ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪುನಃಶ್ಚೇತನ ಸಾಧ್ಯವೇ? ಪ್ರಿಯಾಂಕಾ ಗಾಂಧಿಗೆ ಉತ್ತರ ಪ್ರದೇಶದಲ್ಲಿ ಇರುವ ಸವಾಲುಗಳೇನು?
Uttar Pradesh Congress: ದೇಶದಲ್ಲಿ ಕಾಂಗ್ರೆಸ್ ಪಕ್ಷ ಪುನಃಶ್ಚೇತನವಾಗಬೇಕೆಂದರೆ ಮೊದಲು ಅದನ್ನು ಉತ್ತರ ಪ್ರದೇಶದಿಂದಲೇ ಪ್ರಾರಂಭಿಸಬೇಕು. ಹೀಗಾಗಿಯೇ ಕಾಂಗ್ರೆಸ್ ಪಕ್ಷದ ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಪ್ರಿಯಾಂಕಾ ಗಾಂಧಿ ಅವರನ್ನು ನೇಮಿಸಲಾಗಿದೆ. ಆದರೆ, ಈಗ ನಾಲ್ಕು ತಿಂಗಳ ಬಳಿಕ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಿಯಾಂಕಾ ಗಾಂಧಿಗೆ ಉತ್ತರ ಪ್ರದೇಶದಲ್ಲಿ ಇರುವ ಸವಾಲುಗಳೇನು? ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪುನಃಶ್ಚೇತನ ಸಾಧ್ಯವೇ?
ದೇಶದಲ್ಲಿ ಕಾಂಗ್ರೆಸ್ ಪಕ್ಷ ಪುನಃಶ್ಚೇತನವಾಗಬೇಕೆಂದರೆ ಮೊದಲು ಅದನ್ನು ಉತ್ತರ ಪ್ರದೇಶದಿಂದಲೇ ಪ್ರಾರಂಭಿಸಬೇಕು. ಹೀಗಾಗಿಯೇ ಕಾಂಗ್ರೆಸ್ ಪಕ್ಷದ ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಪ್ರಿಯಾಂಕಾ ಗಾಂಧಿ ಅವರನ್ನು ನೇಮಿಸಲಾಗಿದೆ. ಆದರೆ, ಈಗ ನಾಲ್ಕು ತಿಂಗಳ ಬಳಿಕ ಪ್ರಿಯಾಂಕಾ ಗಾಂಧಿ ಉತ್ತರ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಪ್ರಿಯಾಂಕಾ ಗಾಂಧಿಗೆ ಉತ್ತರ ಪ್ರದೇಶದಲ್ಲಿ ಇರುವ ಸವಾಲುಗಳೇನು? ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪುನಃಶ್ಚೇತನ ಸಾಧ್ಯವೇ? ಈ ಬಗೆಗಿನ ಸ್ಪೆಷಲ್ ರಿಪೋರ್ಟ್ ಇಲ್ಲಿದೆ.
ಉತ್ತರ ಪ್ರದೇಶ ಗೆದ್ದರೇ, ದೇಶ ಗೆದ್ದಂತೆ
ದೆಹಲಿಯ ಪ್ರಧಾನಿ ಗದ್ದುಗೆ ಹಿಡಿಯಲು ಉತ್ತರ ಪ್ರದೇಶ ರಾಜಮಾರ್ಗ. ಉತ್ತರ ಪ್ರದೇಶ ಗೆದ್ದರೇ, ದೆಹಲಿ ಗೆದ್ದಂತೆ. ಉತ್ತರ ಪ್ರದೇಶ ಗೆದ್ದರೇ, ದೇಶ ಗೆದ್ದಂತೆ ಎಂಬ ಮಾತುಗಳು ದೇಶದ ರಾಜಕೀಯ ವಲಯದಲ್ಲಿ ಜನಜನಿತವಾಗಿವೆ. ಇದು ನಿಜ ಕೂಡ ಹೌದು. ಉತ್ತರ ಪ್ರದೇಶದಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಗೆದ್ದ ಪಕ್ಷ ದೆಹಲಿಯ ಗದ್ದುಗೆ ಹಿಡಿಯುವುದು ಕಷ್ಟವೇನಲ್ಲ. ಇತಿಹಾಸದಲ್ಲೂ ಇದಕ್ಕೆ ನಿದರ್ಶನಗಳಿವೆ. ತೀರಾ ಇತ್ತೀಚಿನ 2014 ಮತ್ತು 2019ರ ಲೋಕಸಭಾ ಚುನಾವಣೆಯ ಫಲಿತಾಂಶವನ್ನೇ ನೋಡಿದರೂ ಇದು ನಿಜವೆಂಬುದು ಸಾಬೀತಾಗುತ್ತೆ.
