ದೆಹಲಿ: ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಸಾಮರ್ಥ್ಯವಿರುವ ಅಗ್ನಿ ಪ್ರೈಮ್ ಖಂಡಾಂತರ ಕ್ಷಿಪಣಿಯ (Agni Prime ballistic missile) ಪರೀಕ್ಷಾರ್ಥ ಉಡಾವಣೆ ಸೋಮವಾರ ಮುಂಜಾನೆ ಒಡಿಶಾ ಕಡಲ ತೀರದಲ್ಲಿ ಯಶಸ್ವಿಯಾಗಿ ನಡೆಯಿತು. ಚೀನಾದ ಬಹುತೇಕ ಮುಖ್ಯ ನಗರಗಳು ಈಗ ಭಾರತದ ಕ್ಷಿಪಣಿ ವ್ಯಾಪ್ತಿಗೆ ಬಂದಿರುವುದರಿಂದ ರಕ್ಷಣಾ ಕಾರ್ಯತಂತ್ರದ ದೃಷ್ಟಿಯಿಂದ ಈ ಬೆಳವಣಿಗೆ ಮಹತ್ವ ಪಡೆದಿದೆ.
ಮುಂಜಾನೆ 10.55ಕ್ಕೆ ಉಡಾವಣೆ ಪ್ರಕ್ರಿಯೆಗಳು ಆರಂಭವಾದವು. ಉಡಾವಣೆಯ ಉದ್ದೇಶ ಸಂಪೂರ್ಣವಾಗಿ ಈಡೇರಿದೆ. ಒಡಿಶಾ ರಾಜಧಾನಿ ಭುವನೇಶ್ವರಕ್ಕೆ 150 ಕಿಮೀ ದೂರದಲ್ಲಿರುವ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ದ್ವೀಪದಿಂದ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಬಿವೃದ್ಧಿ ಸಂಸ್ಥೆ (Defence Research and Development Organisation – DRDO) ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆ ಮಾಹಿತಿ ನೀಡಿದೆ.
ಉಡಾವಣೆಯಾದ ಕ್ಷಿಪಣಿಯು ಚಲಿಸುವ ವೇಗ, ಎತ್ತರ ಸೇರಿದಂತೆ ಹಲವು ಮಾಹಿತಿಗಳನ್ನು ಪೂರ್ವ ಕರಾವಳಿಯ ಹಲವು ಟೆಲಿಮೆಟ್ರಿ ಮತ್ತು ರಾಡಾರ್ ಕೇಂದ್ರಗಳು ದಾಖಲಿಸಿದವು. ರಕ್ಷಣಾ ವಿಜ್ಞಾನಿಗಳ ಅಂದಾಜು ಮಾಡಿದ್ದಂತೆಯೇ ಕ್ಷಿಪಣಿಯು ನಿರ್ದಿಷ್ಟ ವೇಗ ಮತ್ತು ದೂರವನ್ನು ಕ್ರಮಿಸಿದೆ ಎಂದು ಡಿಆರ್ಡಿಒ ಹೇಳಿದೆ.
ಅಗ್ನಿ ಪ್ರೈಮ್ ಕ್ಷಿಪಣಿಯ ಈ ಪ್ರಯೋಗವು ಹಲವು ಕಾರಣಗಳಿಂದ ಮುಖ್ಯವೆನಿಸುತ್ತದೆ. ಗರಿಷ್ಠ 2000 ಕಿಮೀ ದೂರ ಕ್ರಮಿಸಬಲ್ಲ, ಸಿಲಿಂಡರ್ ಆಕಾರದ ಈ ಕ್ಷಿಪಣಿಯು ಪ್ರಸ್ತುತ ಭಾರತವು ಎದುರಿಸುತ್ತಿರುವ ಹಲವು ಭದ್ರತಾ ಆತಂಕಗಳ ಹಿನ್ನೆಲೆಯಲ್ಲಿ ಯುದ್ಧದ ಕಾರ್ಯತಂತ್ರಗಳ ದೃಷ್ಟಿಯಿಂದ ಮಹತ್ವ ಪಡೆದಿದೆ.
ಎರಡು ದಿನಗಳ ಹಿಂದಷ್ಟೇ ಒಡಿಶಾ ಚಂಡೀಪುರ ಪರೀಕ್ಷಾ ಕೇಂದ್ರದಿಂದ ಡಿಆರ್ಡಿಒ ದೇಶೀಯ ನಿರ್ಮಿತ ದೂರಗಾಮಿ ಪಿನಾಕ ರಾಕೆಟ್ಗಳ ಪರೀಕ್ಷಾರ್ಥ ಉಡಾವಣೆ ಮಾಡಿತ್ತು. ಮಲ್ಟಿಬ್ಯಾರೆಲ್ ರಾಕೆಟ್ ಲಾಂಚರ್ (Multi-Barrel Rocket Launcher – MBRL) ಮೂಲಕ 25 ದೂರಗಾಮಿ ಪಿನಾಕ ರಾಕೆಟ್ಗಳನ್ನು ಉಡಾಯಿಸಲಾಗಿತ್ತು. ಈ ಪರೀಕ್ಷೆಯೂ ಯಶಸ್ವಿಯಾಗಿತ್ತು. ಸುಮಾರು 45 ಕಿಮೀ ದೂರದಲ್ಲಿರುವ ಗುರಿಗಳನ್ನು ಈ ರಾಕೆಟ್ಗಳು ಯಶಸ್ವಿಯಾಗಿ ಧ್ವಂಸ ಮಾಡಿತ್ತು.
ಕಳೆದ ಮಾರ್ಚ್ ತಿಂಗಳಲ್ಲಿ ಘನ ಇಂಧನ ಆಧರಿತ ವಿಶಿಷ್ಟ ಪ್ರೊಪಲ್ಷನ್ ವ್ಯವಸ್ಥೆ ಹೊಂದಿರುವ ಕ್ಷಿಪಣಿಯೊಂದನ್ನು ಡಿಆರ್ಡಿಒ ಚಂಡಿಪುರದಲ್ಲಿ ಪರೀಕ್ಷೆ ಮಾಡಿತ್ತು. ಈ ಕ್ಷಿಪಣಿಯ ಬಹುತೇಕ ಎಲ್ಲ ಅಂಗಗಳೂ ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದವು. ಘನ ಇಂಧನ ಆಧರಿತ ಕ್ಷಿಪಣಿ ತಂತ್ರಜ್ಞಾನವು (Solid Fuel Ducted Ramjet – SFDR) ಮುಂದಿನ ದಿನಗಳಲ್ಲಿ ಪ್ರಾಮುಖ್ಯತೆ ಪಡೆಯಲಿದೆ. ಹಾಲಿ ಚಾಲ್ತಿಯಲ್ಲಿರುವ ತಂತ್ರಜ್ಞಾನಕ್ಕೆ ಹೋಲಿಸಿದರೆ ಇದರಲ್ಲಿ ಹಲವು ಅನುಕೂಲತೆಗಳಿಗೆ ಎಂದು ಡಿಆರ್ಡಿಒ ಹೇಳಿತ್ತು.
DRDO successfully flight tests New Generation Agni P Ballistic Missile https://t.co/vEPsqyfUpG pic.twitter.com/XoYPGiwEpR
— DRDO (@DRDO_India) June 28, 2021
(Agni Prime New Missile In Agni Series India Successfully Test Fires)
ಇದನ್ನೂ ಓದಿ: ಭಾರತಕ್ಕೆ ಅರಿಘಾತ್ ಬಲ: ಸಮುದ್ರದಾಳದಿಂದಲೂ ಚಿಮ್ಮಬಲ್ಲದು ಖಂಡಾಂತರ ಕ್ಷಿಪಣಿ
ಇದನ್ನೂ ಓದಿ: ಬ್ರಹ್ಮೋಸ್ ‘ಸರ್ಫೇಸ್ ಟು ಸರ್ಫೇಸ್’ ಕ್ಷಿಪಣಿ ಪ್ರಯೋಗ ಯಶಸ್ವಿ
Published On - 4:44 pm, Mon, 28 June 21