ಪ್ಯಾಕೆಟ್​​, ಪೌಡರ್​​ ರೂಪದಲ್ಲಿ ಸಿಗುತ್ತಿದೆ ತಾಯಿಯ ಎದೆಹಾಲು; ದೇಶದಲ್ಲಿ ಭಾರೀ ಬೇಡಿಕೆ, ಮಾರಾಟ ಅನಿಯಂತ್ರಿತ?

ಇತ್ತೀಚೆಗೆ ಭಾರತದ ಚೈಲ್ಡ್ ಕೇರ್ ಇಂಡಸ್ಟ್ರಿಗೆ ಹೊಸತಾಗಿ ಕಾಲಿಟ್ಟ ಉತ್ಪನ್ನವೇ ಅಮ್ಮನ ಎದೆ ಹಾಲು. ದೇಶದಲ್ಲಿ ಇದರ ಮಾರುಕಟ್ಟೆ ಬೆಳೆಯುತ್ತಿದೆ. ಆದರೆ ಇದನ್ನು ಯಾವ ರೀತಿ ವರ್ಗೀಕರಿಸಲಾಗಿದೆ ಮತ್ತು ನಿಯಂತ್ರಿಸಲಾಗಿದೆ ಎಂಬುದಕ್ಕೆ ಸ್ಪಷ್ಟ ಉತ್ತರ ಇಲ್ಲ

ಪ್ಯಾಕೆಟ್​​, ಪೌಡರ್​​ ರೂಪದಲ್ಲಿ ಸಿಗುತ್ತಿದೆ ತಾಯಿಯ ಎದೆಹಾಲು; ದೇಶದಲ್ಲಿ ಭಾರೀ ಬೇಡಿಕೆ, ಮಾರಾಟ ಅನಿಯಂತ್ರಿತ?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Dec 26, 2022 | 2:30 PM

ತಾಯಿಯ ಎದೆಹಾಲು (Breast Milk) ಮಕ್ಕಳಿಗೆ ಅಮೃತ. ಹೀಗಿರುವಾಗ ಎದೆಹಾಲು ಚಿಕ್ಕ ಬಾಟಲಿ, ಪ್ಯಾಕೆಟ್​​ಗಳಲ್ಲಿ ಸಿಕ್ಕಿದರೆ? ಹೌದು, ಎದೆಹಾಲು ಹೀಗೆ ಮಾರುಕಟ್ಟೆಯಲ್ಲಿ ಲಭಿಸುತ್ತಿದೆ. ಇದನ್ನು ಫ್ರೀಜರ್​​ನಲ್ಲಿಡುವ ಅಗತ್ಯವೇ ಇಲ್ಲ. ಇತ್ತೀಚೆಗೆ ಭಾರತದ ಚೈಲ್ಡ್ ಕೇರ್ ಇಂಡಸ್ಟ್ರಿಗೆ (childcare industry) ಹೊಸತಾಗಿ ಕಾಲಿಟ್ಟ ಉತ್ಪನ್ನವೇ ಅಮ್ಮನ ಎದೆ ಹಾಲು. ದೇಶದಲ್ಲಿ ಇದರ ಮಾರುಕಟ್ಟೆ ಬೆಳೆಯುತ್ತಿದೆ. ಆದರೆ ಇದನ್ನು ಯಾವ ರೀತಿ ವರ್ಗೀಕರಿಸಲಾಗಿದೆ ಮತ್ತು ನಿಯಂತ್ರಿಸಲಾಗಿದೆ ಎಂಬುದಕ್ಕೆ ಸ್ಪಷ್ಟ ಉತ್ತರ ಇಲ್ಲ. ಎದೆ ಹಾಲು ಮಾರಾಟ ಮತ್ತು ಬೇಡಿಕೆ ಹಲವಾರು ನೈತಿಕ ಪ್ರಶ್ನೆಗಳನ್ನೂ ಹುಟ್ಟು ಹಾಕಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ. ಎರಡು ಖಾಸಗಿ, ಲಾಭದ ಉದ್ದೇಶವಿರುವ ಕಂಪನಿಗಳು ಎದೆ ಹಾಲು ಮಾರಾಟಕ್ಕೆ ಪೇಟೆಂಟ್ ಹೊಂದಿದ್ದು ಇವು ಎದೆಹಾಲನ್ನು ಸಂಸ್ಕರಣೆ ಮಾಡಿ, ಉತ್ಪನ್ನವನ್ನು ಮಾರಾಟ ಮಾಡುತ್ತಿವೆ. ಈ ಉದ್ಯಮವನ್ನು ಪ್ರಸ್ತುತ ಸರ್ಕಾರ ನಿಯಂತ್ರಣಗೊಳಪಡಿಸಿಲ್ಲ. ಬೆಂಗಳೂರು ಮೂಲದ NeoLacta Lifesciences Private Limited 2016ರಲ್ಲಿ ವ್ಯಾಪಾರ ಆರಂಭಿಸಿತ್ತು. ಕಂಪನಿ ಪ್ರಕಾರ ಇದು ಎದೆಹಾಲನ್ನು ಕೊಡಲು ತಯಾರಾಗಿರುವ ಅಮ್ಮಂದಿರಿಂದ ಹಾಲು ಸಂಗ್ರಹಿಸುತ್ತದೆ. ನಂತರ ಅದನ್ನು ಸಂಸ್ಕರಣೆ ಮಾಡಿ, ಮಾರಾಟ ಮಾಡುತ್ತದೆ. ಪೌಡರ್ ರೂಪದಲ್ಲಿಯೂ ಇದು ಎದೆಹಾಲಿನ ಫಾರ್ಟಿಫೈಯರ್ ಮಾರಾಟ ಮಾಡುತ್ತಿದ್ದು, ಇದು ಜಗತ್ತಿನಲ್ಲೇ ಮೊದಲು ಎಂದು ಹೇಳಿಕೊಂಡಿದೆ.

ಮೊಹಾಲಿ ಮೂಲದ Neslak Biosciences Private Limited 2021ರಲ್ಲಿ ಆರಂಭವಾಗಿದ್ದು ಇದು ತಾಯಿಯ ಎದೆ ಹಾಲನ್ನು ಪೌಡರ್ ರೂಪದಲ್ಲಿ ಮಾರಾಟ ಮಾಡುತ್ತದೆ. ಇದು ಹಾಲಿನ ಗುಣಮಟ್ಟವನ್ನು ಪರೀಕ್ಷಿಸುತ್ತದೆ ಎಂದು ಹೇಳಿಕೊಳ್ಳುತ್ತಿದ್ದು, ಆಸ್ಪತ್ರೆಗಳಲ್ಲಿ ಎದೆಹಾಲು ದಾನಿಗಳಿಂದ ಪಡೆಯುವ ಮಿಲ್ಕ್ ಬ್ಯಾಂಕ್​​ನಿಂದ ಹಾಲು ಪಡೆಯುತ್ತದೆ. ತಾವು ಹಾಲಿನ ಪೌಷ್ಟಿಕಾಂಶಗಳನ್ನು ಉಳಿಸಿಕೊಂಡಿದ್ದು, ತಿಂಗಳಾಗದೆ ಹೆರಿಗೆಯಾದ ಶಿಶುಗಳಿಗೆ, ನವಜಾತ ಶಿಶುಗಳಿಗೆ ಹಾಲು ಒದಗಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತೇವೆ ಎಂದು ಎರಡೂ ಕಂಪನಿಗಳು ಹೇಳಿ ಕೊಂಡಿವೆ. ಆದರೆ ಇವರ ಈ ಮಾರಾಟವನ್ನು ತಜ್ಞರು, ಆರೋಗ್ಯ ಕಾರ್ಯಕರ್ತರು ಮತ್ತು ಇದೀಗ ಕೇಂದ್ರ ಸರ್ಕಾರವೂ ಪ್ರಶ್ನಿಸಿದೆ.

