MPI: ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ದೇಶದ ಅತ್ಯಂತ ಬಡ ರಾಜ್ಯಗಳು; ಕರ್ನಾಟಕಕ್ಕೆ ಎಷ್ಟನೇ ಸ್ಥಾನ? ಇಲ್ಲಿದೆ ಮಾಹಿತಿ

Niti Ayog: ನೀತಿ ಆಯೋಗವು ರಾಜ್ಯವಾರು ಬಡತನ ಪ್ರಮಾಣವನ್ನು ಸೂಚಿಸುವ ಸೂಚ್ಯಂಕ ಬಿಡುಗಡೆ ಮಾಡಿದ್ದು, ಅದರಲ್ಲಿ ಕರ್ನಾಟಕ 19 ನೇ ಸ್ಥಾನದಲ್ಲಿದೆ. ಬಿಹಾರದಲ್ಲಿ ಅತ್ಯಂತ ಹೆಚ್ಚು ಬಡತನವಿದ್ದರೆ, ಕೇರಳದಲ್ಲಿ ಅತ್ಯಂತ ಕಡಿಮೆ ಬಡತನ ದಾಖಲಾಗಿದೆ.

MPI: ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ದೇಶದ ಅತ್ಯಂತ ಬಡ ರಾಜ್ಯಗಳು; ಕರ್ನಾಟಕಕ್ಕೆ ಎಷ್ಟನೇ ಸ್ಥಾನ? ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: shivaprasad.hs

Updated on: Nov 27, 2021 | 8:36 AM

ನೀತಿ ಆಯೋಗವು (Niti Ayog) ತನ್ನ ಮೊದಲ ಬಹು ಆಯಾಮ ಬಡತನ ಸೂಚ್ಯಂಕ (Multi Dimensional Poverty Index- MPI) ವರದಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕ 19ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಶೇ 13.16 ಬಡತನವಿದೆ ಎಂದು ನೀತಿ ಆಯೋಗದ ವರದಿ ತಿಳಿಸಿದೆ. ಸೂಚ್ಯಂಕದ ಪ್ರಕಾರ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶಗಳು ಭಾರತದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ. ಸೂಚ್ಯಂಕದ ಪ್ರಕಾರ, ಬಿಹಾರದ 51.91 ಶೇಕಡಾ ಜನಸಂಖ್ಯೆಯು ಬಡವರಾಗಿದ್ದರೆ, ಜಾರ್ಖಂಡ್‌ನಲ್ಲಿ 42.16 ಶೇಕಡಾ, ಉತ್ತರ ಪ್ರದೇಶದಲ್ಲಿ 37.79 ಶೇಕಡಾ ಬಡತನವಿದೆ. ಮಧ್ಯಪ್ರದೇಶ ಶೇ 36.65 ಸೂಚ್ಯಂಕದೊಂದಿಗೆ ತೀವ್ರ ಬಡತನವಿರುವ ರಾಜ್ಯಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಮೇಘಾಲಯ (ಶೇ 32.67) ಐದನೇ ಸ್ಥಾನದಲ್ಲಿದೆ. ನೀತಿ ಆಯೋಗದ ಸೂಚ್ಯಂಕದ ಪ್ರಕಾರ ಕೇರಳ ಅತ್ಯಂತ ಕಡಿಮೆ ಬಡತನ ಹೊಂದಿರುವ ರಾಜ್ಯವಾಗಿದೆ. ಅಲ್ಲಿ ಶೇ. 0.71 ಜನ ಬಡವರಾಗಿದ್ದಾರೆ. ಗೋವಾ ಎರಡನೇ ಸ್ಥಾನದಲ್ಲಿದ್ದು, ಅಲ್ಲಿ ಶೇ. 3.76 ಬಡತನವಿದೆ. ಸಿಕ್ಕಿಂ (ಶೇ. 3.82), ತಮಿಳುನಾಡು (ಶೇ. 4.89) ಮತ್ತು ಪಂಜಾಬ್ (ಶೇ. 5.59) ಭಾರತದಾದ್ಯಂತ ಕಡಿಮೆ ಬಡತನವನ್ನು ದಾಖಲಿಸಿದ ರಾಜ್ಯಗಳ ಪಟ್ಟಿಯಲ್ಲಿ ನಂತರದ ಸ್ಥಾನಗಳಲ್ಲಿವೆ.

