ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣದ ತನಿಖೆ ಎಟಿಎಸ್‌ಗೆ: ಬಾಂಬೆ ಹೈಕೋರ್ಟ್
ನಿಜವಾದ ಮಾಸ್ಟರ್‌ಮೈಂಡ್‌ಗಳನ್ನು ಪತ್ತೆ ಹಚ್ಚಲು ರಾಜ್ಯ ಎಸ್‌ಐಟಿ ಇದುವರೆಗೆ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿ ಪನ್ಸಾರೆ ಅವರ ಸಂಬಂಧಿಕರು ಪ್ರಕರಣವನ್ನು ಎಟಿಎಸ್‌ಗೆ ವರ್ಗಾವಣೆ ಮಾಡುವಂತೆ ಕೋರಿದ್ದರು.
ಕಮ್ಯುನಿಸ್ಟ್ ನಾಯಕ ಗೋವಿಂದ ಪನ್ಸಾರೆ(Govind Pansare) ಅವರ ನಿಧನದ 7 ವರ್ಷಗಳ ನಂತರ ಅವರ ಹತ್ಯೆಯ ತನಿಖೆಯನ್ನು ರಾಜ್ಯ ಎಸ್‌ಐಟಿಯಿಂದ ಭಯೋತ್ಪಾದನಾ ನಿಗ್ರಹ ದಳಕ್ಕೆ ವರ್ಗಾಯಿಸುವಂತೆ ಬಾಂಬೆ ಹೈಕೋರ್ಟ್(Bombay High Court)ನಿರ್ದೇಶಿಸಿದೆ. ನಿಜವಾದ ಮಾಸ್ಟರ್‌ಮೈಂಡ್‌ಗಳನ್ನು ಪತ್ತೆ ಹಚ್ಚಲು ರಾಜ್ಯ ಎಸ್‌ಐಟಿ ಇದುವರೆಗೆ ಯಾವುದೇ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿ ಪನ್ಸಾರೆ ಅವರ ಸಂಬಂಧಿಕರು ಪ್ರಕರಣವನ್ನು ಎಟಿಎಸ್‌ಗೆ ವರ್ಗಾವಣೆ ಮಾಡುವಂತೆ ಕೋರಿದ್ದರು. ಮಹಾರಾಷ್ಟ್ರದ ಅಪರಾಧ ತನಿಖಾ ಇಲಾಖೆಯ (CID) ವಿಶೇಷ ತನಿಖಾ ತಂಡ (ಎಸ್‌ಐಟಿ) ಇದುವರೆಗೆ ಪ್ರಕರಣದ ತನಿಖೆ ನಡೆಸುತ್ತಿತ್ತು. ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ದೇರೆ ಮತ್ತು ಶರ್ಮಿಳಾ ದೇಶಮುಖ್ ಅವರ ವಿಭಾಗೀಯ ಪೀಠವು ಪನ್ಸಾರೆ ಅವರ ಕುಟುಂಬ ಸದಸ್ಯರು ಸಲ್ಲಿಸಿದ ಅರ್ಜಿಯನ್ನು ಅನುಮತಿಸುವುದಾಗಿ ಮತ್ತು ತನಿಖೆಯನ್ನು ಎಟಿಎಸ್‌ಗೆ ವರ್ಗಾಯಿಸುವುದಾಗಿ ಹೇಳಿದೆ. ತನಿಖೆಗೆ ವಿಶೇಷ ತಂಡವನ್ನು ಕೋರಿ ಪನ್ಸಾರೆ ಅವರ ಕುಟುಂಬ ಸದಸ್ಯರು ಸಲ್ಲಿಸಿದ ಮನವಿಯ ಮೇರೆಗೆ ಬಾಂಬೆ ಹೈಕೋರ್ಟ್ ಆದೇಶದ ನಂತರ 2015 ರಲ್ಲಿ ಎಸ್‌ಐಟಿಯನ್ನು ರಚಿಸಲಾಗಿತ್ತು.
Bombay High Court transfers the investigation of the murder of CPI leader Govind Pansare to Maharashtra ATS from State SIT.
