ಅರುಣಾಚಲ ಪ್ರದೇಶದಲ್ಲಿ ಕ್ರಿಶ್ಚಿಯನ್ನರ ಆಕ್ರೋಶ: ಪರಿಸ್ಥಿತಿ ತಿಳಿಗೊಳಿಸುವಂತೆ ಕೇಂದ್ರಕ್ಕೆ ಎಬಿವಿಕೆಎ ಪತ್ರ
ಅರುಣಾಚಲ ಪ್ರದೇಶದಲ್ಲಿ ಬಲವಂತದ ಧಾರ್ಮಿಕ ಮತಾಂತರ ತಡೆ ಕಾನೂನಿನ ಜಾರಿಗೆ ಗುವಾಹಟಿ ಹೈಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ ಕ್ರೈಸ್ತ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಿ ಪರಿಸ್ಥಿತಿಯನ್ನು ನಿಯಂತ್ರಿಸುವಂತೆ ಅಖಿಲ ಭಾರತ ವನವಾಸಿ ಕಲ್ಯಾಣ್ ಆಶ್ರಮ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದೆ. 1978ರ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ ಅನುಷ್ಠಾನದ ಅಗತ್ಯತೆ ಬಗ್ಗೆ ತಿಳಿಹೇಳಲಾಗಿದೆ.

ಅರುಣಾಚಲ ಪ್ರದೇಶ, ಮಾರ್ಚ್ 10: ಕೆಲವು ತಿಂಗಳ ಹಿಂದೆ, ಬಲವಂತದ ಧಾರ್ಮಿಕ ಮತಾಂತರವನ್ನು ತಡೆಯಲು ಕಾನೂನನ್ನು ಜಾರಿಗೆ ತರುವಂತೆ ಗುವಾಹಟಿ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿಲಾಗಿತ್ತು. ಈ ಹಿನ್ನೆಲೆ ಅರುಣಾಚಲ ಪ್ರದೇಶ (arunachal pradesh) ಸರ್ಕಾರವು ಕಾನೂನನ್ನು ಜಾರಿಗೆ ಮುಂದಾದಾಗ ರಾಜ್ಯದ ಕ್ರೈಸ್ತರು (Christians Protest) ಹೈಕೋರ್ಟ್ ಆದೇಶದ ವಿರುದ್ಧ ಪ್ರತಿಭಟಿಸುತ್ತಿದ್ದಾರೆ. ಹಾಗಾಗಿ ಪರಿಸ್ಥಿತಿ ಹದಗೆಡದಂತೆ ತಡೆಯುವಂತೆ ಕೋರಿ ಅಖಿಲ ಭಾರತ ವನವಾಸಿ ಕಲ್ಯಾಣ್ ಆಶ್ರಮ (ಎಬಿವಿಕೆಎ) ರಾಷ್ಟ್ರೀಯ ಅಧ್ಯಕ್ಷ ಸತೇಂದ್ರ ಸಿಂಗ್ ಅವರು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.
ಅರುಣಾಚಲ ಪ್ರದೇಶ ಹೈಕೋರ್ಟ್ ಆದೇಶದ ವಿರುದ್ಧ ಕೆಲವು ದಿನಗಳಿಂದ ಕ್ರಿಶ್ಚಿಯನ್ನರು ಪ್ರತಿಭಟನೆ ಮಾಡುತ್ತಿರುವುದು ವರದಿಯಾಗಿವೆ. ಇದು ಬಹಳ ದುರದೃಷ್ಟಕರವಾಗಿದೆ. 1978ರಲ್ಲಿ ಅರುಣಾಚಲ ಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯನ್ನು ಅಂಗೀಕರಿಸಲಾಗಿದೆ. ಆ ಸಮಯದಲ್ಲಿ ಪಿ.ಕೆ ತುಂಗೋನ್ ಮುಖ್ಯಮಂತ್ರಿಯಾಗಿದ್ದರು.