2014ರಲ್ಲಿ ಬಿಜೆಪಿ ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ 71 ರಲ್ಲಿ ಗೆದ್ದಿತ್ತು. 2019ರಲ್ಲೂ ಬಿಜೆಪಿ 62 ಕ್ಷೇತ್ರಗಳಲ್ಲಿ ಗೆದ್ದಿದೆ. ದೇಶದಲ್ಲಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಹೊಂದಿರುವ ರಾಜ್ಯವೇ ಉತ್ತರ ಪ್ರದೇಶ. ಹೀಗಾಗಿಯೇ 2013ರಲ್ಲೇ ಗುಜರಾತ್ ಸಿಎಂ ಆಗಿದ್ದ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಯಾವುದಾದರೊಂದು ಲೋಕಸಭಾ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕಿಳಿದರೇ, ಬಿಜೆಪಿ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಬಹುದು ಎಂದು ಲೆಕ್ಕಾಚಾರ ಹಾಕಿಯೇ ಮೋದಿ ಅವರನ್ನ ದೇಶದ ಆಧ್ಯಾತ್ಮಿಕ ರಾಜಧಾನಿ ವಾರಣಾಸಿಯಿಂದ ಕಣಕ್ಕಿಳಿಸಲಾಗಿತ್ತು. ಅದು ಬಿಜೆಪಿಗೆ ಒಳ್ಳೆಯ ಫಲವನ್ನೇ ಈ ಹಿಂದಿನ ಎರಡು ಲೋಕಸಭಾ ಚುನಾವಣೆಗಳಲ್ಲಿ ನೀಡಿದೆ.
ಆದರೆ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ದಿನೇ ದಿನೇ ದುರ್ಬಲವಾಗುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸುವ ಹೊಣೆಗಾರಿಕೆಯನ್ನು ಕಾಂಗ್ರೆಸ್ ಪಕ್ಷವು ಪ್ರಿಯಾಂಕಾಗಾಂಧಿಗೆ ನೀಡಿದೆ. 2019ರ ಲೋಕಸಭಾ ಚುನಾವಣೆಗೂ ಮುನ್ನವೇ ಪ್ರಿಯಾಂಕಾಗಾಂಧಿ ಅವರನ್ನು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ, ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ.
2017ರ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬರೀ 7 ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಮಾತ್ರ ಶಕ್ತವಾಯಿತು. 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಯಬರೇಲಿ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿತು. ಕಾಂಗ್ರೆಸ್ ಭದ್ರಕೋಟೆ ಅಮೇಥಿಯಲ್ಲೂ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಸೋಲು ಅನುಭವಿಸಿದ್ದರು. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಶೇ.6.31 ರಷ್ಟು ಮತಗಳು ಮಾತ್ರ ಉತ್ತರ ಪ್ರದೇಶದಲ್ಲಿ ಬಂದಿವೆ. ಸುದೀರ್ಘ ಕಾಲ ಉತ್ತರ ಪ್ರದೇಶ ರಾಜ್ಯವನ್ನಾಳಿದ ಕಾಂಗ್ರೆಸ್ ಪಕ್ಷದ ವೋಟ್ ಬ್ಯಾಂಕ್ ಈಗ ಶೇ.7ಕ್ಕಿಂತ ಕಡಿಮೆಗೆ ಕುಸಿದಿದೆ.