ಕೇಂದ್ರಾಡಳಿತ ಪ್ರದೇಶಗಳ ಪೈಕಿ ದಾದ್ರಾ ಮತ್ತು ನಗರ ಹವೇಲಿ (ಶೇ. 27.36), ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ (12.58), ದಮನ್ ಮತ್ತು ದಿಯು (ಶೇ. 6.82) ಮತ್ತು ಚಂಡೀಗಢ (ಶೇ. 5.97) ಬಡ ಪ್ರದೇಶಗಳಾಗಿ ಹೊರಹೊಮ್ಮಿವೆ. ಪುದುಚೇರಿಯು ತನ್ನ ಜನಸಂಖ್ಯೆಯ ಶೇಕಡಾ 1.72 ರಷ್ಟು ಬಡವರಾಗಿದ್ದರೆ, ಲಕ್ಷದ್ವೀಪ (ಶೇ. 1.82), ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (ಶೇ. 4.30) ಮತ್ತು ದೆಹಲಿಯಲ್ಲಿ ಶೇ. 4.79ರಷ್ಟು ಜನ ಸಂಖ್ಯೆ ಬಡತನ ಹೊಂದಿದೆ.

ಜಾರ್ಖಂಡ್, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢದ ನಂತರ ಬಿಹಾರವು ಅತಿ ಹೆಚ್ಚು ಅಪೌಷ್ಟಿಕತೆಯಿಂದ ಬಳಲುತ್ತಿರುವ ಜನರನ್ನು ಹೊಂದಿದೆ. ಅಲ್ಲದೇ ಹಲವು ಅಂಶಗಳಲ್ಲಿ ಬಿಹಾರ ಕಡೆಯ ಸ್ಥಾನದಲ್ಲಿದ್ದು, ತಾಯಂದಿರ ಆರೋಗ್ಯದಿಂದ ವಂಚಿತರಾದ ಜನಸಂಖ್ಯೆಯ ಶೇಕಡಾವಾರು, ಶಾಲಾ ಶಿಕ್ಷಣದಿಂದ ವಂಚಿತರಾದ ಶೇಕಡಾವಾರು, ಶಾಲಾ ಹಾಜರಾತಿ ಮತ್ತು ಅಡುಗೆ ಇಂಧನ ಮತ್ತು ವಿದ್ಯುತ್‌ನಿಂದ ವಂಚಿತರಾದ ಶೇಕಡಾವಾರು ಪ್ರಮಾಣಕ್ಕೆ ಬಂದಾಗ ಬಿಹಾರವು ಅತ್ಯಂತ ಕಳಪೆ ಸೂಚ್ಯಂಕ ಹೊಂದಿದೆ. ಉತ್ತರ ಪ್ರದೇಶವು ಮಕ್ಕಳ ಮತ್ತು ಹದಿಹರೆಯದವರ ಮರಣ ವಿಭಾಗದಲ್ಲಿ ಅತ್ಯಂತ ಕೆಟ್ಟ ಸ್ಥಾನದಲ್ಲಿದೆ. ಆದರೆ ನೈರ್ಮಲ್ಯದಿಂದ ವಂಚಿತವಾಗಿರುವ ಜನಸಂಖ್ಯೆಯ ಶೇಕಡಾವಾರು ಪ್ರಮಾಣಕ್ಕೆ ಬಂದಾಗ ಜಾರ್ಖಂಡ್ ಅತ್ಯಂತ ಕಳಪೆಯಾಗಿದೆ, ನಂತರ ಬಿಹಾರ ಮತ್ತು ಒಡಿಶಾ ರಾಜ್ಯಗಳಿವೆ.

