‘ವಿದೇಶಿಗರು ಕನ್ನಡ ಅಕ್ಷರಗಳನ್ನು ಟ್ಯಾಟೂ ಹಾಕಿಸಿಕೊಂಡಾಗ ಎನ್ನೆದೆ ಉಬ್ಬುವುದು!’

  • TV9 Web Team
  • Published On - 21:55 PM, 31 Oct 2020

ಕನ್ನಡದ ಬಗ್ಗೆ ಅಭಿಮಾನವಿದ್ದರೆ ಯಾವ ರೂಪದಲ್ಲಿ ಬೇಕಾದರೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬಹುದು. ಮಾಡುವ ಮನಸಿರಬೇಕು ಅಷ್ಟೇ. ಇದಕ್ಕೆ ಸಾಕ್ಷಿ ಮೈಸೂರಿನ ಟ್ಯಾಟೂ ಕಲಾವಿದ ಸಿ.ಕೆ. ಸುನೀಲ್.

ಕನ್ನಡದ ಅಣ್ಣ ಪಡಿಯಚ್ಚು
ಸುನೀಲ್ ಮೂಲತಃ ಕೊಡಗು ಜಿಲ್ಲೆ ಸೋಮವಾರಪೇಟೆಯವರು. ಸುನೀಲ್ ಅವರ ಕನ್ನಡ ಭಾಷೆಯ ಪ್ರೇಮ ನಿಜಕ್ಕೂ ಅಚ್ಚರಿಯನ್ನು ತರಿಸುತ್ತದೆ. ಸುನೀಲ್‌ಗೆ ಚಿಕ್ಕಂದಿನಿಂದಲೂ ಕನ್ನಡ ಭಾಷೆಯ ಮೇಲೆ ವಿಶೇಷ ಅಭಿಮಾನ. ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಅನ್ನೋ ಕವಿವಾಣಿ ಸುನೀಲ್ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿತ್ತು. ಅದೇ ಕಾರಣಕ್ಕೆ ಕನ್ನಡಕ್ಕಾಗಿ ಏನಾದರೂ ಮಾಡಬೇಕೆಂಬ ತುಡಿತ ಅವರಲ್ಲಿತ್ತು. ಅದಕ್ಕಾಗಿ ಅವರು ತಾನು ಮಾಡುತ್ತಿದ್ದ ಟ್ಯಾಟೂ ಬಿಡಿಸುವ ಕೆಲಸದಲ್ಲೇ ಅಪರೂಪದ ಕೆಲಸ ಮಾಡಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿದೇಶಿಗರ ಮೇಲೆ ಪ್ರೀತಿಯಿಂದ ಕನ್ನಡ ಟ್ಯಾಟೂ ಬ್ಯಾಟಿಂಗ್
ಮೈಸೂರಿನ ಕುವೆಂಪು ನಗರದಲ್ಲಿ ಟ್ಯಾಟೂ ಇಂಪೆಕ್ ಸ್ಟುಡಿಯೋ ಹೊಂದಿರುವ ಸುನೀಲ್ ಕನ್ನಡದಲ್ಲಿ ಟ್ಯಾಟೂ ಹಾಕುವುದ್ದಕ್ಕೆ ಆರಂಭಿಸಿ ಈಗ ನಮ್ಮ ಭಾಷೆಯಲ್ಲೇ ಟ್ಯಾಟೂ ಹಾಕುವುದರಲ್ಲಿ ಪರಿಣತಿ ಪಡೆದಿದ್ದಾ‌ರೆ. ಅದರಲ್ಲೂ ಸುನೀಲ್ ವಿದೇಶಿಗರಿಗೆ ಹಾಕಿರುವ ಕನ್ನಡ ಟ್ಯಾಟೂಗಳು ವಿಶೇಷವಾಗಿದೆ. ಸುನೀಲ್ ಒಂದಲ್ಲ ಎರಡಲ್ಲ ಬರೋಬ್ಬರಿ 40 ಮಂದಿಗೆ ಕನ್ನಡದ ಹೆಸರಿನ ಟ್ಯಾಟೂ ಹಾಕಿದ್ದಾರೆ. ಅಮೆರಿಕ, ಸ್ವೀಡನ್, ಜಪಾನ್ ಸೇರಿದಂತೆ ಹಲವು ದೇಶಗಳಿಂದ ಬಂದವರ ಮೈ ಮೇಲೆ, ಇವರ ಕನ್ನಡ ಭಾಷೆಯ ಮೇಲಿನ ಪ್ರೇಮ ಟ್ಯಾಟೂ ಮೂಲಕ ಅನಾವರಣಗೊಂಡಿದೆ.

