21 ದಿನಗಳ ಲಾಕ್ಡೌನ್ಗೆ 1 ವರ್ಷ; ಅಲ್ಲಿಂದ ಇಲ್ಲಿಗೆ ಸಾಗಿಬಂದ ಹಾದಿಯ ಚಿತ್ರಣ ಇಲ್ಲಿದೆ
ಕೊರೊನಾ ಎಂಬ ನೂತನ ಸೋಂಕಿನ ಪರಿಚಯ ವೈದ್ಯರಿಗೂ ಇರಲಿಲ್ಲ. ಹೇಗೆ ಚಿಕಿತ್ಸೆ ನೀಡಬೇಕು, ಸೋಂಕಿತರನ್ನು ಹೇಗೆ ಉಪಚರಿಸಬೇಕು ಎಂಬ ಸೂಕ್ತ ತಿಳಿವಳಿಕೆ ಯಾರಿಗೂ ಗೊತ್ತಿರಲಿಲ್ಲ. ಇಲ್ಲಸಲ್ಲದ ಗಾಳಿಸುದ್ದಿಗಳು, ವದಂತಿಗಳು ಲಾಕ್ಡೌನ್ನಲ್ಲಿ ಜನರ ಬಾಯಿಗೆ ಆಹಾರವಾದವು. ಆದರೆ ಎಷ್ಟೇ ಆದರೂ ಜನರ ಜೀವ ಕಾಪಾಡಲು ಲಾಕ್ಡೌನ್ ಅನಿವಾರ್ಯವೂ ಆಗಿತ್ತು.
ಕೊರೊನಾ ಸೋಂಕು ಎಂಬೊಂದು ‘ಅಪರಿಚಿತ ಸೋಂಕು’ ಹೇಳದೇ ಕೇಳದೇ ಒಮ್ಮೆಗೆ ಕಾಲಿಟ್ಟಾಗ ಎಲ್ಲಾ ದೇಶಗಳೂ ಗರಬಡಿದಂತಹ ಪರಿಸ್ಥಿತಿ ತಲುಪಿದವು. ಆ ಕ್ಷಣಕ್ಕೆ ಆಡಳಿತಗಳ ಎದುರಿನ ಮೊದಲ ಸವಾಲು ಸೋಂಕು ನಿಯಂತ್ರಿಸುವುದಾಗಿತ್ತು. ಕೊರೊನಾ ಇಂದಿಗೆ ಒಂದು ವರ್ಷದ ಮುಂಚೆ ಔಷಧವಿರದ ಕಾಯಿಲೆ. ಇಂದಿಗೂ ಹಾಗೆ ಹೇಳಬಹುದಾದರೂ ಹಾಗೆ ಹೇಳುವುದು ತಪ್ಪೂ ಆಗುತ್ತದೆ. ಇಡೀ ಮನುಕುಲವನ್ನು ಅಂತಹ ಇಬ್ಬಂದಿ ಸ್ಥಿತಿಗೆ ತಳ್ಳಿದ್ದು ಕೊವಿಡ್ 19. ಇಂತಿಪ್ಪ ಕೊರೊನಾ ಕಾರಣಕ್ಕೆ ಭಾರತದಲ್ಲಿ ಹಿಂದೆಂದೂ ಕಂಡಿರದ ಕೇಳಿರದ ‘ಲಾಕ್ಡೌನ್’ ಎಂಬ ಹೊಸ ಕಲ್ಪನೆ ಜಾರಿಯಾಯಿತು. ಹೊಸತನ್ನು ಅಷ್ಟು ಬೇಗ ಬಿಟ್ಟುಕೊಳ್ಳುವ ಮನೋಭಾವದವರಲ್ಲದ ಭಾರತೀಯರು ಮೊದಲು ‘ಲಾಕ್ಡೌನ್’ನ್ನು ಕ್ಷುಲ್ಲಕವಾಗಿ ನೋಡಿದರು. ‘ಏ..