SBI Multicap Fund: ಮತ್ತೊಂದು ಎನ್ಎಫ್ಒ ಘೋಷಿಸಿದ ಎಸ್ಬಿಐ: ಇನ್ವೆಸ್ಟ್ ಮಾಡೋ ಆಸೆ ಇದ್ರೆ ಈ ಮಾಹಿತಿ ಗೊತ್ತಿರಲಿ
SBI NFO: ಸೀಮಿತ ಸಂಖ್ಯೆಯ ಕಂಪನಿಗಳಲ್ಲಿ ಮಾತ್ರವೇ ಹೂಡಿಕೆ ಮಾಡುವ ಕ್ರಮವನ್ನು ಅಂದರೆ ಫೋಕಸ್ಡ್ ಅಪ್ರೋಚ್ ಚಿಂತನೆಗೆ ಅನುಗುಣವಾಗಿ ಈ ಫಂಡ್ ಹೂಡಿಕೆಯನ್ನು ನಿರ್ವಹಿಸಲಿದೆ.
ಎಸ್ಬಿಐ ಮ್ಯೂಚುವಲ್ ಫಂಡ್ (SBI Mutual Fund) ಇದೀಗ ಮಲ್ಟಿಕ್ಯಾಪ್ ಫಂಡ್ಗಾಗಿ (Multicap Fund) ಎನ್ಎಫ್ಒ (New Fund Offer – NFO) ಘೋಷಿಸಿದೆ. ಒಂದೇ ಫಂಡ್ ಮೂಲಕ ಹೂಡಿಕೆದಾರರು ಏಕಕಾಲಕ್ಕೆ ಲಾರ್ಜ್ಕ್ಯಾಪ್, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ಫಂಡ್ಗಳಲ್ಲಿ ಹೂಡಿಕೆ ಮಾಡಲು ಈ ಫಂಡ್ ಅವಕಾಶ ಕಲ್ಪಿಸಲಿದೆ. ಮ್ಯೂಚುವಲ್ ಫಂಡ್ ಲೋಕದ ಹೊಸ ಟ್ರೆಂಡ್ ಎನಿಸಿರುವ ಸೀಮಿತ ಸಂಖ್ಯೆಯ ಕಂಪನಿಗಳಲ್ಲಿ ಮಾತ್ರವೇ ಹೂಡಿಕೆ ಮಾಡುವ ಕ್ರಮವನ್ನು ಅಂದರೆ ಫೋಕಸ್ಡ್ ಅಪ್ರೋಚ್ ಚಿಂತನೆಗೆ ಅನುಗುಣವಾಗಿ ಈ ಫಂಡ್ ಹೂಡಿಕೆಯನ್ನು ನಿರ್ವಹಿಸಲಿದೆ. ಅತ್ಯಂತ ಎಚ್ಚರಿಕೆಯಿಂದ ಆರಿಸಿದ 25ರಿಂದ 35 ಸ್ಟಾಕ್ಗಳ ಮೇಲೆ ಸಂಚಿತ ನಿಧಿಯನ್ನು ಹೂಡಿಕೆ ಮಾಡಲಾಗುವುದು ಎಂದು ಎಸ್ಬಿಐ ಹೇಳಿದೆ.
ಹೊಸ ಫಂಡ್ನ ಎನ್ಎಫ್ಒ ಫೆಬ್ರುವರಿ 28ಕ್ಕೆ ಮುಕ್ತಾಯವಾಗಲಿದೆ. ನಿಫ್ಟಿ 500 ಮಲ್ಟಿಕ್ಯಾಪ್ ಇಂಡೆಕ್ಸ್ ಅನ್ನು ಈ ಫಂಡ್ ಮಾನದಂಡವಾಗಿ ಹೊಂದಿರಲಿದೆ. ಕಂಪನಿಗಳನ್ನು ಆಯ್ಕೆ ಮಾಡಿಕೊಳ್ಳುವಾಗ 50:25:25 ನಿಯಮ ಅನುಸರಿಸುತ್ತದೆ. 50 ಲಾರ್ಜ್ಕ್ಯಾಪ್, ತಲಾ 25 ಮಿಡ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ ಈ ಫಂಡ್ನ ಮ್ಯಾನೇಜರ್ಗಳು ಸಂಚಿತ ನಿಧಿಯನ್ನು ಹೂಡಿಕೆ ಮಾಡುತ್ತಾರೆ. ಬೆಳವಣಿಗೆ ಸಾಧ್ಯತೆ ಹೆಚ್ಚಿರುವ ಕಂಪನಿಗಳನ್ನು 7 ಹಂತದ ಸಂಶೋಧನೆಯ ಮೂಲಕ ಫಂಡ್ ಮ್ಯಾನೇಜರ್ಗಳು ಆಯ್ಕೆ ಮಾಡಿಕೊಳ್ಳುತ್ತಾರೆ. ಇಂಥ ನಿರ್ದಿಷ್ಟ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು ಅಥವಾ ಮಾಡಬಾರದು ಎನ್ನುವ ಯಾವುದೇ ನಿಬಂಧನೆಯನ್ನು ಈ ಫಂಡ್ ಹೊಂದಿಲ್ಲ. ಎಸ್ಬಿಐನ ಅನುಭವಿ ಫಂಡ್ ಮ್ಯಾನೇಜರ್ಗಳಾದ ಆರ್.ಶ್ರೀನಿವಾಸನ್ ಮತ್ತು ಮೊಹಿತ್ ಜೈನ್ ಈ ಫಂಡ್ನ ನಿಧಿಯನ್ನು ನಿರ್ವಹಿಸಲಿದ್ದಾರೆ.
