ಲಿ ಒಬ್ಬಳು, ‘ಮಿಸ್ ದೆಹಲಿ’ ಎಂದು ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹೇಳಿಕೊಂಡಿದ್ದಾಳೆ. ಅವಳ ಖಾತೆ ವೆರಿಫೈಡ್ ಅಲ್ಲ. ಇವರಿಬ್ಬರೂ ಗೋವಾಕ್ಕೆ ಟ್ರಿಪ್​ ಹೋಗಿ, ಪೋಕರ್ ಆಡುವುದಕ್ಕೋಸ್ಕರ ಹಣ ಕದ್ದಿದ್ದರು ಎಂದು ದೆಹಲಿ ಪೊಲೀಸರು ಇದೀಗ ತಿಳಿಸಿದ್ದಾರೆ.

ಬ್ಯಾಗ್​ ಎಳೆದುಕೊಂಡು ಹೋದರು!
ಅಮೃತಾ ಮತ್ತು ಅಕ್ಷಿತ್ ಪಶ್ಚಿಮ ದೆಹಲಿಯ ನಿವಾಸಿಗಳು. ನವೆಂಬರ್ 5ರಂದು ಹೌಜ್ ಖಾಸ್​​ನಲ್ಲಿರುವ ಫಾರ್​ಎಕ್ಸ್​ ಕಂಪನಿಗೆ ಕರೆ ಮಾಡಿ, ನಮ್ಮ ಬಳಿ 2.50 ಲಕ್ಷ ರೂ. ಇದೆ. ಅದರ ಬದಲು ಯುಎಸ್ ಡಾಲರ್ ಕೊಡಬೇಕಿತ್ತು ಎಂದು ವಿಧೇಯವಾಗಿ ಕೇಳಿದ್ದಾರೆ. ಸಂಸ್ಥೆಯ ಮನೋಜ್ ಸೂದ್ ಎಂಬ ಉದ್ಯೋಗಿ ಡಾಲರ್ ತೆಗೆದುಕೊಂಡು ದಕ್ಷಿಣ ದೆಹಲಿಯ ಪಂಚಶೀಲ ಕ್ಲಬ್ ಬಳಿ ತೆರಳಿದ್ದರು.

ಆದರೆ ಅಲ್ಲಿ ಈ ಜೋಡಿ ತನ್ನ ನಿಜರೂಪ ತೋರಿಸಿದೆ. ನಾವು ಹಣ ವಿತ್​ಡ್ರಾ ಮಾಡಬೇಕು. ಸದ್ಯ ಸಮಸ್ಯೆ ಇದೆ. ನಂತರ ಮಾಡುತ್ತೇವೆ ಎಂದೆಲ್ಲ ಕತೆ ಕಟ್ಟಿದ್ದಾರೆ. ಅವರ ನಡೆಯಿಂದ ಅನುಮಾನಗೊಂಡ ಮನೋಜ್​ ಡಾಲರ್​ ಕೊಡಲು ನಿರಾಕರಿಸಿದಾಗ ಕೈನಿಂದ ಬ್ಯಾಗ್​ ಕಿತ್ತುಕೊಂಡು ಕಾರಿನಲ್ಲಿ ಎಸ್ಕೇಪ್​ ಆಗಿದ್ದಾರೆ.

ಆ ಪ್ರದೇಶದಲ್ಲಿ ಇದ್ದ ಸಿಸಿಟಿವಿ ಫೂಟೇಜ್ ಗಳಿಂದ ಕಾರಿನ ನಂಬರ್ ನೋಡಿದ ಪೊಲೀಸರು, ಆರೋಪಿಗಳನ್ನು ಟ್ರೇಸ್ ಮಾಡಿದ್ದಾರೆ. ನಂತರ ಗೋವಾ ಪೊಲೀಸರು ಇಬ್ಬರನ್ನೂ ಅರೆಸ್ಟ್ ಮಾಡಿದ್ದಾರೆ.