ಬಡವರು, ಹಾಲುಣಿಸುವ ಗ್ರಾಮೀಣ ಮಹಿಳೆಯರ ಶೋಷಣೆ ಮತ್ತು ಅವರ ಹಾಲನ್ನು ಶ್ರೀಮಂತ ನಗರ ಕುಟುಂಬಗಳಿಗೆ ಮಾರಾಟ ಮಾಡುವ ಹಿಂದಿನ ನೈತಿಕತೆಯನ್ನು ಪ್ರಶ್ನಿಸಿ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ. Milk Substitutes Act ಪ್ರಕಾರ, ಅವರು ಎದೆಹಾಲು ಮಾರಾಟ ಮಾಡುತ್ತಿರುವುದಾಗಿ ಹೇಳಿದರೂ ಈ ಉತ್ಪನ್ನಗಳು ಸ್ಪಷ್ಟವಾಗಿ ಫಾರ್ಮುವಾ ಅಡಿಯಲ್ಲಿ ಬರುತ್ತವೆ ಎಂದು ವೈದ್ಯರ ಗುಂಪು ಹೇಳುತ್ತದೆ.

ಆದಾಗ್ಯೂ, ಸರ್ಕಾರಿ ಇಲಾಖೆಗಳಲ್ಲಿ, ಎದೆ ಹಾಲನ್ನು ಹೇಗೆ ವರ್ಗೀಕರಿಸಬೇಕು ಮತ್ತು ಅದನ್ನು ಯಾರು ನಿಯಂತ್ರಿಸಬೇಕು ಎಂಬುದರ ಕುರಿತು ಒಮ್ಮತವಿಲ್ಲ. ಗೊಂದಲದ ಹೊರತಾಗಿಯೂ, ನಿಯೋಲ್ಯಾಕ್ಟಾ ಮತ್ತು ನೆಸ್ಲಾಕ್ ಎರಡೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (FSSAI) ಪರವಾನಗಿಯನ್ನು ಪಡೆಯಲು ಸಮರ್ಥವಾಗಿವೆ, ಇದನ್ನು ಕ್ರಮವಾಗಿ ಈ ವರ್ಷದ ಏಪ್ರಿಲ್ ಮತ್ತು ಸೆಪ್ಟೆಂಬರ್‌ನಲ್ಲಿ ರದ್ದುಗೊಳಿಸಲಾಯಿತು. ನಿಯೋಲ್ಯಾಕ್ಟಾ ತನ್ನ ಉತ್ಪನ್ನಗಳನ್ನು “ಆಯುರ್ವೇದ ಔಷಧಗಳಾಗಿ” ಮಾರಾಟ ಮಾಡಲು ಕರ್ನಾಟಕದ ಆಯುಷ್ ಇಲಾಖೆಯಿಂದ ಪರವಾನಗಿಯನ್ನು ಪಡೆದುಕೊಂಡಿತು, ನಂತರ ಆಯುಷ್ ಸಚಿವಾಲಯವು ದಿ ಟೈಮ್ಸ್ ಆಫ್ ಇಂಡಿಯಾದಲ್ಲಿ ವರದಿಯ ನಂತರ ಮಧ್ಯಪ್ರವೇಶಿಸಿ ಈ ಪರವಾನಗಿಯನ್ನು ಸೆಪ್ಟೆಂಬರ್‌ನಲ್ಲಿ ರದ್ದುಗೊಳಿಸಲಾಯಿತು.

ಈ ಬಗ್ಗೆ ದಿ ಪ್ರಿಂಟ್ ಜತೆ ಮಾತನಾಡಿದ NeoLacta, ಜಾಗತಿಕವಾಗಿ ಅಳವಡಿಸಿಕೊಂಡ ಅತ್ಯುನ್ನತ ನೈತಿಕ ಮಾನದಂಡಗಳನ್ನು ಅನುಸರಿಸುವ ಮೂಲಕ ನಾವು ಕಾನೂನುಬದ್ಧವಾಗಿ ತನ್ನ ವ್ಯವಹಾರವನ್ನು ನಡೆಸುತ್ತಿದ್ದೇವೆ ಎಂದಿದೆ. ಏತನ್ಮಧ್ಯೆ, ಎದೆ ಹಾಲಿನ ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರಾಟದ ವಿವಾದಾತ್ಮಕ ವಿಷಯದ ಮೇಲೆ ಸುದೀರ್ಘ ಹೋರಾಟ ನಡೆಯುತ್ತಿದೆ. ಸೆಪ್ಟೆಂಬರ್‌ನಲ್ಲಿ, ನಿಯೋಲ್ಯಾಕ್ಟಾ ತನ್ನ ಆಯುಷ್ ಪರವಾನಗಿಯನ್ನು ರದ್ದುಗೊಳಿಸುವುದರ ವಿರುದ್ಧ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಎದೆ ಹಾಲಿನ ವಾಣಿಜ್ಯೀಕರಣದ ವಿರುದ್ಧ ನಾಗರಿಕ ಸಮಾಜದ ಗುಂಪುಗಳು ಸಹ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಯೋಜಿಸುತ್ತಿವೆ ಎಫ್‌ಎಸ್‌ಎಸ್‌ಎಐ ಈಗ ನಿಯೋಲ್ಯಾಕ್ಟಾ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಚಿಂತಿಸುತ್ತಿದೆ.

ನಿಯೋಲ್ಯಾಕ್ಟಾ ಸದ್ಯಕ್ಕೆ ತಡೆ ಆದೇಶವನ್ನು ಪಡೆದುಕೊಂಡಿದೆ. ಆದರೆ  ಅದರ ಹಾಲಿನ ಬಾಟಲಿಗಳು ಮತ್ತು ಸ್ಯಾಚೆಟ್‌ಗಳು ಮತ್ತೆ ಮಾರುಕಟ್ಟೆಯಲ್ಲಿವೆ. ನೆಸ್ಲಾಕ್‌ನ ವೆಬ್‌ಸೈಟ್ ಚಾಲನೆಯಲ್ಲಿದ್ದು ಕಂಪನಿಯ ಸ್ಥಿತಿಯು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದೊಂದಿಗೆ ಸಕ್ರಿಯವಾಗಿದೆ.

