ದೆಹಲಿ: ತಂತ್ರಜ್ಞಾನ (Technology) ಅಭಿವೃದ್ಧಿ ಹೊಂದಿದಂತೆ ಕಳ್ಳರ ‘ತಂತ್ರ’ಗಾರಿಕೆಯೂ ಅದಕ್ಕೆ ತಕ್ಕುದಾಗಿ, ವಿರುದ್ಧ ದಿಕ್ಕಿನಲ್ಲಿ ಮುಂದುವರೆದಿದೆ. ಜನಸಾಮಾನ್ಯರಿಂದ ಹಿಡಿದು ಗಣ್ಯರ (Celebrities) ತನಕ ಅನೇಕರು ಈ ಆನ್ಲೈನ್ (Online) ದೋಖಾದಿಂದ ಕೈ ಸುಟ್ಟುಕೊಂಡಿದ್ದಾರೆ. ಈಗ ಆ ಸರದಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ (Arvind Kejriwal) ಮಗಳದ್ದು! OLX ಸೈಟ್ನಲ್ಲಿ ಸೋಫಾ ಮಾರಲು ಹೋದ ಕೇಜ್ರಿವಾಲ್ ಮಗಳು ಹರ್ಷಿತಾ ಕೇಜ್ರಿವಾಲ್ ₹34 ಸಾವಿರ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಬಹಿರಂಗವಾಗಿದೆ.
ಬ್ಯಾಂಕ್ ಹೆಸರಲ್ಲಿ, ಲೋನ್ ಕೊಡುವವರ ನೆಪದಲ್ಲಿ, ಎಟಿಎಂ ಪಿನ್ ರೀಸೆಟ್ ಮಾಡುವ ಹೆಳೆಯಲ್ಲಿ ಕಳ್ಳರು ಪ್ರತಿನಿತ್ಯ ಒಬ್ಬರಲ್ಲಾ ಒಬ್ಬರಿಗೆ ಪಂಗನಾಮ ಹಾಕುತ್ತಲೇ ಇರುತ್ತಾರೆ. ಹೀಗೆ ಮೋಸ ಹೋಗುವವರ ಪಟ್ಟಿಯಲ್ಲಿ ಅನಕ್ಷರಸ್ಥರಷ್ಟೇ ಇದ್ದಿದ್ದರೆ ಅವರಿಗೆ ತಿಳುವಳಿಕೆ ಕಡಿಮೆ ಇರುವುದರಿಂದ ಹಾಗಾಯ್ತು ಎಂದು ತಿಪ್ಪೆ ಸಾರಿಬಿಡಬಹುದಿತ್ತೇನು. ಆದರೆ, ಈ ಮೋಸದ ಜಾಲಕ್ಕೆ ಬೀಳುವವರಲ್ಲಿ ಅನಕ್ಷರಸ್ಥರಿಗಿಂತ ವಿದ್ಯಾವಂತರೇ ಹೆಚ್ಚಿರುವುದು ವಿಪರ್ಯಾಸ. ಜನಸಾಮಾನ್ಯರಿಗೆ ಇಂತಹ ವಿಚಾರಗಳಲ್ಲಿ ಜಾಗೃತಿ ಮೂಡಿಸಬೇಕಾದ, ಈ ರೀತಿಯ ಕೃತ್ಯಗಳನ್ನು ತಡೆಗಟ್ಟಲು ನಿಯಮ ರೂಪಿಸಬೇಕಾದ ಒಬ್ಬ ಮುಖ್ಯಮಂತ್ರಿಯ ಮಗಳೇ ಮೋಸಕ್ಕೊಳಗಾಗಿದ್ದಾರೆ ಎಂದರೆ ಇದು ಎಷ್ಟರ ಮಟ್ಟಿಗೆ ಅಪಾಯಕಾರಿ ಜಾಲ ಎಂಬುದನ್ನು ನೀವೇ ಊಹಿಸಿ.