— ANI (@ANI) August 3, 2022
ಫೆಬ್ರವರಿ 16, 2015 ರಂದು ಕೊಲ್ಲಾಪುರದಲ್ಲಿ ಪನ್ಸಾರೆ ಅವರ ಮೇಲೆ ಗುಂಡಿನ ದಾಳಿ ನಡೆದಿದ್ದು ಫೆಬ್ರವರಿ 20 ರಂದು ನಿಧನರಾದರು. ಸಿಐಡಿ ಪ್ರಕರಣದ ತನಿಖೆ ನಡೆಸುತ್ತಿದ್ದು, ಕೆಲವರನ್ನು ಬಂಧಿಸಿತ್ತು. ಈ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಲು ಎಸ್‌ಐಟಿಗೆ ಸಾಧ್ಯವಾಗಿಲ್ಲ ಎಂದು ಪನ್ಸಾರೆ ಕುಟುಂಬ ಸದಸ್ಯರು ಕಳೆದ ತಿಂಗಳು ತನಿಖೆಯನ್ನು ಎಟಿಎಸ್‌ಗೆ ವರ್ಗಾಯಿಸಬೇಕೆಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಎಸ್‌ಐಟಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ ಮುಂಡರಗಿ, ತನಿಖೆಯನ್ನು ಎಟಿಎಸ್‌ಗೆ ವರ್ಗಾಯಿಸಿದರೆ ಯಾವುದೇ ಅಭ್ಯಂತರವಿಲ್ಲ, ಅದೂ ಕೂಡ ರಾಜ್ಯ ಸರ್ಕಾರದ ಸಂಸ್ಥೆಯಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅದನ್ನು ನಾವು ಒಪ್ಪುತ್ತೇವೆ. ಎಟಿಎಸ್ ಅನ್ನು ನೇಮಿಸಬಹುದು. ಎಸ್‌ಐಟಿಯ ಕೆಲವು ಅಧಿಕಾರಿಗಳು ಎಟಿಎಸ್‌ಗೆ ಸಹಾಯ ಮಾಡುತ್ತಾರೆ ಎಂದು ಮುಂಡರಗಿ ಹೇಳಿದರು. ಯಾವ ಹಿರಿಯ ಅಧಿಕಾರಿ ತನಿಖೆಯ ನೇತೃತ್ವ ವಹಿಸುತ್ತಾರೆ ಎಂದು ನ್ಯಾಯಾಲಯವು ಪ್ರಶ್ನಿಸಿದಾಗ, ಹೆಚ್ಚುವರಿ ಮಹಾನಿರ್ದೇಶಕರು (ಎಡಿಜಿ) ಎಟಿಎಸ್‌ನ ಹಿರಿಯ ಅಧಿಕಾರಿಯಾಗಿದ್ದು, ಅವರು ತನಿಖೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ ಎಂದು ಮುಂಡರಗಿ ಉತ್ತರಿಸಿದ್ದಾರೆ.
ಹತ್ಯೆಯ ಹಿಂದಿನ ಮಾಸ್ಟರ್‌ಮೈಂಡ್‌ಗಳು ಮತ್ತು ಶೂಟರ್‌ಗಳು ಇನ್ನೂ ಪತ್ತೆಯಾಗಿಲ್ಲ. ಅವರು ತಲೆಮರೆಸಿಕೊಂಡಿದ್ದಾರೆ ಎಂದು ಪನ್ಸಾರೆ ಕುಟುಂಬದ ಪರವಾಗಿ ವಕೀಲ ಅಭಯ್ ನೇವಗಿ ನ್ಯಾಯಾಲಯಕ್ಕೆ ತಿಳಿಸಿದರು.
ಎಸ್‌ಐಟಿ ಪ್ರಕಾರ, ಪನ್ಸಾರೆ ಹತ್ಯೆಯ ಹಿಟ್‌ಲಿಸ್ಟ್‌ನಲ್ಲಿ ಸುಮಾರು 40 ಜನರಿದ್ದಾರೆ. ಇದರಲ್ಲಿ ಅವರ ಕುಟುಂಬ ಸದಸ್ಯರು, ಹತ್ಯೆಯಾದ ವಿಚಾರವಾದಿ ನರೇಂದ್ರ ದಾಭೋಲ್ಕರ್ ಮತ್ತು ಮೇಧಾ ಪಾಟ್ಕರ್ ಅವರ ಕುಟುಂಬವೂ ಸೇರಿದೆ. ಮಾಸ್ಟರ್‌ಮೈಂಡ್‌ಗಳನ್ನು ಬಂಧಿಸಬೇಕೆಂದು ನಾವು ಬಯಸುತ್ತೇವೆ ಎಂದಿದ್ದಾರೆ ನೇವಗಿ.
ದಾಭೋಲ್ಕರ್ ಮತ್ತು ಪನ್ಸಾರೆ ಹತ್ಯೆ ಪ್ರಕರಣದಲ್ಲಿ ಬಂಧಿತರಾಗಿರುವ ಮೂವರು ಆರೋಪಿಗಳು ಈ ಹಂತದಲ್ಲಿ ತನಿಖೆಯನ್ನು ಬೇರೆ ಏಜೆನ್ಸಿಗೆ ವರ್ಗಾಯಿಸುವುದನ್ನು ವಿರೋಧಿಸಿ ಸಲ್ಲಿಸಿರುವ ಅರ್ಜಿಗಳನ್ನು ಪರಿಗಣಿಸಲು ನ್ಯಾಯಾಲಯ ಬುಧವಾರ ನಿರಾಕರಿಸಿದೆ.
Published On - 12:01 pm, Wed, 3 August 22