ದಾಂಧಲೆ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ: ಕೇರಳದ ಸಚಿವರ ವಿರುದ್ಧ ಗುಡುಗಿದ ಸುಪ್ರೀಂಕೋರ್ಟ್
Supreme Court: ಶಾಸಕರ ಸವಲತ್ತು ಮತ್ತು ವಿನಾಯಿತಿ ಅಪರಾಧ ಕಾನೂನಿನಿಂದ ವಿನಾಯಿತಿ ಪಡೆಯಲು ಒಂದು ದಾರಿ ಅಲ್ಲ ಎಂದು ಹೇಳಿದ ನ್ಯಾಯಾಲಯ ಅಂತಹ ಸವಲತ್ತು ಪಡೆಯುವ ಶಾಸಕರು ಅವರನ್ನು ಆಯ್ಕೆ ಮಾಡಿದ ಭಾರತೀಯ ಮತದಾರರ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ ಎಂದು ಒತ್ತಿಹೇಳಿದೆ.
ದೆಹಲಿ: ಕೇರಳದ ಆಡಳಿತಾರೂಢ ಸಿಪಿಎಂ ಸದಸ್ಯರು ಶಿಕ್ಷಣ ಮತ್ತು ಕಾರ್ಮಿಕ ಸಚಿವರಾದ ವಿ.ಶಿವಂಕುಟ್ಟಿ ಮತ್ತು ಮಾಜಿ ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಸೇರಿದಂತೆ 2015 ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಪ್ರತಿಭಟನೆ ವೇಳೆ ಪೀಠೋಪಕರಣಗಳಿಗೆ ಹಾನಿ ಮಾಡಿದ ಪ್ರಕರಣದಲ್ಲಿ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ಬುಧವಾರ ತಿಳಿಸಿದೆ.
ಶಾಸಕರ ಸವಲತ್ತು ಮತ್ತು ವಿನಾಯಿತಿ ಅಪರಾಧ ಕಾನೂನಿನಿಂದ ವಿನಾಯಿತಿ ಪಡೆಯಲು ಒಂದು ದಾರಿ ಅಲ್ಲ ಎಂದು ಹೇಳಿದ ನ್ಯಾಯಾಲಯ ಅಂತಹ ಸವಲತ್ತು ಪಡೆಯುವ ಶಾಸಕರು ಅವರನ್ನು ಆಯ್ಕೆ ಮಾಡಿದ ಭಾರತೀಯ ಮತದಾರರ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ ಎಂದು ಒತ್ತಿಹೇಳಿದೆ.
“ಸಂಸದರು ಮತ್ತು ಶಾಸಕರು ಭಾರತದ ಸಂವಿಧಾನವನ್ನು ಪಾಲಿಸಬೇಕು ಮತ್ತು ನಿಜವಾದ ನಂಬಿಕೆಯನ್ನು ಹೊಂದಿರಬೇಕು. ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವ ಕೃತ್ಯಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಹೇಳಲಾಗುವುದಿಲ್ಲ. ಶಾಸಕರ ಸವಲತ್ತು ಮತ್ತು ವಿನಾಯಿತಿ ಅಪರಾಧ ಕಾನೂನಿನಿಂದ ವಿನಾಯಿತಿ ಪಡೆಯಲು ಒಂದು ಗೇಟ್ ಅಲ್ಲ ಎಂದು ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್. ಷಾ ಅವರ ಇಬ್ಬರು ನ್ಯಾಯಮೂರ್ತಿಗಳ ನ್ಯಾಯಪೀಠ ಹೇಳಿದೆ.
ಅದೇ ವೇಳೆ ಕೇರಳ ಸರ್ಕಾರದ ಮೇಲ್ಮನವಿಗಳಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಕೇರಳ ಸರ್ಕಾರವು ತನ್ನ ನಾಯಕರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ನ್ಯಾಯಪೀಠ ಈ ರೀತಿ ಹೇಳಿದೆ.