ನಾಳೆ ಉತ್ತರ ಪ್ರದೇಶಕ್ಕೆ ಪ್ರಿಯಾಂಕಾ ಗಾಂಧಿ ಭೇಟಿ ಉತ್ತರ ಪ್ರದೇಶದಲ್ಲಿ ಇಂಥ ದಯನೀಯ ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಸಂಘಟಿಸಲು ಪ್ರಿಯಾಂಕಾಗಾಂಧಿ ನಾಳೆ ಲಕ್ನೋಗೆ ಭೇಟಿ ನೀಡುತ್ತಿದ್ದಾರೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಇನ್ನೂ ಏಳೆಂಟು ತಿಂಗಳು ಮಾತ್ರ ಬಾಕಿ ಉಳಿದಿವೆ. ಉತ್ತರ ಪ್ರದೇಶ ರಾಜಧಾನಿ ಲಕ್ನೋಗೆ ಪ್ರಿಯಾಂಕಾ ಗಾಂಧಿ ಒಂದೂವರೆ ವರ್ಷದ ಬಳಿಕ ನಾಳೆ ಭೇಟಿ ನೀಡುತ್ತಿದ್ದಾರೆ. ಕಳೆದ ಮಂಗಳವಾರವೇ ಲಕ್ನೋಗೆ ಭೇಟಿ ನೀಡುವುದು ನಿಗದಿಯಾಗಿತ್ತು.
ಆದರೆ, ಅಂದು ಧೀಡೀರನೇ ಚುನಾವಣಾ ರಣತಂತ್ರ ನಿಪುಣ ಪ್ರಶಾಂತ್ ಕಿಶೋರ್ ರನ್ನು ದೆಹಲಿಯಲ್ಲಿ ಭೇಟಿಯಾಗುವ ಕಾರ್ಯಕ್ರಮ ನಿಗದಿಯಾಗಿದ್ದರಿಂದ ಲಕ್ನೋ ಭೇಟಿಯನ್ನು ಮುಂದೂಡಿದ್ದರು. ಇದೇ ರೀತಿ ಇದುವರೆಗೂ 3 ಬಾರಿ ಲಕ್ನೋ ಭೇಟಿಯನ್ನು ಪ್ರಿಯಾಂಕಾ ಗಾಂಧಿ ಬೇರೆ ಬೇರೆ ಕಾರಣಗಳಿಂದ ಮುಂದೂಡಿದ್ದಾರೆ. ಹೀಗಾಗಿ ನಾಳೆಯ ಪ್ರಿಯಾಂಕಾ ಗಾಂಧಿ ಲಕ್ನೋ ಭೇಟಿಯ ಬಗ್ಗೆ ರಾಜಕೀಯ ಪಂಡಿತರಲ್ಲಿ ಹೆಚ್ಚಿನ ನಿರೀಕ್ಷೆಗಳಿಲ್ಲ.
2017ರ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿರನ್ನೇ ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಚುನಾವಣಾ ರಣತಂತ್ರ ನಿಪುಣ ಪ್ರಶಾಂತ್ ಕಿಶೋರ್ ಸಲಹೆ ನೀಡಿದ್ದರು. ಆದರೇ ಅದನ್ನು ಸೋನಿಯಾ, ಪ್ರಿಯಾಂಕಾ, ರಾಹುಲ್ ಕಾರ್ಯರೂಪಕ್ಕೆ ತರಲಿಲ್ಲ. ಉತ್ತರ ಪ್ರದೇಶದಲ್ಲಿ ಶೇ.10 ರಷ್ಟು ಜನಸಂಖ್ಯೆ ಇರುವ ಬ್ರಾಹ್ಮಣ ಸಮುದಾಯ ಕಾಂಗ್ರೆಸ್ ಪಕ್ಷದಿಂದ ದೂರ ಸರಿದಿದೆ.
