ಉತ್ತರಾಖಂಡದ ಮಾನ್ಯ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರೇ, ಇತ್ತೀಚೆಗೆ ಹರಿದ್ವಾರದಲ್ಲಿ ನಡೆಯಲಿರುವ ಕುಂಭಮೇಳದ ಸಂದರ್ಭದಲ್ಲಿ ಸುರಕ್ಷತಾ ಮಾನದಂಡಗಳನ್ನು ಸಡಿಲಿಸುವುದನ್ನು ಸಮರ್ಥಿಸಿಕೊಳ್ಳುತ್ತಾ ನಂಬಿಕೆ, ಶ್ರದ್ಧೆ, ಆಸ್ಥೆ ಇದ್ದಲ್ಲಿ ಎಂಥ ವೈರಸ್ ಅನ್ನೂ ಸೋಲಿಸಬಹುದು ಎಂದಿದ್ದಿರಿ. ಇರಲಿ, ಸ್ವತಃ ಕೋವಿಡ್ಗಾಗಿ ಚಿಕಿತ್ಸೆ ಪಡೆಯುತ್ತಿರುವ ನಿಮಗೀಗಾಗಲೇ ಈ ಹೇಳಿಕೆಯ ಸತ್ಯಾಸತ್ಯದ ಬಗ್ಗೆ ಮನವರಿಕೆ ಆಗಿರುತ್ತದೆ ಎಂದು ಭಾವಿಸಲಾಗುವುದು. ‘Ripped Jeans ಪತ್ರ ಅಭಿಯಾನ’ವನ್ನು ನಿನ್ನೆಗೇ ಮುಗಿಸೋಣವೆಂದರೆ ಮತ್ತೆರಡು ಅಸಂಬದ್ಧ ಹೇಳಿಕೆಗಳನ್ನು ಕೊಟ್ಟಿರಿ; ಮೊದಲನೆಯದು, ನಮ್ಮ ದೇಶವನ್ನು ಇನ್ನೂರು ವರ್ಷಗಳ ಕಾಲ ಅಮೆರಿಕನ್ನರು ಆಳಿದರು. ಎರಡನೆಯದು, ಕೋವಿಡ್ ಸಮಯದಲ್ಲಿ ಹೆಚ್ಚು ಪಡಿತರ ಪಡೆಯಲು ಹೆಣ್ಣುಮಕ್ಕಳು ಹೆಚ್ಚೆಚ್ಚು ಹೆರಬೇಕು. ಇರಲಿ, ಸದ್ಯಕ್ಕೆ ನಿಮಗೆ ಚಿಕಿತ್ಸೆ ಮತ್ತು ವಿಶ್ರಾಂತಿಯ ಅಗತ್ಯವಿದೆ. ಆದಷ್ಟು ಬೇಗ ಎಲ್ಲ ರೀತಿಯಿಂದಲೂ ನೀವು ಚೇತರಿಸಿಕೊಳ್ಳಿ.
ಆದರೆ ನೆನಪಿಡಿ, ಸಹಜ ಮತ್ತು ಸಾಮಾನ್ಯ ಬದುಕಿಗೆ ತೆರೆದುಕೊಳ್ಳುವಲ್ಲಿಯೇ ನಮ್ಮ ದೇಶದ ಹೆಣ್ಣುಮಕ್ಕಳು ಈತನಕವೂ ಹೆಚ್ಚೇ ಶ್ರಮಪಡಬೇಕಾದ ಅನಿವಾರ್ಯವಿದೆ. ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಮತ್ತು ನಿಮ್ಮಂಥವರ ಪುರುಷ ಪಾರಮ್ಯದ ಹೇಳಿಕೆಗಳು ಸಮಾಜವನ್ನು ಮತ್ತಷ್ಟು ‘ಅಂಧಶ್ರದ್ಧೆ’ಗೆ ನೂಕುವ ಅಪಾಯವಿದೆ. ಆದ್ದರಿಂದ ಸಮಾಜದ ವಾಸ್ತವಿಕ ನೋಟಗಳ ಬಗ್ಗೆ ಅರಿವು ಮೂಡಿಸುವ ಹಿನ್ನೆಲೆಯಲ್ಲಿ ಈವತ್ತೂ ಈ ಪತ್ರ ಅಭಿಯಾನ ಜಾರಿಯಲ್ಲಿರುತ್ತದೆ.