ಮಾರುಕಟ್ಟೆಯಲ್ಲಿ ಎದೆ ಹಾಲಿಗೆ ಭಾರೀ ಬೇಡಿಕೆ

2016 ರಲ್ಲಿ, ನಿಯೋಲ್ಯಾಕ್ಟಾ ತಮ್ಮ “100% ಮಾನವ ಹಾಲಿನ ಉತ್ಪನ್ನಗಳೊಂದಿಗೆ” ಭಾರತೀಯ ಶಿಶುಆಹಾರ ಮಾರುಕಟ್ಟೆಯನ್ನು ಪ್ರವೇಶಿಸಿದಾಗ ಅದು ಹೊಸ ಪ್ರಯೋಗವಾಗಿತ್ತು. ಜಾಗತಿಕವಾಗಿ ಹೆಚ್ಚಿನ ಸಂಖ್ಯೆಯ ಜನನಗಳಲ್ಲದೆ, ಅವಧಿಪೂರ್ವ ಜನನಗಳು. ಅಂದರೆ 37 ವಾರಗಳ ಗರ್ಭಾವಸ್ಥೆಯ ಮೊದಲು ಜನಿಸಿದ ಶಿಶುಗಳು (ಗರ್ಭಧಾರಣೆಯು ಸುಮಾರು 40 ವಾರಗಳವರೆಗೆ ಇರುತ್ತದೆ). ಭಾರತದಲ್ಲಿ ಇದು ಹೆಚ್ಚು. ದೇಶದಲ್ಲಿ ಪ್ರತಿ ವರ್ಷ ಜನಿಸುವ 27 ದಶಲಕ್ಷ ಶಿಶುಗಳಲ್ಲಿ 3.5 ದಶಲಕ್ಷ ಶಿಶುಗಳು ಅವಧಿಪೂರ್ವ ಹುಟ್ಟಿದವುಗಳಾಗಿವೆ. ಅವಧಿಪೂರ್ವ ಶಿಶುಗಳಿಗೆ ಸೇವೆ ಸಲ್ಲಿಸುತ್ತಿರುವ ವೈದ್ಯರು ಹೆಚ್ಚಿನ ತಾಯಂದಿರು ತಮ್ಮ ಶಿಶುಗಳಿಗೆ ಸಾಕಷ್ಟು ಹಾಲನ್ನು ಉತ್ಪಾದಿಸುತ್ತಾರೆ ಎಂದು ವಿವರಿಸುತ್ತಾರೆ. ಕಾಂಗರೂ ಮದರ್ ಕೇರ್ ಅಥವಾ ಕಾಂಗರೂನಂತೆ ಮಗುವನ್ನು ತಾಯಿಗೆ ಅಪ್ಪಿಹಿಡಿದುಕೊಂಡು ಆಗಾಗ್ಗೆ ಸ್ತನ್ಯಪಾನ ಮಾಡುವುದು ಪರಿಣಾಮಕಾರಿ ಎಂದು ಸಾಬೀತಾಗಿದೆ. ಆದರೆ ತಾಯಿಯ ಹಾಲು ಲಭ್ಯವಿಲ್ಲದಿದ್ದಾಗ ಅಥವಾ ಅವಳು ಉತ್ಪಾದಿಸುವ ಹಾಲು ಸಾಕಾಗುವುದಿಲ್ಲವಾದರೆ, ದಾನಿ ಹಾಲು ಮುಂದಿನ ಅತ್ಯುತ್ತಮ ಆಯ್ಕೆಯಾಗಿದೆ.

ಇದು ಫಾರ್ಮುಲಾ ಅಥವಾ ಇತರ ಹಾಲಿನ ಇತರ ಪೂರಕ ಉತ್ಪನ್ನಗಳಿಗಿಂತ ಸ್ವಲ್ಪ ಉತ್ತಮವಾಗಿದೆ ಎಂದು ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನ ನಿರ್ದೇಶಕಿ, ಪ್ರೊಫೆಸರ್ ಮತ್ತು ನಿಯೋನಾಟಾಲಜಿ ವಿಭಾಗದ ಮುಖ್ಯಸ್ಥರಾದ ಡಾ ಸುಷ್ಮಾ ನಾಂಗಿಯಾ ಹೇಳಿದ್ದಾರೆ.

ಭಾರತದಲ್ಲಿ, 110 ಹಾಲಿನ ಬ್ಯಾಂಕ್‌ಗಳಲ್ಲಿ ಸುಮಾರು 90 ಸರ್ಕಾರಿ ಆಸ್ಪತ್ರೆಗಳು ಅಥವಾ ವೈದ್ಯಕೀಯ ಕಾಲೇಜುಗಳಲ್ಲಿವೆ. ಉಳಿದವು ಖಾಸಗಿ ಆಸ್ಪತ್ರೆಗಳಲ್ಲಿವೆ. ಈ ಬ್ಯಾಂಕ್‌ಗಳಿಗೆ ಹಾಲನ್ನು ದಾನ ಮಾಡುವ ಮಹಿಳೆಯರಿಗೆ ಯಾವುದೇ ರೂಪದಲ್ಲಿ ಪ್ರೋತ್ಸಾಹ ನೀಡಲಾಗುವುದಿಲ್ಲ ಮತ್ತು ಹಾಲನ್ನು ಸ್ವೀಕರಿಸುವ ಪೋಷಕರು ಹಾಲಿನ ಸಂಸ್ಕರಣೆಗಾಗಿ ಸಾಮಾನ್ಯ ಶುಲ್ಕವನ್ನು ಪಾವತಿಸಬಹುದು. ಆದರೆ ಈ ದಾನಿ ಹಾಲು ಬ್ಯಾಂಕ್‌ಗಳು ಕಡಿಮೆ . ಇವು  ಬೇಡಿಕೆ-ಪೂರೈಕೆ ಕೊರತೆಯನ್ನು ಸೃಷ್ಟಿಸುತ್ತವೆ. ಇಂಡಿಯನ್ ಪೀಡಿಯಾಟ್ರಿಕ್ಸ್‌ನಲ್ಲಿ ಪ್ರಕಟವಾದ 2019 ರ ಪ್ರಬಂಧ ಪ್ರಕಾರ 22 ದಾನಿ ಹಾಲು ಬ್ಯಾಂಕ್‌ಗಳನ್ನು ಸಮೀಕ್ಷೆ ಮಾಡಿದೆ. ಇವುಗಳಲ್ಲಿ  10 ಬೇಡಿಕೆ ಮತ್ತು ಪೂರೈಕೆ ಅಂತರವನ್ನು ಎದುರಿಸುತ್ತಿದೆ ಎಂದು ಕಂಡುಹಿಡಿದಿದೆ.

ದಾನಿ ಎದೆ ಹಾಲು ಲಭ್ಯವಿಲ್ಲದಿದ್ದಾಗ, ಆಸ್ಪತ್ರೆಗಳು ಕೆಲವೊಮ್ಮೆ ಶಿಶುಗಳಿಗೆ ಪ್ರಾಣಿಗಳ ಹಾಲು ಅಥವಾ ಪೂಕರ ಉತ್ಪನ್ನಗಳನ್ನು ನೀಡಬೇಕಾಗುತ್ತದೆ ಎಂದು ಹ್ಯೂಮನ್ ಮಿಲ್ಕ್ ಬ್ಯಾಂಕಿಂಗ್ ಅಸೋಸಿಯೇಷನ್ ಆಫ್ ಇಂಡಿಯಾ (HMBAI) ರಾಷ್ಟ್ರೀಯ ಸಂಚಾಲಕ ಡಾ ಸತೀಶ್ ತಿವಾರಿ ಹೇಳಿದ್ದಾರೆ. ನಿಯೋಲ್ಯಾಕ್ಟಾ ಇಲ್ಲಿ ಬಳಕೆಗೆ ಬರುತ್ತದೆ.

ಆದರೆ ನಿಯೋಲ್ಯಾಕ್ಟಾ ಉತ್ತಮವಾದದು ಅಲ್ಲ ಎಂದು ಶಿಶುಗಳ ಆರೈಕೆಯಲ್ಲಿ ಕೆಲಸ ಮಾಡುವ ವೈದ್ಯರು ಹೇಳುತ್ತಾರೆ. ಶಿಶುಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಗಳನ್ನು ಪ್ರಾಯೋಜಿಸುವುದು ಮತ್ತು ಮಾಧ್ಯಮಗಳ ಮೂಲಕ ಪ್ರಚಾರದ ವಿಷಯವನ್ನು ಪ್ರಕಟಿಸುವುದು ಮುಂತಾದ ಅವರ ಆಕ್ರಮಣಕಾರಿ ಮಾರ್ಕೆಟಿಂಗ್ ವಿಧಾನವು ಹಾಲಿನ ಬದಲಿಯನ್ನು ಮಾರಾಟ ಮಾಡುವ ಕಂಪನಿಗಳಿಗೆ ಹೋಲುತ್ತದೆ ಎಂದು ವೈದ್ಯರು ಹೇಳುತ್ತಾರೆ. ಅವರ ಪ್ರಕಾರ, ನಿಯೋಲ್ಯಾಕ್ಟಾ ಶ್ರೀಮಂತ, ಯುವ ಜೋಡಿಗಳನ್ನು ಗುರಿಯಾಗಿಸಿಕೊಂಡು ಫಾರ್ಮುಲಾ ಉದ್ಯಮ ಮಾದರಿಯನ್ನು ಪುನರಾವರ್ತಿಸುತ್ತಿದೆ ಎಂದು ಅವರು ಹೇಳುತ್ತಾರೆ.