ಹೊರಗೆ ಹೋಗಬಾರದಂತೆ, ಮನೆಯಲ್ಲೇ ಇರಬೇಕಂತೆ.. ಅದೋ ಆ ತಿರುವಿನ ಮೂಲೆಯಲ್ಲಿರುವ ಶೆಟ್ಟರಂಗಡಿಯಿಂದ ಐದೇ ನಿಮಿಷದಲ್ಲಿ ಅರ್ಧ ಲೀಟರ್ ಹಾಲು ತಂದುಬಿಡುತ್ತೇನೆ,ಏನಾಗುತ್ತೆ?’ ಎಂದು ಲುಂಗಿ ಮಡಚಿ ಹೋದವರ ಕಾಲಿನ ಮೇಲೆ ಪೊಲೀಸರ ಲಾಠಿ ಅಚ್ಚಾಯಿತು. ‘ಲಾಕ್ಡೌನ್’ ಕಾರಣದಿಂದ ಮೊದಲ ಬಾರಿಗೆ ಹೊಡೆತ ತಿಂದವರು ಇಂದಿನ ದಿನವನ್ನು ಮರೆಯರು. ಏಕೆ ಅಂದಿರೇ? 2020ರ ಮಾರ್ಚ್ 23 ಮಧ್ಯರಾತ್ರಿ, ಅಂದರೆ ವರ್ಷದ ಹಿಂದಿನ ಇದೇ ದಿನ. ದೇಶದಲ್ಲಿ ಮೊದಲ ಲಾಕ್ಡೌನ್ ಜಾರಿಯಾದದ್ದು. ಅದೂ ಬರೋಬ್ಬರಿ 21 ದಿನಗಳ ಲಾಕ್ಡೌನ್. ಮಾರ್ಚ್ 24ರ ಮುಂಜಾನೆ ಎದ್ದವರಿಗೆ ಮನೆಯ ಬಾಗಿಲಿಂದ ಹೊರಗೆ ಕೈಕಾಲು ಆಡಿಸಲೂ ಹೋಗಲಾಗದ ಸ್ಥಿತಿ.
ಈ ಘೋಷಣೆಗೆ ಒಂದು ದಿನದ ಮೊದಲು ಅಂದರೆ ಮಾರ್ಚ್ 22ರಂದು ಜನತಾ ಕರ್ಫ್ಯೂ ನಿಮಿತ್ತ ಶಂಖ ಜಾಗಟೆ ಬಾರಿಸಲಾಯಿತು. ತಾವು ಸಾರ್ವಜನಿಕವಾಗಿ ಏಕೆ ಶಂಖ, ಜಾಗಟೆ ನುಡಿಸುತ್ತಿದ್ದೇವೆ ಎಂಬುದರ ಕಿಂಚಿತ್ ಅರಿವೂ ಇಲ್ಲದೆ ಜನ ಜನತಾ ಕರ್ಫ್ಯೂ ಆಚರಿಸಿದರು. ಅಷ್ಟೊತ್ತಿಗಾಗಲೇ ದೇಶದಲ್ಲಿ ಕೊರೊನಾ ಸೋಂಕಿಗೆ 169 ಜನ ತುತ್ತಾಗಿದ್ದರು, ನಾಲ್ವರು ತಮ್ಮ ಸಾವಿನ ಕಾರಣವೇ ತಿಳಿಯದೇ ಬಲಿಯಾಗಿದ್ದರು. ಇಂದಿಗೆ ಕಾಡ್ಗಿಚ್ಚಿನಂತೆ ಪಸರಿಸಿದ ವೈರಾಣು ಬಲಿ ತೆಗೆದುಕೊಂಡವರ ಸಂಖ್ಯೆ ಒಟ್ಟು 1,59,967.