ಅರವಿಂದ್ ಕೇಜ್ರಿವಾಲ್ ಮಗಳು ಹರ್ಷಿತಾ OLXನಲ್ಲಿ ಸೋಫಾ ಮಾರುವುದಾಗಿ ಜಾಹೀರಾತು ನೀಡಿದ್ದಾರೆ. ಅದನ್ನು ಗಮನಿಸಿದ ಖದೀಮರು ಸೋಫಾವನ್ನು ತಾವೇ ಕೊಳ್ಳುವುದಾಗಿ ಹೇಳಿ ಆಕೆಗೆ ಉಪಾಯವಾಗಿ ಬಲೆ ಬೀಸಿದ್ದಾರೆ. ಸೋಫಾಕ್ಕೆ ತಗುಲುವ ಮೊತ್ತವನ್ನು ಆನ್ಲೈನ್ ಮೂಲಕ ಪಾವತಿಸುತ್ತೇವೆ. ಆ ಹಣವನ್ನು ಪಡೆಯಲು QR Code ಸ್ಕ್ಯಾನ್ ಮಾಡಿಕೊಳ್ಳಿ ಎಂದ ಖದೀಮರು ಯಾವತ್ತಿನಂತೆ ತಮ್ಮ ದಾಳ ಎಸೆದಿದ್ದಾರೆ. ಅದನ್ನರಿಯದ ಹರ್ಷಿತಾ ಕೇಜ್ರಿವಾಲ್ ಎರಡು ಬಾರಿ ಕೋಡ್ ಸ್ಕ್ಯಾನ್ ಮಾಡಿದ್ದು, ಮೊದಲು ₹20,000 ಹಾಗೂ ಎರಡನೆಯ ಬಾರಿ ₹14,000 ಸೇರಿದಂತೆ ಒಟ್ಟು ₹34,000 ಕಳೆದುಕೊಂಡಿದ್ದಾರೆ. ಹೀಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದರೆ ತಮ್ಮ ಅಕೌಂಟಿನಿಂದಲೇ ಹಣ ಕಡಿತವಾಗುತ್ತದೆ ಎಂದು ಗೊತ್ತಾಗುವಷ್ಟರಲ್ಲೇ ಆ ಮೊತ್ತ ಖದೀಮರ ಖಾತೆ ಸೇರಿದ್ದು, ಸದ್ಯ ಈ ಬಗ್ಗೆ ಕೇಜ್ರಿವಾಲ್ ಪುತ್ರಿ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
QR ಕೋಡ್ ಸ್ಕ್ಯಾನ್ ಮಾಡುವ ಮುನ್ನ ಎಚ್ಚರ!
ಈ ರೀತಿ QR ಕೋಡ್ ಸ್ಕ್ಯಾನ್ ಮಾಡಿ ಹಣ ಕೀಳುವ ಜಾಲ ಹೊಸತೇನಲ್ಲ. ಖದೀಮರು ಈ ತಂತ್ರಗಾರಿಕೆ ಬಳಸಿ ಈಗಾಗಲೇ ಸಾವಿರಾರು ಜನರನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ. ನಮ್ಮ ಅನುಕೂಲಕ್ಕಾಗಿ ಇರುವ ತಂತ್ರಜ್ಞಾನವನ್ನೇ ನಮಗೆ ತಿರುಗುಬಾಣ ಮಾಡುವ ಮೂಲಕ ಹಣ ಎಗರಿಸುತ್ತಿದ್ದಾರೆ. ಆದ್ದರಿಂದ ಈ ಮೋಸದ ಬಗ್ಗೆ ಪ್ರತಿಯೊಬ್ಬರೂ ಎಚ್ಚರವಾಗಿರಲೇಬೇಕು.
ಯಾವತ್ತಿಗೂ ನೀವು ಹಣ ಪಾವತಿ ಮಾಡುವಾಗ ಮಾತ್ರ QR ಕೋಡ್ ಸ್ಕ್ಯಾನ್ ಮಾಡಬೇಕೇ ವಿನಃ ಹಣ ಪಡೆಯಲು ಸ್ಕ್ಯಾನ್ ಮಾಡಬೇಕಿಲ್ಲ ಎಂಬುದನ್ನು ನೆನಪಿಡಿ. ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಮಾರಲೆಂದೇ ಇರುವ ಸೈಟ್ಗಳತ್ತ ಕಣ್ಣಿಡುವ ಮೋಸಗಾರರು ನಿಮ್ಮನ್ನು ಈ ತಂತ್ರದ ಮೂಲಕ ಟಾರ್ಗೆಟ್ ಮಾಡುತ್ತಿರುತ್ತಾರೆ. ಆದರೆ, ಅಪ್ಪಿತಪ್ಪಿಯೂ ನೀವು ಯಾರೇ ಕಳುಹಿಸಿದ ಕೋಡ್ ಸ್ಕ್ಯಾನ್ ಮಾಡಬಾರದು. ಮೈಮರೆತು ಒಮ್ಮೆ ಸ್ಕ್ಯಾನ್ ಮಾಡಿದರೂ ಅವರು ನಿಮ್ಮ ಖಾತೆಯಲ್ಲಿರುವ ಅಷ್ಟೂ ಹಣವನ್ನು ಗುಳುಂ ಮಾಡುವ ಸಾಧ್ಯತೆ ಇರುತ್ತದೆ ಹಾಗೂ ಇಂತಹ ಪ್ರಕರಣಗಳಲ್ಲಿ ಕಳೆದುಕೊಂಡ ಹಣ ಹಿಂದಿರುಗುವ ಸಾಧ್ಯತೆ ಬಹುತೇಕ ಕಡಿಮೆ ಎಂಬುದನ್ನು ಮರೆಯಬೇಡಿ.