ವಿವಾದಗಳು ಏನು?

ನಿಯೋಲ್ಯಾಕ್ಟಾ ಲೈಫ್ ಸೈನ್ಸಸ್ ಮೊದಲ ಬಾರಿಗೆ ಭಾರತದಲ್ಲಿ ಕಾರ್ಯನಿರ್ವಹಿಸಲು ನವೆಂಬರ್ 2017 ರಲ್ಲಿ ಎಫ್‌ಎಸ್‌ಎಸ್‌ಎಐ ಒಂದು ವರ್ಷದವರೆಗೆ ಪರವಾನಗಿಯನ್ನು ಪಡೆದುಕೊಂಡಿತು. ಎಫ್‌ಎಸ್‌ಎಸ್‌ಎಐನ ಡೇಟಾಬೇಸ್‌ನಲ್ಲಿ ಅದರ ಎಂಟು ಪಟ್ಟಿ ಮಾಡಲಾದ ಉತ್ಪನ್ನಗಳಲ್ಲಿ ನಾಲ್ಕನ್ನು ‘ತಾಯಿ ಹಾಲು’ ಎಂದು ಹೆಸರಿಸಲಾಗಿದೆ. ಆದರೆ 2018 ರಲ್ಲಿ ಐದು ವರ್ಷಗಳವರೆಗೆ ನವೀಕರಿಸಲಾದ ಡೈರಿ ವರ್ಗದ ಅಡಿಯಲ್ಲಿ ಪರವಾನಗಿ ನೀಡಲಾಯಿತು. ಅಂತೆಯೇ, ನೆಸ್ಲಾಕ್ ಅನ್ನು ಡೈರಿ ಉತ್ಪಾದಕ ಕಂಪನಿ ಎಂದು ವರ್ಗೀಕರಿಸಲಾಗಿದೆ, ಆದರೆ FSSAI ನೊಂದಿಗೆ ಪಟ್ಟಿ ಮಾಡಲಾದ ಅದರ 12 ಉತ್ಪನ್ನಗಳಲ್ಲಿ ಯಾವುದೂ ‘ತಾಯಿಯ ಹಾಲು’ ಎಂದು ಉಲ್ಲೇಖಿಸಿಲ್ಲ. ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದೊಂದಿಗೆ, ನಿಯೋಲ್ಯಾಕ್ಟಾವನ್ನು ಡೈರಿ ಉತ್ಪನ್ನಗಳ ಕಂಪನಿಯಾಗಿ ಮತ್ತು ನೆಸ್ಲಾಕ್ ಅನ್ನು ರಾಸಾಯನಿಕ ಉತ್ಪನ್ನ ತಯಾರಕರಾಗಿ ನೋಂದಾಯಿಸಲಾಗಿದೆ. ಈ ವರ್ಷದ ಆರಂಭದಲ್ಲಿ FSSAI ಈ ಬಗ್ಗೆ ಗಮನ ಹರಿಸಿತ್ತು. ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿನ ಹಾಲುಣಿಸುವ ನಿರ್ವಹಣಾ ಕೇಂದ್ರಗಳ ರಾಷ್ಟ್ರೀಯ ಮಾರ್ಗಸೂಚಿಗಳ ಪ್ರಕಾರ, ದಾನಿ ಮಾನವ ಹಾಲನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುವುದಿಲ್ಲ ಎಂದು ಆರೋಗ್ಯ ಸಚಿವಾಲಯ ಲೋಕಸಭೆಯಲ್ಲಿ ತಿಳಿಸಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆ 2006 ಸಹ ಮಾನವ ಹಾಲಿನ ವಾಣಿಜ್ಯ ಸಂಸ್ಕರಣೆ ಅಥವಾ ಮಾರಾಟವನ್ನು ಒಳಗೊಂಡಿರುವುದಿಲ್ಲ. 2020 ರಲ್ಲಿ ಶಿಕ್ಷಣ ತಜ್ಞರಾದ ಸುಸಾನ್ ನ್ಯೂಮನ್ ಮತ್ತು ಮೈಕಲ್ ನಹ್ಮಾನ್ ಅವರು ಬರೆದ Nurture commodified? An investigation into commercial human milk supply chains ಲೇಖನ ರಿವ್ಯೂ ಆಫ್ ಇಂಟರ್ನ್ಯಾಷನಲ್ ಪೊಲಿಟಿಕಲ್ ಎಕಾನಮಿಯಲ್ಲಿ ಪ್ರಕಟವಾಯಿತು. ಇದು ಮಾನವ ಹಾಲನ್ನು ಸಂಗ್ರಹಿಸುವ ನಿಯೋಲ್ಯಾಕ್ಟಾ ಮಾದರಿಯನ್ನು ಅಧ್ಯಯನ ಮಾಡಿದೆ. ಅವರು ಕಂಪನಿಯ ಮಾಲೀಕರು ಮತ್ತು ಉದ್ಯೋಗಿಗಳನ್ನು ಸಂದರ್ಶಿಸಿದರು. ನಿಯೋಲ್ಯಾಕ್ಟಾ ತನ್ನ ಉತ್ಪನ್ನಗಳು ಅವಧಿ ಪೂರ್ವ ಶಿಶುಗಳಿಗೆ ಮಾತ್ರ ಮೀಸಲಾಗಿದ್ದರೂ, ಇವುಗಳನ್ನು ಪೂರ್ಣಾವಧಿಯ ಶಿಶುಗಳ ಪೋಷಕರಿಗೆ ಮತ್ತು ಆಸ್ಪತ್ರೆಯ ಸಂದರ್ಭದ ಹೊರಗೆ ಮಾರಾಟ ಮಾಡಲಾಗುತ್ತಿದೆ ಎಂದು ಕಂಡುಕೊಂಡರು.

ನಿಯೋಲ್ಯಾಕ್ಟಾ ಹೀಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅಂತಿಮ-ಬಳಕೆದಾರರು ಮತ್ತು ಬೇಡಿಕೆಗಳ ಶ್ರೇಣಿಯೊಂದಿಗೆ ಮಾನವ-ಹಾಲಿನ ಉತ್ಪನ್ನಗಳಿಗೆ ವ್ಯಾಪಕ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸುತ್ತದೆ” ಎಂದು ಈ ಅಧ್ಯಯನ ಬೆಳಕು ಚೆಲ್ಲಿತ್ತು.

ನಿಯೋಲ್ಯಾಕ್ಟಾ ತನ್ನ ಹಾಲಿನ ದಾನಿಗಳನ್ನು ಶ್ರೇಣೀಕರಿಸುವ ಮತ್ತು ಚಿತ್ರಿಸುವ ವಿಧಾನಗಳನ್ನು ಸಹ ಇದು ಪ್ರಶ್ನಿಸುತ್ತದೆ. ಹಾಲು ಪೂರೈಕೆದಾರರ ಮೊದಲ ಸೆಟ್ ನಗರ, ವಿದ್ಯಾವಂತ, ದೊಡ್ಡ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಅಥವಾ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ವೃತ್ತಿಪರ ಮಹಿಳೆಯರಾಗಿದ್ದು ನಿಯೋಲ್ಯಾಕ್ಟಾದ ಸಾಮಾಜಿಕ ಮಾಧ್ಯಮ ಪ್ರಚಾರಗಳಲ್ಲಿ ಅವುಗಳನ್ನು ಚಿತ್ರಿಸಲಾಗಿದೆ.