ಪರಿಕಲ್ಪನೆ : ಶ್ರೀದೇವಿ ಕಳಸದ
ಹಿರಿಯ ಪತ್ರಕರ್ತ, ಲೇಖಕ ಎನ್. ಎಸ್. ಶ್ರೀಧರ ಮೂರ್ತಿ ಅವರನ್ನು ‘ಸಂಸ್ಕೃತಿ’ ಎನ್ನುವ ಪದ ಅವರ ಊರು, ಕಾಲೇಜು ಮತ್ತು ಸಿನೆಮಾರಂಗದ ತುಂಬೆಲ್ಲಾ ಓಡಾಡಿಸಿಕೊಂಡು ಬಂದ ರೀತಿಗೆ ಏನು ಹೇಳುವುದು? ಮಾತಿಲ್ಲ.
ಸನ್ಮಾನ್ಯ ತೀರಥ್ ಸಿಂಗ್ ಅವರಿಗೆ ನಮಸ್ಕಾರಗಳು.
ಮೊದಲಿಗೆ ನಿಮಗೆ ಕರೋನ ಪಾಸಿಟಿವ್ ಬಂದಿರುವುದು ಆತಂಕದ ಸಂಗತಿ. ನಿಮ್ಮ ಆರೋಗ್ಯ ಆದಷ್ಟು ಬೇಗ ಸುಧಾರಿಸಲಿ ಎಂದು ಪ್ರಾಮಾಣಿಕವಾಗಿ ಆಶಿಸುತ್ತೇನೆ.
ನಂತರ… ನಿಮ್ಮ ಇತ್ತೀಚಿನ ಕೆಲವು ಹೇಳಿಕೆಗಳು ವಿವಾದವನ್ನು ಹುಟ್ಟುಹಾಕಿವೆ. ಹರಿದ ಜೀನ್ಸ್ ತೊಡುವುದು ನಮ್ಮ ಸಂಸ್ಕೃತಿಯೇ ಎಂದು ಕೇಳಿದ್ದೀರಿ, ಇದರಿಂದ ಮಕ್ಕಳಿಗೆ ಯಾವ ಸಂದೇಶ ಕೊಡುತ್ತೀರಿ ಎನ್ನುವ ಆತಂಕವನ್ನೂ ವ್ಯಕ್ತಪಡಿಸಿದ್ದೀರಿ. ಹತ್ತು ಮಕ್ಕಳನ್ನೂ ಹೆತ್ತು ದಿನಸಿ ಪಡೆಯಬಹುದಾದ ದಾರಿಯನ್ನೂ ಕೋವಿಡ್ ಕಾಲದಲ್ಲಿ ಸೂಚಿಸಿದ್ದೀರಿ. ಇದನ್ನೆಲ್ಲಾ ನಾನು ತಪ್ಪುಎಂದು ಹೇಳುವುದೇ ಇಲ್ಲ. ಏಕೆಂದರೆ ಇಂತಹ ಹೇಳಿಕೆ ಕೊಡುವವರು ನೀವು ಮೊದಲನೆಯವರೂ ಅಲ್ಲ, ಕೊನೆಯವರೂ ಅಲ್ಲ. ಒಂದು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರಿಂದ ನಿಮ್ಮ ಮಾತಿಗೆ ಸುದ್ದಿಯ ಬಣ್ಣ ಬಂದುಬಿಟ್ಟಿದೆ ಅಷ್ಟೇ. ಇಲ್ಲದಿದ್ದರೆ ನಮ್ಮ ಸುತ್ತ ಮುತ್ತು ನೋಡಿದರೆ ಇಂತಹ ಮಾತುಗಳನ್ನು ದಿನನಿತ್ಯ ನಾವು ಕೇಳ್ತಾನೆ ಇರ್ತೀವಿ.
