ಕೇರಳ: ಒಮಿಕ್ರಾನ್ ಆತಂಕದ ನಡುವೆಯೇ ಲಸಿಕೆ ಪಡೆಯುವವರ ಸಂಖ್ಯೆ ಹೆಚ್ಚಳ
ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಲಸಿಕೆ ಪಡೆಯಲು ಆಸಕ್ತಿ ಹೊಂದಿದವರ ಸಂಖ್ಯೆ ಜಾಸ್ತಿ ಆಗಿದೆ. ನವೆಂಬರ್ 23 ರಿಂದ ನಾಲ್ಕು ದಿನಗಳ ಅವಧಿಯಲ್ಲಿ ಕೇವಲ 4.4 ಲಕ್ಷ ಜನರು ಮಾತ್ರ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಅದು ತೋರಿಸುತ್ತದೆ.
ತಿರುವನಂತಪುರಂ: ಒಮಿಕ್ರಾನ್ ರೂಪಾಂತರದ (Omicron variant) ಬಗ್ಗೆ ಇರುವ ಆತಂಕ ಕೇರಳದಲ್ಲಿ (kerala) ವ್ಯಾಕ್ಸಿನೇಷನ್ ಬೇಡಿಕೆಯನ್ನು ಹೆಚ್ಚಿಸಿದೆ. ಹೊಸ ಕೊವಿಡ್ -19 ರೂಪಾಂತರದ ವರದಿಗಳ ನಡುವೆ ಲಸಿಕೆ ಪಡೆಯುವ ಜನರ ಸಂಖ್ಯೆ ಹೆಚ್ಚಾಗಿದೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) ಹೇಳಿದ್ದಾರೆ. ಏತನ್ಮಧ್ಯೆ, ಭಾರತವು ತನ್ನ ಮೊದಲ ಎರಡು ಒಮಿಕ್ರಾನ್ ಪ್ರಕರಣಗಳನ್ನು ಗುರುವಾರ ವರದಿ ಮಾಡಿದೆ. ಇವೆರಡೂ ಕೇರಳದ ನೆರೆಯ ಕರ್ನಾಟಕದಲ್ಲಿವೆ. ಕೇರಳ ಸರ್ಕಾರವು ಡಿಸೆಂಬರ್ 1 ರಿಂದ ಎರಡು ವಾರಗಳ ವಿಶೇಷ ಲಸಿಕೆ ಅಭಿಯಾನವನ್ನು(special vaccination drive) ಪ್ರಾರಂಭಿಸಿದೆ. “ಇನ್ನೂ ಮೊದಲ ಡೋಸ್ ತೆಗೆದುಕೊಳ್ಳದವರನ್ನು ಪತ್ತೆಹಚ್ಚಲು ಮತ್ತು ಅವರಿಗೆ ಲಸಿಕೆ ಹಾಕಲು ಈ ಡ್ರೈವ್ ಉದ್ದೇಶಿಸಲಾಗಿದೆ. ಅಲ್ಲದೆ, ಮೊದಲ ಲಸಿಕೆ ತೆಗೆದುಕೊಂಡವರಿಗೆ ಎರಡನೇ ಡೋಸ್ ಪೂರ್ಣಗೊಳಿಸಲು ಕ್ರಮಕೈಗೊಳ್ಳಲಾಗುವುದು,’’ ಎಂದು ವೀಣಾ ಜಾರ್ಜ್ ಹೇಳಿದರು. ಲಸಿಕೆಯನ್ನು ಪಡೆಯಲು ನಿರಾಕರಿಸುವವರಿಗೆ ಉಚಿತ ಚಿಕಿತ್ಸೆಯನ್ನು ನಿರಾಕರಿಸಲಾಗುವುದು ಎಂದು ಅವರು ಹೇಳಿದರು. ರಾಜ್ಯದಲ್ಲಿ ಎಂಟು ಲಕ್ಷ ಡೋಸ್‌ಗಳ ದಾಸ್ತಾನು ಇದೆ ಮತ್ತು ವಿಶೇಷ ಡ್ರೈವ್‌ಗಾಗಿ ಹೆಚ್ಚಿನ ಸರಬರಾಜುಗಳನ್ನು ಕೋರಿದೆ ಎಂದು ಅವರು ಹೇಳಿದರು. ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಲಸಿಕೆ ಪಡೆಯಲು ಆಸಕ್ತಿ ಹೊಂದಿದವರ ಸಂಖ್ಯೆ ಜಾಸ್ತಿ ಆಗಿದೆ. ನವೆಂಬರ್ 23 ರಿಂದ ನಾಲ್ಕು ದಿನಗಳ ಅವಧಿಯಲ್ಲಿ ಕೇವಲ 4.4 ಲಕ್ಷ ಜನರು ಮಾತ್ರ ಲಸಿಕೆ ತೆಗೆದುಕೊಂಡಿದ್ದಾರೆ ಎಂದು ಅದು ತೋರಿಸುತ್ತದೆ. ನವೆಂಬರ್ 27 ರಿಂದ ಪ್ರಾರಂಭವಾದ ಮುಂದಿನ ನಾಲ್ಕು ದಿನಗಳಲ್ಲಿ ಈ ಸಂಖ್ಯೆ 6.25 ಲಕ್ಷಕ್ಕೆ ಏರಿತು. ಇದು ಒಮಿಕ್ರಾನ್ ರೂಪಾಂತರದ ವರದಿಗಳು ಬರಲು ಪ್ರಾರಂಭಿಸಿದ ಸಮಯವಾಗಿತ್ತು.