ಪ್ರಿಯಾಂಕಾ ಗಾಂಧಿರನ್ನೇ ಸಿಎಂ ಅಭ್ಯರ್ಥಿಯನ್ನಾಗಿ ಅಖಾಡಕ್ಕಿಳಿಸಿದರೇ, ಬ್ರಾಹ್ಮಣ ಸಮುದಾಯವನ್ನು ಮತ್ತೆ ಕಾಂಗ್ರೆಸ್ ಕಡೆಗೆ ವಾಲುವಂತೆ ಮಾಡಬಹುದು ಎಂದು ಪ್ರಶಾಂತ್ ಕಿಶೋರ್ ಲೆಕ್ಕಾಚಾರ ಹಾಕಿದ್ದರು. ಬಳಿಕ ಬ್ರಾಹ್ಮಣ ಸಮುದಾಯದ ಶೀಲಾ ದೀಕ್ಷಿತ್ ರನ್ನು ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿತ್ತು. ಆದರೆ, ಬಳಿಕ ಕಾಂಗ್ರೆಸ್-ಎಸ್ಪಿ ಪಕ್ಷದ ಮೈತ್ರಿಯಾಗಿದ್ದರಿಂದ ಶೀಲಾ ದೀಕ್ಷಿತ್ ಕಣದಿಂದ ಹಿಂದೆ ಸರಿದರು.
ಬಳಿಕ 2019ರ ಲೋಕಸಭಾ ಚುನಾವಣೆಗೂ ಮುನ್ನ ಪ್ರಿಯಾಂಕಾ ಗಾಂಧಿರನ್ನು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಘೋಷಿಸಲಾಯಿತು. ಜೊತೆಗೆ ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ಹೊಣೆಗಾರಿಕೆ ನೀಡಲಾಯಿತು. ಆಗ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಲಕ್ನೋದಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದರು. ಆದರೆ, ಅಂದೇ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಸೈನಿಕರ ಮೇಲೆ ಪಾಕ್ ಬೆಂಬಲಿತ ಉಗ್ರರು ದಾಳಿ ನಡೆಸಿದ್ದರು. ಈ ದುರಂತ ಬಾಲಕೋಟ್ ಏರ್ ಸ್ಟ್ರೈಕ್ ಗೆ ಕಾರಣವಾಯಿತು. ಇದು 2019ರ ಲೋಕಸಭಾ ಚುನಾವಣೆಯ ದಿಕ್ಕುನ್ನೇ ಬದಲಾಯಿಸಿತು.
ಆದರೆ, 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡೇ ಪ್ರಿಯಾಂಕಾ ಗಾಂಧಿಗೆ ಯುಪಿ ಜವಾಬ್ದಾರಿ ನೀಡಲಾಗಿದೆ. 2019ರ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಸ್ಪರ್ಧಿಸಲಿಲ್ಲ. ಪ್ರಿಯಾಂಕಾ ಲಕ್ನೋದಲ್ಲಿ ವಾಸ್ತವ್ಯ ಹೂಡುತ್ತಾರೆ ಎಂಬ ನಿರೀಕ್ಷೆಯೂ ಕಾಂಗ್ರೆಸ್ ನಾಯಕರಲ್ಲಿತ್ತು. ಲಕ್ನೋದಲ್ಲಿ ಪ್ರಿಯಾಂಕಾ ಗಾಂಧಿ ವಾಸ್ತವ್ಯಕ್ಕಾಗಿ ಮನೆಯೊಂದನ್ನು ನಾಯಕರು ವ್ಯವಸ್ಥೆ ಮಾಡಿದ್ದರು.
