ದಸರಾ ಪ್ರವಾಸಿಗರಿಗಾಗಿ ಅರಮನೆಯನ್ನೇ ಬಿಟ್ಟುಕೊಟ್ಟಿದ್ದ ಮೈಸೂರು ಅರಸರು

ಮೈಸೂರು: ನಾಡಹಬ್ಬ ದಸರಾ ನಮ್ಮ ಹೆಮ್ಮೆ. ಗತಕಾಲದ ವೈಭವ ಹಾಗೂ ಹಿಂದಿನ ಪರಂಪರೆಯನ್ನು ಮರು ಸೃಷ್ಟಿಸುವ ಏಕೈಕ ಹಬ್ಬವೆಂದರೆ ಅದು ದಸರಾ. ಮೈಸೂರು ದಸರಾ ಎಷ್ಟೊಂದು ಸುಂದರ ಎಂಬಂತೆ ದಸರಾ ವೈಭೋಗವನ್ನು ಮಾತಿನಲ್ಲಿ ಹೇಳಲಾಗದು. ಅದನ್ನು ಅನುಭವಿಸಿಯೇ ತೀರಬೇಕು. ಇನ್ನು ಅರಸರ ಕಾಲದಲ್ಲಿ ವಿಶ್ವ ವಿಖ್ಯಾತ ದಸರಾವನ್ನು ಕಣ್ತುಂಬಿಕೊಳ್ಳಲು ವಿದೇಶದಿಂದ ಪ್ರವಾಸಿಗರು ಆಗಮಿಸುತ್ತಿದ್ದರು. ಹೀಗಾಗಿ, ಅಂದಿನ ಮಹಾರಾಜರು ಪ್ರವಾಸಿಗರಿಗಾಗಿ ತಮ್ಮ ಅರಮನೆಯನ್ನೇ ಬಿಟ್ಟುಕೊಟ್ಟಿದ್ದರಂತೆ.

ಹೌದು, ಅಂದಿನ ಮೈಸೂರು ಅರಸರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಚಾಮರಾಜ ಜೋಡಿ ರಸ್ತೆಯಲ್ಲಿರುವ ಸೀತಾವಿಲಾಸ ಅರಮನೆಯನ್ನ ಪ್ರವಾಸಿಗರ ಅನುಕೂಲಕ್ಕಾಗಿ ನೀಡಿದ್ದರಂತೆ. ದಸರಾ ವೀಕ್ಷಿಸಲು ಬರುವ ಜನರಿಗೆ ತೊಂದರೆಯಾಗಬಾರದೆಂದು ವಿಶೇಷ ವ್ಯವಸ್ಥೆಯನ್ನು ಸಹ ಮಾಡಿಸಿದ್ದರಂತೆ.

ಇನ್ನು ಕುಸ್ತಿ ಮೈಸೂರು ಅರಸರ ನೆಚ್ಚಿನ ಕ್ರೀಡೆಯಾಗಿತ್ತು. ಹೀಗಾಗಿ, ದಸರಾ ಉತ್ಸವದಲ್ಲಿ ಕುಸ್ತಿ ಪಂದ್ಯಗಳನ್ನು ಸಹ ಆರಂಭಿಸಲಾಯಿತು. ಒಡೆಯರ್​ ಮನೆತನದ ಅಂದಿನ ಮಹಾರಾಜರಾದ ಕಂಠೀರವ ನರಸರಾಜ ಒಡೆಯರ್ ಸ್ವತಃ ಕುಸ್ತಿಪಟುವಾಗಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಅವರು ಒಮ್ಮೆ ಮಾರುವೇಶದಲ್ಲಿ ಹೋಗಿ ತಿರುಚಿರಾಪಳ್ಳಿಯ ಪೈಲ್ವಾನ್ ಒಬ್ಬನನ್ನು ಕುಸ್ತಿ ಅಖಾಡದಲ್ಲಿ ಮಣಿಸಿದ್ದರು. ಪೈಲ್ವಾನನ್ನು ಮಣಿಸಿದ ಹಿನ್ನೆಲೆಯಲ್ಲಿ ಮೈಸೂರಿನ ಜನ ಇವರಿಗೆ ರಣಧೀರ ಎಂಬ ಬಿರುದನ್ನು ಸಹ ನೀಡಿದ್ದರು. ಅಷ್ಟೇ ಅಲ್ಲ, ರಣಧೀರ ಕಂಠೀರವ ಅರಸರು ಬಲಿಷ್ಠ ಕರುವೊಂದನ್ನ ತಮ್ಮ ಹೆಗಲ ಮೇಲೆ ಹೊತ್ತು ಚಾಮುಂಡಿ ಬೆಟ್ಟದ ಮೆಟ್ಟಿಲುಗಳನ್ನು ಹತ್ತುತ್ತಿದ್ದರು ಎಂಬ ಅಚ್ಚರಿಯ ಸಂಗತಿ ಸಹ ಕೇಳಿಬಂದಿದೆ.

ದಸರೆಯ ಆಚರಣೆಯಲ್ಲಿ ಮೈಸೂರ್ ಪಾಕ್ ಫೇಮಸ್
1935 ರಲ್ಲಿ ಆಕಸ್ಮಿಕವಾಗಿ ಕಂಡು ಹಿಡಿದ ಸಿಹಿ ತಿನಿಸೇ ಮೈಸೂರ್​ ಪಾಕ್. ಅರಮನೆಯ ಪ್ರಮುಖ ಬಾಣಸಿಗರಾಗಿದ್ದ ಕಾಕಾಸುರ ಮಾದಪ್ಪ ಮೈಸೂರ್​ ಪಾಕನ್ನು ಮೊದಲ ಬಾರಿಗೆ ತಯಾರಿಸಿದ್ದು. ನಾಲ್ವಡಿ ಕೃಷ್ಣರಾಜ ಒಡೆಯರ್​ಗೆ ಭೋಜನ ಸಿದ್ಧಪಡಿಸುವಾಗ ಕಾಕಾಸುರ ಮಾದಪ್ಪ ಈ ಸಿಹಿ ತಿನಿಸನ್ನ ಸಿದ್ಧಪಡಿಸಿದ್ದರು. ಹೊಸ ತಿನಿಸನ್ನು ತಿಂದು ಪ್ರಸನ್ನರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಬಳಿಕ ಈ ವಿಶೇಷ ವಿಭಿನ್ನ ಸಿಹಿ ತಿನಿಸಿಗೆ ಮೈಸೂರ್ ಪಾಕ್ ಎಂದು ಹೆಸರಿಟ್ಟರು. ಪಾಕದಿಂದ ತಯಾರಾದ ತಿಂಡಿ ಇದಾಗಿದ್ದರಿಂದ ಮೈಸೂರ್​ ಪಾಕ್ ಅಂತಾ ಹೆಸರು ನೀಡಲಾಯಿತು.

ಜಗನ್ಮೋಹನ ಅರಮನೆಯಲ್ಲಿ ಯುರೋಪಿಯನ್ ದರ್ಬಾರ್
ದಸರಾ ಆಚರಣೆ ವೇಳೆ ಜಗನ್ಮೋಹನ ಅರಮನೆಯಲ್ಲಿ ದಸರಾ ಯೂರೋಪಿಯನ್ ದರ್ಬಾರ್ ಆಚರಿಸಲಾಗ್ತಾ ಇತ್ತು. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ದಸರಾ ಆಚರಣೆ ವೇಳೆ ಕೇವಲ ಯೂರೋಪಿಯನ್ನರಿಗಾಗಿಯೇ ವಿಶೇಷ ದರ್ಬಾರ್ ಆಯೋಜನೆ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ. ಮೈಸೂರು ಆಗ ಬ್ರಿಟಿಷ್ ಆಶ್ರಿತ ಸಂಸ್ಥಾನವಾಗಿದ್ದರಿಂದ ಅವರಿಗೂ ಗೌರವ ನೀಡಲು ಈ ದರ್ಬಾರ್ ನಡೆಸಲಾಗುತ್ತಿತ್ತಂತೆ. ಅರಮನೆಯ ಅಶ್ವದಳ ಹಾಗೂ ಒಂದು ರಥದೊಂದಿಗೆ ಯೂರೋಪಿಯನ್ ರೆಸಿಡೆಂಟ್ ಮುಖ್ಯಸ್ಥನನ್ನ ದರ್ಬಾರ್​ಗೆ ಕರೆತರಲಾಗ್ತಾ ಇತ್ತು ಎಂದು ಉಲ್ಲೇಖಿಸಲಾಗಿದೆ. ಜೊತೆಗೆ, ಈ ವೇಳೆ 13 ಕುಶಾಲ ತೋಪುಗಳನ್ನ ಹಾರಿಸಿ ಗೌರವ ಸಹ ಸೂಚಿಸಲಾಗ್ತಾ ಇತ್ತು. ಜಗನ್ಮೋಹನ ಅರಮನೆಯಲ್ಲಿ ಸೇನಾ ತುಕಡಿಯಿಂದ ಗೌರವ ವಂದನೆ ಸಹ ನೀಡಲಾಗ್ತಾ ಇತ್ತು ಎಂಬ ಮಾಹಿತಿ ದೊರೆತಿದೆ.

Related Tags:

Related Posts :

Category:

error: Content is protected !!