ನೊಂದ ಶಾಸಕನಿಗೆ ಸಿಕ್ತು ತುಸು ಸಾಂತ್ವನ: ಅಖಂಡ ಶ್ರೀನಿವಾಸಮೂರ್ತಿ ತಾಯಿಯ ಮಾಂಗಲ್ಯ ಸಿಕ್ತು!

ಬೆಂಗಳೂರು: ಡಿ.ಜೆ. ಹಳ್ಳಿಯಲ್ಲಿ ಸಂಭವಿಸಿದ ಗಲಭೆಯಲ್ಲಿ ಅತಿಹೆಚ್ಚು ನೋವು ಮತ್ತು ನಷ್ಟ ಅನುಭವಿಸಿದ್ದು ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸಮೂರ್ತಿ. ಗಲಭೆಕೋರರು ಹಚ್ಚಿದ ದಳ್ಳುರಿಗೆ ಶಾಸಕನ ಮತ್ತು ಆತನ ಸಹೋದರಿಯರ ಮನೆ ಸುಟ್ಟು ಭಸ್ಮವಾಗಿಬಿಟ್ಟಿತ್ತು. ಮನೆಯಲ್ಲಿದ್ದ ಚಿನ್ನ, ನಗ-ನಾಣ್ಯ ಹಾಗೂ ಅಮೂಲ್ಯ ವಸ್ತುಗಳ ಕಳ್ಳತನವೂ ಆಗಿದೆ ಎಂದು ಶಾಸಕನ ಕುಟುಂಬಸ್ಥರು ಮನನೊಂದಿದ್ದರು.

ಈ ನಡುವೆ, ಶಾಸಕ ಅಖಂಡ ಶ್ರೀನಿವಾಸಮೂರ್ತಿ ತೀವ್ರ ನೋವುಂಟು ಮಾಡಿದ್ದ ಸಂಗತಿಯೆಂದ್ರೆ ಕಳುವಾಗಿದೆ ಎಂದು ತಿಳಿದಿದ್ದ ಶಾಸಕರ ತಾಯಿಯ ಮಾಂಗಲ್ಯ ಸರ. ಆದರೆ ಇದೀಗ, ನೊಂದ ಶಾಸಕರಿಗೆ ತುಸು ಸಾಂತ್ವನ ನೀಡುವಂತೆ ಅಖಂಡ ಶ್ರೀನಿವಾಸಮೂರ್ತಿಯ ತಾಯಿಯ ಮಾಂಗಲ್ಯ ಸರ ಪತ್ತೆಯಾಗಿದೆ. ಸುಟ್ಟು ಕರಕಲಾಗಿದ್ದ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಪತ್ತೆಯಾಗಿದೆ.

‘ಯಾರೋ ಮಾಡಿದ ತಪ್ಪಿಗೆ ನಮ್ಮ ಮೇಲೆ ದಾಳಿ ಏಕೆ?’
ಗಲಭೆ ನಡೆದ ಬಳಿಕ ಇಂದು ಮೊದಲನೇ ಬಾರಿ ಕಾವಲ್ ‌ಭೈರಸಂದ್ರಕ್ಕೆ ಅಖಂಡ ಶ್ರೀನಿವಾಸ ಮೂರ್ತಿ ಭೇಟಿ ಕೊಟ್ಟರು. ಭೇಟಿ ಬಳಿಕ ಮಾತನಾಡಿದ ಶಾಸಕ ಯಾರೇ ತಪ್ಪಿತಸ್ಥರಾಗಿದ್ದರೂ ಕಠಿಣ ಶಿಕ್ಷೆ ಆಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಯಾರೋ ಮಾಡಿದ ತಪ್ಪಿಗೆ ನಮ್ಮ ಮೇಲೆ ದಾಳಿ ಏಕೆ ಮಾಡಿದ್ದಾರೆ ಎಂದು ಹೇಳಿದರು. ಜೊತೆಗೆ, ಯಾರಾದರೂ ನನ್ನ ವಿರುದ್ಧ ರಾಜಕೀಯ ಪಿತೂರಿ ಮಾಡಿದ್ದಾರಾ ಎಂದು ಸಹ ಗೊತ್ತಾಗಬೇಕಿದೆ ಎಂದರು.

ಇದೇ ವೇಳೆ ಶಾಸಕ ಹಾಗೂ ಕುಟುಂಬಸ್ಥರು ನಮ್ಮ ಮನೆಯಲ್ಲಿದ್ದ ಎಲ್ಲವನ್ನೂ ಹೊತ್ತೊಯ್ದಿದ್ದಾರೆ. ಎಲ್ಲವನ್ನೂ ನೀವೇ ಇಟ್ಟುಕೊಳ್ಳಿ, ನಾನೇನು ವಾಪಸ್ ಕೇಳೋದಿಲ್ಲ. ಆದರೆ, ದಯವಿಟ್ಟು ನನ್ನ ತಾಯಿಯ ಮಾಂಗಲ್ಯ ಸರವಾದ್ರೂ ವಾಪಸ್‌ ತಂದುಕೊಡಿ ಎಂದು ಮನವಿ ಮಾಡಿದ್ದರು. ಆದರೆ, ಅದೃಷ್ಟವಶಾತ್​ ಶಾಸಕರ ತಾಯಿಯ ಮಾಂಗಲ್ಯ ಪತ್ತೆಯಾಗಿರುವುದು ಅಖಂಡ ಶ್ರೀನಿವಾಸ ಮೂರ್ತಿಗೆ ತುಸು ನೆಮ್ಮದಿ ತೊಂದುಕೊಟ್ಟಿದೆ.