ಆದರೆ, ಲಕ್ನೋದಲ್ಲಿ ಪ್ರಿಯಾಂಕಾ ವಾಸ್ತವ್ಯ ಹೂಡಲಿಲ್ಲ. ಉತ್ತರ ಪ್ರದೇಶದ ಕಾಂಗ್ರೆಸ್ ಪಕ್ಷಕ್ಕೆ ಪ್ರಿಯಾಂಕಾ ಗಾಂಧಿ ಪ್ಯಾರಾಚೂಟ್ ನಾಯಕಿಯಂತಾಗಿದ್ದಾರೆ. ಎರಡು ವರ್ಷದ ಹಿಂದೆ ಸೋನಭದ್ರ ಜಿಲ್ಲೆಯಲ್ಲಿ ಹಿಂಸಾಚಾರ ನಡೆದು ಬುಡಕಟ್ಟು ಸಮುದಾಯದ ಜನರ ಹತ್ಯೆಯಾದಾಗ ಭೇಟಿ ನೀಡಿದ್ದರು. ಬಳಿಕ 2019ರ ಡಿಸೆಂಬರ್ ನಲ್ಲಿ ಲಕ್ನೋದಲ್ಲಿ ಸಿಎಎ ವಿರೋಧಿ ಹೋರಾಟಗಾರರು ಬಂಧನಕ್ಕೊಳಗಾದ ಸಂದರ್ಭದಲ್ಲಿ ಅವರು ಕುಟುಂಬದವರನ್ನು ಹೋಗಿ ಭೇಟಿಯಾಗಿದ್ದರು. ಕಳೆದ ವರ್ಷದ ಆಕ್ಟೋಬರ್ ನಲ್ಲಿ ಹತ್ರಾಸ್ ಜಿಲ್ಲೆಯಲ್ಲಿ ಯುವತಿಯ ರೇಪ್ ಮತ್ತು ಹತ್ಯೆ ನಡೆದಾಗ ಹತ್ರಾಸ್ ಗೆ ಭೇಟಿ ನೀಡಿದ್ದರು.
ಈ ವರ್ಷದ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಿಸಾನ್ ಮಹಾ ಪಂಚಾಯತ್ ನಡೆದಾಗ ಅಲ್ಲಿಗೆ ಭೇಟಿ ನೀಡಿದ್ದರು. ಫೆಬ್ರವರಿ 11 ರಂದು ಪ್ರಯಾಗರಾಜ್ ಗೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದರು. ಬಳಿಕ ಈಗ ನಾಳೆ ಲಕ್ನೋಗೆ ಭೇಟಿ ನೀಡುತ್ತಿದ್ದಾರೆ. ಇತ್ತೀಚೆಗೆ ಜಿಲ್ಲಾ ಪಂಚಾಯತ್ ಮತ್ತು ಬ್ಲಾಕ್ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತೀರಾ ಕಳಪೆ ಸಾಧನೆ ತೋರಿದೆ.
ಇಂಥ ಹೊತ್ತಿನಲ್ಲಿ ಪ್ರಿಯಾಂಕಾ ಗಾಂಧಿ ಲಕ್ನೋಗೆ ಭೇಟಿ ನೀಡುತ್ತಿದ್ದಾರೆ. ಪ್ರಿಯಾಂಕಾ ಗಾಂಧಿರನ್ನು ಈ ಬಾರಿಯಾದರೂ 2022ರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ಎಂದು ಘೋಷಿಸಲಾಗುತ್ತಾ ಎನ್ನುವುದು ಸ್ಪಷ್ಟವಾಗಿಲ್ಲ. ಜೊತೆಗೆ ಪ್ರಿಯಾಂಕಾ ಗಾಂಧಿ ನೇರವಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರೇ, ಕಾರ್ಯಕರ್ತರಿಗೆ ಉತ್ಸಾಹ, ಹುಮ್ಮಸ್ಸು ಬರುತ್ತೆ. ಅದಕ್ಕೂ ಪ್ರಿಯಾಂಕಾ ಸಿದ್ದವಾದಂತೆ ಕಾಣುತ್ತಿಲ್ಲ.
ಯುಪಿಯಲ್ಲಿ ಜಾತಿ ಲೆಕ್ಕಾಚಾರ ಹೇಗಿದೆ?