1945 ಆಗಿನ್ನು ಕನ್ನಡ ಚಿತ್ರರಂಗ ಹುಟ್ಟಿ ಹನ್ನೊಂದು ವರ್ಷ ಆಗಿತ್ತು ಅಷ್ಟೇ. ಅಂಕಿ-ಅಂಶ ತೆಗೆದರೆ ‘ಹೇಮರೆಡ್ಡಿ ಮಲ್ಲಮ್ಮ’ ಕನ್ನಡದ 16ನೇ ವಾಕ್ಚಿತ್ರ. ಅದರಲ್ಲಿ ನೆರಳಿನಲ್ಲಿ ಹೆಣ್ಣುಮಗಳೊಬ್ಬಳು ಬೆತ್ತಲಾಗುವ ದೃಶ್ಯ ಇತ್ತು. ದೊಡ್ಡ ವಿವಾದ ಶುರುವಾಯಿತು. ಎಲ್ಲಿಯವರೆಗೆ ಹೋಯಿತು ಅಂದರೆ ಹಾರ್ಮೋನಿಯಂ ಶೇಷಗಿರಿರಾವ್ ಎನ್ನುವ ದೊಡ್ಡ ಸಾಧಕರು ಆ ಸಿನಿಮಾದ ಸಂಗೀತ ನಿರ್ದೇಶಕರು ‘ಲೇಡೀಸ್ ಎಂಟ್ರಿ ಆಗಿದ್ದರಿಂದ ಚಿತ್ರರಂಗ ಕೆಟ್ಟು ಹೋಯಿತು’ ಎಂದು ಸಿನಿಮಾದಿಂದ ಹೊರಕ್ಕೆ ಬಂದರು. ಅದು ಹೆಣ್ಣುಮಕ್ಕಳು ಹೊಸ್ತಿಲು ದಾಟೋದೆ ದೊಡ್ಡದು ಎನ್ನಿಸಿದ್ದ ಕಾಲ. ಈಗ ನಿಮಗೆ ಹರಿದ ಜೀನ್ಸ್ ಹೇಗೆ ನಮ್ಮ ಸಂಸ್ಕೃತಿ ಅಲ್ಲ ಎನ್ನಿಸಿದೆಯೋ ಆಗ ಅವರಿಗೆ ಹೆಣ್ಣುಮಕ್ಕಳು ಸಿನಿಮಾದಲ್ಲಿ ನಟಿಸುವುದು ನಮ್ಮ ಸಂಸ್ಕೃತಿಯಲ್ಲ ಅನ್ನಿಸಿತ್ತು.
ಅದೇ ಸಮಯದಲ್ಲಿ ತಮಿಳಿನಲ್ಲಿ ‘ಚೆಂಚುಲಕ್ಷ್ಮಿ’ ಅನ್ನೋ ಸಿನಿಮಾ ಬಂದಿತ್ತು. ನರಸಿಂಹ ಅವತಾರವಾದ ನಂತರ ಉಗ್ರನಾದ ಅವನನ್ನು ಶಾಂತಗೊಳಿಸಲು ಲಕ್ಷ್ಮಿ ಚೆಂಚುಲಕ್ಷ್ಮಿ ಅವತಾರ ಎತ್ತುತ್ತಾಳೆ. ಅವಳು ಸ್ನಾನ ಮಾಡುವಾಗ ನೋಡಿ ಮೋಹಗೊಂಡ ವಿಷ್ಣು ಮೀನಿನ ಅವತಾರ ಎತ್ತಿ ಅವಳ ಜೊತೆ ಸರಸ ಆಡ್ತಾನೆ. ಇದು ಆಗಿನ ಮೈಸೂರು ಪ್ರಜಾಪ್ರತಿನಿಧಿ ಸಭೆಯಲ್ಲಿ ಚರ್ಚೆಗೆ ಬಂದಿತು. ಈ ಪ್ರಸ್ತಾಪ ಮಂಡಿಸಿದ ಎಂ.ಎನ್.ಜೋಯಿಸ್ ‘ಆ ಮೀನು ಎಲ್ಲೆಲ್ಲಿ ಹೋಗಿದೆ ಗೊತ್ತಾ? ಇದನ್ನು ತೋರಿಸುವುದು ನಮ್ಮ ಸಂಸ್ಕೃತಿಯಾ?’ ಅಂತಹ ನಿಮ್ಮ ತರಹದ್ದೇ ಪ್ರಶ್ನೆ ಕೇಳಿದ್ದರು. ಪುಣ್ಯ! ನೀವು ಅದನ್ನು ಗಮನಿಸಿದ್ದೀರಲ್ಲ ಅದು ನಮ್ಮ ಸಂಸ್ಕೃತಿಯಾ ಎಂದು ಆಗ ಅವರನ್ನು ಯಾರೂ ಕೇಳಿರಲಿಲ್ಲ.
