Chandrayaan-3 Mission Launch: ಇಂದು ಚಂದ್ರಯಾನ-3 ಉಡಾವಣೆ, ಚಂದ್ರನ ಅಂಗಳದಲ್ಲಿ ಭಾರತ ಹೆಜ್ಜೆಗೆ ಕ್ಷಣಗಣನೆ
ಇಂದು ಚಂದ್ರಯಾನ 3 ಶ್ರೀಹರಿಕೋದಿಂದ ರಾಕೆಟ್ ಉಡಾವಣೆಗೊಳ್ಳಲಿದ್ದು, ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ.
ಚಂದ್ರಯಾ-3 ಉಡಾವಣೆಗೆ (Chandrayaan-3 Mission Launch)ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ. ಇಸ್ರೋದ ಚಂದ್ರಯಾನ-3 ನೌಕೆ ಇಂದು(ಜುಲೈ 14) ನಭಕ್ಕೆ ಚಿಮ್ಮಲಿದೆ. ಚಂದ್ರನ ಕಕ್ಷೆಯನ್ನ ಲ್ಯಾಂಡರ್ ಸೇರಲಿದೆ. ಲ್ಯಾಂಡರ್ ರೋವರ್‌ಗಳನ್ನು ಹೊತ್ತುಕೊಂಡು ಎಲ್‌ವಿಎಂ-3 ರಾಕೆಟ್ ಶ್ರೀಹರಿಕೋಟಾದ ಉಡಾವಣಾ ಪ್ಯಾಡ್‌ನ ಮೇಲೆ ನಿಂತಿದೆ. ಇಂದು ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟಾದಿಂದ ರಾಕೆಟ್ ಉಡಾವಣೆ ಆಗಲಿದೆ. ಈ ಐತಿಹಾಸಿಕ ಕ್ಷಣವನ್ನ ಕಣ್ತುಂಬಿಕೊಳ್ಳಲು ಭಾರತೀಯರು ಕಾತರದಿಂದ ಕಾಯುತ್ತಿದ್ದಾರೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-111 ಮೂಲಕ ಉಡಾವಣೆ ಮಾಡಲು ತಯಾರಿ ಪೂರ್ಣಗೊಂಡಿದೆ.
ಅಂದಹಾಗೇ 2008ರಲ್ಲಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ 1 ನಭಕ್ಕೆ ಚಿಮ್ಮಿತ್ತು. ನೌಕೆಯು 2008ರ ನ.8ರಂದು ಚಂದ್ರನನ್ನ ಚುಂಬಿಸಿತ್ತು. ಚಂದ್ರನಲ್ಲಿ ನೀರು ಪತ್ತೆ ಹಚ್ಚಿದ ಖ್ಯಾತಿಯೂ ಆ ನೌಕೆಯ ಪಾಲಾಗಿತ್ತು. ಅದೇ ಉತ್ಸಾಹದಲ್ಲಿದ್ದ ಭಾರತೀಯ ವಿಜ್ಞಾನಿಗಳು ಮತ್ತೊಂದು ಚಮತ್ಕಾರಕ್ಕೆ ಕೈ ಹಾಕಿದ್ದರು. 2019ರಲ್ಲಿ ಚಂದ್ರಯಾನ 2 ಹೆಸರಿನಲ್ಲಿ ಮತ್ತೊಂದು ಪ್ರಯೋಗ ಮಾಡಲಾಯ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಬೇಕಿದ್ದ ‘ಚಂದ್ರಯಾನ-2’ರ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಸಾಧ್ಯವಾಗದೇ ಅಪ್ಪಳಿಸಿ, ವೈಫಲ್ಯ ಕಂಡಿತ್ತು.
ಚಂದ್ರಯಾನ-2 ವೈಫಲ್ಯ ಕಂಡ್ರೂ ಧೃತಿಗೆಡದ ಭಾರತೀಯ ವಿಜ್ಞಾನಿಗಳು ಮರಳಿ ಯತ್ನ ಮಾಡುತ್ತಿದ್ದಾರೆ. ಚಂದ್ರಯಾನ 2 ನಿಂದಾದ ಅಪೂರ್ಣ ಕೆಲಸವನ್ನ ಪೂರ್ಣಗೊಳಿಸಲು, ಈಗ 4 ವರ್ಷಗಳ ಬಳಿಕ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನವು ತನ್ನ ಮೂರನೇ ದಂಡಯಾತ್ರೆಯಲ್ಲಿ ಚಂದ್ರನ ಕಡೆಗೆ ಹಾರಲು ಸಿದ್ಧವಾಗಿದೆ. ಈ ಮಧ್ಯೆ ಚಂದ್ರಯಾನ-3 ಉಪಗ್ರಹ ನೌಕೆಯ ಮಾದರಿ ಜೊತೆ ಇಸ್ರೋ ವಿಜ್ಞಾನಿಗಳು ಹಾಗೂ ಸಿಬ್ಬಂದಿಗಳ ತಂಡ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿವೆ. ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾದ್ರೆ ಅಮೆರಿಕ, ರಷ್ಯಾ, ಚೀನಾ ನಂತರ ಭಾರತ 4ನೇ ರಾಷ್ಟ್ರ ಆಗಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:27 am, Fri, 14 July 23