ಕೊರೊನಾ ನಡುವೆ ನಿಸರ್ಗ ಭೀತಿ, ಶತಮಾನದ ಚಂಡಮಾರುತದ ಆತಂಕಯಲ್ಲಿ ಮುಂಬೈ!

ದೆಹಲಿ: ಕೊರೊನಾ ಭೀತಿ ನಡುವೆಯೇ, ಭಾರತಕ್ಕೆ ಮತ್ತೊಂದು ಕಂಟಕ ಎದುರಾಗಿದೆ. ಆ ಕಂಟಕವೇ.. ನಿಸರ್ಗ ಚಂಡಮಾರುತ.. ಇತ್ತೀಚೆಗಷ್ಟೇ ಅಂಫಾನ್ ಅನ್ನೋ ಚಂಡಮಾರುತ ದೊಡ್ಡ ಅನಾಹುತವನ್ನ ಸೃಷ್ಟಿಸಿತ್ತು. ಇದೀಗ ನಿಸರ್ಗ ಹೆಸರಿನ ಚಂಡಮಾರುತ ಕೋಲಾಹಲ ಎಬ್ಬಿಸೋಕೆ ಸಿದ್ಧವಾಗಿದೆ. ಹಾಗಿದ್ರೆ, ಕರುನಾಡಿಗೂ ಈ ಚಂಡಮಾರುತ ಕುತ್ತು ತರುತ್ತಾ. ಎಲ್ಲೆಲ್ಲಿಗೆ ಎಫೆಕ್ಟ್ ಇದೆ?

ಬಿರುಗಾಳಿ ಹೊಡೆತಕ್ಕೆ ಮರಗಳು ನೆಲಕ್ಕೆ ಬಾಗ್ತಿವೆ. ಸೋಲಾರ್ ಪ್ಲ್ಯಾನಲ್​ಗಳು ಕಿತ್ತು ಹೋಗ್ತಿವೆ. ಮನೆಗಳಿಗೆ ನೀರು ನುಗ್ಗಿದೆ. ಮನೆಯ ಮೇಲ್ಛಾವಣಿ ಹಾರಿ ಹೋಗಿವೆ. ಯೆಸ್, ಚಂಡಮಾರುತ ಅಪ್ಪಳಿಸೋಕು ಮೊದಲೇ ಈ ಆರ್ಭಟವಿದ್ರೆ, ಇನ್ನು ಚಂಡಮಾರುತ ಅಪ್ಪಳಿಸಿದ್ರೆ, ಅದೆಂಥ ಅನಾಹುತ ಸೃಷ್ಟಿಯಾಗುತ್ತೆ ನೀವೇ ಊಹೆ ಮಾಡಿ.

ಶತಮಾನದ ಚಂಡಮಾರುತದ ಭೀತಿಯಲ್ಲಿ ಮುಂಬೈ!
ನಿಜ, ಕೊರೊನಾ ಹಾವಳಿಯಿಂದ ಮಹಾರಾಷ್ಟ್ರ ತತ್ತರಿಸಿ ಹೋಗಿದೆ. ಮಹಾರಾಷ್ಟ್ರದಲ್ಲೇ 70 ಸಾವಿರ ಕೊರೊನಾ ಕೇಸ್​ಗಳಿವೆ. ಇಂಥ ಮಹಾರಾಷ್ಟ್ರದ ಮೇಲೆ ನಿಸರ್ಗ ಚಂಡಮಾರುತ ಅಪ್ಪಳಿಸೋಕೆ ಸಜ್ಜಾಗಿದೆ. ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ನಿಸರ್ಗ ಸೈಕ್ಲೋನ್‌ ಇಂದು ಮಧ್ಯಾಹ್ನ 1 ಗಂಟೆಯ ಬಳಿಕ ಮುಂಬೈ ಕರಾವಳಿ ತೀರಕ್ಕೆ ಅಪ್ಪಳಿಸಲಿದೆ. ಹೀಗಾಗೇ ಮುಂಬೈ ಸೇರಿದಂತೆ ಮಹಾರಾಷ್ಟ್ರದ ಕರಾವಳಿ ತೀರದ ಜಿಲ್ಲೆಗಳಲ್ಲಿ ಹೈ ಆಲರ್ಟ್ ಘೋಷಿಸಲಾಗಿದೆ. ಚಂಡಮಾರುತದಿಂದಾಗಿ ಗುಜರಾತ್‌ನ ಕರಾವಳಿ ತೀರದಲ್ಲೂ ಬಾರಿ ಮಳೆಯಾಗಲಿದೆ. ಇಂಟ್ರೆಸ್ಟಿಂಗ್ ವಿಚಾರ ಅಂದ್ರೆ, ಕಳೆದೊಂದು ಶತಮಾನದಲ್ಲಿ ಜೂನ್​ನಲ್ಲಿ ಮುಂಬೈಗೆ ಯಾವುದೇ ಚಂಡಮಾರುತ ಅಪ್ಪಳಿಸಿಲ್ಲ. 1893ರ ಬಳಿಕ ಇದೇ ಮೊದಲ ಬಾರಿಗೆ ಜೂನ್​ ತಿಂಗಳಲ್ಲಿ ಸೈಕ್ಲೋನ್ ಅಪ್ಪಳಿಸುತ್ತಿದೆ.

