Budget 2021 ವಿಶ್ಲೇಷಣೆ | ಮೂಲ ಸೌಕರ್ಯ ಅಭಿವೃದ್ಧಿ ಮೂಲಕ ದೇಶಕ್ಕೆ ಹೊಸ ದಿಕ್ಕು ತೋರಿಸುವ ಪ್ರಯತ್ನ

ನಿರ್ಮಲಾ ಸೀತಾರಾಮನ್ ಮಂಡಿಸಿರುವ ಮುಂಗಡಪತ್ರದ ಬಗ್ಗೆ ವಿರೋಧ ಪಕ್ಷಗಳು ಏನೇ ಹೇಳಲಿ, ಇಂಥ ವಿಶೇಷ ಸಂದರ್ಭದಲ್ಲಿ ನಿಯಮ ಪುಸ್ತಕ ಬಿಟ್ಟು ಅಭಿವೃದ್ಧಿ ಕನಸು ಮಾಡಲು ಹೊರಟಿರುವ ಟೀಂ ಮೋದಿ ಎದೆಗಾರಿಕೆ ತೋರಿಸಿದೆ ಎಂದೇ ಹೇಳಬೇಕು.

Budget 2021 ವಿಶ್ಲೇಷಣೆ | ಮೂಲ ಸೌಕರ್ಯ ಅಭಿವೃದ್ಧಿ ಮೂಲಕ ದೇಶಕ್ಕೆ ಹೊಸ ದಿಕ್ಕು ತೋರಿಸುವ ಪ್ರಯತ್ನ
ಬಜೆಟ್ ಮಂಡಿಸಲು ಸಂಸತ್ತಿಗೆ ಆಗಮಿಸುತ್ತಿರುವ ನಿರ್ಮಲಾ ಸೀತಾರಾಮನ್
bhaskar hegde

| Edited By: Ghanashyam D M | ಡಿ.ಎಂ.ಘನಶ್ಯಾಮ

Feb 01, 2021 | 8:25 PM

ಇಂಗ್ಲೀಷಿನಲ್ಲಿ ಒಂದು ಮಾತಿದೆ-Biting the bullet ಅಂತ. ಅಂದರೆ, ಸಂದರ್ಭ ಬಂದಾಗ ವಿಷ ಕುಡಿದು ಸಂದರ್ಭವನ್ನು ಕೈಗೆ ತೆಗೆದುಕೊಳ್ಳುವ ಪ್ರಯತ್ನ ಮಾಡೋದು ಅಂತ. ಇಂದು ಮಂಡಿಸಿದ ಮುಂಗಡಪತ್ರದ ಮೂಲಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂಥದೊಂದು ಪ್ರಯತ್ನ ಮಾಡಿದ್ದಾರೆ ಎಂದು ಒಂದೇ ವಾಕ್ಯದಲ್ಲಿ ಹೇಳಬಹುದು. ಕೊರೋನಾ ಮಹಾಮಾರಿ ಬಂದು ಇಡೀ ದೇಶದ ಜನರ ಕೈ ಬರಿದಾಗಿ, ಜನ ಕೆಲಸ ಕಳೆದುಕೊಂಡು ರಸ್ತೆಗೆ ಬಂದು, ದೇಶದ ಆದಾಯ ಪಾತಾಳಕ್ಕಿಳಿದಿರುವ ಹೊತ್ತಿನಲ್ಲಿ ವಿತ್ತೀಯ ಶಿಸ್ತನ್ನು ಇಟ್ಟುಕೊಂಡು ಮುಂಗಡಪತ್ರ ಮಂಡಿಸಿದ್ದರೆ ದೇಶದೆಲ್ಲೆಡೆ ಇನ್ನೂ ಅಲ್ಲೋಲಕಲ್ಲೋಲ ಆಗುತ್ತಿತ್ತು.