ನಮಗೆ ಕನ್ನಡ ಪದದ ಟ್ಯಾಟೂಗಳು ಬೇಕೆನ್ನುವಷ್ಟರ ಮಟ್ಟಿಗೆ ವಿದೇಶಿಗರನ್ನು ಸುನೀಲ್ ಸಜ್ಜುಗೊಳಿಸಿದ್ದಾರೆ. ಇದರಲ್ಲಿ ಅಮೆರಿಕಾದ ಜಾಯ್ ಬೇನ್ ತೋಳಿನ ಮೇಲೆ ನನ್ನ ಸ್ವೀಟ್ ಎಮಿ ಆಶೀರ್ವದಿಸಲಿ ಎಂಬ ಕನ್ನಡ ಪದದ ಟ್ಯಾಟೂ. ವಿದೇಶಿ ಮಹಿಳೆ ತೋಳಿನ ಮೇಲೆ ನಮಸ್ತೆ ಪದದ ಟ್ಯಾಟೂ ಸಹ ಗಮನ ಸೆಳೆಯುತ್ತದೆ. ಸುನೀಲ್ ಹಾಕುವ ಟ್ಯಾಟೂನಿಂದಾಗಿ ಕನ್ನಡ ಭಾಷೆಗೆ ವಿದೇಶಿಗರು ತುಂಬಾ ಖುಷಿಯಾಗಿದ್ದಾರೆ. ಇದು ಸುನೀಲ್‌ಗೂ ಖುಷಿ ಕೊಟ್ಟಿದೆ.

ಸುನೀಲ್ ವಿದೇಶಿಗರಿಗೆ ಕೇವಲ ಕನ್ನಡ ಟ್ಯಾಟೂ ಹಾಕುವುದು ಮಾತ್ರವಲ್ಲ ಅವರಿಗೆ ಕನ್ನಡ ಕಲಿಸುವ ಕೆಲಸ ಸಹ ಮಾಡುತ್ತಿದ್ದಾರೆ. ಅಪ್ಪ, ಅಮ್ಮ, ನಮಸ್ತೆ ಇತ್ಯಾದಿ ಕನ್ನಡ ಪದಗಳನ್ನು ತಮ್ಮ ಬಳಿ ಬರುವ ವಿದೇಶಿಗರಿಗೆ ಕಲಿಸಿದ್ದಾರೆ. ಒಟ್ಟಾರೆ, ಕನ್ನಡಾಂಬೆಗೆ ಸುನೀಲ್ ಅವರ ಸೇವೆ ನಿಜಕ್ಕೂ ಶ್ಲಾಘನೀಯ.
-ರಾಮ್

ನನಗೆ ಕನ್ನಡ ಟ್ಯಾಟೂ ಹಾಕೋದು ಅಂದರೆ ತುಂಬಾ ಪ್ರೀತಿ‌. ಅದರಲ್ಲೂ ವಿದೇಶಿಗರು ಕನ್ನಡ ಅಕ್ಷರಗಳನ್ನು ಟ್ಯಾಟೂ ಆಗಿ ಹಾಕಿಸಿಕೊಂಡಾಗ ನನಗೆ ರೋಮಾಂಚನವಾಗುತ್ತದೆ. ನಮ್ಮ ಕನ್ನಡ ಭಾಷೆ ಮೇಲೆ ಹೆಮ್ಮೆಯುಂಟಾಗುತ್ತದೆ. ಒಂದು ರೀತಿ ಖುಷಿಯಾಗುತ್ತದೆ.

ಇನ್ನು ನನ್ನ ಬಳಿ ಬಹುತೇಕ ವಿದೇಶಿಗರು ಸ್ವಯಂಪ್ರೇರಿತರಾಗಿ ಕನ್ನಡ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ನಮ್ಮ ಮೈಸೂರಿನ ಪ್ರವಾಸಿ ತಾಣಗಳು, ಇಲ್ಲಿನ ಪರಿಸರ ಜನರನ್ನು ಮೆಚ್ಚಿ ಅದನ್ನು ಶಾಶ್ವತವಾಗಿ ನೆನಪಿನಲ್ಲಿ ಇಟ್ಟುಕೊಳ್ಳಲು ಕನ್ನಡ ಭಾಷೆಯ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಇತ್ತೀಚೆಗೆ ನಮ್ಮ ಜನರು ಕನ್ನಡದ ಟ್ಯಾಟೂ ಬೇಕು ಅನ್ನುತ್ತಿದ್ದಾರೆ. ನಿಜಕ್ಕೂ ನನಗೆ ಕನ್ನಡದಲ್ಲಿ ಟ್ಯಾಟೂ ಹಾಕೋದು ಅಂದ್ರೆ ಅಚ್ಚುಮೆಚ್ಚು.
-ಸಿ.ಕೆ. ಸುನೀಲ್, ಟ್ಯಾಟೂ ಕಲಾವಿದ