ಎರಡನೇ ಗುಂಪಿನ ಮಹಿಳಾ ದಾನಿಗಳು ತಮ್ಮ ಶಿಶುಗಳಿಗೆ ಸಾಕಷ್ಟು ಹಾಲನ್ನು ಪೂರೈಸುವುದನ್ನು ಬಿಟ್ಟು, ತಮ್ಮನ್ನು ತಾವು ಪೋಷಿಸಲು ಕಷ್ಟಪಡುವವರಾಗಿದ್ದಾರೆ ಎಂದು ಲೇಖಕರು ಗಮನಿಸಿದ್ದಾರೆ. ಈ ಮಹಿಳೆಯರಿಗೆ ನಗದು ಮತ್ತು ಆಹಾರ ಪ್ಯಾಕೆಟ್‌ಗಳ ರೂಪದಲ್ಲಿ ಪ್ರೋತ್ಸಾಹವನ್ನು ನೀಡಲಾಗುತ್ತದೆ. ಅವರ ಸಂಭಾವನೆಯು ಅವರು ನೀಡುವ ಹಾಲಿನ ಪ್ರಮಾಣವನ್ನು ಅವಲಂಬಿಸಿರುತ್ತದೆ. “ಬಡ ಮಹಿಳೆಯರಿಗೆ ಪಾವತಿಸುವ ಬೆಲೆ ತುಂಬಾ ಕಡಿಮೆಯಾಗಿದೆ, ಇದೂ ಒಂದು ಶೋಷಣೆ ಅಂತಾರೆ ಲೇಖಕರು.

ಇದನ್ನೂ ಓದಿ: Covid Situation: ತಜ್ಞರೊಂದಿಗೆ ಇಂದು ಕೇಂದ್ರ ಆರೋಗ್ಯ ಸಚಿವರ ಸಭೆ; ಭಾರತದ ಕೊವಿಡ್ ಸ್ಥಿತಿಗತಿ ಬಗ್ಗೆ ನೀವು ತಿಳಿಯಬೇಕಾದ 13 ಅಂಶಗಳಿವು

ನಿಯೋಲ್ಯಾಕ್ಟಾ ಎನ್‌ಜಿಒಗಳ ಮೂಲಕ ಈ ಮಹಿಳೆಯರನ್ನು ತಲುಪುತ್ತದೆ. ಇದು ಅವರ ಹಾಲು ತಮ್ಮ ಶಿಶುಗಳಿಗೆ ಅಗತ್ಯಕ್ಕಿಂತ ಹೆಚ್ಚಾಗಿರುತ್ತದೆ ಎಂದು ಅವರಿಗೆ ಮನವರಿಕೆ ಮಾಡಬೇಕು. NGO ಗಳು ಹಾಲನ್ನು ಉಡುಗೊರೆಯಾಗಿ (ಅಥವಾ ದಾನ)ವಾಗಿ ಪಡೆಯುತ್ತದೆ. ಇವು ತಾಯಂದಿರಲ್ಲಿ ತಮ್ಮ ಸ್ವಂತ ಮಕ್ಕಳಿಗೆ ಕೊಡುವ ಹಾಲು ಇಲ್ಲದೆ ಹಾಲು ಸಿಗದೆ ಇನ್ನೊಂದು ಮಗುವಿಗೂ ಹಾಲು ಕೊಡುವ ಜವಾಬ್ದಾರಿ ತಾಯಿಯಲ್ಲಿದೆ ಎಂದು ಹೇಳಿ ಅಮ್ಮಂದಿರಿಂದ ಹಾಲು ಸಂಗ್ರಹಿಸುತ್ತದೆ.

ಅಂದಹಾಗೆ ತಾಯಂದಿರಲ್ಲಿ ‘ಹೆಚ್ಚುವರಿ’ ಹಾಲು ಇದೆ ಎಂಬುದು ನಿಯೋಲ್ಯಾಕ್ಟಾ ಕಂಪನಿಯ ಸೃಷ್ಟಿಯಾಗಿದೆ. ಹೀಗೆ ಪಡೆದ ಹಾಲನ್ನು ಕಂಪನಿ ವಾಣಿಜ್ಯ ವಸ್ತುವಾಗಿ ಬಳಸುತ್ತದೆ ಎಂದು ಲೇಖಕರು ಹೇಳಿದ್ದಾರೆ. ಈ ಕಂಪನಿಗಳ ಹೆಚ್ಚಿನ ಬೆಲೆಯು ಅಸಮತೋಲನವನ್ನು ಸೃಷ್ಟಿಸುತ್ತದೆ. ಬಡ ತಾಯಂದಿರಿಂದ ಹಾಲು ಸಂಗ್ರಹಿಸಿ ಅದನ್ನು ನಿಭಾಯಿಸಬಲ್ಲ ಪೋಷಕರಿಗೆ ನೀಡಲಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ನವೆಂಬರ್ 2021 ರಲ್ಲಿ, ಕರ್ನಾಟಕದ ಆಯುಷ್ ಇಲಾಖೆಯು ನಿಯೋಲ್ಯಾಕ್ಟಾಗೆ 10 “ಆಯುರ್ವೇದ ಔಷಧಗಳನ್ನು” ನಾರಿಕ್ಷೀರ (ಎದೆಹಾಲು) ವರ್ಗದ ಅಡಿಯಲ್ಲಿ ಉತ್ಪಾದಿಸಲು ಪರವಾನಗಿಯನ್ನು ನೀಡಿತು.

ನ್ಯೂಮನ್ ಮತ್ತು ನಹ್ಮಾನ್ ಅವರ ವರದಿಯು ಅಪೂರ್ಣ ಎಂದು ಕರೆದ ನಿಯೋಲ್ಯಾಕ್ಟಾ ಲೈಫ್ ಸೈನ್ಸಸ್​​ನ ಜನರಲ್ ಮ್ಯಾನೇಜರ್ ಸುನಿಲ್ ಕುಮಾರ್ , ಅವರ ನೆಟ್‌ವರ್ಕ್‌ನಲ್ಲಿರುವ ಎಲ್ಲಾ ಮಹಿಳಾ ದಾನಿಗಳು ಒಪ್ಪಿಗೆಯ ಫಾರ್ಮ್‌ಗೆ ಸಹಿ ಮಾಡಿದ ನಂತರ ಸ್ವಯಂಪ್ರೇರಣೆಯಿಂದ ಹಾಲು ದಾನ ನೀಡುತ್ತಾರೆ. ಈ ಬಗ್ಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ಪ್ರಸ್ತುತಪಡಿಸಲಾಗುತ್ತದೆ. ನಾವು ಶಿಶುಗಳ (ದಾನಿಗಳ) ತೂಕವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡುತ್ತೇವೆ. ಶಿಶುಗಳ ತೂಕ ಕಡಿಮೆಯಾದರೆ, ನಾವು ಆ ಮಹಿಳೆಯರಿಂದ ಹಾಲು ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳುತ್ತಾರೆ.

ನಿಯೋಲ್ಯಾಕ್ಟಾದ ಉತ್ಪನ್ನಗಳು ಒಳರೋಗಿ ಆಸ್ಪತ್ರೆಯ ಸೆಟ್ಟಿಂಗ್‌ಗಳಲ್ಲಿ ಪ್ರಿಸ್ಕ್ರಿಪ್ಷನ್‌ನಲ್ಲಿ ಮಾತ್ರ ಲಭ್ಯವಿರುತ್ತವೆ ಎಂದು ಅವರು ಹೇಳುತ್ತಾರೆ. ನಿಯೋಲ್ಯಾಕ್ಟಾದ ಉತ್ಪನ್ನಗಳು ಪ್ರಿಸ್ಕ್ರಿಪ್ಷನ್ ಇಲ್ಲದೆ ಆನ್‌ಲೈನ್‌ನಲ್ಲಿ ಲಭ್ಯವಿರುವ ನಿದರ್ಶನಗಳು ಮಾಧ್ಯಮಗಳಿಂದ ವರದಿಯಾಗಿವೆ. ಆದರೆ ಅವುಗಳನ್ನು ಕೆಲವು ವಿತರಕರು ಮಾರಾಟಕ್ಕೆ ಇಟ್ಟಿದ್ದಾರೆ ಮತ್ತು ಈಗ ಅವುಗಳನ್ನು ತೆಗೆದುಹಾಕಲಾಗಿದೆ ಎಂದು ಕುಮಾರ್ ಹೇಳಿದ್ದಾರೆ. ಕೆಲವು ವಿತರಕರು ಅವುಗಳನ್ನು ಮಾರಾಟ ಮಾಡುವುದನ್ನು ನೀವು ಇನ್ನೂ ನೋಡಬಹುದು ಮತ್ತು ಅದು ನಮ್ಮ ನಿಯಂತ್ರಣಕ್ಕೆ ಮೀರಿದೆ” ಅಂತಾರೆ ಅವರು.

ಎದೆಹಾಲು ಮಾರಾಟ ಯಾರು ನಿಯಂತ್ರಿಸುತ್ತಾರೆ?

ಎದೆಹಾಲಿನ ಸಂಗ್ರಹಣೆ, ಮಾರಾಟ, ಸಂಸ್ಕರಣೆ ಅಥವಾ ವಿತರಣೆಯನ್ನು ನಿಯಂತ್ರಿಸಲು ಭಾರತ ಕಾನೂನನ್ನು ಹೊಂದಿಲ್ಲ. 2017 ರಲ್ಲಿ, ಆರೋಗ್ಯ ಸಚಿವಾಲಯವು ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಹಾಲುಣಿಸುವ ನಿರ್ವಹಣೆಗೆ ಮಾರ್ಗಸೂಚಿಗಳನ್ನು ರಚಿಸಿತು, ಇದು ಎದೆ ಹಾಲನ್ನು ಮಾರಾಟ ಮಾಡುವುದನ್ನು ನಿಷೇಧಿಸುತ್ತದೆ. ಶಿಶು ಹಾಲಿನ ಬದಲಿಗಳು, ಫೀಡಿಂಗ್ ಬಾಟಲಿಗಳು ಮತ್ತು ಶಿಶು ಆಹಾರಗಳು (ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ನಿಯಂತ್ರಣ) ಕಾಯಿದೆ 1992 ಸಹ ಸಂಸ್ಕರಿಸಿದ ಎದೆ ಹಾಲಿನ ನಿಯಂತ್ರಣದ ಬಗ್ಗೆ ಮೌನವಾಗಿದೆ. ಆದಾಗ್ಯೂ, ಈ ಕಂಪನಿಗಳು ಮಾರಾಟ ಮಾಡುವ ಉತ್ಪನ್ನಗಳು ಹಾಲಿನ ಬದಲಿಗಳ ವ್ಯಾಖ್ಯಾನಕ್ಕೆ ಸರಿಹೊಂದುತ್ತವೆ ಎಂದು ಡಾ ಗುಪ್ತಾ ವಾದಿಸುತ್ತಾರೆ.

FSSAI ಪರವಾನಗಿಗಳನ್ನು ರದ್ದುಗೊಳಿಸಿದಾಗ, ಮಾನವ ಹಾಲು ಅಥವಾ ಅದರಿಂದ ಪಡೆದ ಉತ್ಪನ್ನಗಳನ್ನು ಸಂಸ್ಕರಿಸುವ ಕಂಪನಿಗಳಿಗೆ ಪರವಾನಗಿ ಮತ್ತು ನೋಂದಣಿಯನ್ನು ಅನುಮತಿಸದಂತೆ ಎಲ್ಲಾ ಪ್ರಾದೇಶಿಕ ನಿರ್ದೇಶಕರು ಮತ್ತು ಆಹಾರ ಸುರಕ್ಷತಾ ಆಯುಕ್ತರಿಗೆ ಎಚ್ಚರಿಕೆ ನೀಡಿತು.  ಅಂತಹ FBO ಗಳು (ಆಹಾರ ವ್ಯಾಪಾರ ನಿರ್ವಾಹಕರು) ಪ್ರಮಾಣೀಕೃತ ಆಹಾರ ಉತ್ಪನ್ನ ವರ್ಗಗಳಾದ ‘ಹಾಲು’ ಅಥವಾ ‘ಡೈರಿ ಉತ್ಪನ್ನಗಳು’ ಅಥವಾ ‘ಶಿಶು ಹಾಲಿನ ಬದಲಿಗಳು’ ಅಥವಾ ‘ಶಿಶು ಆಹಾರಗಳು’ ಅಡಿಯಲ್ಲಿ FSSAI ಪರವಾನಗಿಗಳನ್ನು ಪಡೆದುಕೊಂಡಿದ್ದಾರೆ ಮತ್ತು ಅಂತಹ ವಿವರಗಳನ್ನು ಬಹಿರಂಗಪಡಿಸದೆ ಮಾನವ ಹಾಲು ಆಧಾರಿತ ಉತ್ಪನ್ನಗಳು ಅವರಿಂದ ತಯಾರಿಸಲ್ಪಡುತ್ತವೆ ಎಂದು FSSAI ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಶಿಶುಗಳಿಗೆ ಸಂಬಂಧಿಸಿದ ಯಾವುದೇ ಆಹಾರಗಳು ಎಫ್‌ಎಸ್‌ಎಸ್ (ಆಹಾರ ಮತ್ತು ಶಿಶು ಪೋಷಣೆ) ನಿಯಮಗಳು 2020 ರ ಅಡಿಯಲ್ಲಿ ನಿರ್ದಿಷ್ಟಪಡಿಸಿದ ಮಾನದಂಡಗಳನ್ನು ಅನುಸರಿಸಬೇಕು, ಇದು ತಾಯಿಯ ಹಾಲು ಅಥವಾ ತಾಯಿಯ ಹಾಲಿನಿಂದ ಪಡೆದ ಯಾವುದೇ ಉತ್ಪನ್ನಗಳನ್ನು ಒಳಗೊಂಡಿರುವುದಿಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ. “ನಾವು ಒಂದು ವರ್ಗವಾಗಿ ತಾಯಿಯ ಹಾಲಿಗೆ ನಿರ್ದಿಷ್ಟವಾಗಿ ಅರ್ಜಿ ಸಲ್ಲಿಸಿದ್ದೇವೆ. ಅವರು (ಎಫ್‌ಎಸ್‌ಎಸ್‌ಎಐ) ನಮ್ಮನ್ನು ಡೈರಿ ಎಂದು ವರ್ಗೀಕರಿಸಿದ್ದಾರೆ” ಎಂದು ಕುಮಾರ್ ಹೇಳುತ್ತಾರೆ.

ಒಂದು ನಿರ್ದಿಷ್ಟ ಐಟಂ FSSAI ಅಡಿಯಲ್ಲಿ ವರ್ಗವನ್ನು ಹೊಂದಿಲ್ಲದಿದ್ದರೆ, ಅದು ಅದರ ನಿಯಂತ್ರಕ ವ್ಯಾಪ್ತಿಯ ಅಡಿಯಲ್ಲಿ ಬರುವುದಿಲ್ಲ ಎಂದು FSSAI CEO ಎಸ್ ಗೋಪಾಲಕೃಷ್ಣನ್ ಹೇಳುತ್ತಾರೆ.