ಅಂತರರಾಷ್ಟ್ರೀಯ ಮಟ್ಟದ ರೇಟಿಂಗ್​ ಏಜೆನ್ಸೀಸ್​ಗಳು ಕೊಟ್ಟ ಅತೀ ಕಡಿಮೆ ಅಂಕಗಳ ಕುರಿತಾಗಿ ಮೊನ್ನೆ ಮೊನ್ನೆ ಮುಖ್ಯ ಆರ್ಥಿಕ ಸಲಹೆಗಾರ, ಕೃಷ್ಣಮೂರ್ತಿ ಸುಬ್ರಮಣ್ಯಂ ತಗಾದೆ ಎತ್ತಿದ್ದರು. ಆ ಏಜನ್ಸೀಸ್​ ಮೇಲೆ ಆರೋಪ ಕೂಡ ಮಾಡಿದ್ದರು. ಈಗ ಮಂಡಿಸಿರುವ ಮುಂಗಡಪತ್ರದ ಮೂಲಕ ಟೀಮ್ ಮೋದಿ ಆ ಏಜೆನ್ಸಿಗಳಿಗೆ ಸೆಡ್ಡು ಹೊಡಿದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಂದು ವಿಚಾರಕ್ಕೆ ಅಭಿನಂದಿಸಬೇಕು. ಈ ಬಾರಿ ವಿತ್ತೀಯ ಕೊರತೆ ಶೇ 9.9 ಇರುತ್ತೆ ಎಂದು ಹೇಳುವ ಮೂಲಕ ಮತ್ತು ಪ್ರಾಮಾಣಿಕವಾಗಿ ಮಾಹಿತಿ ನೀಡಿ ಎದುರಾಳಿಗಳ ಬಾಯಿ ಮುಚ್ಚಿಸಿದ್ದಾರೆ.

ಇಂದು ಮಂಡಿಸಿದ ಮುಂಗಡಪತ್ರದಲ್ಲಿ, ಸೀತಾರಾಮನ್​ ಅವರು ಮಾಡಿರುವ ಮೊದಲ ಕೆಲಸ ಎಂದರೆ, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಹಾಕಿಕೊಟ್ಟಿರುವ ಸಂಪ್ರದಾಯದ ವಿತ್ತೀಯ ಶಿಸ್ತನ್ನು ಮೀರಿ ತಯಾರು ಮಾಡಿದ ಮುಂಗಡಪತ್ರ ಮಂಡಿಸಿದ್ದು. ಇಲ್ಲಿವರೆಗೆ ದೇಶದ ಒಟ್ಟು ಆದಾಯದ (ಜಿಡಿಪಿ) 3.4 ಪ್ರತಿಶತದಷ್ಟು ಸಾಲ ಮಾಡುವ ಅವಕಾಶ ಮಾಡಿಕೊಂಡಿದ್ದ ಭಾರತ ಸರಕಾರ ಈ ಬಾರಿ ಈ ಕಾನೂನನ್ನು ಸಡಿಲಗೊಳಿಸಿ 6.6 ಪ್ರತಿಶತ ಸಾಲ ಮಾಡಲು ಅನುವು ಮಾಡಿಕೊಂಡು ಮುಂಗಡಪತ್ರ ತಯಾರು ಮಾಡಿದೆ.

