ಇತಿಹಾಸ ತಿಳಿಯದೇ ಮಾತಾಡುತ್ತಾರೆ: ಸಿಎಎಯನ್ನು ಟೀಕಿಸುವ ಅಮೆರಿಕಕ್ಕೆ ಸಚಿವ ಜೈಶಂಕರ್ ತರಾಟೆ
US unhappy with India's CAA; Jaishankar Retorts: ಪ್ರಜಾತಂತ್ರದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮಾನತೆ ಪ್ರಮುಖ ಅಂಶಗಳು. ಆದ್ದರಿಂದ ಭಾರತದ ಸಿಎಎ ಕಾನೂನಿನ ಬಗ್ಗೆ ಅಮೆರಿಕಕ್ಕೆ ತಾತ್ವಿಕವಾದ ವಿರೋಧ ಇದೆ ಎಂದು ಅಮೆರಿಕದ ರಾಯಭಾರಿ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಎಸ್ ಜೈಶಂಕರ್, ತನಗೂ ತತ್ವಾದರ್ಶ ಇದೆ. ವಿಭಜನೆ ನಂತರ ನೊಂದವರಿಗೆ ಸಮಾಧಾನ ಕೊಡುವ ಬಾಧ್ಯತೆಯ ತತ್ವ ನನಗಿದೆ ಎಂದು ಹೇಳಿದ್ದಾರೆ.
ನವದೆಹಲಿ, ಮಾರ್ಚ್ 17: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯ (CAA- Citizenship Amendment Act) ಬಗ್ಗೆ ಅಮೆರಿಕನ್ನರು ಮಾಡಿರುವ ಟೀಕೆಯನ್ನು ಕೇಂದ್ರ ಸಚಿವ ಎಸ್ ಜೈಶಂಕರ್ (Union Minister S Jaishankar) ಅಲ್ಲಗಳೆದಿದ್ದಾರೆ. ಅಮೆರಿಕಕ್ಕೆ ಭಾರತದ ಇತಿಹಾಸದ ಬಗ್ಗೆ ಸರಿಯಾಗಿ ಅರಿತಿಲ್ಲ ಎಂಬುದು ಸಿಎಎ ವಿಚಾರದಲ್ಲಿ ಅವರ ನಿಲುವಿನಿಂದ ನಿಚ್ಚಳವಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಇಂಡಿಯಾ ಟುಡೇ ವಾಹಿನಿ ಏರ್ಪಡಿಸಿದ್ದ ಮೇಳದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
‘ನಾನು ಅವರ (ಅಮೆರಿಕ) ಪ್ರಜಾತಂತ್ರ ವ್ಯವಸ್ಥೆಯ ದೋಷಗಳನ್ನಾಗಲೀ, ಅವರ ಸಿದ್ಧಾಂತ ಅಥವಾ ಸಿದ್ಧಾಂತದ ಕೊರತೆಯನ್ನಾಲೀ ಪ್ರಶ್ನೆ ಮಾಡುತ್ತಿಲ್ಲ. ನಮ್ಮ ಇತಿಹಾಸದ ಬಗ್ಗೆ ಅವರಿಗೆ ಇರುವ ತಿಳಿವಳಿಕೆಯನ್ನೂ ಪ್ರಶ್ನೆ ಮಾಡುತ್ತಿಲ್ಲ. ವಿಶ್ವದ ಹಲವು ಕಡೆಯಿಂದ ಬರುತ್ತಿರುವ ಅಭಿಪ್ರಾಯಗಳನ್ನು ಕೇಳಿದರೆ ಭಾರತ ವಿಭಜನೆಯೇ ಆಗಿಲ್ಲವೇನೋ ಎಂದು ಅವರು ತಿಳಿದಂತಿದೆ. ಈ ವಿಭಜನೆಯ ಪರಿಣಾಮವಾಗಿ ಉದ್ಭವಿಸಿದ ಸಮಸ್ಯೆಗಳಿಗೆ ಸಿಎಎ ಪರಿಹಾರ ಕೊಡುತ್ತಿದೆ ಎಂಬುದು ಇವರಿಗೆ ಅರಿವಾಗುವವುದಿಲ್ಲವಾ,’ ಎಂದು ಇಂಡಿಯಾ ಟುಡೆ ಕಾಂಕ್ಲೇವ್ನಲ್ಲಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ ಆರೋಪ: ಯೂಟ್ಯೂಬರ್ ಎಲ್ವಿಶ್ ಯಾದವ್ ಬಂಧನ
ಸಿಎಎ ವಿಚಾರದಲ್ಲಿ ಅಮೆರಿಕದ ಸೈದ್ಧಾಂತಿಕ ವಿರೋಧ
ಇದೇ ಕಾರ್ಯಕ್ರಮದಲ್ಲಿ ಇದಕ್ಕೆ ಮುನ್ನ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೆಟ್ಟೀ ಮಾತನಾಡಿ, ಸಿಎಎ ವಿಚಾರದಲ್ಲಿ ಅಮೆರಿಕನ್ನರಿಗೆ ತಾತ್ವಿಕ ವಿರೋಧ ಇದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮಾನತೆಯ ತತ್ವಗಳು ಮುಖ್ಯ ಎನಿಸುತ್ತವೆ. ಅಮೆರಿಕಕ್ಕೆ ಈ ತತ್ವಾದರ್ಶಗಳನ್ನು ಬಿಡಲು ಆಗುವುದಿಲ್ಲ. ಈ ಕಾರಣಕ್ಕೆ ಸಿಎಎ ಬಗ್ಗೆ ಅಮೆರಿಕಕ್ಕೆ ಆತಂಕ ಇದೆ ಎಂದು ಅವರು ಹೇಳಿದ್ದಾರೆ.
ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಈ ವಾದಕ್ಕೆ ತಿರುಗೇಟು ಕೊಟ್ಟಿದ್ದಾರೆ. ‘ನನಗೂ ತತ್ವಗಳಿವೆ. ವಿಭಜನೆ ಸಮಯದಲ್ಲಿ ತುಳಿತಕ್ಕೊಳಗಾದವರಿಗೆ ಸಹಾಯವಾಗುವುದು ನನ್ನ ಒಂದು ತತ್ವ. ಅವರ ನೀತಿಗಳ ಬಗ್ಗೆ ಮಾತ್ರ ಮಾತನಾಡುತ್ತಿಲ್ಲ’ ಎಂದು ಜೈಶಂಕರ್ ವಾದಿಸಿದ್ದಾರೆ.
ಅಮೆರಿಕದಲ್ಲಿ ಯಹೂದಿ, ಕ್ರೈಸ್ತರಂತಹ ಜನಾಂಗೀಯ ಅಲ್ಪಸಂಖ್ಯಾತರಿಗೆ ಬೇಗನೇ ಪೌರತ್ವ ಕೊಡುವ ವ್ಯವಸ್ಥೆ ತರಲು ವಿವಿಧ ತಿದ್ದುಪಡಿ ಕಾಯ್ದೆ ತಂದ ವಿಚಾರವನ್ನು ಜೈಶಂಕರ್ ಪ್ರಸ್ತಾಪಿಸಿದರು.
ವಿಭಜನೆ ಬಳಿಕ ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಲ್ಲಿ ಉಳಿದಿದ್ದ ಅಲ್ಲಿಯ ಅಲ್ಪ ಸಂಖ್ಯಾತರು ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ನಿರಾಶ್ರಿತರಾಗಿ ಬಂದು ನೆಲಸಿದ್ದರು. ಇವರಿಗೆ ಪೌರತ್ವ ಕೊಡಲು ಸಿಇಎ ತರಲಾಗಿದೆ. ಈ ಮೂರು ದೇಶಗಳಿಂದ ಧಾರ್ಮಿಕವಾಗಿ ದೌರ್ಜನ್ಯಕ್ಕೊಳಗಾಗಿ 2014ರ ಡಿಸೆಂಬರ್ 31ರೊಳಗೆ ಭಾರತಕ್ಕೆ ನಿರಾಶ್ರಿತರಾಗಿ ಬಂದ ಹಿಂದೂ, ಕ್ರೈಸ್ತ, ಬೌದ್ಧ, ಜೈನ, ಪಾರ್ಸಿ ಸಮುದಾಯಗಳ ಜನರಿಗೆ ಈಗ ಪೌರತ್ವ ಸಿಗುತ್ತದೆ.
ಧರ್ಮದ ಆಧಾರವಾಗಿ ಸಿಎಎ ರೂಪಿಸಲಾಗಿದೆ ಎಂಬುದು ಕೆಲ ಮುಸ್ಲಿಮ್ ಸಂಘಟನೆ ಹಾಗೂ ಕೆಲ ವಿಪಕ್ಷಗಳ ಆಕ್ಷೇಪವಾಗಿದೆ. ಅಹ್ಮದಿ ಇತ್ಯಾದಿ ಕೆಲ ಮುಸ್ಲಿಂ ಪಂಗಡಗಳ ಜನರೂ ಕೂಡ ಭಾರತಕ್ಕೆ ನಿರಾಶ್ರಿತರಾಗಿ ಬಂದಿದ್ದಾರೆ. ಇಂಥವರಿಗೂ ಪೌರತ್ವ ಕೊಡಬೇಕು ಎಂಬುದು ಇವರ ವಾದ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