‘ನಮ್ಮ ಮನೆ ಎಲ್ಲಿದೆ? ನಾನು ಎಲ್ಲಿ ಇರಲಿ’
ಈ ವೇಳೆ ಸುಟ್ಟು ಕರಕಲಾಗಿರುವ ಮನೆ ಕಂಡು ಶಾಸಕರ ಪತ್ನಿ ಕ್ರಿಯಾ ಶೈಲಜಾ ಕಣ್ಣೀರಿಟ್ಟರು. ನಮ್ಮ ಮನೆಯಲ್ಲಿದ್ದ ಎಲ್ಲ ದಾಖಲೆ ಸುಟ್ಟು ಹಾಕಿದ್ದಾರೆ. ನಮ್ಮ ಮನೆ ಎಲ್ಲಿದೆ? ನಾನು ಎಲ್ಲಿ ಇರಲಿ ಎಂದು ಕಣ್ಣೀರಿಟ್ಟರು. ಜೊತೆಗೆ, ನಮಗೆ ಭದ್ರತೆ ಕೊಡಿ ಎಂದು ಮನವಿ ಸಹ ಮಾಡಿದರು.

‘ನಾವು ಹುಟ್ಟಿ ಬೆಳೆದ ಮನೆಯನ್ನೇ ಸುಟ್ಟು ಹಾಕಿದ್ದಾರೆ’
ಅಖಂಡ ಶ್ರೀನಿವಾಸ ಮೂರ್ತಿ ಪುತ್ರಿ ಪ್ರಿಯಾಂಕಾ ಸಹ ತಮ್ಮ ಆಕ್ರೋಶ ಹೊರಹಾಕಿದರು. ಯಾಕೆ ನಮ್ಮ ತಂದೆಯನ್ನೇ ಟಾರ್ಗೆಟ್​ ಮಾಡಿದ್ದಾರೆ ಎಂದು ತಮ್ಮ ಕೋಪ ವ್ಯಕ್ತಪಡಿಸಿದರು. ನಾವು ಹುಟ್ಟಿ ಬೆಳೆದ ಮನೆಯನ್ನೇ ಸುಟ್ಟು ಹಾಕಿದ್ದಾರೆ. ಎರಡು ದಿನಗಳಿಂದ ಊಟ, ನೀರಿಲ್ಲದೆ ಅಳುತ್ತಿದ್ದೇವೆ.

ಮನೆ ಇಲ್ಲ ಈಗ ಎಲ್ಲಿ ಇರಬೇಕೆಂದು ನಮಗೆ ಗೊತ್ತಿಲ್ಲ ಎಂಬ ನೋವಿನ ಮಾತುಗಳನ್ನ ಆಡಿದರು. ಅಲ್ಲೇ ಇದ್ದ ಶಾಸಕರ ಸಹೋದರ ಮಹೇಶ್ ಕುಮಾರ್ ಮತ್ತು ಶಾಸಕರ ಮಗ ರೇವಂತ್ ಕೂಡ ಇದಕ್ಕೆ ತಲೆದೂಗಿದರು.

ಜೊತೆಗೆ, ಸರ್ಕಾರ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು ಎಂದು ಪ್ರಿಯಾಂಕಾ ಒತ್ತಾಯ ಮಾಡಿದರು. ನಾವು ಬೀದಿಗೆ ಬಂದಿದ್ದೇವೆ. ನಾಲ್ಕು ತಲೆಮಾರು ಇಲ್ಲೇ ಜೀವನ ನಡೆಸಿದ್ದೇವೆ. ಎಲ್ಲಾ ಹಬ್ಬಗಳನ್ನ ಖುಷಿ ಖುಷಿಯಾಗಿ ಆಚರಣೆ ಮಾಡಿದ್ದೇವೆ. ಘಟನೆ ಕುರಿತ ಸರ್ಕಾರ ತನಿಖೆ ನಡೆಸಬೇಕು. ನಮಗೆ ನ್ಯಾಯ ಕೊಡಿಸಿಲೇ ಬೇಕು ಎಂದು ಶಾಸಕ ಶ್ರೀನಿಮೂರ್ತಿ ಪುತ್ರಿ ಪ್ರಿಯಾಂಕಾ ಹೇಳಿಕೆ ನೀಡಿದರು.

Related Tags:

Related Posts :

Category: