ಭಾರತಕ್ಕೆ ಅರಿಘಾತ್ ಬಲ: ಸಮುದ್ರದಾಳದಿಂದಲೂ ಚಿಮ್ಮಬಲ್ಲದು ಖಂಡಾಂತರ ಕ್ಷಿಪಣಿ
ಮೊದಲು ಅಣುಬಾಂಬ್ ಪ್ರಯೋಗಿಸುವುದಿಲ್ಲ ಎಂಬ ಸೂತ್ರಕ್ಕೆ ಭಾರತ ಬದ್ಧವಾಗಿರುವುದರಿಂದ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಖಡಾಂತರ ಕ್ಷಿಪಣಿಯನ್ನು ಜಲಾಂತರ್ಗಾಮಿಯಿಂದಲೂ ಉಡಾವಣೆ ಮಾಡುವ ಸಾಮರ್ಥ್ಯದ ಅಗತ್ಯ ಕಂಡು ಬಂದಿತ್ತು.

ನವದೆಹಲಿ: ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ಅರಿಘಾತ್ನ ಅಂತಿಮ ಹಂತದ ಪರೀಕ್ಷೆಗಳನ್ನು ನೌಕಾದಳ ಸದ್ದಿಲ್ಲದೆ ನಡೆಸುತ್ತಿದೆ. ಈ ಬಗ್ಗೆ ಕೆಲ ರಾಷ್ಟ್ರೀಯ ಮಾಧ್ಯಮಗಳ ವರದಿ ಮಾಡಿದ್ದು, ಅರಿಘಾತ್ನ ಸಾಮರ್ಥ್ಯದ ಬಗ್ಗೆ ದೇಶದ ರಕ್ಷಣಾ ತಂತ್ರಜ್ಞರಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
750 ಕಿ.ಮೀ. ದೂರದ ಗುರಿಗಳನ್ನು ನಾಶಪಡಿಸಬಲ್ಲ ಖಂಡಾಂತರ ಕ್ಷಿಪಣಿಗಳನ್ನು ಅರಿಘಾತ್ ಉಡಾವಣೆ ಮಾಡಬಲ್ಲದು. ಮೊದಲು ಅಣುಬಾಂಬ್ ಪ್ರಯೋಗಿಸುವುದಿಲ್ಲ ಎಂಬ ಸೂತ್ರಕ್ಕೆ ಭಾರತ ಬದ್ಧವಾಗಿರುವುದರಿಂದ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಖಡಾಂತರ ಕ್ಷಿಪಣಿಯನ್ನು ಜಲಾಂತರ್ಗಾಮಿಯಿಂದಲೂ ಉಡಾವಣೆ ಮಾಡುವ ಸಾಮರ್ಥ್ಯದ ಅಗತ್ಯ ಕಂಡು ಬಂದಿತ್ತು. ಅರಿಘಾತ್ ಸೇವೆಗೆ ನಿಯೋಜನೆ ಆದರೆ ಈ ಆಶಯಕ್ಕೆ ಮತ್ತಷ್ಟು ಬಲ ಸಿಕ್ಕಂತೆ ಆಗುತ್ತದೆ.
ಮುಂದಿನ ವರ್ಷದ ಆರಂಭದಲ್ಲಿ ಅರಿಘಾತ್ ನೌಕಾದಳಕ್ಕೆ ಸೇರ್ಪಡೆಯಾಗುವ ನಿರೀಕ್ಷೆಯಿದೆ. ಪರೀಕ್ಷೆಯ ವೇಳೆ ಅರಿಘಾತ್ನ ಕಾರ್ಯವೈಖರಿ ಚೆನ್ನಾಗಿತ್ತು. ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಈಗಾಗಲೇ ಈ ಜಲಾಂತರ್ಗಾಮಿ ಭಾರತದ ರಕ್ಷಣಾ ಪಡೆಗೆ ಸೇರ್ಪಡೆ ಆಗಿರಬೇಕಿತ್ತು. ಆದರೆ, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ನೌಕಾಪಡೆಗೆ ಸೇರ್ಪಡೆ ಆಗುವುದು ವಿಳಂಬವಾಗಿದೆ.
2017ರ ನವೆಂಬರ್‌ನಲ್ಲಿ ಅಂದಿನ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸದ್ದಿಲ್ಲದೆ ಅರಿಘಾತ್ನ ಕಾರ್ಯಾಚರಣೆ ಸನ್ನದ್ಧತೆಯ ಪರಿಶೀಲನೆಗೆ ಅನುಮತಿ ನೀಡಿದ್ದರು. ಸಮುದ್ರದಾಳದಿಂದಲೇ ಖಡಾಂತರ ಕ್ಷಿಪಣಿಯನ್ನು ಉಡಾವಣೆ ಮಾಡಬಲ್ಲ ಸಾಮರ್ಥ್ಯ ಇದೆ ಎನ್ನುವ ಕಾರಣಕ್ಕೆ ನೌಕಾಪಡೆಯ ಕಾರ್ಯತಂತ್ರದಲ್ಲಿ ಇದು ಮಹತ್ವದ ಬದಲಾವಣೆಗಳನ್ನು ತರಬಲ್ಲದು ಎಂಬ ವಿಶ್ಲೇಷಣೆಗಳು ಚಾಲ್ತಿಯಲ್ಲಿವೆ. ಈ ಜಲಾಂತರ್ಗಾಮಿ ಸೇವೆಗೆ ನಿಯೋಜನೆಯಾದರೆ ಚೀನಾದ ಬಹುತೇಕ ನಗರಗಳನ್ನು ಸಮುದ್ರದ ಆಳದಿಂದಲೇ ಗುರಿಯಾಗಿಸಬಲ್ಲ ಸಾಮರ್ಥ್ಯ ಭಾರತಕ್ಕೆ ಬಂದಂತೆ ಆಗುತ್ತದೆ.
ಈಗಾಗಲೇ ಸೇವೆಯಲ್ಲಿರುವ ಅರಿಹಂತ್ ಹಾಗೂ 2021ರ ಆರಂಭದಲ್ಲಿ ಭಾರತದ ರಕ್ಷಣಾ ವ್ಯವಸ್ಥೆಗೆ ಸೇರ್ಪಡೆ ಆಗುವ ನಿರೀಕ್ಷೆಯಿರುವ ಅರಿಘಾತ್ ಜಲಾಂತರ್ಗಾಮಿಗಳು ತಲಾ ನಾಲ್ಕು ಖಡಾಂತರ ಕ್ಷಿಪಣಿಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ. ಅರಿಹಂತ್ ಕ್ಲಾಸ್ನ ನಾಲ್ಕು ಜಲಾಂತರ್ಗಾಮಿಯನ್ನು ಹೊಂದುವುದು ಭಾರತದ ಉದ್ದೇಶವಾಗಿತ್ತು. ಆದರೆ, ಇದನ್ನು ಅಂದಿನ ಯುಪಿಎ ಸರ್ಕಾರ ಬದಲಾವಣೆ ಮಾಡಿತ್ತು ಎನ್ನಲಾಗಿದೆ.
2016ರಲ್ಲಿ ಅಂದಿನ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅರಿಹಂತ್ ಅನ್ನು ಸೇವೆಗೆ ನಿಯೋಜನೆ ಮಾಡಿದ್ದರು. ಈ ಬಗ್ಗೆ ಅಧಿಕೃತ ಘೋಷಣೆ ಆಗಿದ್ದು ಎರಡು ವರ್ಷಗಳ ನಂತರವೇ. ಅರಿಘಾತ್ ವಿಚಾರದಲ್ಲಿಯೂ ಭಾರತ ಗೌಪ್ಯತೆ ಕಾಪಾಡಿಕೊಳ್ಳುತ್ತಿದೆ.