ಇದರಿಂದ ಮಾರುಕಟ್ಟೆ ಮೂಲಕ ಹೆಚ್ಚು ಸಾಲ ತಂದು ದೇಶದ ಅಭಿವೃದ್ಧಿಗೆ ತೊಡಗಿಸಲು ಮುಂದಾಗಿದೆ. ಅದರಲ್ಲಿಯೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಹಣ ತೊಡಗಿಸಲು ಮುಂದಾಗಿದ್ದು ಮೊದಲ ಮುಖ್ಯ ಅಂಶ. ಇದರಿಂದಾಗಿ ಮುಂಗಡಪತ್ರದ ಗಾತ್ರ ₹ 34 ಲಕ್ಷ ಕೋಟಿ ತಲುಪಿದೆ. ದೇಶದ ಭೂ ಸಾರಿಗೆ, ರಸ್ತೆ, ಆರೋಗ್ಯ ಮುಂತಾದ ಮೂಲಭೂತ ಕ್ಷೇತ್ರಗಳಿಗೆ ಹಣ ತೊಡಗಿಸುವುದರಿಂದ ಉದ್ಯೋಗ ಸೃಷ್ಟಿಗೆ ಚಾಲನೆ ಸಿಗುವ ಸಾಧ್ಯತೆ ಇದೆ. ಇಲ್ಲಿ ಇನ್ನೊಂದು ವಿಚಾರವನ್ನು ಗಮನಿಸೋಣ. ದೇಶದಲ್ಲಿ ನಡೆಯುವ ಆರ್ಥಿಕ ಚಟುವಟಿಕೆಯಲ್ಲಿ ಸುಮಾರು 15 ಪ್ರತಿಶತದಷ್ಟು ನಿರ್ಮಾಣ ವಲಯದಿಂದ ಬರುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆಯನ್ನು ಎಲ್ಲರೂ ಸ್ವಾಗತಿಸುತ್ತಾರೆ. ಆದರೆ ಇಂಥ ರಿಯಾಯ್ತಿಯನ್ನು ರಾಜ್ಯಗಳಿಗೆ ಕೊಟ್ಟಿಲ್ಲ. ಕೆಲ ರಾಜ್ಯ ಸರಕಾರಗಳು ಇದನ್ನು ವಿರೋಧಿಸಿದರೂ ಪ್ರಾಯಶಃ ಕೇಂದ್ರ ಸರಕಾರ ಒಂದು ಪ್ರಮುಖ ಕಾರಣಕ್ಕೆ ಈ ರಿಯಾಯ್ತಿಯನ್ನು ಕೊಟ್ಟಿರಲಿಕ್ಕಿಲ್ಲ. ಒಂದೊಮ್ಮೆ ರಾಜ್ಯಗಳು ಅದನ್ನು ದುರುಪಯೋಗಪಡಿಸಿಕೊಂಡು ಎಲ್ಲಾ ರಾಜ್ಯಗಳ ಸ್ಥಿತಿ ಹಳ್ಳ ಹಿಡಿದರೆ ಎಂಬ ವಾದವಿರಬಹುದು.

ಇಲ್ಲಿ ಇನ್ನೊಂದು ವಿಚಾರವನ್ನು ಹೇಳಲೇಬೇಕು. ಕೇಂದ್ರ ಸರಕಾರ ಇತ್ತೀಚೆಗೆ ಸೆಸ್ ಹಾಕುವ ಸಂಪ್ರದಾಯ ಬೆಳೆಸಿಕೊಂಡಿವೆ. ಈ ಬಾರಿ ಕೃಷಿ ಸೆಸ್​ ಅಂತ ಪೆಟ್ರೋಲಿಯಂ ಪದಾರ್ಥಗಳ ಮೇಲೆ ಹಾಕಿರುವುದು ಯಾಕೆ ಅಂತ ಅನ್ನಿಸಿದರೂ ಅಲ್ಲೊಂದು ವಿಶೇಷ ಇದೆ. ಸಂಗ್ರಹವಾದ ಸೆಸ್​ನಲ್ಲಿ ರಾಜ್ಯಗಳಿಗೆ ಪಾಲು ಕೊಡಬೇಕಾದ್ದಿಲ್ಲ. ಅದೇ ತೆರಿಗೆ ಆಗಿದ್ದರೆ  ರಾಜ್ಯಗಳಿಗೆ ಪಾಲುಕೊಡಬೇಕಾಗಿ ಬರುತ್ತಿತ್ತು. ಈ ವಿಚಾರದಲ್ಲಿ, ಕೇಂದ್ರ ಬಹಳ ಬುದ್ಧಿವಂತಿಕೆಯಿಂದ ಆಟ ಆಡಿದೆ ಎಂದೇ ಹೇಳಬಹುದು.

ತೆರಿಗೆ ವಿಚಾರದಲ್ಲಿ ತರಲು ಹೊರಟಿರುವ ಸುಧಾರಣೆ ಬಗ್ಗೆ ಎರಡು ಮಾತು. ಹತ್ತು ವರ್ಷಕ್ಕಿಂತಲೂ ಹಳೆಯ ಆದಾಯ ತೆರಿಗೆಯ ಕೇಸನ್ನು ಮತ್ತೆ ತೆರೆಯಬಾರದು ಎಂಬ ವಿಚಾರ ಸ್ವಾಗತಾರ್ಹ. ಆದರೆ, ₹ 50 ಲಕ್ಷ ಮತ್ತೂ ಹೆಚ್ಚಿನ ಮೊತ್ತದ ಕೇಸನ್ನು ಮತ್ತೆ ತೆರೆಯಬಹುದು ಎಂಬ ವಿಚಾರ ಈಗ ಚರ್ಚೆ ಆಗುತ್ತಿದೆ. ಆದರೆ, ಆದಾಯ ತೆರಿಗೆ ಇಲಾಖೆ ಸಲ್ಲಿಸುವ ಮೇಲ್ಮನವಿಗಳನ್ನು ಸೂಕ್ಷ್ಮವಾಗಿ ನೋಡಿದಾಗ 85 ಪ್ರತಿಶತ ಕೇಸುಗಳಲ್ಲಿ ಇಲಾಖೆ ಸೋಲುತ್ತಿದೆ. ಆದ್ದರಿಂದ ಇಲಾಖೆ ಈ ವಿಚಾರವನ್ನು ಪರಿಗಣಿಸಬೇಕಾಗುತ್ತದೆ.

ಬಹಳ ಜನ ಹೇಳುತ್ತಿರುವುದು ಜನರ ಕೈಗೆ ಹಣ ಕೊಟ್ಟಿದ್ದರೆ, ಆರ್ಥಿಕ ಸ್ಥಿತಿಗತಿ ಬದಲಾವಣೆ ಮಾಡಲು ಅನುಕೂಲವಾಗುತ್ತಿತ್ತು ಎಂದು. ಆದರೆ, ಪ್ರಾಯಶಃ, ಜನರ ಖಾತೆಗೆ ನೇರವಾಗಿ ಹಣ ಹಾಕುವ ಪದ್ಧತಿ ಬಿಟ್ಟು ಜಿಎಸ್​ಟಿ ಕೌನ್ಸಿಲ್​ ಮೂಲಕ ಬೇರೆ ಬೇರೆ ಪದಾರ್ಥಗಳ ತೆರಿಗೆ ಇಳಿಸಿ ಜನ ಕೊಳ್ಳಲು ಉತ್ತೇಜಿಸುವ ತಂತ್ರ ಕೇಂದ್ರ ಸರಕಾರದ್ದಿರಬಹುದು. ಆಗ ಸ್ವಾಭಾವಿಕವಾಗಿ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂಬುದು ಕೆಲ ತಜ್ಞರ ಅಭಿಪ್ರಾಯವಾಗಿದೆ.

ಒಂದು ವಿಚಾರದಲ್ಲಿ ಹಣಕಾಸು ಸಚಿವರು ಎಡವಿದರಾ ಎಂಬ ಅನುಮಾನ ಬರುತ್ತಿದೆ. ರಫ್ತು ಅಭಿವೃದ್ಧಿ ಯೋಜನೆಯ ಪ್ರಸ್ತಾಪ ಈ ಮುಂಗಡಪತ್ರದಲ್ಲಿ ಇಲ್ಲ. ಪ್ರಾಯಶಃ ಆತ್ಮ ನಿರ್ಭರ ಭಾರತದ ಕನಸನ್ನು ಹೊತ್ತುಕೊಂಡು ಬ್ಯಾಟಿಂಗ್​ಗೆ ಇಳಿದಿರುವ ಸರಕಾರ ಈ ಕಡೆ ಸ್ವಲ್ಪ ಗಮನ ಹರಿಸಿರಲಿಕ್ಕಿಲ್ಲ. ಎಲ್ಲಾ ದೇಶಗಳು ತೊಂದರೆಯಲ್ಲ್ಲಿದ್ದಾಗ ರಫ್ತು ಅಸಾಧ್ಯ ಎಂದೆನಿಸಿದರೂ, ಇಂಥದೊಂದು ಯೋಜನೆ ಇದ್ದರೆ ಮುಂದೆ ದೇಶಕ್ಕೆ ಅನುಕೂಲವಾಗುತ್ತಿತ್ತು.

Budget 2021 Explainer | ಕೇಂದ್ರ ಸರ್ಕಾರದ ಖಜಾನೆಯ 1 ರೂಪಾಯಿ ಲೆಕ್ಕ ನಿಮಗೆ ಗೊತ್ತಾ?

Budget 2021 ವಿಶ್ಲೇಷಣೆ | ಕರ್ನಾಟಕದ ಸಂಸದೆ ನಿರ್ಮಲಾ ಸೀತಾರಾಮನ್​ ರಾಜ್ಯವನ್ನೇ ಮರೆತರೆ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada