ಅಂತೂ ಇಂತೂ ಪಂಜಾಬ್ನಲ್ಲಿ ರಾಜಕೀಯವಾಗಿ ಎದ್ದಿದ್ದ ಸುದೀರ್ಘ ಬೀಸುಗಾಳಿ ಈಗ ಒಂದು ಕಡೆ ನಿಲ್ಲುವ ಹಂತಕ್ಕೆ ಬಂದಿದೆ. ಚುನಾವಣೆ ಎದುರಿಗೇ ಇರುವ ಸದ್ಯ ಈ ಸಂಕಷ್ಟ ದೂರವಾದಂತೆ ಕಾಂಗ್ರೆಸ್ ಪಕ್ಷಕ್ಕೆ ಭಾಸವಾಗಿದೆಯಾದರೂ ಅದಾದಮೇಲೆ ಅಸೆಂಬ್ಲಿ ಸಾರ್ವತ್ರಿಕ ಚುನಾವಣೆಗೆ ಇನ್ನೂ ಎರಡು ವರ್ಷ ಇರುವಾಗ ಕಾಂಗ್ರೆಸ್ ಎದುರಿಗೆ ರಾಜಸ್ತಾನ ಅಂತಃಕಲಹ ಕಾಡತೊಡಗಿದೆ. ಇದಕ್ಕೆ ಹೈಕಮಾಂಡ್ ಮದ್ದೇನು? ಎಂಬುದು ಸದ್ಯದ ರಾಜಕೀಯ ಕುತೂಹಲ.
ಹಾವು ಮುಂಗುಸಿಯಂತೆ ಕಾದಾಡುತ್ತಿದ್ದ ಪಕ್ಷದ ಹಿರಿಯ ನಾಯಕ, ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಮತ್ತೊಬ್ಬ ಪಕ್ಷದ ನಾಯಕ ನವಜೋತ್ ಸಿಂಗ್ ಸಿಧು ನಡುವಣ ಕಲಹವನ್ನು ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಬಗೆಹರಿಸಿಕೊಂಡಿದೆ. ಅಮರಿಂದರ್ ಸಿಂಗ್ ಅವರನ್ನ ಕೆಳಗಿಳಿಸಿ, ನವಜೋತ್ ಸಿಂಗ್ ಸಿಧು ಅವರ ಆಪ್ತನನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಕೂಡಿಸಿದೆ. ಅದ್ಯಕ್ಕೆ ಅಲ್ಲಿ ಎಲ್ಲವೂ ಇತ್ಯರ್ಥವಾಗಿದೆ ಅನ್ನಿಸುತ್ತಿದೆ. ಆದರೆ ಅಮರಿಂದರ್ ಸಿಂಗ್ ಬಂಡಾಯ ಕಾಂಗ್ರೆಸ್ಗೆ ಹೇಗೆ ತಿರುಗುಬಾಣವಾಗಲಿದೆ ಎಂಬುದು ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಮನದಟ್ಟಾಗಲಿದೆ.
ಈ ಮಧ್ಯೆ, ಪಂಜಾಬ್ ಸಂಕಷ್ಟದ ಬಳಿಕ ಕಾಂಗ್ರೆಸ್ಗೆ ಎದುರಾಗಿದೆ ರಾಜಸ್ಥಾನ ಅಂತಃಕಲಹ! ರಾಜಸ್ಥಾನದಲ್ಲಿನ ಆಂತಃಕಲಹ ಪಂಜಾಬ್ನಷ್ಟೇ ಗಂಭೀರವಾಗಿದೆ. ಇದಕ್ಕೆ ಹೈಕಮಾಂಡ್ ಮದ್ದೇನು? ಎಂಬುದು ಕುತೂಹಲಕಾರಿಯಾಗಿದೆ.