ಇದನ್ನೂ ಓದಿ: ಮದ್ಯ ಹಗರಣ: ಛತ್ತೀಸ್ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ
ಸ್ಥಳೀಯ ಬುಡಕಟ್ಟು ಜನಾಂಗದವರ ಧರ್ಮ ಮತ್ತು ಸಂಸ್ಕೃತಿಯನ್ನು ರಕ್ಷಿಸಲು, ಪ್ರಚೋದನೆ, ದಬ್ಬಾಳಿಕೆ ಅಥವಾ ವಂಚನೆಯ ಮೂಲಕ ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರಗೊಳ್ಳುವುದನ್ನು ತಡೆಯಲು ಮತ್ತು ಅಂತಹ ಮತಾಂತರ ಪ್ರಕರಣಗಳನ್ನು ಸರ್ಕಾರಿ ದಾಖಲೆಗಳಲ್ಲಿ ದಾಖಲಿಸಲು ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈ ಹಿಂದೆ ಮಧ್ಯಪ್ರದೇಶ ಮತ್ತು ಒಡಿಶಾದಲ್ಲಿ ಇದೇ ರೀತಿಯ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಸರ್ವೋಚ್ಚ ನ್ಯಾಯಾಲಯವು ಈ ಕಾನೂನುಗಳನ್ನು ಸಾಂವಿಧಾನಿಕವಾಗಿ ಮಾನ್ಯವೆಂದು ಎತ್ತಿಹಿಡಿದಿದೆ. ಆದರೆ ದುರದೃಷ್ಟವಶಾತ್ ಅರುಣಾಚಲ ಪ್ರದೇಶದಲ್ಲಿ ಇದನ್ನು ಜಾರಿಗೆ ತರಲಾಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
70 ರ ದಶಕದಲ್ಲಿ ಅರುಣಾಚಲ ಪ್ರದೇಶದ ಜನಸಂಖ್ಯೆಯ ಶೇಕಡಾ 1 ರಷ್ಟೂ ಇಲ್ಲದ ಕ್ರಿಶ್ಚಿಯನ್ನರು, 2011 ರ ಜನಗಣತಿಯ ಪ್ರಕಾರ ಶೇಕಡಾ 31 ಕ್ಕೆ ಏರಿಕೆ ಆಗಿದೆ. ಆಗಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯದಿಂದಾಗಿ ಸರಿಯಾದ ಕಾನೂನನ್ನು ಜಾರಿಗೆ ತರಲಾಗಿಲ್ಲ ಎಂದು ಹೇಳಲು ಈ ಅಂಕಿ ಅಂಶಗಳು ಸಾಕು. ಆದರೆ ಸೆಪ್ಟೆಂಬರ್ 30,2024 ರಂದು, ಗುವಾಹಟಿ ಹೈಕೋರ್ಟ್ನ ಇಟಾನಗರ ಶಾಶ್ವತ ಪೀಠವು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಮೇಲೆ ಹಲವಾರು ನಿರ್ದೇಶನಗಳನ್ನು ನೀಡಿತು.
ಹೈಕೋರ್ಟ್ ಆದೇಶದ 6 ತಿಂಗಳೊಳಗೆ ಈ ಕಾಯ್ದೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರವು ತನ್ನ ಕಾನೂನುಬದ್ಧ ಬಾಧ್ಯತೆಯನ್ನು ಪೂರೈಸಬೇಕು. ಸ್ಥಳೀಯ ಬುಡಕಟ್ಟು ಸಮುದಾಯವು ಕಳೆದ 25 ವರ್ಷಗಳಿಂದ ನಿಯಮಗಳನ್ನು ರೂಪಿಸಬೇಕೆಂದು ಒತ್ತಾಯಿಸುತ್ತಿದೆ. ಆದಾಗ್ಯೂ, ಅರುಣಾಚಲ ಸರ್ಕಾರವು ಹೈಕೋರ್ಟ್ ಆದೇಶವನ್ನು ಜಾರಿಗೆ ತರಲು ಪ್ರಯತ್ನಿಸುತ್ತಿರುವುದರಿಂದ, ಅರುಣಾಚಲ ಪ್ರದೇಶದ ಕ್ರಿಶ್ಚಿಯನ್ ಸಂಘಟನೆಗಳು ಮತ್ತು ಕ್ರಿಶ್ಚಿಯನ್ನರು ಇದನ್ನು ಬಲವಾಗಿ ವಿರೋಧಿಸುತ್ತಿದ್ದಾರೆ ಎಂದಿದ್ದಾರೆ.