ಈ ಫಂಡ್ ಮೂಲಕ ಹೂಡಿಕೆದಾರರಿಗೆ ಸ್ಥಿರತೆ ಮತ್ತು ಉತ್ತಮ ಪ್ರತಿಫಲ ಒದಗಿಸಲು ಎಸ್ಬಿಐ ಪ್ರಯತ್ನಿಸಲಿದೆ. ಲಾರ್ಜ್ ಕ್ಯಾಪ್ ಕಂಪನಿಗಳು ಪೋರ್ಟ್ಫೋಲಿಯೊಗೆ ಸ್ಥಿರತೆ ಒದಗಿಸಿದರೆ, ಮಿಡ್ ಕ್ಯಾಪ್ ಕಂಪನಿಗಳು ಬೆಳವಣಿಗೆಯ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ ಹೂಡಿಕೆ ಮಾಡುವ ಹಣ ದೀರ್ಘಾವಧಿಯಲ್ಲಿ ಉತ್ತಮ ಪ್ರತಿಫಲ ತಂದುಕೊಡಬಲ್ಲದು. ಮಾರುಕಟ್ಟೆ ಬಂಡವಾಳ ಗಾತ್ರವನ್ನು ಆಧರಿಸಿ, ಈ ಮೂರೂ ಹಂತದ ಕಂಪನಿಗಳಲ್ಲಿ ನಿರ್ದಿಷ್ಟ ಲೆಕ್ಕಾಚಾರದ ಮೇಲೆ ಮಾಡುವ ಹೂಡಿಕೆಯಿಂದ ಹೂಡಿಕೆದಾರರಿಗೆ ಸ್ಥಿರ ಮತ್ತು ಉತ್ತಮ ಪ್ರತಿಫಲ ಹೊಂದುವ ಸಾಧ್ಯತೆಯಿರುವ ಪೋರ್ಟ್ಫೋಲಿಯೊ ಒಂದೇ ಫಂಡ್ನಲ್ಲಿ ರೂಪುಗೊಳ್ಳಲಿದೆ ಎಂದು ಎಸ್ಬಿಐ ಮ್ಯೂಚುವಲ್ ಫಂಡ್ನ ವ್ಯವಸ್ಥಾಪಕ ನಿರ್ದೇಶಕ ವಿನಯ್ ಎಂ.ತೊನ್ಸೆ ಅಭಿಪ್ರಾಯಪಟ್ಟಿದ್ದಾರೆ.
ಎಸ್ಬಿಐನ ಜನಪ್ರಿಯ MITRA SIP ಸೌಲಭ್ಯವೂ ಒಂದು ಆಯ್ಕೆಯಾಗಿ ಈ ಮಲ್ಟಿಕ್ಯಾಪ್ ಫಂಡ್ಗೆ ಸಿಗಲಿದೆ. ಈ ಫಂಡ್ನಲ್ಲಿ ವ್ಯವಸ್ಥಿತ ಹೂಡಿಕೆಯ (Systematic Investment Plan – SIP) ಜೊತೆಗೆ ವ್ಯವಸ್ಥಿತವಾಗಿ ಹಣ ಹಿಂಪಡೆಯುವ (Systematic Withdrawal Plan – SWP) ಸೌಲಭ್ಯವನ್ನೂ ಪಡೆಯಬಹುದು. ನಿಯಮಿತ ಅಂತರದಲ್ಲಿ ಹಣ ಹಿಂಪಡೆಯುವ ಮೂಲಕ ತೆರಿಗೆ ಉಳಿತಾಯಕ್ಕೂ ಹೆಚ್ಚು ಅವಕಾಶ ಸಿಗಲಿದೆ. ಎನ್ಎಫ್ಒ ಅವಧಿಯಲ್ಲಿ ಹೂಡಿಕೆಗೆ ನಿಗದಿಪಡಿಸಿರುವ ಕನಿಷ್ಠ ಮೊತ್ತ ₹ 5000. ಇದರ ಮೇಲೆ ಎಷ್ಟು ಬೇಕಾದರೂ ಮೊತ್ತವನ್ನು ಹೂಡಿಕೆ ಮಾಡಬಹುದು.
ಈ ಫಂಡ್ನಲ್ಲಿ ನೀವು ಹೂಡಿಕೆ ಮಾಡಬೇಕೆ?
ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುವ ಹೂಡಿಕೆದಾರರಿಗೆ ಮಲ್ಟಿಕ್ಯಾಪ್ ಫಂಡ್ಗಳು ಹೊಂದುತ್ತವೆ. ಈ ಫಂಡ್ಗಳು ತಮ್ಮ ಸಂಚಿತ ನಿಧಿಯ ಶೇ 25ರಷ್ಟು ಮಿಡ್ಕ್ಯಾಪ್ ಮತ್ತು ಶೇ 25ರಷ್ಟನ್ನು ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ ಕಡ್ಡಾಯವಾಗಿ ಹೂಡಿಕೆ ಮಾಡಬೇಕು ಎನ್ನುವ ಷರತ್ತು ಇರುತ್ತದೆ. ಸೆಬಿ ವಿಧಿಸಿರುವ ಈ ನಿಯಮದ ಜೊತೆಗೆ ಹೆಚ್ಚುವರಿಯಾಗಿ ಫೋಕಸ್ಡ್ ಅಕ್ರೋಚ್ ಎನ್ನುವ ಮತ್ತೊಂದು ನಿಬಂಧನೆಯ ಶಿಸ್ತಿಗೆ ಒಳಪಡಲು ಈ ಫಂಡ್ ನಿರ್ಧರಿಸಿದೆ. ಹೆಚ್ಚು ಬೆಳವಣಿಗೆ ಸಾಧ್ಯತೆಯಿರುವ ಕೆಲವೇ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡುವುದು ಯಾವಾಗಲೂ ಉತ್ತಮ ಕ್ರಮ ಎನಿಸಿಕೊಳ್ಳುತ್ತದೆ. ಆದರೆ ಕೆಲವೇ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡುವುದರಿಂದ ಹೂಡಿಕೆಯ ರಿಸ್ಕ್ ಸಹ ಹೆಚ್ಚಾಗಬಹುದು ಎನ್ನುವ ಮಾತುಗಳು ಹೂಡಿಕೆದಾರರ ವಲಯದಲ್ಲಿ ಕೇಳಿಬರುತ್ತಿದೆ.
ಮ್ಯೂಚುವಲ್ ಫಂಡ್ ಎನ್ಎಫ್ಒ ಎಂದರೆ ಷೇರುಪೇಟೆಗೆ ಬರುವ ಕಂಪನಿಗಳ ಐಪಿಒಗಳಂತಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಮಲ್ಟಿಕ್ಯಾಪ್ ಫಂಡ್ಗಳಿದ್ದು, ಅವುಗಳ ಟ್ರ್ಯಾಕ್ ರೆಕಾರ್ಡ್ ಸಹ ವಿಶ್ಲೇಷಣೆಗೆ ಸಿಗುವಂತೆ ಇದೆ. ಹೂಡಿಕೆ ಬಗ್ಗೆ ನಿರ್ಧರಿಸುವಾಗ ಈ ಅಂಶವನ್ನೂ ಹೂಡಿಕೆದಾರರು ಗಮನಕ್ಕೆ ತೆಗೆದುಕೊಳ್ಳಬೇಕಿದೆ.
ಇದನ್ನೂ ಓದಿ: Mutual funds AUM: 2030ರ ಹೊತ್ತಿಗೆ ಭಾರತದ ಮ್ಯೂಚುವಲ್ ಫಂಡ್ಸ್ ಎಯುಎಂ 90 ಲಕ್ಷ ಕೋಟಿ ರೂ. ದಾಟುವ ಸಾಧ್ಯತೆ
ಇದನ್ನೂ ಓದಿ: ಮ್ಯೂಚುವಲ್ ಫಂಡ್ನ ಫಂಡ್ ಮ್ಯಾನೇಜರ್ಗಳು ಬಸ್ಸಿನ ಡ್ರೈವರ್ ಅಥವಾ ವಿಮಾನದ ಪೈಲಟ್ಗಳಿದ್ದಂತೆ: ಡಾ ಬಾಲಾಜಿ ರಾವ್
(ಈ ಬರಹದ ಮೂಲಕ ಟಿವಿ9 ಕನ್ನಡ ವೆಬ್ಸೈಟ್ ಯಾರೊಬ್ಬರಿಗೂ ಯಾವುದೇ ಫಂಡ್ನಲ್ಲಿ ಹೂಡಿಕೆ ಮಾಡಬೇಕು ಅಥವಾ ಮಾಡಬಾರದು ಎಂದು ಶಿಫಾರಸು ಮಾಡುತ್ತಿಲ್ಲ. ಮ್ಯೂಚುವಲ್ ಫಂಡ್ ಹೂಡಿಕೆಗಳು ಷೇರುಪೇಟೆಯ ಏರಿಳಿತಗಳಿಗೆ ಈಡಾಗುತ್ತವೆ. ಹೂಡಿಕೆ ನಿರ್ಧಾರ ಮಾಡುವ ಮೊದಲು ಹೂಡಿಕೆ ತಜ್ಞರೊಂದಿಗೆ ಸಮಾಲೋಚಿಸುವುದು ಒಳ್ಳೆಯದು).