ಮಧ್ಯರಾತ್ರಿಯಿಂದಲೇ ಜಾರಿ ಕಳೆದ ವರ್ಷದ ಮಾರ್ಚ್ 23ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಲಾಕ್ಡೌನ್ ಘೋಷಿಸಲಾಯಿತು. ಅನಿವಾರ್ಯ ಸೇವೆಗಳನ್ನು ಹೊರತುಪಡಿಸಿ ಮಿಕ್ಕೆಲ್ಲವುಗಳು ನಾಳೆ ಬೆಳಗ್ಗೆಯಿಂದ ಬಾಗಿಲು ಹಾಕಬೇಕು ಎಂದಾಕ್ಷಣ ಲಕ್ಷಾಂತರ ಜನರಿಗೆ ಈ ಲಾಕ್ಡೌನ್ ಕಲ್ಪನೆ ಅರ್ಥವೇ ಆಗಲಿಲ್ಲ. ಅರ್ಥವಾದವರಿಗೆ ಎದೆ ಧಸಕ್ ಆಯಿತು. ಮರುದಿನದ ಪಾಲಿಗೆ ವ್ಯಾಪಾರ, ವಹಿವಾಟು ಸೇವೆ ಸೌಲಭ್ಯಕ್ಕಾಗಿ ನಡೆಸಿದ್ದ ತಯಾರಿಗಳೆಲ್ಲವೂ ನೀರಲ್ಲಿ ಮಾಡಿದ ಹೋಮವಾಯಿತು.
ಕೊರೊನಾ ಸೋಂಕು ವಿದೇಶಗಳಿಂದ ದೇಶಕ್ಕೆ ಹರಡದಂತೆ ತಡೆಯಲು ವಿದೇಶಗಳಿಂದ ವಿಮಾನಗಳ ಪ್ರವೇಶವನ್ನು ನಿರ್ಬಂಧಿಸಲಾಯಿತು. ಲಕ್ಷಾಂತರ ಕೂಲಿ ಕಾರ್ಮಿಕರು ನಾಳೆಯ ಹೊಟ್ಟೆಗೆ ಚಿಂತೆ ಮಾಡುತ್ತ ಬಸವಳಿದರು. ಎಲ್ಲರಿಗೂ ತಮ್ಮ ಸ್ವಂತ ಊರು ನೆನಪಾಯಿತು. ಮಧ್ಯರಾತ್ರಿಯಿಂದಲೇ ಜಾರಿಯಾದ ಲಾಕ್ಡೌನ್ನಿಂದ ಸಾರಿಗೆ ಸಂಪರ್ಕ ಸ್ಥಗಿತಗೊಂಡಿತು. ಮನೆಗೆ ಮರಳಲು ಮಾಡಿದ ಶತಪ್ರಯತ್ನದ ನಂತರವೂ ಯಾವುದೇ ಸಾರಿಗೆ ವ್ಯವಸ್ಥೆ ಆಗದೇ ಕೂಲಿ ಕಾರ್ಮಿಕರು ಮನೆಯ ದಾರಿಯಲ್ಲಿ ಸ್ವತಃ ನಡೆದೇ ಹೋಗಲಾರಂಭಿಸಿದರು. ಕೊರೊನಾದಿಂದ ತೀರಿಕೊಂಡವರು ಒಂದೆಡೆಯಾದರೆ, ಇನ್ನೊಂದೆಡೆ ಕೂಲಿಕಾರ್ಮಿಕ, ಹೊಟ್ಟೆಗೆ ಹಿಟ್ಟಿಲ್ಲದೆ ಮೃತಪಟ್ಟವರು . ಮನೆಯಿಂದ ಹೊರಬರಲಾರದೇ ಸಾವಿರಾರು ವಯೋವೃದ್ಧರು, ಮಕ್ಕಳು ಮಾನಸಿಕ ಉದ್ವಿಗ್ನತೆಗೆ ಒಳಗಾದರು. ಮಧ್ಯಮ ವರ್ಗ ಸ್ಮಾರ್ಟ್ಫೋನ್ಗಳ ಬಳಕೆ ಹೆಚ್ಚಿಸಿತು. ಇಲ್ಲಸಲ್ಲದ ವಿಡಿಯೋ- ಕಂಟೆಂಟುಗಳಿಗೂ ಬೇಡಿಕೆ ಬಂತು. ಆದರೆ ಬಡವರ್ಗದ ಜನತೆ ಅತ್ತ ಕೊರೊನಾ ಬಂದರೂ ಆಗುತ್ತಿತ್ತು, ಈ ಲಾಕ್ಡೌನ್ ಬೇಡವಾಗಿತ್ತು ಎಂಬಂತಹ ಸ್ಥಿತಿಗೆ ತಲುಪಿತು. ಏಕೆಂದರೆ ಮೊದಮೊದಲು ಕೊರೊನಾ ಸೋಂಕಿತರಿಗೆ ದೊರೆಯುತ್ತಿದ್ದ ರಾಜಾತಿಥ್ಯ.