ಇದಕ್ಕೆ ಯಾರು ಹೊಣೆ?
ಸಂವಿಧಾನವನ್ನು ಅನುಷ್ಠಾನಗೊಳಿಸುವ ಹೈಕೋರ್ಟ್ ಆದೇಶ ಮತ್ತು ಅದನ್ನು ಅನುಷ್ಠಾನಗೊಳಿಸುವ ರಾಜ್ಯ ಸರ್ಕಾರದ ಪ್ರಯತ್ನಗಳನ್ನು ವಿರೋಧಿಸುತ್ತಿರುವುದು ಗಂಭೀರ ಕಳವಳಕಾರಿ ವಿಷಯವಾಗಿದೆ. ಕಳೆದ ಐವತ್ತು ವರ್ಷಗಳಲ್ಲಿ ಸಾಂಪ್ರದಾಯಿಕ ಬುಡಕಟ್ಟು ಸಮಾಜದ ಜನಸಂಖ್ಯೆಯ ಅರ್ಧದಷ್ಟು ಜನರು ಧಾರ್ಮಿಕ ಮತಾಂತರಗೊಂಡಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಿದ್ದಾರೆ. 15 ಲಕ್ಷ ಜನಸಂಖ್ಯೆ ಇರುವ ಈ ಪುಟ್ಟ ರಾಜ್ಯದಲ್ಲಿ ಯಾವುದೇ ಅಡೆತಡೆ ಇಲ್ಲದೇ ಮತಾಂತರ ಮಾಡುತ್ತಿರುವವರು ಇದೀಗ ಹೈಕೋರ್ಟ್ ಆದೇಶವನ್ನು ಧಿಕ್ಕರಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾಗ್ಪುರದಲ್ಲಿ ಪತಂಜಲಿ ಆಹಾರ ಮತ್ತು ಹರ್ಬಲ್ ಪಾರ್ಕ್ ಉದ್ಘಾಟನೆ: ಸಿಎಂ ದೇವೇಂದ್ರ ಫಡ್ನವಿಸ್ ಭಾಗಿ
ಅಖಿಲ ಭಾರತ ವನವಾಸಿ ಕಲ್ಯಾಣ ಆಶ್ರಮ ಮತ್ತು ದೇಶದ ಸಮಸ್ತ ಬುಡಕಟ್ಟು ಸಮುದಾಯದ ಪರವಾಗಿ ನಾನು ಅರುಣಾಚಲ ಪ್ರದೇಶದ ರಾಜ್ಯ ಸರ್ಕಾರ ಹೇಳುವುದೇನೆಂದರೆ, ಬಲವಂತದ ಮತಾಂತರದ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕೇಂದ್ರ ಸರ್ಕಾರ ಅದರಲ್ಲೂ ಗೃಹ ಸಚಿವರು ಕೂಡಲೇ ಮಧ್ಯಪ್ರವೇಶಿಸಿ ಪರಿಸ್ಥಿತಿ ಹದಗೆಡದಂತೆ ತಡೆಯಬೇಕು ಎಂದು ವನವಾಸಿ ಕಲ್ಯಾಣ ಆಶ್ರಮ ಪತ್ರದ ಮೂಲಕ ವಿನಂತಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:07 pm, Mon, 10 March 25