ಟೆರಿಫಿಕ್​ ಟ್ರಾಫಿಕ್: ಲಾಕ್​ಡೌನ್​ ನಂತರ ಯಥಾಸ್ಥಿತಿಗೆ ಮರಳಿದ ಮಹಾನಗರಗಳ ವಾಹನ ದಟ್ಟಣೆ

ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ವಾಹನ ದಟ್ಟಣೆ ಎದುರಿಸುತ್ತಿರುವ ನಂ.1 ನಗರ ಎಂಬ ಪಟ್ಟಕ್ಕೆ ಪಾತ್ರವಾಗಿದ್ದ ಬೆಂಗಳೂರು ಈ ಬಾರಿ 6ನೇ ಸ್ಥಾನದಲ್ಲಿದೆ.

  • TV9 Web Team
  • Published On - 16:59 PM, 14 Jan 2021
ಸಂಗ್ರಹ ಚಿತ್ರ

ಬೆಂಗಳೂರು: ಕೊರೊನಾ ಲಾಕ್​ಡೌನ್​ನಿಂದ ತಿಂಗಳುಗಟ್ಟಲೆ ಖಾಲಿ ಖಾಲಿಯಾಗಿದ್ದ ರಸ್ತೆಗಳೆಲ್ಲಾ ಯಥಾಸ್ಥಿತಿಗೆ ಮರಳುತ್ತಿವೆ. ಆರೇಳು ತಿಂಗಳುಗಳ ಕಾಲ ಬಿಕೋ ಎನ್ನುತ್ತಿದ್ದ ರಸ್ತೆಗಳಲ್ಲಿ ಈಗ ಮೊದಲಿನಂತೆಯೇ ನಿರಂತರವಾಗಿ ವಾಹನಗಳ ಸದ್ದು ಕೇಳುತ್ತಿದೆ. ಮುಂಬೈ, ಬೆಂಗಳೂರು, ದೆಹಲಿ, ಪುಣೆಯಂತಹ ಮಹಾನಗರಗಳಲ್ಲಿ ವಾಹನ ದಟ್ಟಣೆ ಮತ್ತೆ ಜೋರಾಗುತ್ತಿರುವ ಕುರಿತು ವರದಿಗಳು ಹೊರಬಿದ್ದಿವೆ.

ಜಾಗತಿಕ ಮಟ್ಟದಲ್ಲಿ ನಡೆಸಲಾದ ಅಧ್ಯಯನದಲ್ಲಿ ಒಟ್ಟು 56 ದೇಶಗಳ 416 ನಗರಗಳ ಪೈಕಿ ಮುಂಬೈ, ಬೆಂಗಳೂರು, ದೆಹಲಿ ನಗರಗಳು ಟಾಪ್​ 10 ಪಟ್ಟಿಯಲ್ಲಿ ಕಾಣಿಸಿಕೊಂಡಿವೆ. ಅತಿ ಹೆಚ್ಚು ವಾಹನ ದಟ್ಟಣೆ ಎದುರಿಸುತ್ತಿರುವ ನಗರಗಳ ಪೈಕಿ ಮುಂಬೈ 2ನೇ ಸ್ಥಾನ, ಬೆಂಗಳೂರು 6ನೇ ಸ್ಥಾನ ಮತ್ತು ದೆಹಲಿ 8ನೇ ಸ್ಥಾನ ಮತ್ತು ಪುಣೆ 16ನೇ ಸ್ಥಾನದಲ್ಲಿವೆ.

ಈ ನಗರಗಳಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿರುವುದು ವಾಣಿಜ್ಯ ಚಟುವಟಿಕೆಗಳು ಪುನಾರಂಭಗೊಂಡಿರುವ ಸಂಕೇತವಾಗಿರುವ ಜೊತೆಗೆ ಜನರು ತಮ್ಮ ಸ್ವಂತ ವಾಹನಗಳನ್ನೇ ಹೆಚ್ಚೆಚ್ಚು ಬಳಸಲು ಆರಂಭಿಸಿದ್ದಾರೆ ಎನ್ನುವುದರ ಸೂಚಕವೂ ಹೌದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 2019ರಲ್ಲಿ ನಡೆಸಿದ್ದ ಅಧ್ಯಯನದಲ್ಲಿ ಅತಿ ಹೆಚ್ಚು ವಾಹನ ದಟ್ಟಣೆ ಎದುರಿಸುವ ನಗರಗಳ ಪೈಕಿ ಬೆಂಗಳೂರು ಪ್ರಥಮ ಸ್ಥಾನದಲ್ಲಿತ್ತು ಹಾಗೂ ಮುಂಬೈ, ಪುಣೆ, ದೆಹಲಿ ಕ್ರಮವಾಗಿ 4, 5 ಮತ್ತು 8ನೇ ಸ್ಥಾನದಲ್ಲಿದ್ದವು.

ಕಳೆದ ವರ್ಷಕ್ಕೆ ಹೋಲಿಸಿದರೆ ಬೆಂಗಳೂರಿನಲ್ಲಿ ಶೇ.20, ಮುಂಬೈನಲ್ಲಿ ಶೇ.53, ದೆಹಲಿಯಲ್ಲಿ ಶೇ.7 ಮತ್ತು ಪುಣೆಯಲ್ಲಿ ಶೇ.17ರಷ್ಟು ವಾಹನ ದಟ್ಟಣೆ ಕಡಿಮೆಯಾಗಿದೆ. ಆದರೂ ಕೊರೊನಾ ಲಾಕ್​ಡೌನ್​ ಅವಧಿಯಲ್ಲಿ ಸಂಪೂರ್ಣ ಇಳಿದಿದ್ದ ವಾಹನ ಸಂಚಾರ ಅತ್ಯಂತ ಕಡಿಮೆ ಅವಧಿಯಲ್ಲಿ ಭಾರೀ ಪ್ರಮಾಣದಲ್ಲಿ ಏರಿರುವುದನ್ನು ನೋಡಿದರೆ ಇದು ಮುಂದಿನ ದಿನಗಳಲ್ಲಿ ಇನ್ನೂ ಗಂಭೀರ ಹಂತ ತಲುಪುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಯಲಚೇನಹಳ್ಳಿ-ಅಂಜನಾಪುರ ನಡುವಿನ ಮೆಟ್ರೋ ವಿಸ್ತೃತ ಮಾರ್ಗಕ್ಕೆ ಸಿಎಂ BSY ಚಾಲನೆ