ವೈದ್ಯರಿಗೂ ಹೊಸತು ಕೊರೊನಾ ಎಂಬ ನೂತನ ಸೋಂಕಿನ ಪರಿಚಯ ವೈದ್ಯರಿಗೂ ಇರಲಿಲ್ಲ. ಹೇಗೆ ಚಿಕಿತ್ಸೆ ನೀಡಬೇಕು, ಸೋಂಕಿತರನ್ನು ಹೇಗೆ ಉಪಚರಿಸಬೇಕು ಎಂಬ ಸೂಕ್ತ ತಿಳಿವಳಿಕೆ ಯಾರಿಗೂ ಗೊತ್ತಿರಲಿಲ್ಲ. ಇಲ್ಲಸಲ್ಲದ ಗಾಳಿಸುದ್ದಿಗಳು, ವದಂತಿಗಳು ಲಾಕ್ಡೌನ್ನಲ್ಲಿ ಜನರ ಬಾಯಿಗೆ ಆಹಾರವಾದವು. ಆದರೆ ಎಷ್ಟೇ ಆದರೂ ಜನರ ಜೀವ ಕಾಪಾಡಲು ಲಾಕ್ಡೌನ್ ಅನಿವಾರ್ಯವೂ ಆಗಿತ್ತು.
ಲಾಕ್ಡೌನ್ ಘೋಷಣೆಯಾದ ಒಂದು ವರ್ಷಕ್ಕೆ ಕೊರೊನಾದ 2ನೇ ಅಲೆ ಪ್ರಬಲವಾಗಿ ಕಾಣಿಸಿಕೊಳ್ಳುತ್ತಿದೆ. ಇನ್ನೊಮ್ಮೆ ಲಾಕ್ಡೌನ್ ಮಾಡಬೇಕೆಂಬ ಕೂಗು ಬಲಗೊಳ್ಳುತ್ತಿದೆ. ಔಷಧಗಳನ್ನೇನೋ ಕಂಡುಹಿಡಿಯಲಾಗಿದ್ದರೂ, ಬಹುಪಾಲು ಜನತೆಗೆ ಲಸಿಕೆಯ ಮೇಲೆ ನಂಬಿಕೆ ಬಂದಿಲ್ಲ. ಕೊರೊನಾ ಬರದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸುವುದನ್ನು ಮರೆಯುತ್ತೇವೆ. ನೆನಪಾದರೂ ನಿರ್ಲಕ್ಷಿಸುತ್ತೇವೆ. ಈ ದುರ್ಬುದ್ಧಿಯನ್ನು ಬಿಡುವುದಷ್ಟೇ ಕೊರೊನಾ ಸೋಂಕನ್ನು ಇಲ್ಲವಾಗಿಸುವ ಹೆದ್ದಾರಿ.
ಇದನ್ನೂ ಓದಿ: COVID-19 MHA Guidelines: ಕೊರೊನಾ ಎರಡನೇ ಅಲೆ ತಡೆಯಲು ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ
ಇದನ್ನೂ ಓದಿ: Covid 19 Vaccination: ಏಪ್ರಿಲ್ 1ರಿಂದಲೇ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ; ಕೇಂದ್ರ ಸರ್ಕಾರದಿಂದ ಘೋಷಣೆ