ಉತ್ತರ ಪ್ರದೇಶದಲ್ಲಿ ಸದ್ಯ ಯಾದವ್ ಸಮುದಾಯ ಹಾಗೂ ಮುಸ್ಲಿಂ ಸಮುದಾಯ ಎಸ್ಪಿ ಪಕ್ಷದ ಬೆಂಬಲಕ್ಕಿದೆ. ದಲಿತರು ಬಿಎಸ್ಪಿ ಪಕ್ಷದ ಬೆನ್ನಿಗೆ ನಿಂತಿದ್ದಾರೆ. ಬ್ರಾಹ್ಮಣರು, ಮೇಲ್ವರ್ಗದ ಸಮುದಾಯಗಳು ಬಿಜೆಪಿ ಪಕ್ಷದ ಬೆಂಬಲಕ್ಕಿವೆ. ಹಿಂದುಳಿದ ವರ್ಗದ ಮತಗಳು ಎಲ್ಲ ಪಕ್ಷಗಳಲ್ಲೂ ಚದುರಿ ಹೋಗಿವೆ. ಇಂಥ ಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕನಿಷ್ಠ ಎರಡು ಪ್ರಬಲ ಸಮುದಾಯಗಳು ಬೆಂಬಲ ನೀಡಿದರೇ, ಪಕ್ಷವನ್ನು ಸದೃಢವಾಗಿ ಸಂಘಟಿಸಲು ಸಾಧ್ಯ.
ಉತ್ತರ ಪ್ರದೇಶದಲ್ಲಿ ಶೇ.10 ರಷ್ಟು ಬ್ರಾಹ್ಮಣ ಸಮುದಾಯದ ಮತದಾರರಿದ್ದಾರೆ. ಮುಸ್ಲಿಂ ಸಮುದಾಯ ಶೇ.19 ರಷ್ಟಿದೆ. ಹಿಂದುಳಿದ ಠಾಕೂರ್ ಸಮುದಾಯ ಶೇ.10 ರಷ್ಟು ಜನಸಂಖ್ಯೆ ಹೊಂದಿದೆ. ಸಿಎಂ ಯೋಗಿ ಆದಿತ್ಯನಾಥ್ ಠಾಕೂರ್ ಸಮುದಾಯಕ್ಕೆ ಸೇರಿದವರು. ಯುಪಿಯಲ್ಲಿ ಹಿಂದುಳಿದ ವರ್ಗದ ಶೇ.50 ರಷ್ಟು ಮತಗಳಿವೆ. 1988ಕ್ಕೂ ಮೊದಲು ಯುಪಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬ್ರಾಹ್ಮಣ, ಮುಸ್ಲಿಂ, ಹಿಂದುಳಿದ ಸಮುದಾಯದ ಮತಗಳು ಅನಾಯಾಸವಾಗಿ ಸಿಗುತ್ತಿದ್ದವು.
ಆದರೆ, 90 ರ ದಶಕದ ಬಳಿಕ ಎಸ್ಪಿ, ಬಿಎಸ್ಪಿ ಪಕ್ಷಗಳು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆ, ಕಾಂಗ್ರೆಸ್ ವೋಟ್ ಬ್ಯಾಂಕ್, ಎಸ್ಪಿ, ಬಿಎಸ್ಪಿಗೆ ಶಿಫ್ಟ್ ಆಗಿವೆ. ಇದರಿಂದ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಈಗ ದುರ್ಬಲವಾಗಿದೆ. ಪ್ರಮುಖ ಸಮುದಾಯಗಳ ವೋಟ್ ಬ್ಯಾಂಕ್ ಇಲ್ಲದೇ ಕಾಂಗ್ರೆಸ್ ಸೊರಗಿ ಹೋಗಿದೆ. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗೆ ಪ್ರಬಲ ನಾಯಕತ್ವವೂ ಇಲ್ಲ. ಈ ನಾಯಕತ್ವ ಕೊರತೆ ತುಂಬಲು ದೆಹಲಿಯಿಂದ ಪ್ರಿಯಾಂಕಾ ಗಾಂಧಿರನ್ನು ಕಳಿಸಲಾಗಿದೆ. ಆದರೆ, ಈ ತಂತ್ರವೂ ಕೂಡ ಹೆಚ್ಚಿನ ಫಲ ನೀಡಿದಂತೆ ಕಾಣುತ್ತಿಲ್ಲ.
(ಲೇಖನ: ಎಸ್. ಚಂದ್ರಮೋಹನ್, ಹಿರಿಯ ವರದಿಗಾರ, ಟಿವಿ9)
Published On - 3:14 pm, Thu, 15 July 21