ನಾನು ತುಂಬಾ ಗೌರವಿಸುವ ನಿರ್ದೇಶಕರೊಬ್ಬರು ಖಾಸಗಿಯಾಗಿ ನನ್ನ ಜೊತೆ ಮಾತಾಡ್ತಾ ‘ಯಾವತ್ತು ಕಲ್ಪನಾ ಅವರಂತಹ ಮೇರು ನಟಿ ನಾರಿ ಮುನಿದರೆ ಮಾರಿ ಸಿನಿಮಾದಲ್ಲಿ ಜೀನ್ಸ್ ಪ್ಯಾಂಟ್ ತೊಟ್ಟು ಕುದುರೆ ಸವಾರಿ ಮಾಡಿದರೋ ಅವತ್ತೇ ಸಿನಿಮಾದಲ್ಲಿ ನಮ್ಮ ಸಂಸ್ಕೃತಿ ಹಾಳಾಯ್ತು’ ಎಂದಿದ್ದರು. ಸಿನಿಮಾದಲ್ಲಿ ಹೆಣ್ಣು ಅಂದರೆ ಮೈತುಂಬಾ ಸೆರಗು ಹೊದ್ದು ತಲೆತಗ್ಗಿಸಿ, ಕಣ್ಣನ್ನು ಮಿಟುಕಿಸುತ್ತಾ, ಬೆರಳಿನಿಂದ ನೆಲವನ್ನುಕರೆಯುತ್ತಾ ಕುಗ್ಗಿದ ಧ್ವನಿಯಲ್ಲಿ ಮಾತಾಡುವುದುಎಂದರೆ ಸಂಸ್ಕೃತಿ ಅನ್ನೋರು ಅವರೇ ಮೊದಲನೆಯವರು ಅಲ್ಲ ಬಿಡಿ, ಮಹಾ ನಿರ್ದೇಶಕರು ಎನ್ನಿಸಿಕೊಂಡ ಪುಟ್ಟಣ್ಣಕಣಗಾಲ್, ಕೆ.ಬಾಲಚಂದರ್ ಮೊದಲಾದವರ ಸಿನಿಮಾಗಳನ್ನು ನೋಡಿದರೆ ಅವೆಲ್ಲವೂ ಒಂದು ರೀತಿಯಲ್ಲಿ ಹೆಣ್ಣಿಗೆ ನೀತಿಸಂಹಿತೆ ಬೋಧಿಸುವ ನಿಮ್ಮ ಸಿದ್ದಾಂತದ ಸಿನಿಮ್ಯಾಟಿಕ್ ವರ್ಷನ್‍ಗಳೇ! ಬೇಡ ಅಂದರೂ ನನಗೆ ಇಲ್ಲಿ ‘ನಿಲ್ಲೆ ಪತಂಗ… ಬೇಡ ಬೇಡ ಬೆಂಕಿಯ ಸಂಗ’ ಹಾಡು ನೆನಪಾಗಿ ಬಿಡುತ್ತೆ. ಇಲ್ಲೊಂದು ಡೌಟ್ ಬಹಳ ದಿನದಿಂದ ಉಳಿದುಕೊಂಡಿದೆ. ಹರಿದ ಜೀನ್ಸ್ನಲ್ಲಿ ಮೈ ಕಾಣುತ್ತೆ ಅದಕ್ಕೆ ನಮ್ಮ ಸಂಸ್ಕೃತಿ ಅಲ್ಲ ಅಂತ ನೀವು ಹೇಳ್ತೀರಿ. ಸೀರೆಯಲ್ಲಿ ಕೂಡ ಬೆನ್ನು, ಹೊಟ್ಟೆ ಭಾಗ ಎಷ್ಟೇ ಪ್ರಯತ್ನ ಪಟ್ಟರೂ ಕಾಣುತ್ತಲ್ಲ ಅದ್ಹೇಗೆ ನಮ್ಮ ಸಂಸ್ಕೃತಿ ಆಗುತ್ತೆ? ತಿಳಿದವರೇ ಇದಕ್ಕೆ ಉತ್ತರ ಹೇಳಬೇಕು.