ರಾಜಸ್ತಾನದಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮಧ್ಯೆ ಒಂದು ವರ್ಷದಿಂದ ತಿಕ್ಕಾಟ ನಡೆದುಬಂದಿದೆ. ಈ ಮಧ್ಯೆ, ಕಾಂಗ್ರೆಸ್ ಹೈಕಮಾಂಡ್ ರಾಜಸ್ತಾನದಲ್ಲಿ ಪಕ್ಷದ ನಾಯಕರ ತಿಕ್ಕಾಟವನ್ನು ತಿಳಿಗೊಳಿಸಲು ಯತ್ನಿಸುತ್ತಿದೆ. ಆದರೆ ಫಲ ನೀಡುತ್ತಿಲ್ಲ. ಈ ಮಧ್ಯೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಸಂಪುಟವನ್ನು ಪುನಾರಚಿಸುವ ನಿರ್ಧಾರ ಇನ್ನೂ ಕಾರ್ಯಗತವಾಗಿಲ್ಲ. ತಿಕ್ಕಾಟ ಹೆಚ್ಚಾಗಿ, ಹೊಂದಾಣಿಕೆ ಕೊರತೆಯಿಂದಾಗಿ ಗೆಹ್ಲೋತ್ ಸಂಪುಟ ಪುನಾರಚನೆ ಮುಂದೆ ಹೋಗುತ್ತಿದೆ.
ಸದ್ಯಕ್ಕೆ ಪಂಜಾಬ್ ಫಾರ್ಮುಲಾ, ಅಧಿಕಾರ ಸ್ಥಿತ್ಯಂತರ ಕಂಡು ಪಕ್ಷದ ಯುವ ವರ್ಚಸ್ವೀ ನಾಯಕ ಸಚಿನ್ ಪೈಲಟ್ ನಗೆಬೀರಿದ್ದಾರೆ. ಶೀಘ್ರದಲ್ಲೇ ರಾಜಸ್ತಾನದಲ್ಲಿಯೂ ಬದಲಾವಣೆಯ ಪರ್ವ ಕಂಡುಬರಲಿದೆ. ನಮ್ಮ ನಾಯಕ ಸಚಿನ್ ಪೈಲಟ್ ಅದಾಗಲೇ ‘ಹೈ’ ನಾಯಕರ ಜೊತೆ ಮಾತುಕತೆ ಜಾರಿಯಲ್ಲಿಟ್ಟಿದ್ದಾರೆ ಎಂದು ಸಚಿನ್ ಪೈಲಟ್ ಆಪ್ತರು ಹೇಳಿದ್ದಾರೆ. ಇದರಿಂದ ಸದ್ಯದಲ್ಲೇ ರಾಜಸ್ಥಾನದಲ್ಲೂ ಮುಖ್ಯಮಂತ್ರಿ ಬದಲಾಗುತ್ತಾರಾ? ಎಂಬ ಕುತೂಹಲ ಮೂಡಿದೆ.
ಆದರೆ ರಾಜಸ್ತಾನದಲ್ಲಿ ರಾಜಕೀಯ ವಾಸ್ತವ ಭಿನ್ನವಾಗಿದೆ. ಇಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋತ್ ಅವರಿಗೆ ಇನ್ನೂ ಪಕ್ಷದ ಮೇಲೆ ಹಿಡಿತ ಇದೆ. ಜೊತೆಗೆ ಅಶೋಕ್ ಗೆಹ್ಲೋತ್ ಗಾಂಧಿ ಕುಟುಂಬಕ್ಕೆ ಹತ್ತಿರವಾಗಿದ್ದಾರೆ. ಅದರೆ ಅಮರಿಂದರ್ ಸಿಂಗ್ಗೆ ಮುಳುವಾಗಿದ್ದೇ ಇದು. ಭಾರತೀಯ ಸೇನಾ ಹಿನ್ನೆಲೆಯ ಕ್ಯಾಪ್ಟನ್ ಅಮರಿಂದರ್ ಹೈಕಮಾಂಡ್ ವಿರುದ್ಧ ಸಿಡಿದೆದ್ದಿದ್ದರು.
ಜೊತೆಗೆ, ಪಂಜಾಬ್ನಲ್ಲಿ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಅದು ಅಮರಿಂದರ್ ಸಿಂಗ್ಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. ಅದರಿಂದ ತಿಕ್ಕಾಟ ನಿರ್ಣಾಕಯ ಹಂತದತ್ತ ಸಾಗಿತು. ಜೊತೆಗೆ ರಾಜಕೀಯವಾಗಿ ಪಂಜಾಬ್ನಲ್ಲಿ ಚುನಾವಣೆಗಳು 2022ರ ಮಾರ್ಚ್ನಲ್ಲಿದೆ. ಅಂದರೆ ಹತ್ತಿರದಲ್ಲಿಯೇ ಇದೆ. ಆದರೆ ರಾಜಸ್ತಾನದಲ್ಲಿ ಅಸೆಂಬ್ಲಿ ಚುನಾವಣೆಗೆ ಇನ್ನು ತುಸು ಹೆಚ್ಚು ಕಾಲ ಇದೆ. 2023ರ ಡಿಸೆಂಬರ್ ನಲ್ಲಿ ರಾಜಸ್ತಾನದಲ್ಲಿ ಅಸೆಂಬ್ಲಿ ಚುನಾವಣೆ ನಡೆಯಬೇಕಿದೆ.
ಆದರೆ ಪಂಜಾಬ್ ಮಾದರಿಯಾಗಿಟ್ಟುಕೊಂಡು ರಾಜಸ್ತಾನದಲ್ಲಿ ದಿಢೀರನೆ ನಾಯಕತ್ವ ಬದಲಾವಣೆಗೆ ಕೈಹಾಕದಿದ್ದರೂ ರಾಜಸ್ತಾನದಲ್ಲಿನ ಆಂತರಿಕ ಕಲಹವನ್ನು ತಿಳಿಗೊಳಿಸುವುದು ಪಕ್ಷದ ಹಿತದೃಷ್ಟಿಯಿಂದ ಅತ್ಯಗತ್ಯವಾಗಿದೆ.
ಇನ್ನು ಪಂಜಾಬ್, ರಾಜಸ್ತಾನದ ಹಾದಿಯಲ್ಲಿ ಛತ್ತೀಸ್ಗಢದಲ್ಲಿಯೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಒಂದಷ್ಟು ತಲ್ಲಣಗಳು ಇವೆ. ಆರೋಗ್ಯ ಸಚಿವ ಟಿ ಎಸ್ ಸಿಂಗ್ಡೋ ಛತ್ತೀಸ್ಗಢದ ಮುಖ್ಯಮಂತ್ರಿಯಾಗುವ ಸಾಧ್ಯತೆಗಳಿವೆ. ಆದರೆ ಈ ಬದಲಾವಣೆಗಳು, ಪಕ್ಷದೊಳಗಿನ ದೋಷಗಳು ದೂರಗಾಮಿ ಪರಿಣಾಮಬೀರಬಲ್ಲದು. ಅದು 2024ರ ಲೋಕಸಭಾ ಸಾರ್ವಯ್ರಿಕ ಚುನಾವಣೆಗಳ ಮೇಲೂ ಪ್ರಭಾವ ಬೀರಬಲ್ಲದು. ಹಾಗಾಗಿ ಕಾಂಗ್ರೆಸ್ ನಡೆ ಎಚ್ಚರಿಕೆಯಿಂದ ಆಗಬೇಕಿದೆ. ಏಕೆಂದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ 100 ಸ್ಥಾನ ಗಳಿಸುವ ಇರಾದೆ ಹೊಂದಿದೆ.
(after Punjab turmoil congress high command may face same situation in Rajasthan followed by Chhattisgarh)