ನವೆಂಬರ್ 23-26ರ ಅವಧಿಯಲ್ಲಿ ಕೇವಲ 36,428 ಜನರು ಮೊದಲ ಡೋಸ್ ತೆಗೆದುಕೊಂಡಿದ್ದರೆ, ಈ ಸಂಖ್ಯೆಯು ಮುಂದಿನ ನಾಲ್ಕು ದಿನಗಳಲ್ಲಿ 57,991 ಕ್ಕೆ ಏರಿತು. ಈ ದಿನಗಳಲ್ಲಿ ಸಂಪೂರ್ಣ ಲಸಿಕೆ ಪಡೆದವರ ಸಂಖ್ಯೆ 4.03 ಲಕ್ಷದಿಂದ 5.67 ಲಕ್ಷಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು ಕಡಿಮೆಯಾದ ಕಾರಣ ಮತ್ತು ಲಾಕ್‌ಡೌನ್ ಮಾನದಂಡಗಳನ್ನು ಸರಾಗಗೊಳಿಸಿದ್ದರಿಂದ ಇತ್ತೀಚಿನ ವಾರಗಳಲ್ಲಿ ಕೇರಳದಲ್ಲಿ ವ್ಯಾಕ್ಸಿನೇಷನ್ ಕಡಿಮೆಯಾಗಿತ್ತು.
ಕೇರಳದ ಅರ್ಹ ಜನಸಂಖ್ಯೆಯ ಕನಿಷ್ಠ 50 ಪ್ರತಿಶತದಷ್ಟು ಜನರು ಆಗಸ್ಟ್ 1 ರ ವೇಳೆಗೆ ಮೊದಲ ಡೋಸ್ ಪಡೆದಿದ್ದಾರೆ. ಒಂದು ತಿಂಗಳೊಳಗೆ (ಸೆಪ್ಟೆಂಬರ್ 1 ರ ಹೊತ್ತಿಗೆ), ಈ ಅಂಕಿ ಅಂಶವು ಜನಸಂಖ್ಯೆಯ ಶೇಕಡಾ 74 ಕ್ಕೆ ಏರಿದೆ. ಆದರೆ ನವೆಂಬರ್‌ನಲ್ಲಿ ವ್ಯಾಕ್ಸಿನೇಷನ್‌ನ ವೇಗ ಕಡಿಮೆಯಾಗಿದೆ. ಅರ್ಹ ಜನಸಂಖ್ಯೆಯ 92 ಪ್ರತಿಶತದಷ್ಟು ಜನರು ನವೆಂಬರ್ 1 ರಂದು ಮೊದಲ ಡೋಸ್ ಪಡೆದಿದ್ದರೆ ಮೊದಲ ಡೋಸ್‌ನ ವ್ಯಾಪ್ತಿಯು ಡಿಸೆಂಬರ್ 1 ಕ್ಕೆ ಶೇ 96ಕ್ಕೆ ಏರಿತು.
ಇತ್ತೀಚೆಗೆ ರಾಜ್ಯ ಸರ್ಕಾರವು ಎಲ್ಲಾ ಸರ್ಕಾರಿ ನೌಕರರು ಮತ್ತು ಶಿಕ್ಷಕರಿಗೆ ಲಸಿಕೆ ಹಾಕುವಂತೆ ಸೂಚಿಸಿತು. ಲಸಿಕೆ ಹಾಕದೇ ಇರುವವರು ತಮ್ಮ ಸ್ವಂತ ವೆಚ್ಚದಲ್ಲಿ ಪ್ರತಿ ವಾರ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ. ಆರೋಗ್ಯದ ಆಧಾರದ ಮೇಲೆ ಲಸಿಕೆಯಿಂದ ದೂರವಿರುವ ನೌಕರರು ಸರ್ಕಾರಿ ಸೇವೆಯಲ್ಲಿರುವ ವೈದ್ಯರಿಂದ ಸೂಕ್ತ ಪ್ರಮಾಣಪತ್ರಗಳನ್ನು ನೀಡಬೇಕು ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಲಸಿಕೆ ಹಾಕದ ಕೊವಿಡ್ ರೋಗಿಗಳಿಗೆ ಕೇರಳ ಸರ್ಕಾರ ಉಚಿತ ಚಿಕಿತ್ಸೆ ನೀಡುವುದಿಲ್ಲ: ಪಿಣರಾಯಿ ವಿಜಯನ್