ಸರ್, ನಾನು ಹಳ್ಳಿಯಲ್ಲಿ ಹುಟ್ಟಿ ಬೆಳೆದವನು. ಆಗ ನಮ್ಮ ಪಕ್ಕದ ಮನೆಯಲ್ಲಿ ಥೇಟ್ ನಿಮ್ಮಂಥವರೇ ಒಬ್ಬರಿದ್ದರು (ನಿಮ್ಮಂತವರು ಬಹಳ ಜನ ಸಿಕ್ಕುತ್ತಲೇ ಇರ್ತಾರೆ ಬಿಡಿ, ಬೇಸರ ಮಾಡ್ಕೋಬೇಡಿ) ಅವರ ಪ್ರಕಾರ ಹೆಣ್ಣುಮಕ್ಕಳು ಕಾಲಿಗೆ ಚಪ್ಪಲಿ ಹಾಕುವಂತಿರಲಿಲ್ಲ. ಅವರ ಮನೆ ಹೆಣ್ಣುಮಕ್ಕಳಂತೂ ಮಲೆನಾಡಿನ ಕಲ್ಲುಮುಳ್ಳಿನ ಹಾದಿಯಲ್ಲಿ ಬರಿಗಾಲಿನಲ್ಲಿ ನಡೆದುಕೊಂಡೇ ಹೋಗಬೇಕಿತ್ತು. ಇದು ಏಕೆ ಅಂತ ಕೇಳಿದರೆ ನಿಮ್ಮ ತರಹವೇ ‘ಇದು ನಮ್ಮ ಸಂಸ್ಕೃತಿ’ ಎಂದಿದ್ದರು. ಆದರೆ ಗಂಡುಮಕ್ಕಳು ಚಪ್ಪಲಿ ಹಾಕೋಕೆ ಸಂಸ್ಕೃತಿಯಲ್ಲಿ ಅವಕಾಶ ಇತ್ತು. ಬಹಳ ದಿನ ಆದ ಮೇಲೆ ಹೊಳೆಯಿತು ಅದು ಹೆಣ್ಣುಮಕ್ಕಳು ಮನೆ ಬಿಟ್ಟು ಹೊರಗೆ ಹೋಗದಂತೆ ತಡೆಯುವ ಉಪಾಯ ಅಷ್ಟೇ ಅಂತ.
ನಾನಂತೂ ಡಿಗ್ರಿ ಮುಗಿಸೋವರೆಗೂ ಹುಡುಗಿಯರನ್ನು ಮಾತಾಡಿಸೋ ಸಾಹಸ ಮಾಡ್ತಾ ಇರಲಿಲ್ಲ. ಏಕೆಂದರೆ ಹಿರಿಯರು ಅದನ್ನು ಕೂಡ ನಮ್ಮ ಸಂಸ್ಕೃತಿ ಎಂದು ಹೇಳಿಕೊಟ್ಟಿದ್ದರು. ಎಲ್ಲಾ ಕಾಲದಲ್ಲಿಯೂ ಎಲ್ಲಾ ಕಾಲೇಜಿಗಳಲ್ಲಿಯೂ ಇರುವಂತೆ ನಮ್ಮ ಕಾಲೇಜಿನಲ್ಲಿಯೂ ಒಬ್ಬಳು ಬ್ಯೂಟಿಕ್ವೀನ್ ಇದ್ದಳು. ಅವಳು ನನ್ನ ಕ್ಲಾಸಿನಲ್ಲಿಯೇ ಇದ್ದಳು. ನನಗೆ ಈ ವಿಷಯ ಕೂಡ ಬಹಳ ದಿನಗಳ ಕಾಲ ಗೊತ್ತಿರಲಿಲ್ಲ. ಕಾಲೇಜ್ ಬಸ್‍ನಲ್ಲಿ ಬರುವ ಬೇರೆ ಹುಡುಗರು ನಿತ್ಯವೂ ಅವಳ ಸೌಂದರ್ಯವನ್ನು ಕಾಳಿದಾಸನಿಗೆ ಕಡಿಮೆ ಇಲ್ಲದ ಹಾಗೆ ವರ್ಣಿಸುತ್ತಾಇದ್ದಿದ್ದರಿಂದ ನನಗೂ ಕುತೂಹಲ ಹುಟ್ಟಿತು. ಒಮ್ಮೆ ಕದ್ದು ನೋಡಿ ಅವರು ಹೇಳುತ್ತಿದ್ದ ಮಾತು ನಿಜ ಎನ್ನುವುದನ್ನುಖಾತ್ರಿ ಪಡಿಸಿಕೊಂಡೆ. ಅವಳು ತುಂಬಾ ಸೊಗಸಾಗಿ ಹಾಡನ್ನು ಕೂಡ ಹೇಳ್ತಾ ಇದ್ದಳು. ಒಂದು ಸಲ ಭದ್ರಾವತಿ ಆಕಾಶವಾಣಿಯ ಯುವವಾಣಿ ಕಾರ್ಯಕ್ರಮಕ್ಕೆ ನಾವು ಕಾಲೇಜಿನಿಂದ ಕಾರ್ಯಕ್ರಮಕೊಡುವುದಕ್ಕೆ ಅಂತ ಹೋಗಿದ್ದೆವು. ನಮ್ಮ ತಂಡದಲ್ಲಿ ಅವಳೂ ಕೂಡ ಇದ್ದಳು. ಆಗ ಒಂದಿಷ್ಟು ಮಾತಾಡುವ ಅನಿವಾರ್ಯತೆ ಸೃಷ್ಟಿಯಾಯಿತು. ಏನೋ ಮಾತಿಗೆ ನಾನು ಅವಳಿಗೆ ಪೆದ್ದುಪೆದ್ದಾಗಿ, ‘ನೀನು ಬಿಡು ಕಾಲೇಜ್‍ನ ಬ್ಯೂಟಿಕ್ವೀನ್’ ಎಂದುಬಿಟ್ಟೆ. ಅಷ್ಟಕ್ಕೇ ಅವಳು ಕಣ್ಣಿನಲ್ಲಿ ನೀರು ಹಾಕಿಕೊಂಡು ‘ಈ ಬ್ಯೂಟಿಕ್ವೀನ್ ಕಷ್ಟ ನಿನಗೇನು ಗೊತ್ತು, ನನ್ನನ್ನು ನೋಡಿದ ಕೂಡಲೇ ಹುಡುಗರೇಕೆ, ಲೆಕ್ಚರ್ಗಳೂ ಕೂಡ ಹೆಂಡಕುಡಿದ ಮಂಗಗಳ ತರಹ ಆಡ್ತಾರೆ. ಸಹಜವಾಗಿಇರೋದೇ ಕಷ್ಟವಾಗಿದೆ. ಈ ಬ್ಯೂಟಿಯನ್ನೇನು ನಾನು ಉಪ್ಪು ನೀರು ಹಾಕಿಕೊಂಡು ಕುಡಿಯಲಾ’ ಎಂದು ಕೋಪದಲ್ಲಿಯೇ ಹೇಳಿದಳು. ಆ ಮಾತನ್ನು ಅವಳು ಆಡಿ ಮೂವತ್ತು ವರ್ಷಗಳೇ ಕಳೆದು ಹೋಗಿವೆ. ಸರ್, ನಿಮ್ಮ ಮಾತಿನ ತರಹವೇ ಅದು ಇವತ್ತಿಗೂ ಕಾಡುತ್ತಿದೆ.