“FSSAI ತನ್ನ ವೆಬ್‌ಸೈಟ್‌ಗಳಲ್ಲಿನ ಎಲ್ಲಾ ಉತ್ಪನ್ನಗಳಿಗೆ ಮಾನದಂಡಗಳನ್ನು ಹೊಂದಿದೆ. ಮಾನವ ಹಾಲಿಗೆ ಅಂತಹ ಯಾವುದೇ ಮಾನದಂಡಗಳಿಲ್ಲ. ನಮ್ಮಲ್ಲಿ ಅದಕ್ಕೆ ಮಾನದಂಡವಿಲ್ಲದಿದ್ದರೆ, ಯಾರೂ ಅದನ್ನು ಮಾರಾಟ ಮಾಡಲ ಅಥವಾ ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಗೋಪಾಲಕೃಷ್ಣನ್ ಹೇಳಿದ್ದಾರೆ.

ಕರ್ನಾಟಕದ ಆಯುಷ್ ಇಲಾಖೆ, ನಿಯೋಲ್ಯಾಕ್ಟಾಗೆ ಪರವಾನಗಿ ನೀಡಲು 11 ತಿಂಗಳುಗಳನ್ನು ತೆಗೆದುಕೊಂಡಿತು. ಸಿಬ್ಬಂದಿ ಕಂಪನಿಯ ಸೌಲಭ್ಯಕ್ಕೆ ಎರಡು ಬಾರಿ ಭೇಟಿ ನೀಡಿದರು. ಆದರೂ, ಸಚಿವಾಲಯವು ಕ್ಷುಲ್ಲಕ ಆಧಾರದ ಮೇಲೆ ಪರವಾನಗಿಯನ್ನು ರದ್ದುಗೊಳಿಸಿದೆ ಎಂದು ಕುಮಾರ್ ಆರೋಪಿಸಿದರು.

“ನಾರಿಕ್ಷೀರ” ಸಂಗ್ರಹಣೆ ಮತ್ತು ಮಾರಾಟವು ಮಾನವ ಹಕ್ಕುಗಳು, ಮಹಿಳಾ ಹಕ್ಕುಗಳು ಸೇರಿದಂತೆ ಹಲವಾರು ನೈತಿಕ ಸಮಸ್ಯೆಗಳನ್ನು ಒಳಗೊಂಡಿದೆ, ಇದು ಬಹಳ ಸೂಕ್ಷ್ಮವಾಗಿದೆ” ಎಂದು ಆಯುಷ್ ಇಲಾಖೆಯ ಪತ್ರವು ಹೇಳುತ್ತದೆ. ನಿಯೋಲ್ಯಾಕ್ಟಾ ಉತ್ಪನ್ನಗಳು “ಆಯುರ್ವೇದ ಔಷಧಗಳು” ಮತ್ತು ಕಂಪನಿಗೆ ಅರ್ಹತೆ ಹೊಂದಿಲ್ಲ ಎಂದು ಹೇಳಿದೆ. ಇವು ಹೊಸ ಔಷಧಗಳು ಮತ್ತು ಕ್ಲಿನಿಕಲ್ ಪ್ರಯೋಗ ನಿಯಮಗಳು 2019 ಅನ್ನು ಸಹ ಉಲ್ಲಂಘಿಸಿದೆ. ಅಂದರೆ ಮಾನವ ಹಾಲಿನ ಮಾರಾಟದ ನಿಯಂತ್ರಣ ಬಗ್ಗೆ ಸ್ಪಷ್ಟತೆ ಇಲ್ಲ.

ಮಾನವ ಹಾಲು ದಾನಿಗಳ ಕಾರ್ಯಕ್ರಮಗಳಿಗೆ ಮಾರ್ಗದರ್ಶನ ನೀಡುವ ಜಾಗತಿಕ ನೀತಿಗಳು ಮತ್ತು ಮಾನದಂಡಗಳು ಇರುವುದಿಲ್ಲ ಎಂದು ವೈದ್ಯಕೀಯ ಜರ್ನಲ್ ದಿ ಲ್ಯಾನ್ಸೆಟ್ ಹೇಳುತ್ತದೆ. ಮಾನವ ಹಾಲನ್ನು ಆಹಾರ, ಹ್ಯೂಮನ್ ಟಿಷ್ಯೂ, ಔಷಧ ಅಥವಾ ನಿಯಂತ್ರಕ ಉದ್ದೇಶಗಳಿಗಾಗಿ ಸಂಭವನೀಯ ವರ್ಗೀಕರಣದ ಬಗ್ಗೆ ಯಾವುದೇ ಒಮ್ಮತವಿಲ್ಲ. ಇದು ಮಾನವ ಹಾಲು ಬ್ಯಾಂಕ್ ಏರಿಕೆಗೆ ಅಡ್ಡಿಯಾಗಿ ಪರಿಣಮಿಸಿದೆ. ಹೀಗಿದ್ದರೂ ನಿಯೋಲ್ಯಾಕ್ಟಾ ಕಾರ್ಯನಿರ್ವಹಿಸುತ್ತದೆ.

ನಿಯೋಲ್ಯಾಕ್ಟಾ ದಾನಿ ಹಾಲನ್ನು ಆಹಾರ, ಔಷಧ ಅಥವಾ ಮಾನವ ಅಂಗಾಂಶವಾಗಿ ತಮ್ಮ ವ್ಯಾಪಾರಕ್ಕಾಗಿ ಬಳಸಿಕೊಳ್ಳುವ ಮೂವಕ ನಿಯಂತ್ರಕಗಳನ್ನು ಉಲ್ಲಂಘಿಸಿವೆ ಎಂದು ನ್ಯೂಮನ್ ಮತ್ತು ನಹ್ಮನ್ ಗಮನಿಸಿದ್ದಾರೆ. 2017ರಲ್ಲಿ ನಿಯೋಲ್ಯಾಕ್ಟಾ ಆಸ್ಟ್ರೇಲಿಯಾಕ್ಕೆ ರಫ್ತು ಪರವಾನಗಿಯನ್ನು ಪಡೆದುಕೊಂಡಿತು. ಇದು ಯುಕೆಯಲ್ಲಿ ನಿಯೋಕೇರ್ ಎಂಬ ಮತ್ತೊಂದು ಕಂಪನಿಯನ್ನು ಸಹ ತೆರೆದಿದೆ.

ಎದೆ ಹಾಲಿನ ವಾಣಿಜ್ಯೀಕರಣಕ್ಕೆ ಯಾಕೆ ವಿರೋಧ?

ಮಾನವ ಹಾಲು ಮತ್ತು ಅದರಿಂದ ಪಡೆದ ಉತ್ಪನ್ನಗಳನ್ನು ಮಾರಾಟ ಮಾಡುವ ಅಮೆರಿಕ, ಬ್ರಿಟನ್ ಮತ್ತು ಜರ್ಮನಿಯಲ್ಲಿ ಕೇವಲ ಎರಡು ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. 2015 ರಲ್ಲಿ, ಆಂಬ್ರೋಸಿಯಾ ಲ್ಯಾಬ್ಸ್ ಎಂಬ ಉತಾಹ್ ಮೂಲದ ಕಂಪನಿಯು ಈಗ ಮುಚ್ಚಲ್ಪಟ್ಟಿದೆ, ಯುಎಸ್‌ನಲ್ಲಿ ಕಾಂಬೋಡಿಯನ್ ಮಹಿಳೆಯರಿಂದ ಸಂಗ್ರಹಿಸಿದ ಮಾನವ ಹಾಲನ್ನು ಮಾರಾಟ ಮಾಡಿದೆ. ಇದು ಬಹಿರಂಗಗೊಂಡ ನಂತರ, ಕಾಂಬೋಡಿಯನ್ ಸರ್ಕಾರವು ಸ್ಥಳೀಯ ಮಕ್ಕಳ ಪೌಷ್ಟಿಕಾಂಶದ ಅಗತ್ಯತೆಗಳು ಮತ್ತು ದೇಹದ ಭಾಗಗಳ ಕಳ್ಳಸಾಗಣೆ ಕಾನೂನುಗಳನ್ನು ಉಲ್ಲೇಖಿಸಿ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು.