ಎಂಪಿಐ ಸೂಚ್ಯಂಕವು ಜಾಗತಿಕವಾಗಿ ಸ್ವೀಕೃತವಾದ ವಿಧಾನಗಳನ್ನು ಮಾನದಂಡವಾಗಿ ಬಳಸಿದೆ. ಬಹುಮುಖ್ಯವಾಗಿ ಬಹು ಆಯಾಮದ ಬಡತನ ಹಾಗೂ ಕುಟುಂಬಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಆಧರಿಸಿ ತಯಾರಿಸಲಾಗಿದೆ. ಎಂಪಿಐ ವರದಿಯು ಭಾರತದ ಮೂರು ಸಮಾನ ಆಯಾಮಗಳನ್ನು ಹೊಂದಿದೆ. ಅವುಗಳೆಂದರೆ ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟ. ಇವುಗಳನ್ನು 12 ಸೂಚಕಗಳ ಮೂಲಕ ಗುರುತಿಸಲಾಗುತ್ತದೆ. ಅವುಗಳೆಂದರೆ, ಪೋಷಣೆ, ಮಗು ಮತ್ತು ಹದಿಹರೆಯದವರ ಮರಣ, ಪ್ರಸವಪೂರ್ವ ಆರೈಕೆ, ಶಾಲೆ, ಶಾಲಾ ಹಾಜರಾತಿ, ಅಡುಗೆ ಇಂಧನ, ನೈರ್ಮಲ್ಯ, ಕುಡಿಯುವ ನೀರು, ವಿದ್ಯುತ್, ವಸತಿ, ಸ್ವತ್ತುಗಳು ಮತ್ತು ಬ್ಯಾಂಕ್ ಖಾತೆಗಳು.

2015 ರಲ್ಲಿ 193 ದೇಶಗಳು ಅಳವಡಿಸಿಕೊಂಡ ಸುಸ್ಥಿರ ಅಭಿವೃದ್ಧಿ ಗುರಿಗಳ (SDG) ಚೌಕಟ್ಟು, ಅಭಿವೃದ್ಧಿ ನೀತಿಗಳು, ಸರ್ಕಾರದ ಆದ್ಯತೆಗಳು ಮತ್ತು ಪ್ರಪಂಚದಾದ್ಯಂತ ಅಭಿವೃದ್ಧಿ ಪ್ರಗತಿಯನ್ನು ಅಳೆಯಲು ಮೆಟ್ರಿಕ್‌ಗಳನ್ನು ಮರುವ್ಯಾಖ್ಯಾನಿಸಲಾಗಿದ್ದು, ಅವುಗಳ ಆಧಾರದಲ್ಲಿ ಬಡತನ ಸೂಚ್ಯಂಕವನ್ನು ಗುರುತಿಸಲಾಗುತ್ತದೆ.

ಇದನ್ನೂ ಓದಿ:

Andhra Pradesh Rain: ಭಯಂಕರ ಮಳೆಯಿಂದ ಆಂಧ್ರದಲ್ಲಿ ಪ್ರಾಣಕಳೆದುಕೊಂಡವರು 44 ಮಂದಿ; ಅಲ್ಲಲ್ಲಿ ಇನ್ನೂ ಸಿಗುತ್ತಿವೆ ಶವಗಳು

ಬಿಸಿಯೂಟ: ಟೆಂಡರ್ ಕರೆಯದೇ, 2 ರೂ ಹೆಚ್ಚಿಗೇ ನೀಡಿ, ಇಸ್ಕಾನ್ ಅಕ್ಷಯಪಾತ್ರೆಗೆ ಬಿಬಿಎಂಪಿ ಗುತ್ತಿಗೆ, ಆರ್ಥಿಕ ಇಲಾಖೆ ಕೆಂಗಣ್ಣು