ಮುಂಬೈ ಮಾತ್ರವಲ್ಲದೇ, ಮಹಾರಾಷ್ಟ್ರದ ಥಾಣೆ, ಪಾಲ್ಘರ್, ರಾಯಘಡ, ಸಿಂಧುದುರ್ಗ, ರತ್ನಗಿರಿ ಜಿಲ್ಲೆಗಳಿಗೂ ಹೈ ಆಲರ್ಟ್ ಘೋಷಿಸಲಾಗಿದೆ. ಮಹಾರಾಷ್ಟ್ರದಲ್ಲಿ 16 ಎನ್‌ಡಿ.ಆರ್‌ಎಫ್ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಇನ್ನು ನಿನ್ನೆ ಪ್ರಧಾನಿ ಮೋದಿ ಸೈಕ್ಲೋನ್‌ ಬಗ್ಗೆ ಪರಿಶೀಲನೆ ನಡೆಸಿದ್ದು, ಅಗತ್ಯ ಮಾಹಿತಿ ಪಡೆದಿದ್ದೇವೆ. ಎಲ್ಲರ ಸುರಕ್ಷೆಗಾಗಿ ಪ್ರಾರ್ಥನೆ ಮಾಡ್ತೇವೆ. ಜನರು ಎಲ್ಲ ಮುನ್ನೆಚ್ಚರಿಕೆ ಹಾಗೂ ಸುರಕ್ಷೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಟ್ವೀಟರ್ ನಲ್ಲಿ ಮನವಿ ಮಾಡಿದ್ದಾರೆ. ಇನ್ನೂ ನಿಸರ್ಗಾ ಎಫೆಕ್ಟ್​ನ ಅಂಕಿ, ಅಂಶವನ್ನ ನೋಡೋದಾದ್ರೆ.

‘ಸೈಕ್ಲೋನ್’ ಸಂಕಷ್ಟ!
ಅರಬ್ಬಿ ಸಮುದ್ರದಲ್ಲಿ ರೂಪ ತಳೆದಿರುವ ನಿಸರ್ಗ ಚಂಡಮಾರುತ ಆರಂಭದಲ್ಲಿ ಗಂಟೆಗೆ 115 ಕಿಲೋ ಮೀಟರ್ ವೇಗದಲ್ಲಿತ್ತು. ಆದ್ರೆ ಇಂದು 125 ಕಿಲೋ ಮೀಟರ್ ವೇಗದಲ್ಲಿ ಮುನ್ನುಗ್ಗಲಿದೆ ಎನ್ನಲಾಗುತ್ತಿದೆ. ಹಾಗೇ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ನಿಸರ್ಗ ಸೈಕ್ಲೋನ್ ಎಫೆಕ್ಟ್​ನಿಂದ ವರುಣ ಅಬ್ಬರಿಸಲಿದ್ದಾನೆ. ಈಗಾಗಲೇ ಬೆಳಗಾವಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಆರ್ಭಟ ಶುರುವಾಗಿದೆ. ಕಳೆದ ಬಾರಿ ನೆರೆಯಿಂದ ತತ್ತರಿಸಿದ್ದ ದೇವರ ನಾಡು ಕೇರಳಕ್ಕೂ ನಿಸರ್ಗಾ ಭಯ ಕಾಡುತ್ತಿದೆ. ಸೈಕ್ಲೋನ್ ಅಪ್ಪಳಿಸುವುದನ್ನ ಅರಿತು ಅಲರ್ಟ್ ಆದ ಕೇಂದ್ರ ಸರ್ಕಾರ ಅಪಾಯವಿರುವ ರಾಜ್ಯಗಳಿಗೆ ಎನ್​ಡಿಆರ್​ಎಫ್ ತಂಡಗಳನ್ನ ರವಾನಿಸಿದೆ. ಹಾಗೇ ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ಸಂದೇಶವನ್ನೂ ನೀಡಲಾಗಿದೆ.)

ರಾಜ್ಯದ ಹಲವೆಡೆ ಮಳೆ ಆರ್ಭಟ!
ಹೌದು, ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಕಡಬ ಭಾಗದಲ್ಲಿ ಇನ್ನೂ ಎರಡು ದಿನ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಮೀನುಗಾರಿಕೆಗೆ ತೆರಳದಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಇನ್ನುಳಿದಂತೆ ಉತ್ತರ ಕನ್ನಡ, ದಾವಣಗೆರೆ, ಬಾಗಲಕೋಟೆ ಸೇರಿದಂತೆ ಹಲವೆಡೆ ಭಾರಿ ಗಾಳಿ ಸಹಿತ ಮಳೆಯಾಗಿದೆ.

ಒಟ್ನಲ್ಲಿ ಇಂದು ಹಾಗೂ ನಾಳೆ ಭಾರಿ ಪ್ರಮಾಣದ ಮಳೆಯಾಗಲಿದ್ದು, ಪರಿಸ್ಥಿತಿ ಎದುರಿಸಲು ಸಿದ್ಧವಾಗಬೇಕಿದೆ. ನಿಸರ್ಗಾ ಸೈಕ್ಲೋನ್ ಅಬ್ಬರದಿಂದಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಹನಿಗಳ ಸಿಂಚನವಾಗಲಿದೆ. ನೀವು ಹೊರಗೆ ಓಡಾಡೋರಾಗಿದ್ರೆ ಯಾವುದಕ್ಕೂ ಒಂದು ಕೊಡೆಯನ್ನ ಜೊತೆಯಲ್ಲೇ ಇಟ್ಕೊಂಡಿರಿ. ಹಾಗೇ ಮಳೆ ಬರುವಾಗ ಮರಗಳ ಬಳಿ ಸುಳಿಯದೇ ಇರೋದು ಒಳ್ಳೆಯದು.

Related Posts :

Category:

error: Content is protected !!

This website uses cookies to ensure you get the best experience on our website. Learn more