ಮಾನವ ಹಾಲು ವಯಸ್ಕರಲ್ಲಿ ಕ್ರೇಜ್ ಆಗಿ ಹೊರಹೊಮ್ಮಿದೆ ಎಂದು ಸಂಶೋಧಕಿ ಸಾರಾ ಸ್ಟೀಲ್ ಮತ್ತು ಇತರರು ಬರೆದ ಲೇಖನವನ್ನು ರಾಯಲ್ ಸೊಸೈಟಿ ಆಫ್ ಮೆಡಿಸಿನ್ ಜರ್ನಲ್‌ನಲ್ಲಿ ಉಲ್ಲೇಖಿಸಿದ್ದಾರೆ. ಎದೆ ಹಾಲಿನ ಐಸ್‌ಕ್ರೀಮ್‌ಗಳು ಯುಕೆಯಲ್ಲಿ ಮಾರಾಟಕ್ಕಿವೆ. ಲಾಲಿಪಾಪ್ ಕಂಪನಿಯು ಯುಎಸ್‌ನಲ್ಲಿ ಎದೆಹಾಲಿನ ರುಚಿಯ ಸಿಹಿತಿಂಡಿಗಳನ್ನು ಮಾರಾಟ ಮಾಡುತ್ತದೆ. ಎದೆಹಾಲನ್ನು ಫಿಟ್‌ನೆಸ್ ಉತ್ಸಾಹಿಗಳು ‘ಕ್ಲೀನ್’ ಸೂಪರ್‌ಫುಡ್ ಎಂದು ಪರಿಗಣಿಸುತ್ತದೆ. ಇತರ ‘ಪ್ರಯೋಜನಗಳ’ ನಡುವೆ ನಿಮಿರುವಿಕೆಗೂ ಇದು ಸಹಾಯ ಮಾಡುತ್ತದೆ ಎನ್ನಲಾಗಿದೆ.

“ದಾನಿ ಹಾಲು ಬ್ಯಾಂಕ್‌ಗಳು ಬೇಡಿಕೆ-ಪೂರೈಕೆ ಅಂತರವನ್ನು ಪೂರೈಸಲು ಸಾಧ್ಯವಾಗದಿದ್ದರೂ, ವಾಣಿಜ್ಯೀಕರಣವು ಉತ್ತರವಲ್ಲ”. “ಸರ್ಕಾರವು ಹೆಚ್ಚಿನ ದಾನಿಗಳ ಹಾಲಿನ ಬ್ಯಾಂಕ್‌ಗಳನ್ನು ತೆರೆಯುವ ಅಗತ್ಯವಿದೆ. ಖಾಸಗಿ ಸಂಸ್ಥೆಗಳು ಜನರಿಗೆ ಸಹಾಯ ಮಾಡುತ್ತಿಲ್ಲ. ಅವರು ಕೇವಲ ಲಾಭೋದ್ದೇಶವನ್ನು ಹೊಂದಿದ್ದಾರೆ ಎಂದು ಡಾ ನಾಂಗಿಯಾ ಹೇಳಿದ್ದಾರೆ. ಇದು ಕಷ್ಟಕರವಾದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಲಾಭಕ್ಕಾಗಿ ಮಹಿಳೆಯರನ್ನು ಬಳಸಿಕೊಳ್ಳುವು ಗದು ನಿಜವಾಗಿಯೂ ಭವಿಷ್ಯದಲ್ಲಿ ಮುಂದೇನು ಎಂಬ ಪ್ರಶ್ನೆ ಹುಟ್ಟುಹಾಕುತ್ತದೆ? ನಾವು ಹಾಲು ಉತ್ಪಾದಿಸುವ ಹಸುಗಳಂತೆ ಮಹಿಳೆಯರನ್ನು ಹಾಲು ಉತ್ಪಾದಿಸುವಂತೆ ಮಾಡಬೇಕೆ? ಬಡತನದ ಪ್ರದೇಶಗಳಿಂದ ಶ್ರೀಮಂತ ಪ್ರದೇಶಗಳಿಗೆ ಹಾಲು ಹರಿಯುವುದನ್ನು ಮುಂದುವರಿಸಬೇಕೆ? ಎಂದು ಸ್ಟೀಲ್ 2021ರಲ್ಲಿ ಬರೆದ ಲೇಖನದಲ್ಲಿ ಕೇಳಿದ ಪ್ರಶ್ನೆಗಳು ಮತ್ತೆ ಮತ್ತೆ ಕೇಳುವಂತಿವೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:30 pm, Mon, 26 December 22

ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಪ್ರತ್ಯೇಕವಾಗಿರಿಸಲಾಗಿದೆ: ಸತೀಶ್
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಡಿಕೆ ಶಿವಕುಮಾರ್ ನೀಡಿದ ಎಚ್ಚರಿಕೆಯಿಂದ ಭಯಗೊಂಡರೇ ಗವಿಯಪ್ಪ?
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಆಶಯಗಳಿಗೆ ವಿರುದ್ಧವಾಗಿ ಪೇಜಾವರ ಶ್ರೀ ಸಂವಿಧಾನ ಬದಲಿಸಬೇಕೆನ್ನುತ್ತಾರೆ:ಸಿಎಂ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಬಸನಗೌಡ ಯತ್ನಾಳ್ ಸ್ವಪ್ರತಿಷ್ಠೆಗಾಗಿ ಹೋರಾಟ ಮಾಡುತ್ತಿದ್ದಾರೆ: ಯಡಿಯೂರಪ್ಪ
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್
ಭಾರತದ ಅತಿದೊಡ್ಡ ಸಕ್ಕರೆ ಕಾರ್ಖಾನೆ ಚಿಂಚೋಳಿಯಲ್ಲಿ ಸ್ಥಾಪಿಸಿರುವೆ: ಯತ್ನಾಳ್
ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ
ಕೊಪ್ಪಳದಲ್ಲಿ ಶುರುವಾದ ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿ ರ‍್ಯಾಲಿ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
ರಹಸ್ಯವಾಗಿ ನಡೆದ ಮಾತುಗಳು ಹೊರಬಿತ್ತು; ಮುಖವಾಡ ಕಳಚಿದಾಗ ನಡೆಯಿತು ಕಿತ್ತಾಟ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Devotional: ಮಕ್ಕಳು ಹಠ ಮಾಡ್ತಿದ್ರೆ ಇಲ್ಲಿದೆ ಸುಲಭ ಉಪಾಯ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
Daily Horoscope: ಈ ರಾಶಿಯವರಿಗೆ ಐದು ಗ್ರಹಗಳ ಶುಭವಾಗಲಿದೆ
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!
ಇಂದಿರಾ ಕ್ಯಾಂಟೀನದ್ದು ಎಂದು ಸಚಿವಗೆ ಹೋಟೆಲ್​ ಊಟ ತಿನ್ನಿಸಿದ ಅಧಿಕಾರಿಗಳು!