ರಾಜ್ಯದ ಪರ ಹಾಜರಾದ ಹಿರಿಯ ವಕೀಲ ಮತ್ತು ಮಾಜಿ ಸಾಲಿಸಿಟರ್ ಜನರಲ್ ರಂಜೀತ್ ಕುಮಾರ್, ಘಟನೆಯ ಸಂದರ್ಭದಲ್ಲಿ ಎರಡೂ ಕಡೆಯ ಶಾಸಕರು ಪ್ರತಿಭಟನೆ ನಡೆಸಿದ್ದಾರೆ ಎಂದು ವಾದಿಸಿದರು. “ಆಡಳಿತ ಪಕ್ಷದ ಸದಸ್ಯರು ಸಮಾನವಾಗಿ ತಪ್ಪು ಎಸಗಿದ್ದಾರೆ. ಇದು ಎರಡು ಪಕ್ಷಗಳ ನಡುವಿನ ಜಗಳ” ಎಂದು ಅವರು ಹೇಳಿದರು.
ಇದಕ್ಕೆ ನ್ಯಾಯಮೂರ್ತಿ ಚಂದ್ರಚೂಡ್ ಅವರು “ಪ್ರಜಾಪ್ರಭುತ್ವ ಸ್ಥಾಪನೆಯ ಗರ್ಭಗುಡಿ” ಯೊಳಗೆ ವಸ್ತುಗಳನ್ನು ಎಸೆಯುವುದು ಮತ್ತು ಪೀಠೋಪಕರಣಗಳು ಮತ್ತು ಇತರ ಉಪಕರಣಗಳನ್ನು ಹಾನಿಗೊಳಿಸುವುದು ನ್ಯಾಯದ ಹಿತಾಸಕ್ತಿಯೇ ಎಂದು ಕೇಳಿದರು.
ಸದನದಲ್ಲಿ ಅಶಿಸ್ತಿನ ಮತ್ತು ಹಿಂಸಾತ್ಮಕ ಕೃತ್ಯಗಳಿಗೆ ಅವರು ಹೊಣೆಗಾರರಾಗಿರಬೇಕು ಎಂದು ಪ್ರತಿಕ್ರಿಯಿಸಿದ ಉನ್ನತ ನ್ಯಾಯಾಲಯವು ಶಾಸಕರ ನಡವಳಿಕೆಯನ್ನು ಖಂಡಿಸಿತು. ನೀವು ಪ್ರತಿನಿಧಿಸುವ ಸಾರ್ವಜನಿಕರಿಗೆ ನೀವು ಯಾವ ಸಂದೇಶವನ್ನು ಕಳುಹಿಸುತ್ತಿದ್ದೀರಿ? ಅವರ ಅಶಿಸ್ತಿನ ಮತ್ತು ಹಿಂಸಾತ್ಮಕ ಕೃತ್ಯಗಳಿಗೆ ಅವರು ಹೊಣೆಗಾರರಾಗಿಲ್ಲದಿದ್ದರೆ, ಈ ರೀತಿಯ ವರ್ತನೆಗೆ ಯಾವುದೇ ತಡೆಯಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಹವಾಲಾ ಹಣದ ವ್ಯವಹಾರ ಪ್ರಕರಣವೊಂದರಲ್ಲಿ ವಿಚಾರಣೆಗಾಗಿ ಪೊಲೀಸರು ಈ ತಿಂಗಳು ಕರೆಸಿಕೊಂಡಿದ್ದ ಕೇರಳದ ಬಿಜೆಪಿ ಮುಖ್ಯಸ್ಥ ಕೆ.ಸುರೇಂದ್ರನ್, ನ್ಯಾಯಾಲಯದ ತೀರ್ಪಿನ ನಂತರ ಆಡಳಿತಾರೂಢ ಸಿಪಿಎಂ ಮೇಲೆ ಟೀಕಾ ಪ್ರಹಾರ ಮಾಡಿದ್ದಾರೆ.
“ಕೇರಳ ವಿಧಾನಸಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರದ ವಿರುದ್ಧು ಸುಪ್ರೀಂಕೋರ್ಟ್ ವಾಗ್ದಾಳಿ ನಡೆಸಿದೆ. ಇದು ಕೇರಳ ಸರ್ಕಾರ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ರಾಜ್ಯ ಸಚಿವ ಶಿವಂಕುಟ್ಟಿ ರಾಜೀನಾಮೆ ನೀಡಿ ವಿಚಾರಣೆಯನ್ನು ಎದುರಿಸಬೇಕು, ಏಕೆಂದರೆ ಅವರ ವಿರುದ್ಧ ಗಂಭೀರ ಆರೋಪಗಳಿವೆ” ಎಂದು ಸುರೇಂದ್ರನ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಪ್ರಕರಣಗಳನ್ನು ಹಿಂಪಡೆಯಲು ಹೈಕೋರ್ಟ್ ನಿರಾಕರಿಸಿದ ನಂತರ ಕೇರಳ ಸರ್ಕಾರ ಸುಪ್ರೀಂಕೋರ್ಟ್ ಅನ್ನು ಸಂಪರ್ಕಿಸಿತು.
ಶಿವಂಕುಟ್ಟಿ, ಜಲೀಲ್ ಮತ್ತು ನಾಲ್ಕು ಮಾಜಿ ಶಾಸಕರು – ಅವರೆಲ್ಲರೂ ಆ ಸಮಯದಲ್ಲಿ ವಿರೋಧದಲ್ಲಿದ್ದರು. ವಿಧಾನ ಸಭೆಯಲ್ಲಿ ನಡೆದ ವಾಗ್ವಾದ ನಡುವೆ ಅಲ್ಲಿದ್ದ ಪೀಠೋಪಕರಣಗಳು ಮತ್ತು ಮೈಕ್ರೊಫೋನ್ಗಳನ್ನು ಮುರಿದರು. ವೇದಿಕೆಯಿಂದ ಸ್ಪೀಕರ್ ಕುರ್ಚಿಯನ್ನು ಎಳೆದಾಡಿ ಸಭಾಧ್ಯಕ್ಷರ ಮೇಜಿನ ಮೇಲಿದ್ದ ಕಂಪ್ಯೂಟರ್‌ಗಳ್ನು ಹಾನಿ ಮಾಡಲಾಗಿತ್ತು.
ಲಂಚದ ಆರೋಪ ಎದುರಿಸುತ್ತಿದ್ದ ಹಣಕಾಸು ಸಚಿವ ಕೆ.ಎಂ.ಮಣಿ ಅವರು ಬಜೆಟ್ ಮಂಡಿಸಲು ಯತ್ನಿಸಿದಾಗ ಈ ಘಟನೆ ನಡೆದಿತ್ತು. ಪ್ರಕರಣದಲ್ಲಿ ಮಾಜಿ ಶಾಸಕರಾದ ಇಪಿ ಜಯರಾಜನ್, ಕೆ ಅಜಿತ್, ಸಿಕೆ ಸದಾಶಿವನ್ ಮತ್ತು ಕೆ ಕುಂಜಮ್ಮದ್ ಇದ್ದಾರೆ.
ಇದನ್ನೂ ಓದಿ:ಕೇರಳದ ವರ್ಕ್ ಫ್ರಮ್ ಹೋಟೆಲ್ ಪ್ಯಾಕೇಜ್‌ಗಳ ಬಗ್ಗೆ ನೀವೂ ತಿಳಿದುಕೊಳ್ಳಿ
ಇದನ್ನೂ ಓದಿ: ಪಟ್ಟ ಬಿಟ್ಟುಕೊಟ್ಟ ಬಿಎಸ್ ಯಡಿಯೂರಪ್ಪನವರನ್ನು ಶ್ಲಾಘಿಸಿದ ಅಮಿತ್ ಶಾ; ಬೊಮ್ಮಾಯಿ ಬಗ್ಗೆ ಹೇಳಿದ್ದೇನು?
(Committing acts of destroying public property cannot be equated to freedom of speech Says Supreme Court)