ನಾನು ಮಂಗಳೂರಿನಲ್ಲಿ ಎಂ.ಎ ಮಾಡುವಾಗ ಒಂದು ದಿನ ನನ್ನ ಕ್ಲಾಸ್‍ಮೇಟ್ ಬಿಗಿಯಾದ ಜೀನ್ಸ್ ಪ್ಯಾಂಟ್ ಮತ್ತು ಟೀಶರ್ಟ್ ಧರಿಸಿ ಬಂದು ‘ನನಗೆ ಈ ಡ್ರೆಸ್ ಒಪ್ಪುತ್ತಾ’ ಅಂತ ಕೇಳಿದಳು. ಅಲ್ಲಿಯವರೆಗೂ ಹುಡುಗಿಯರು ಅಂತಹ ಡ್ರೆಸ್ ಮಾಡಿದ್ದನ್ನ ನಾನು ನೋಡಿಯೇ ಇರಲಿಲ್ಲ, ಜೊತೆಗೆ ನನ್ನ ತೀರಾ ಹತ್ತಿರದ ಸಂಬಂಧಿಕರೂ ಕೂಡ ಡ್ರೆಸ್ ಒಪ್ಪುತ್ತಾ ಎನ್ನೋ ಪ್ರಶ್ನೆಯನ್ನು ಕೇಳಿರಲಿಲ್ಲ. ಅದು ಒಂದು ರೀತಿಯಲ್ಲಿ ಕಲ್ಚರಲ್ ಶಾಕ್ ಎನ್ನಿಸಿ ಬೆವೆತುಹೋಗಿದ್ದೆ. ಸರ್, ಇದನ್ನೆಲ್ಲಾ ನಿಮ್ಮ ಮಾತಿಗೆ ಜೋಡಿಸಿ ಪ್ರಶ್ನೆಯನ್ನೇನು ಕೇಳಬೇಕು ಅನ್ನಿಸುತ್ತಾಇಲ್ಲ. ಹೆಣ್ಣುಮಕ್ಕಳನ್ನು ಅವರ ಪಾಡಿಗೆ ಅವರು ಸಹಜವಾಗಿ ಇರಲು ಬಿಡದೆ ನಮ್ಮ ನೀತಿ ನಿಯಮಗಳ ಚೌಕಟ್ಟಿಗೆ ಸಿಲುಕಿಸುವುದೇ ನಮ್ಮ ಸಂಸ್ಕೃತಿಯಾ? ಅನ್ನೋದನ್ನ ನನ್ನನ್ನು ಸೇರಿಸಿ ಎಲ್ಲಾ ಗಂಡಸರೂ ಆತ್ಮಾವಲೋಕನ ಮಾಡಿಕೊಳ್ಳಬೇಕು ಅನ್ನಿಸುತ್ತಾಇದೆ. ಇಂತಹ ಹದಿಬದೆಯ ಧರ್ಮ ಉಪದೇಶಿಸುವವರು ಹೆಣ್ಣುಮಕ್ಕಳೇ ಜಾಸ್ತಿ ಅಂದರೆ ಅದು ಇನ್ನೊಂದು ಚಾಪ್ಟರ್ ಆಗುತ್ತೆ ಬಿಡಿ. ನಿಮ್ಮನ್ನು ಪ್ರಶ್ನೆ ಮಾಡುವುದಕ್ಕಿಂತ ನನ್ನ ಮನಸ್ಸಿನಲ್ಲಿ ಇರುವ ಇಂತಹ ಕೊಳೆಯನ್ನು ತೆಗೆಯುವುದು ಮುಖ್ಯ ಅನ್ನಿಸಿದ್ದರಿಂದ ಇಷ್ಟನ್ನು ಬರೆದೆ. ನಿಮ್ಮಆರೋಗ್ಯ ಸುಧಾರಿಸಲಿ. ಈ ಏಕಾಂತವಾಸದಲ್ಲಿ ನೀವೂ ಕೂಡ ಹೀಗೆ ನಿಮ್ಮ ಮನಸ್ಸಿನ ಕೊಳೆಯನ್ನು ತೊಳೆದುಕೊಂಡರೆ ಸಾರ್ಥಕ ಮತ್ತು ಸಂತೋಷ.
ಪ್ರೀತಿಯಿಂದ
ಎನ್.ಎಸ್. ಶ್ರೀಧರ ಮೂರ್ತಿ
(ವಾರಂಗಲ್ನಲ್ಲಿರುವ ಭಗ್ನ ಸ್ತ್ರೀ ಪಾದಗಳ ಛಾಯಾಚಿತ್ರ ಸೌಜನ್ಯ : ಅನು ಪಾವಂಜೆ)
ಇದನ್ನೂ ಓದಿ : Tirath Singh Rawat Controversy ; ತೀರಥ್ ಸಿಂಗ್ ಅವರಿಗೊಂದು ಪತ್ರ : ಕಾಲಕ್ಷೇಪ ಸಲ್ಲದು ಸ್ಥಾನಕ್ಕೆ ಶೋಭೆ ತರಬೇಕು ಸಾಬ್!
Published On - 5:25 pm, Tue, 23 March 21