ಚೆನ್ನೈ: ಹಿಂದಿ ಹೇರಿಕೆಯ ಕುರಿತು ನಡೆಯುತ್ತಿರುವ ವಿವಾದದ ನಡುವೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಇಂದು ತಮಿಳುನಾಡು ರಾಜ್ಯವು “ಮತ್ತೊಂದು ಭಾಷಾ ಯುದ್ಧ”ಕ್ಕೆ ಸಿದ್ಧವಾಗಿದೆ ಎಂದು ಹೇಳಿದ್ದಾರೆ. ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಿಎಂ ಸ್ಟಾಲಿನ್, ಗಡಿ ನಿರ್ಣಯ ಪ್ರಕ್ರಿಯೆಯ ನಂತರ ಲೋಕಸಭೆಯಲ್ಲಿ ತಮಿಳುನಾಡಿನ ಪ್ರಾತಿನಿಧ್ಯ ಕಡಿಮೆಯಾಗುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಈ ವಿಷಯವನ್ನು ಚರ್ಚಿಸಲು ಮಾರ್ಚ್ 5ರಂದು ಸರ್ವಪಕ್ಷ ಸಭೆ ನಡೆಸಲಾಗುವುದು ಎಂದು ತಿಳಿಸಿದರು. ಇದಕ್ಕೆ ಭಾರತ ಚುನಾವಣಾ ಆಯೋಗದಲ್ಲಿ ನೋಂದಾಯಿಸಲಾದ ರಾಜಕೀಯ ಪಕ್ಷಗಳನ್ನು ಅವರು ಆಹ್ವಾನಿಸಿದರು.
ಜನಸಂಖ್ಯಾ ನಿಯಂತ್ರಣಕ್ಕೆ ಕಾರಣವಾದ ತಮಿಳುನಾಡು ಕುಟುಂಬ ಯೋಜನೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದರಿಂದ ರಾಜ್ಯವು 8 ಲೋಕಸಭಾ ಸ್ಥಾನಗಳನ್ನು ಕಳೆದುಕೊಳ್ಳಬಹುದು ಎಂದು ಸ್ಟಾಲಿನ್ ಆತ್ಮಾವಲೋಕನ ಮಾಡಿಕೊಂಡರು. ಜನಸಂಖ್ಯೆಯನ್ನು ಆಧರಿಸಿದ ಕ್ಷೇತ್ರ ವಿಂಗಡಣೆ ಪ್ರಕ್ರಿಯೆಯಿಂದ ತಮಿಳುನಾಡಿನ ಸ್ಥಾನಗಳ ಸಂಖ್ಯೆ 39ರಿಂದ ಕೇವಲ 31ಕ್ಕೆ ಇಳಿಯಬಹುದು ಎಂದು ಅವರು ಹೇಳಿದರು. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಹಿಂದಿ ಹೇರಿಕೆಯ ಬಗ್ಗೆ ಸಾಮೂಹಿಕವಾಗಿ ಮಾತನಾಡುವಂತೆ ತಮಿಳುನಾಡಿನ ಬೇರೆ ಪಕ್ಷಗಳನ್ನು ಅವರು ಒತ್ತಾಯಿಸಿದರು. ಸಂಸತ್ತಿನಲ್ಲಿ ತಮಿಳುನಾಡಿನ ಪ್ರಾತಿನಿಧ್ಯವನ್ನು ಕಡಿಮೆ ಮಾಡುವುದರಿಂದ ರಾಜ್ಯದ ಧ್ವನಿಯನ್ನು ದುರ್ಬಲಗೊಳ್ಳುತ್ತದೆ. ವಿಶೇಷವಾಗಿ ಕೇಂದ್ರ ನಿಧಿ, ರಾಷ್ಟ್ರೀಯ ಶಿಕ್ಷಣ ನೀತಿ (NEP) ಮತ್ತು ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ನಂತಹ ಪ್ರಮುಖ ವಿಷಯಗಳನ್ನು ನಿರ್ವಹಿಸುವಾಗ ಸಮಸ್ಯೆ ಎದುರಾಗುತ್ತದೆ ಎಂದು ಅವರು ವಾದಿಸಿದರು.
ಇದನ್ನೂ ಓದಿ: ಕೇಂದ್ರ ಸರ್ಕಾರ 10,000 ಕೋಟಿ ರೂ. ನೀಡಿದರೂ ಶಿಕ್ಷಣ ನೀತಿಯನ್ನು ಸ್ವೀಕರಿಸುವುದಿಲ್ಲ; ಸಿಎಂ ಎಂ.ಕೆ. ಸ್ಟಾಲಿನ್
ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಡುವೆ ಉದ್ವಿಗ್ನತೆಯನ್ನು ಉಂಟುಮಾಡಿರುವ ವಿವಾದಾತ್ಮಕ ತ್ರಿಭಾಷಾ ನೀತಿಯ ಕುರಿತು ಚರ್ಚೆಗಳ ಸಾಧ್ಯತೆಯ ಬಗ್ಗೆ ಕೇಳಿದಾಗ ಸ್ಟಾಲಿನ್ ಪ್ರತಿಕ್ರಿಯಿಸಿದ್ದು, ಅಂತಹ ವಿಷಯಗಳ ಬಗ್ಗೆ ಕಳವಳ ವ್ಯಕ್ತಪಡಿಸಲು ರಾಜ್ಯಕ್ಕೆ ಸಂಸತ್ತಿನಲ್ಲಿ ಸಾಕಷ್ಟು ಪ್ರಾತಿನಿಧ್ಯದ ಅಗತ್ಯವಿದೆ ಎಂದು ಹೇಳಿದರು.
Delimitation isn’t just about Tamil Nadu—it affects all of South India. A democratic process should not penalise states that have successfully managed population growth, led in development, and made significant contributions to national progress. We need a fair, transparent, and… pic.twitter.com/h1QW6LQK0b
— M.K.Stalin (@mkstalin) February 25, 2025
ಆಡಳಿತ ಪಕ್ಷ ಡಿಎಂಕೆ ತ್ರಿಭಾಷಾ ನೀತಿಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿದೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರವು ತಮಿಳುನಾಡಿನ ಮೇಲೆ ಹಿಂದಿ ಹೇರಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದೆ, ಆದರೆ ಕೇಂದ್ರವು ಈ ಹೇಳಿಕೆಯನ್ನು ನಿರಾಕರಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