ತಲೆಯೆತ್ತಲಿದೆ ಮುಗಿಲೆತ್ತರದ ಶ್ರೀರಾಮ ಮಂದಿರ, ಮಂದಿರ ನಿರ್ಮಾಣಕ್ಕೆ ಕೇಂದ್ರದಿಂದ ₹1 ದೇಣಿಗೆ

ದೆಹಲಿ: ರಾಮಜನ್ಮಭೂಮಿಯಲ್ಲೇ ಮಂದಿರ ನಿರ್ಮಾಣ ಆಗುವುದು ಪಕ್ಕಾ ಆಗಿದೆ. ಮಂದಿರ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಈಗಾಗಲೇ ಟ್ರಸ್ಟ್ ಅನ್ನ ಕೂಡ ರಚಿಸಿದೆ. ಏತನ್ಮಧ್ಯೆ ಟ್ರಸ್ಟ್ ದೇಣಿಗೆ ಸಂಗ್ರಹಕ್ಕೆ ಮುಂದಾಗಿದ್ದು, ದೇಣಿಗೆಯ ಮೊದಲ ಪಾಲನ್ನ ಮೋದಿ ಸರ್ಕಾರವೇ ನೀಡಿದೆ. ಈ ಮೂಲಕ ಐತಿಹಾಸಿಕ ನಿರ್ಧಾರಕ್ಕೆ ಕೇಂದ್ರ ಸರ್ಕಾರ ನಾಂದಿ ಹಾಡಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು ಅನ್ನೋದು ಕೋಟಿ ಕೋಟಿ ಹಿಂದೂ ಧರ್ಮಿಯರ ಬಯಕೆ. ಇದೀಗ ರಾಮಜನ್ಮಭೂಮಿಯಲ್ಲೇ ರಾಮಮಂದಿರ ನಿರ್ಮಾಣಕ್ಕೆ‌ ಕಾಲಕೂಡಿ ಬಂದಿದೆ. ರಾಮಮಂದಿರವನ್ನ ನಿರ್ಮಿಸಲು ಸುಪ್ರೀಂಕೋರ್ಟ್ ನೀಡಿದ ಆದೇಶದಂತೆ ಕೇಂದ್ರ ಸರ್ಕಾರ 15 ಸದಸ್ಯರ ಟ್ರಸ್ಟ್ ರಚನೆ ಮಾಡಿದ್ದು, ಈ ಟ್ರಸ್ಟ್‌ಗೆ ಕೇಂದ್ರ ಸರ್ಕಾರ ಮೊದಲ‌ ದೇಣಿಗೆ ಸಮರ್ಪಿಸಿದೆ.

ಮಂದಿರ ನಿರ್ಮಾಣಕ್ಕೆ ಕೇಂದ್ರದಿಂದ ₹1 ದೇಣಿಗೆ!
ಅಂದಹಾಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ಗೆ ಮೋದಿ ಸರ್ಕಾರ ಮೊದಲ‌ ದೇಣಿಯಾಗಿ ಒಂದು ರೂಪಾಯಿ ನೀಡಿದೆ. ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿಯಾಗಿರುವ ಡಿ. ಮುರ್ಮು ಕೇಂದ್ರದ ಪರವಾಗಿ 1ರೂಪಾಯಿ ದೇಣಿಗೆ ನೀಡಿ ಅಂದೋಲನಕ್ಕೆ ಚಾಲನೆ ನೀಡಿದ್ದಾರೆ. ಇದೇ ರೀತಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ದೇಶಾದ್ಯಂತ ದೇಣಿಗೆ ಸಂಗ್ರಹ ನಡೆಯಲಿದೆ‌. ವಿಶ್ವದಾದ್ಯಂತ ಇರುವ ರಾಮಭಕ್ತರು ಸಮರ್ಪಿಸುವ ದೇಣಿಗೆ, ಅನುದಾನ, ನೆರವನ್ನ ಈ ಟ್ರಸ್ಟ್‌ ಸ್ವೀಕರಿಸಲಿದೆ.

ಸದ್ಯದ ಮಟ್ಟಿಗೆ ಟ್ರಸ್ಟ್ ಹಿರಿಯ ವಕೀಲ ಕೆ.ಪರಾಶರನ್‌ ನಿವಾಸದಿಂದಲೇ ಕಾರ್ಯನಿರ್ವಹಿಸಲಿದ್ದು, ಮುಂದಿನ ದಿನಗಳಲ್ಲಿ ಶಾಶ್ವತ ಕಚೇರಿಯನ್ನ ಹೊಂದಲಿದೆ. ಒಟ್ನಲ್ಲಿ ಹಿಂದೂಗಳ ಬಹುದಿನದ ಕನಸು ನನಸಾಗುವ ಕಾಲ ಇದೀಗ ಕೂಡಿಬಂದಿದ್ದು, ಶೀಘ್ರದಲ್ಲೇ ಮುಗಿಲೆತ್ತರದ ಶ್ರೀರಾಮ ಮಂದಿರ ಅಯೋಧ್ಯೆಯಲ್ಲಿ ತಲೆಯೆತ್ತಲಿದೆ.

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!